ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣ ಶರ್ಮ, ಹಿಂದಿ ಶಿಕ್ಷಕ ದುಗ್ಗಪ್ಪ ಗೌಡರಿಗೆ ಬೀಳ್ಕೊಡುಗೆ, ಅಭಿನಂದನಾ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಗುರು ಪರಂಪರೆಗೆ ಗೌರವ ಸಮಾಜದ ಸಂಸ್ಕೃತಿ- ಸತೀಶ್ ಭಟ್
ಕಡಬ: ಮೇ 31ರಂದು ನಿವೃತ್ತರಾದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೃಷ್ಣಶರ್ಮ ಹಾಗೂ ಹಿಂದಿ ಶಿಕ್ಷಕ ದುಗ್ಗಪ್ಪ ಗೌಡರಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ಜೂ.೧ರಂದು ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.

ಅಭಿನಂದನಾ ಭಾಷಣ ಮಾಡಿದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ್ ಭಟ್‌ರವರು, ಶಿಕ್ಷಕ ವೃತ್ತಿ ಪವಿತ್ರವಾಗಿದ್ದು ವಿದ್ಯೆ ನೀಡುವ ಗುರುವಿಗೆ ಗೌರವ ನೀಡುವುದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದರು. ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿಯ ಆಡಳಿತಕ್ಕೆ ಒಳಪಟ್ಟ ಈ ವಿದ್ಯಾ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಗೈದು ಯಶಸ್ವಿಯಾಗಿದ್ದಾರೆ. ಮುಖ್ಯ ಗುರುಗಳಾಗಿದ್ದು ನಿವೃತ್ತರಾದ ಕೃಷ್ಣಶರ್ಮರವರು ಈ ಸಂಸ್ಥೆಯಲ್ಲಿ ೩೨ ವರ್ಷ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಮೂಡಿಸಿದ್ದಾರೆ. ಅವರು ಯಕ್ಷಗಾನ ಹವ್ಯಾಸಿಯೂ ಆಗಿದ್ದಾರೆ. ಅವರ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ನಮಗೆ ಪ್ರೇರಣೆಯಾಗಿದೆ. ಹಿಂದಿ ಶಿಕ್ಷಕ ದುಗ್ಗಪ್ಪ ಗೌಡರವರು ಇಲ್ಲಿ ನಾನು ಶಿಕ್ಷಕನಾಗಿದ್ದ ವೇಳೆ ನನಗೆ ಹಿಂದಿ ಸುಸಲಿತವಾಗಿ ಮಾತಾಡಲು ಕಲಿಸಿದ್ದು ಅವರು ಹಿಂದಿ ಗುರುಗಳಾಗಿದ್ದಾರೆ. ನಿವೃತ್ತರ ಪತ್ನಿಯರು ಸಹ ಶಿಕ್ಷಕಯರೇ ಆಗಿದ್ದು ಅವರ ವೃತ್ತಿ ಎಲ್ಲರಿಗೂ ಮಾದರಿಯಾಗಲಿ. ನಿವೃತ್ತರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ, ಅವರಿಗೆ ದೇವರು ಆಯುರಾರೋಗ್ಯ ಸುಖ ಸಂಪತ್ತು ನೀಡಿ ಅನುಗ್ರಹಿಸಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಸಂಸ್ಥೆಯ ಸಂಚಾಲಕ ಸುದರ್ಶನ ಜೋಯಿಸರವರು ಮಾತನಾಡಿ, ಕೃಷ್ಣ ಶರ್ಮ ಹಾಗೂ ದುಗ್ಗಪ್ಪ ಗೌಡರವರು ನಿವೃತ್ತಿಯಾಗುತ್ತಿರುವುದರಿಂದ ಸಂಸ್ಥೆಯ ಎರಡು ಪ್ರಮುಖ ಕೊಂಡಿ ಕಳಚಿದಂತಾಗಿದೆ. ಅವರಿಬ್ಬರ ಪ್ರಾಮಾಣಿಕ ಸೇವೆ ನಮ್ಮ ಸಂಸ್ಥೆಗೆ ಮಾದರಿಯಾಗಿದೆ. ಸೇವೆಯಿಂದ ನಿವೃತ್ತಿಯಾದರೂ ಶಾಲೆಯ ಅಭಿವೃದ್ಧಿಗೆ ನಿಮ್ಮ ಮಾರ್ಗದರ್ಶನ ಸಲಹೆ ನಿರಂತರವಾಗಿ ಇರಲಿ ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡರವರು ಸಮಾರಂಭವನ್ನು ಉದ್ಗಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಪೂರ್ಣ ವಿದ್ಯಾರ್ಜನೆ ನೀಡುವುದರೊಂದಿಗೆ ಇಲಾಖಾ ಕೆಲಸ ಕಾರ್‍ಯಗಳನ್ನು ನಿಯಾಮಾನುಸಾರ ಕ್ರಮಬದ್ಧವಾಗಿ ನಿರ್ವಹಿಸಿ ಶಿಕ್ಷಣ ಇಲಾಖೆಯಲ್ಲಿ ಬೇಷ್ ಎನಿಸಿಕೊಂಡಿರುವ ಇಲ್ಲಿಯ ಮುಖ್ಯ ಶಿಕ್ಷಕ ಕೃಷ್ಣ ಶರ್ಮರವರು ಹಾಗೂ ಹಿಂದಿ ಶಿಕ್ಷಕ ದುಗ್ಗಪ್ಪ ಗೌಡರವರ ನಿವೃತ್ತಿ ಜೀವನವು ಸುಖಮಯವಾಗಿರಲಿ. ಇಲ್ಲಿಯ ಮುಖ್ಯಶಿಕ್ಷಕರಾಗಿ ಜವಾಬ್ದಾರಿ ವಹಿಸಿರುವ ಹಿರಿಯಣ್ಣರವರು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ ಮಲ್ನಾಡ್‌ರವರು ಮಾತನಾಡಿ, ಅನೇಕ ಗುರುಗಳು ಇಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ, ಈಗ ನಿವೃತ್ತಿಗೊಳ್ಳುತ್ತಿರುವ ಮುಖ್ಯಗುರು ಕೃಷ್ಣಶರ್ಮ ಹಾಗೂ ಹಿಂದಿ ಶಿಕ್ಷಕ ದುಗ್ಗಪ್ಪರವರ ನಿಸ್ವಾರ್ಥ ಸೇವೆ ಸಂಸ್ಥೆಗೆ ಪ್ರಾಧಾನ್ಯತೆ ನೀಡಿದ್ದು ಅವರ ಸೇವೆ ಎಂದೂ ಮರೆಯಲಾಗದು ಎಂದರು.

ನೂತನ ಮುಖ್ಯ ಶಿಕ್ಷಕ ಹಿರಿಯಣ್ಣರವರು ನಿವೃತ್ತಶಿಕ್ಷಕರಿಗೆ ಶುಭಹಾರೈಸಿ ಮಾತನಾಡಿ, ಆಡಳಿತ ಮಂಡಳಿ, ಪೋಷಕರು, ಸಂಘ ಸಂಸ್ಥೆಗಳು, ಊರವರು, ಸಂಸ್ಥೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಸಂಸ್ಥೆಯ ಉನ್ನತ್ತೀಕರಣಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಬೇಕೆಂದು ಹೇಳಿದರು. ಬಿಳಿನೆಲೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ್ ಏನೆಕಲ್, ವೇದವ್ಯಾಸ ವಿದ್ಯಾಲಯದ ಮುಖ್ಯ ಶಿಕ್ಷಕ ಪ್ರಶಾಂತ ಬಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಅನಿತಾ ಸಣ್ಣಾರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್.ಬಿ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಮನೋಜ್ ಕುಮಾರ್, ಸರ್ವೆ ಪ್ರೌಡ ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್, ಆಲಂಕಾರು ಪ್ರೌಢ ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ ಭಟ್, ಮರ್ದಾಳ ಸೈಂಟ್ ಮೇರಿಸ್ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಈಶೋ ಪಿಲಿಪ್‌ರವರು ನಿವೃತ್ತರಿಗೆ ಶುಭಹಾರೈಸಿದರು.

ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದ ನಿವೃತ್ತ ಮುಖ್ಯಗುರು ಬಿ. ಕೃಷ್ಣಶರ್ಮರವರು, ಶಾಲೆಯ ವಿದ್ಯಾರ್ಥಿ ದತ್ತಿನಿಧಿಗೆ ೫ ಸಾವಿರ ರೂ., ನೀಡುವುದಾಗಿ ಘೋಷಿಸಿದರು. ಇಲ್ಲಿ ೩೨ ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳುತ್ತಿದ್ದು ಊರ ಪರವೂರ ವಿದ್ಯಾಭಿಮಾನಿಗಳು, ಹಿತೈಷಿಗಳು, ಸಹೊದ್ಯೋಗಿ ಶಿಕ್ಷಕ, ಶಿಕ್ಷಕೇತರ ಬಂಧುಗಳು, ದೇವಸ್ಥಾನ, ಶಾಲಾ ಆಡಳಿತ ಮಂಡಳಿಯವರು, ಸಂಘ ಸಂಸ್ಥೆಯವರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಅಭಿನಂದಿಸಿರುವುದು ನಮ್ಮ ದುಡಿಮೆಗೆ ಸಿಕ್ಕ ತಕ್ಕ ಪ್ರತಿಫಲವಾಗಿದೆ. ವೃತ್ತಿಯಿಂದ ನಿವೃತ್ತಿ ಹೊಂದಿದರೂ ನಿಮ್ಮಿಂದ ನಿವೃತ್ತಿ ಹೊಂದಲು ಸಾಧ್ಯವಿಲ್ಲ, ಸೇವೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಇನ್ನೋರ್ವ ಸನ್ಮಾನಿತ ಶಿಕ್ಷಕ ದುಗ್ಗಪ್ಪ ಗೌಡರವರು ಮಾತನಾಡಿ, ತನ್ನ ಅವಧಿಯಲ್ಲಿ ಶಾಲೆಯಲ್ಲಿ ನಡೆದ ಎಲ್ಲಾ ಕಾರ್‍ಯ ಚಟುವಟಿಕೆಗಳ ಬಗ್ಗೆ ವಿವರಿಸಿ ನಾನು ವಿದ್ಯಾರ್ಥಿಗಳಲ್ಲಿ ನಡೆದುಕೊಳ್ಳುತ್ತಿರುವ ಭಾವನೆಗಳನ್ನು ಮೆಲುಕು ಹಾಕಿದರು. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿಯುಳ್ಳವನಾಗಿದ್ದು ಮಂಗಳೂರು ಆಕಾಶವಾಣಿಗೆ ಸಂಸ್ಥೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅವರ ಪ್ರತಿಭೆಗಳನ್ನು ತೋರ್ಪಡಿಸಿರುವುದನ್ನು ನೆನಪಿಸಿಕೊಂಡರು. ನಿವೃತ್ತಿಯಾಗಿದ್ದರೂ ಸಂಸ್ಥೆಯಲ್ಲಿ ನಿಕಟ ಸಂಪರ್ಕ ಹೊಂದಿ ಮುನ್ನಡೆಯುವುದಾಗಿ ತಿಳಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸನ್ಮಾನ ಸ್ವೀಕರಿಸಿದ ಗಣಿತ ಶಿಕ್ಷಕಿ ಸುಜಾತರವರು ಕೃತಜ್ಞತೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳ ಪರವಾಗಿ ಪ್ರಮೀಳಾ ಮತ್ತು ವೀಕ್ಷಿತ್‌ರವರು ನಿವೃತ್ತರನ್ನು ಅಭಿನಂದಿಸಿ ಮಾತನಾಡಿದರು. ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ, ಬಂಟ್ರ ಸಿ.ಆರ್.ಪಿ.ಪೊಡಿಯಾ, ಆಡಳಿತ ಮಂಡಳಿ ಸದಸ್ಯರಾದ ಯಜ್ಞೇಶ್ ಆಚಾರ್ಯ, ರಮೇಶ್‌ಕಲ್ಪುರೆ, ಶಾಲಾ ಅಭ್ಯುದಯ ಸಂಘದ ಅಧ್ಯಕ್ಷ ವೇಣುಗೋಪಾಲಶಾಸ್ತ್ರೀ, ವೇದವ್ಯಾಸ ವಿದ್ಯಾಲಯದ ಎಸ್.ಡಿ.ಎಮ್.ಸಿ ಅಧ್ಯಕ್ಷ ಸತೀಶ್ ಎರ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ಗಣಪತಿಭಟ್ ಸ್ವಾಗತಿಸಿ, ದಿನೇಶ್ ಕುಂದರ್ ವಂದಿಸಿದರು, ಶಿಕ್ಷಕ ಸತ್ಯಶಂಕರ ಭಟ್ ಎಂ. ಕಾರ್‍ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಊರ್ವಿ, ಸಿಂಚನಾ, ಧನ್ಯ, ಹರ್ಷಿತಾ, ಲತಾ ಪ್ರಾರ್ಥನೆ ಹಾಡಿದರು. ಸಭೆ ಬಳಿಕ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ನಂತರ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಅಭಿನಂದನೆಯ ಮಹಾಪೂರ
32 ವರ್ಷ ವಿಜ್ಞಾನ ಅಧ್ಯಾಪಕರಾಗಿ, 4 ವರ್ಷ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿದ ನಿವೃತ್ತರಾದ ಬಿ. ಕೃಷ್ಣಶರ್ಮ ಹಾಗೂ ಅವರ ಪತ್ನಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ ಮತ್ತು ೩೦ ವರ್ಷ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ದುಗ್ಗಪ್ಪ ಗೌಡ ಕುಳ್ಳಂಪಾಡಿ ಹಾಗೂ ಅವರ ಪತ್ನಿ ಶಿಕ್ಷಕಿ ತಿರುಮಲೇಶ್ವರಿಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂತು. ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಅಧ್ಯಾಪಕರು, ಗಣ್ಯರು, ಶಿಕ್ಷಣ ಪ್ರೇಮಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಅಭಿನಂದನೆ ಸಲ್ಲಿಸಿದರು. ಸಂಸ್ಥೆಯ ಆಡಳಿತ ಮಂಡಳಿ, ಎಸ್‌ಡಿಎಮ್‌ಸಿ, ಹಿರಿಯ ವಿದ್ಯಾರ್ಥಿ ಸಂಘ, ವೇದವ್ಯಾಸ ಶಿಕ್ಷಣ ಸಂಸ್ಥೆ, ಭಜನಾ ಮಂಡಳಿ, ಬಿಳಿನೆಲೆ ಹಾ.ಉ.ಸ.ಸಂಘ, ಶ್ರೀ ಗೋಪಾಲಕೃಷ್ಣ ದೇವಾಲಯ, ವಿದ್ಯಾಭೂಷಣ ಅಭಿಮಾನಿಗಳ ಸಂಘ, ಬಿಳಿನೆಲೆ ಯುವಕ ಮಂಡಲ, ಶಾಲಾ ಪೋಷಕರು, ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರುಗಳು ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಧರ್ಮಪತ್ನಿಯರಿಗೆ ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಶಿಕ್ಷಕಿ ವಸಂತಿ.ಜೆ ಹಾಗೂ ಗುಮಾಸ್ತೆ ಜಯಶ್ರೀ ಎಂ.ಕೆ.ರವರು ಸನ್ಮಾನ ಪತ್ರ ವಾಚಿಸಿದರು.

ಸಾಧಕ ಶಿಕ್ಷಕಿ, ವಿದ್ಯಾರ್ಥಿಗೆ ಸನ್ಮಾನ:
ಕಳೆದ 2 ವರ್ಷಗಳಿಂದ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ,ಎಸ್‌ಎಸ್‌ಎಲ್‌ಸಿಯಲ್ಲಿ ಗಣಿತದಲ್ಲಿ 100 ಶೇ.ಫಲಿತಾಂಶ ದಾಖಲಿಸಲು ಕಾರಣರಾದ ಸುಜಾತರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿನಿ ಹವ್ಯಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 8ನೇ ತರಗತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.