
ಬೆಳ್ತಂಗಡಿ: ಅಪರಿಚಿತ ಸ್ಕಾರ್ಪಿಯೋ ಕಾರೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ತಲವಾರು ತೋರಿಸಿ ಜೀವಬೆದರಿಕೆ ಒಡ್ಡಿದ್ದ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿ ಪೇಟೆ-ಪಡೀಲ್ ಎಂಬಲ್ಲಿ ಅ.13ರಂದು ತಡ ರಾತ್ರಿ ನಡೆದಿದೆ.
ಈ ಬಗ್ಗೆ ಹರೀಶ್ ಪೂಂಜರವರ ಕಾರು ಚಾಲಕ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.13ರಂದು ಸಂಜೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಹರೀಶ್ ಪೂಂಜರವರು ಬೆಳ್ತಂಗಡಿಗೆ ಕಾರಿನಲ್ಲಿ ಬರುವ ವೇಳೆ ಈ ಘಟನೆ ನಡೆದಿದೆ.
ಆದರೆ ಶಾಸಕ ಹರೀಶ್ ಪೂಂಜ ತನ್ನ ಸ್ನೇಹಿತರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.ಡ್ರೈವರ್ ಮಾತ್ರ ಇದ್ದ ಹಿನ್ನಲೆಯಲ್ಲಿ ಶಾಸಕರು ದಾಳಿಯಿಂದ ಬಚಾವಾಗಿದ್ದಾರೆ ಎನ್ನಲಾಗಿದೆ.
ರಾತ್ರಿ ಘಟನೆಯ ನಂತರ ಶಾಸಕರ ಡ್ರೈವರ್ ಮತ್ತು ಶಾಸಕರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಿಳಿ ಸ್ಕಾರ್ಪಿಯೋ ಕಾರಿನಲ್ಲಿ ಶಾಸಕರ ಕಾರನ್ನು ಕಿಡಿಗೇಡಿಗಳು ಹಿಂಬಾಲಿಸಿದ್ದಾರೆ. ಶಾಸಕರಿದ್ದ ಕಾರು ಫರಂಗಿ ಪೇಟೆಯ ಮೀನು ಮಾರುಕಟ್ಟೆ ಬಳಿ ತಲುಪುತ್ತಲೇ ದುಷ್ಕರ್ಮಿಗಳು ತನ್ನ ಕಾರನ್ನು ಅಡ್ಡಕ್ಕೆ ನಿಲ್ಲಿಸಿ ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಮದ ಬೈದು ತನ್ನ ಕೈಯಲ್ಲಿದ್ದ ತಲವಾರನ್ನು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನಲ್ಲಿ ಏನಿದೆ?
ಅ.12 ರಂದು ಶಾಸಕ ಹರೀಶ್ ಪೂಂಜರವರು ಬೆಂಗಳೂರಿಗೆ ಹೋಗಿದ್ದು ಅ.13 ರಂದು ಸಂಜೆ 7 ಗಂಟೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅವರ ಬರುವಿಕೆಯ ಮಾಹಿತಿ ಇದ್ದ ಅವರ ಕಾರು ಚಾಲಕ ನವೀನ್ ಎಂಬವರು ಶಾಸಕರನ್ನು ಕರೆ ತರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅವರ ಬರುವಿಕೆಯ ಮಾಹಿತಿ ಇದ್ದ ಅವರ ಕಾರು ಚಾಲಕ ನವೀನ್ ಎಂಬವರು ಶಾಸಕರನ್ನು ಕರೆ ತರಲು ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಅಲ್ಲಿಂದ ನವೀನ್ ಅವರು ಶಾಸಕರನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್ ಗೆ ಕರೆ ತಂದು ಬಿಟ್ಟಿದ್ದು ಅಲ್ಲಿ ಅವರು ಮೀಟಿಂಗ್ ಒಂದರಲ್ಲಿ ಭಾಗವಹಿಸಿದ್ದಾರೆ. ರಾತ್ರಿ ಸುಮಾರು 10.40 ರ ವೇಳೆಗೆ ಮೀಟಿಂಗ್ ಮುಗಿಸಿ ಶಾಸಕ ಪೂಂಜರವರು ಅಲ್ಲಿಗೆ ಆಗಮಿಸಿದ್ದರು. ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ರವರ ಕಾರಿನಲ್ಲಿ ತೆರಳಿದ್ದಾರೆ. ಹೀಗಾಗಿ ನವೀನ್ ಅವರು ಒಬ್ಬರೇ ಕಾರಿನಲ್ಲಿ ಹಿಂದಿನಿಂದ ತೆರಳಿದ್ದಾರೆ.
ಶಾಸಕರು ಕಾರಿನಲ್ಲಿ ನಂತೂರು ಪಡೀಲ್ ಮಾರ್ಗವಾಗಿ ತೆರಳಿದ್ದು ನಾಗುರಿ ರೈಲ್ವೇ ಓವರ್ ಬ್ರಿಡ್ಜ್ ಬಳಿ ಬರುತ್ತಲೇ ಸ್ಕಾರ್ಪಿಯೋ ಕಾರೊಂದು ಅವರ ಕಾರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿದೆ. ಇದನ್ನು ಗಮನಿಸಿದ ನವೀನ್ ಅವರು ವಿಚಾರವನ್ನು ಪೂಂಜರವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಈ ವೇಳೆ ಪೂಂಜರವರು ಸ್ಕಾರ್ಪಿಯೋ ಕಾರನ್ನು ಹಿಂಬಾಲಿಸಿಕೊಂಡು ಬರುವಂತೆ ತಿಳಿಸಿದ್ದಾರೆ. ರಾತ್ರಿ 11.15 ರ ಸುಮಾರಿಗೆ ಶಾಸಕರಿದ್ದ ಕಾರು ಫರಂಗಿಪೇಟೆ ಮೀನು ಮಾರ್ಕೆಟ್ ನ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಸ್ಕಾರ್ಪಿಯೋ ಕಾರಿನಲ್ಲಿದ್ದ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾನೆ. ಬಳಿಕ ಆತ ಕಾರಿನಲ್ಲಿದ್ದ ಶಾಸಕ ಹರೀಶ್ ಪೂಂಜರ ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ ಹಾಗೂ ತನ್ನ ಕೈಯಲ್ಲಿದ್ದ ತಲವಾರು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ.
ಹೀಗಾಗಿ ಚಾಲಕ ರಕ್ಷಣೆಗೆ ಶಾಸಕ ಹರೀಶ್ ಪೂಂಜರಿದ್ದ ಕಾರನ್ನು ಫರಂಗಿಪೇಟೆ ಹೊರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹೊರ ಠಾಣೆ ಮುಂಭಾಗ ಕಾರನ್ನು ನಿಲ್ಲಿಸುತ್ತಲೇ ಸ್ಕಾರ್ಪಿಯೋ ಕಾರು ಬಿಸಿರೋಡ್ ನತ್ತ ಪರಾರಿಯಾಗಿದೆ.