ಶೀಘ್ರದಲ್ಲಿ ಸುಸಜ್ಜಿತ ಮಲೆಕುಡಿಯ ಸಮುದಾಯ ಭವನ ನಿರ್ಮಾಣ: ಹರೀಶ್ ಪೂಂಜ

0

ಬೆಳ್ತಂಗಡಿ: ದೇವಸ್ಥಾನಗಳಲ್ಲಿ ದೇವರ ಸೇವೆಯನ್ನೇ ಮುಖ್ಯ ಕಾರ್ಯವನ್ನಾಗಿಸಿಕೊಂಡಿರುವ ಮಲೆಕುಡಿಯ ಜನಾಂಗದವರು ಬೆಳ್ತಂಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಬೆಳ್ತಂಗಡಿಯಲ್ಲಿ ಸುಸಜ್ಜಿತವಾದ ಸಮುದಾಯಭವನವನ್ನು ಶೀಘ್ರದಲ್ಲಿ ಮಂಜೂರು ಮಾಡಲಾಗುವುದು ಎಂದು ಬೆಳ್ತಂಗಡಿ ತಾಲೂಕಿನ ಹರೀಶ್ ಪೂಂಜ ಹೇಳಿದರು.

ಅವರು ಬೆಳ್ತಂಗಡಿಯ ಕೊಯ್ಯೂರು ಶಿವಗಿರಿಯಲ್ಲಿ ಅ. 23ರಂದು ನಡೆದ ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟ, ಕೊರಗರ ಅಭಿವೃದ್ಧಿ ಸಂಘಗಳ ಒಕ್ಕೂಟ, ರಾಜ್ಯ ಮಲೆಕುಡಿಯರ ಸಂಘದ ಸಹಕಾರದೊಂದಿಗೆ ನಡೆದ ಭೂ ಕಾನೂನುಗಳ ಮಸೂದೆ-ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕೆಲವೊಂದು ಕಾನೂನಿನ ತೊಡಕುಗಳಿಂದ ಕಾಡಿನಲ್ಲಿ ಹಾಗೂ ಕಾಡಿನಂಚಿನಲ್ಲಿರುವ ಮಲೆಕುಡಿಯರಿಗೆ ಸರಕಾರದ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಡುಪಿಯ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಶೆಟ್ಟಿ ವಿವಿಧ ಭೂ ಕಾನೂನುಗಳ ಬಗ್ಗೆ ಮಾಹಿತಿ ನೀಡಿ ಸಮಾಲೋಚನೆ ನಡೆಸಿದರು. ಮಲೆಕುಡಿಯರ ಸಂಘದ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಎಳನೀರು ಸಮಾರಂಭದ ಅಧ್ಯಕ್ಷತೆ ವಹಿಸಿ, ಸಮುದಾಯದ ಅಭಿವೃದ್ಧಿಗಾಗಿ ಸಂಘವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೇ ಬರುವ ಅ.30ರಂದು ಕೊಯ್ಯೂರಿನ ಶಿವಗಿರಿಯಲ್ಲಿ ಮಲೆಕುಡಿಯ ಸಮುದಾಯದವರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸರ್, ಗರ್ಭಕೋಶದ ತೊಂದರೆ ಸೇರಿದಂತೆ ವಿವಿಧ ತಪಾಸಣೆ ನಡೆಸಿ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಕಾರ್ಡ್ ವಿತರಿಸಲಾಗುವುದು ಎಂದರು.

ರಾಜ್ಯ ಮಲೆಕುಡಿಯರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು, ಕರ್ನಾಟಕ ಅರಣ್ಯ ಮೂಲಕ ಬುಡಕಟ್ಟು ಸಮುದಾಯಗಳ ಒಕ್ಕೂಟದ ದ.ಕ. ಜಿಲ್ಲಾ ಸಂಚಾಲಕ ಬಾಲಕೃಷ್ಣ ಕೆ. ಪೊಳಲಿ, ಪುತ್ತೂರು ಕೊರಗ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಮಲ, ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಾಧವ ಸುಬ್ರಹ್ಮಣ್ಯ, ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಶಿವರಾಮ ಉಜಿರೆ ಉಪಸ್ಥಿತರಿದ್ದರು.

ಕೃಪಾ ಕೆ. ಪ್ರಾರ್ಥಿಸಿ, ಹರೀಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಧನ್ಯವಾದ ಸಲ್ಲಿಸಿದರು. ಕೋಶಾಧಿಕಾರಿ ಕೃಷ್ಣ ಪೂರ್ಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here