ಜೂ.4ರಂದು ಕೇರಳದಲ್ಲಿ ಅಪಘಾತವಾಗಿ ಕೋಮಾ ಸ್ಥಿತಿಯಲ್ಲಿದ್ದ ಮಾಚಾರಿನ ಅಶ್ರಫ್ ಎಂಬ ಯುವಕ ವಿಧಿವಶ

0

ಬೆಳ್ತಂಗಡಿ: ಪತ್ನಿ ಮತ್ತು ತನ್ನಿಬ್ಬರು ಎಳೆಯ ಮಕ್ಕಳ ಸಹಿತ ಕೇರಳಕ್ಕೆ ಪ್ರವಾಸ ಹೋಗಿದ್ದ ವೇಳೆ ರಸ್ತೆ ದಾಟುವ ಮಧ್ಯೆ ಜೂನ್ 4 ರಂದು ಬೈಕ್ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಉಜಿರೆ ಮಾಚಾರು ನಿವಾಸಿ ಯುವಕ ಅಶ್ರಫ್ ಎಂಬವರು ಅ.18 ರಂದು ಪೂರ್ವಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಾಚಾರು ಕುದುರು ನಿವಾಸಿ, ಎಸ್‌ವೈಎಸ್ ಉಜಿರೆ ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಹಮೀದ್ ಮೈಮುನಾ ದಂಪತಿ ಪುತ್ರರಾಗಿರುವ ಅಶ್ರಫ್ ಅವರಿಗೆ ಕಳೆದ ಜೂ‌.4 ರಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಪಯ್ಯಂಗಡಿ ಎಂಬಲ್ಲಿ ಅಪಘಾತವಾಗುತ್ತು. ಕಾರಿನಲ್ಲಿ ಪತ್ನಿ ಮಕ್ಕಳ ಸಮೇತ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಹೋಗಿದ್ದ ಅವರು ಒಂದೆಡೆ ಕಾರಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಅತಿವೇಗದಿಂದ ಬಂದಿದ್ದ ಬೈಕೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡಿದ್ದರು. ಆ ಬಳಿಕದಿಂದ ಕೋಮಾ ಸ್ಥಿತಿಯಲ್ಲಿ ಕೇರಳದ ಅಸ್ತರ್ ಮಿಮ್ಸ್ ಆಸ್ಪತ್ರೆ, ಮಂಗಳೂರಿನ ಕಂಕನಾಡಿ ಆಸ್ಪತ್ರೆ, ಉಪ್ಪಿನಂಗಡಿಯ ನಿರಂಜನ ಹೋಮ್ ಕೇರ್ ಕ್ಲಿನಿಕ್, ಬಳಿಕ ದೇರಳಕಟ್ಟೆಯ ಮಸಾಜ್ ಸೆಂಟರ್ ಇಲೆಲ್ಲಾ ಚಿಕಿತ್ಸೆಯಲ್ಲಿದ್ದರೂ ಯಾವುದೇ ಪ್ರಯೋಜನ ಕಂಡಿರಲಿಲ್ಲ. ಅಪಘಾತ ಆದ ದಿನದಿಂದಲೇ ಕೋಮಾಕ್ಕೆ ಜಾರಿದ್ದ ಅವರಿಗೆ ಪೈಪ್ ಮೂಲಕ ಆಹಾರ ನೀಡಲಾಗುತ್ತಿತ್ತು. ಇದೀಗ ಅವರು ಅ.18 ರಂದು ಕೊನೆಯುಸಿರೆಳೆದಿದ್ದಾರೆ.
ಉಪ್ಪಿನಂಗಡಿಯಲ್ಲಿ ಬ್ರೈಟ್ ಲುಕ್ ಎಂಬ ವಸ್ತ್ರ ಮಳಿಗೆ ನಡೆಸುತ್ತಿದ್ದ ಅವರು ಎಸ್ಸೆಸ್ಸೆಫ್ ಕಾರ್ಯಕರ್ತರಾಗಿದ್ದರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಮೃತರು ತಂದೆ ತಾಯಿ ಮಾತ್ರವಲ್ಲದೆ ಪತ್ನಿ ಶಂಶಾದ್ ಭಾನು, ಇಬ್ಬರು ಎಳೆಯ ಮಕ್ಕಳಾದ ಮುಹಮ್ಮದ್ ಶಬೀಹ್ ಮತ್ತು ಶಮ್ಲಾ ಭಾನು, ಸಹೋದರರಾದ ಅಝೀಝ್, ಅನ್ವರ್, ಅಸ್ಲಂ ಮು‌ಈನಿ, ಹಬೀಬ್ ಮತ್ತು ಹಾರಿಸ್ ಮು‌ಈನಿ, ಸಹೋದರಿ ಅಸ್ಮತ್ ಭಾನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಅ. 18 ರಂದು ರಾತ್ರಿ 11 ಕ್ಕೆ ಮಾಚಾರು ದಫನ ಭೂಮಿಯಲ್ಲಿ ನೆರವೇರಿದೆ. ಅಂತ್ಯಸಂಸ್ಕಾರ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

LEAVE A REPLY

Please enter your comment!
Please enter your name here