ಅಳದಂಗಡಿ ಗ್ರಾಮ ಪಂಚಾಯತದ ಗ್ರಾಮ ಸಭೆ

0

ಅಳದಂಗಡಿ: ಅಳದಂಗಡಿ ಗ್ರಾಮ ಪಂಚಾಯತದ ೨೦೨೨-೨೩ನೇ ಸಾಲಿನ ಗ್ರಾಮ ಸಭೆಯು ಪಂಚಾಯತದ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಅ.೧೦ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಪಶು ಆಸ್ಪತ್ರೆ ಬೆಳ್ತಂಗಡಿಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ರವಿಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಆಚಾರ್ಯ, ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಪಂಚಾಯತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಅವರು ಪಂಚಾಯತದ ವರದಿ, ಜಮಾ-ಖರ್ಚುಗಳ ವಿವರ ಹಾಗೂ ವಾರ್ಡ್ ಸಭೆಯ ವರದಿ ವಾಚಿಸಿದರು. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಂದಾಯ ಇಲಾಖೆಯ ಗ್ರಾಮಕರಣಿಕ ಸರಿಯಾದ ಮಾಹಿತಿ ನೀಡುತ್ತಿಲ್ಲ ಮತ್ತು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು. ಅರಣ್ಯ ಇಲಾಖ ಸಿಬ್ಬಂದಿಗಳು ಮಾಹಿತಿ ನೀಡಿ ಬೆಳೆ ಹಾನಿಗೆ ಸಿಗುವ ಪರಿಹಾರದ ಬಗ್ಗೆ ಮಾಹಿತಿ ನೀಡಿದರು.

ಕೆದ್ದು ಪ್ರಾಥಮಿಕ ಶಾಲಾ ರಸ್ತೆ ಬಳಿಯ ಅಪಾಯಕಾರಿ ಮರ ತೆರವುಗೊಳಿಸುವಂತೆ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು. ಮೆಸ್ಕಾಂ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ಬೆಳಕು ಯೋಜನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಿಲ್ಯ ಸರಕಾರಿ ಶಾಲಾಗೆ ಹೋಗುವ ರಸ್ತೆ ಅಭಿವೃದ್ಧಿ, ಹಾಗೂ ನೂತನ ವಿದ್ಯುತ್ ಲೈನ್ ಅಳವಡಿಸುವ ಬಗ್ಗೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು. ಅಳದಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚುಚ್ಚು ಮದ್ದು ಶೇಖರಣಾ ಪರಿಕರ ಸರಿಪಡಿಸುವಂತೆ ಹಾಗೂ ವೈದ್ಯರು ರೋಗಿಗಳ ಜೊತೆ ಸರಿಯಾಗಿ ಸ್ಪಂದಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ತೋಟಗರಿಕಾ ಇಲಾಖಾ ಅಧಿಕಾರಿಗಳು ಮಾತಾಡಿ ಇಲಾಖೆಯ ಯೋಜನೆಗಳಲ್ಲಿ ಇರುವ ವಿವಿಧ ಸಬ್ಸಿಡಿಗಳ ಬಗ್ಗೆ ಮಾಹಿತಿ ನೀಡಿದರು, ಆರಕ್ಷಕ ಅಧಿಕಾರಿ ಮಾಹಿತಿ ನೀಡಿ, ಮೊಬೈಲ್ ಸಂದೇಶಗಳ ಬಗ್ಗೆ ಎಚ್ಚರ ಇರುವಂತೆ ಸೂಚಿಸಿದರು.

ಪಶು ಇಲಾಖೆಯ ಅಧಿಕಾರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ವಿವಿಧ ಸಹಾಯ ಧನಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಸವಲತ್ತುಗಳಿಗೆ ಅರ್ಜಿ ಕೊಡುವವರು ಒಂದು ಪ್ರತಿ ಪಂಚಾಯತ್ ಗೆ ನೀಡುವಂತೆ ತಿಳಿಸಿದರು. ಸಭೆಯಲ್ಲಿ ಮುಖ್ಯವಾಗಿ ಪಂಚಾಯತ್ ಸಿಬ್ಬಂದಿಗಳು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿ, ತೀವ್ರ ಅಸಮಾಧಾನ ಹೊರಹಾಕಿದರು. ಇದಕ್ಕೆ ಉತ್ತರಿಸಿದ ಮಾರ್ಗದರ್ಶಿ ಅಧಿಕಾರಿ ಪಂಚಾಯತ್‌ಗೆ ಬರುವ ಗ್ರಾಮಸ್ಥರನ್ನು ವಿನಾ ಕಾರಣ ಕಾಯಿಸಬೇಡಿ ಅವರ ಸಮಸ್ಯೆಗಳನ್ನು ಅಳಿಸಿ ಶೀಘ್ರವಾಗಿ ಸ್ಪಂದಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಿತು. ಸಾರ್ವಜನಿಕ ಆಸ್ಪತ್ರೆ ರಸ್ತೆ ದುರಸ್ತಿ, ಪಿಲ್ಯ ಕೂಡು ರಸ್ತೆಗೆ ಕಾಲು ಸಂಕನಿರ್ಮಾಣ, ಆಸ್ಪತ್ರೆಗೆ ಸುಸಜ್ಜಿತವಾದ ಚುಚ್ಚು ಮದ್ದು ಶೇಖರಣಾ ಉಪಕರಣ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಹಾಜರಾತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಾರ್ಗದರ್ಶಿ ಅಧಿಕಾರಿ ರವಿಕುಮಾರ್ ಮಾತನಾಡಿ, ಗ್ರಾಮ ಸಭೆಯ ಪರಿಪೂರ್ಣತೆ, ಚರ್ಚಾವಿಚಾರಗಳು ಗ್ರಾಮದ ಅಭಿರುದ್ದಿಗೆ ಒಳ್ಳೆಯ ಬೆಳವಣಿಗೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್‌ರವರು ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ಪೂರೈಸುವ ಭರವಸೆ ನೀಡಿದರು. ಪಂಚಾಯತ್ ಸಿಬ್ಬಂದಿ ಮಮತಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here