HomePage_Banner
HomePage_Banner
HomePage_Banner

ಮಂಗಳೂರು ವಿವಿ ಕುಲಪತಿಯಾಗಿಡಾ|ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ವಾಣಿಜ್ಯ ಪ್ರೊಫೆಸರ್ ಹಾಗೂ ವಿವಿಯ ಮಾಜಿ ರಿಜಿಸ್ಟ್ರಾರ್ ಕೊಕ್ಕಡದ ಡಾ|ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರನ್ನು ನೇಮಿಸಿ ರಾಜ್ಯಪಾಲದ ವಜೂಭಾಯಿ ವಾಲಾ ಅವರು ಜೂ.3ರಂದು ಆದೇಶ ಹೊರಡಿಸಿದ್ದಾರೆ.

ಕಳೆದ ಕೆಲವು ಸಮಯದಿಂದ ವಿವಿಯ ಕುಲಪತಿ ನೇಮಕಕ್ಕೆ ಎದುರಾಗಿದ್ದ ವಿವಾದಕ್ಕೆ ತೆರೆ ಎಳೆದಿರುವ ರಾಜ್ಯಪಾಲರು, ಮೆರಿಟ್, ಸಮಾನತೆ, ಹಾಗೂ ಸಾಮಾಜಿಕ ನ್ಯಾಯವನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ 2000ದ ಸೆಕ್ಷನ್ 14(4)ರ ಅನುಸಾರ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಸುಬ್ರಹ್ಮಣ್ಯ ಅವರು ನಾಲ್ಕು ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಕೆಲ ವರ್ಷಗಳಿಂದ ವಿವಿಯ ಕುಲಪತಿ ನೇಮಕ ಗೊಂದಲದ ಗೂಡಾಗಿತ್ತು. 2018ರ ಜೂನ್ 5ರಂದು ದೈಹಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಅವರನ್ನು ವಿವಿಯ ಹಂಗಾಮಿ ಕುಲಪತಿಯಾಗಿ ನೇಮಿಸಲಾಗಿತ್ತು. ಅವರ ಅವಧಿ 2018ರ ನವೆಂಬರ್ ೫ರಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ನವೆಂಬರ್ 7ರಿಂದ ಜಾರಿಗೆ ಬರುವಂತೆ ವಾಣಿಜ್ಯ ವಿಭಾಗದ ಪ್ರೊ|ಈಶ್ವರ ಪಿ ಅವರನ್ನು ಹಂಗಾಮಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಇವರ ಅವಧಿ 2019ರ ಫೆಬ್ರವರಿ 27ರಂದು ಪೂರ್ಣಗೊಂಡಿತ್ತು. ನಂತರ, ಫೆ.೨೮ರಿಂದ ಪ್ರೊ.ಕಿಶೋರ್ ನಾಯಕ್ ಅವರನ್ನು ವಿವಿಯ ಹಂಗಾಮಿ ಕುಲಪತಿಯಾಗಿ ನೇಮಕ ಮಾಡಲಾಗಿತ್ತಾದರೂ, ಅವರ ಅವಧಿ ಮಾರ್ಚ್ ೨೮ಕ್ಕೆ ಪೂರ್ಣಗೊಂಡಿತ್ತು. ನಂತರ, ಅವರ ಅವಧಿಯನ್ನು ಮೂರು ಬಾರಿ ಒಂದು ತಿಂಗಳ ಮಟ್ಟಿಗೆ ವಿಸ್ತರಿಸಲಾಗಿತ್ತು. ಇದೀಗ ವಿವಿಯ ರಿಜಿಸ್ಟ್ರಾರ್ ಆಗಿದ್ದ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯರನ್ನು ನೇಮಕಗೊಳಿಸಿ ರಾಜ್ಯಪಾಲ ವಜೂಭಾಯಿ ವಾಲಾರವರು ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಕೌಕ್ರಾಡಿ ಕೊಕ್ಕಡದ ಪಾಲಾಲೆ ಎಂಬಲ್ಲಿ ೧೯೫೮ರ ಆಗಸ್ಟ್ ೨೫ರಂದು ಕೆಳಮಧ್ಯಮ ವರ್ಗದ ಕೃಷಿಕ, ಅರ್ಚಕ ಕುಟುಂಬವಾದ ನಾರಾಯಣ ಯಡಪಡಿತ್ತಾಯ ಮತ್ತು ಭವಾನಿಯವರ ಜೇಷ್ಠ ಪುತ್ರನಾಗಿ ಜನಿಸಿದ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕೊಕ್ಕಡ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಧರ್ಮಸ್ಥಳ ಮಂಜುನಾಥೇಶ್ವರ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣವನ್ನು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಪದವಿ ಪೂರ್ವ ಮತ್ತು ಬಿಕಾಂ ಪದವಿ ಪೂರೈಸಿದ್ದರು.ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಪ್ರಥಮ ಬ್ಯಾಚ್‌ನಲ್ಲಿ ಪ್ರಥಮ ರ್‍ಯಾಂಕ್ ಮತ್ತು ಮಂಗಳಗಂಗೋತ್ರಿ ಪಯನೀರ್‍ಸ್ ಚಿನ್ನದ ಪದಕದೊಂದಿಗೆ ಎಂ.ಕಾಂ.ಪದವಿ ಪೂರ್ಣಗೊಳಿಸಿದ್ದರು.೧೯೮೨ ಜುಲೈನಿಂದ ನಾಲ್ಕು ತಿಂಗಳ ಕಾಲ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ಬೋಧನಾ ಸೇವೆ ಆರಂಭಿಸಿ ಬಳಿಕ ೧೯೮೬ರ ತನಕ ಮಂಗಳ ಗಂಗೋತ್ರಿಯಲ್ಲಿ ಮಂಗಳೂರು ವಿ.ವಿ.ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿ ಖಾಯಂ ನೆಲೆಯಲ್ಲಿ ಉಪನ್ಯಾಸಕ, ರೀಡರ್ ಮತ್ತು ಪ್ರಾಧ್ಯಾಪಕರಾಗಿ ಸುಮಾರು ೩೬ ವರ್ಷಗಳ ಕಾಲ ಬೋಧನೆ, ಸಂಶೋಧನೆ, ಆಡಳಿತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

೧೯೮೨ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ‘ಆಟಿಟ್ಯೂಡ್ ಆಂಡ್ ಬಿಹೇವಿಯರ್ ಆಫ್ ಬೇಬಿ ಫುಡ್ ಪರ್ಚೇಸರ್‍ಸ್-ಎ ಸ್ಟಡಿ ವಿದ್ ರೆಫರೆನ್ಸ್ ಟು ಮ್ಯಾಂಗೆಲೋರ್ ಅರ್ಬನ್ ಅಗ್ಗ್ಲೋಮೆರೇಶನ್’ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್ ದೊರಕಿತ್ತು. ಮುಂಬಯಿಯ ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೈನಿಂಗ್ ಫಾರ್ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಒಂದು ವರ್ಷ ಕಾಲ ಮಾನವ ಸಂಪನ್ಮೂಲ ನಿರ್ವಹಣೆ ಶಾಸ್ತ್ರದಲ್ಲಿ ಸಹಪ್ರಾಧ್ಯಾಪಕ,ತರಬೇತುದಾರ ಮತ್ತು ವ್ಯವಹಾರ ಆಡಳಿತ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಈ ತನಕ ೨೨ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ನಿರ್ವಹಣೆ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿರ್ವಹಣೆ ಕ್ಷೇತ್ರಗಳಲ್ಲಿ ಯಶಸ್ವಿ ಮಾರ್ಗದರ್ಶನ ಮಾಡಿರುವ ಯಡಪಡಿತ್ತಾಯರ ಸುಮಾರು ೫೦ಕ್ಕೂ ಹೆಚ್ಚು ಲೇಖನಗಳು ರಾಷ್ಟ್ರೀಯ, ಅಂತರ್ರಾಷ್ಟೀಯ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.೮೦ಕ್ಕೂ ಅಧಿಕ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಕಮ್ಮಟ, ಗೋಷ್ಠಿ, ವಿಚಾರ ಸಂಕೀರ್ಣಗಳಲ್ಲಿ ಇವರು ಪ್ರಬಂಧ ಮಂಡಿಸಿದ್ದಾರೆ.

ಮಂಗಳೂರು ವಿ.ವಿ.ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರವಿಭಾಗದ ಮುಖ್ಯಸ್ಥರಾಗಿ, ವಾಣಿಜ್ಯ ನಿಕಾಯದ ಡೀನ್ ಪದವಿ ಹಾಗೂ ಸ್ನಾತಕೋತ್ತರ ವಾಣಿಜ್ಯ ಅಧ್ಯಯನ ಮಂಡಳಿ ಅಧ್ಯಕ್ಷ, ಮಂಗಳೂರು ಹಾಗೂ ಇತರ ವಿವಿ.ಗಳ ಪರೀಕ್ಷಾ ಮಂಡಳಿ ಸದಸ್ಯ, ವಿವಿಧ ಶೈಕ್ಷಣಿಕ ಸಮಿತಿಗಳಲ್ಲಿ ಸದಸ್ಯ, ಅಧ್ಯಕ್ಷರಾಗಿ ಅನುಭವ ಪಡೆದಿರುವ ಇವರು ಸುಮಾರು ಹತ್ತು ವರ್ಷಗಳ ಕಾಲ ಹಂತ ಹಂತವಾಗಿ ಮಂಗಳೂರು ವಿ.ವಿ.ಯ ಶಾಸನ ಬದ್ಧ ಹುದ್ದೆಗಳಾದ ಹಣಕಾಸು ಅಧಿಕಾರಿ, ಕುಲಸಚಿವ(ಪರೀಕ್ಷಾಂಗ) ಹಾಗೂ ಕುಲಸಚಿವ(ಆಡಳಿತ)ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.ಮಾನವ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಕ ಎಂದು ದೇವಾಂಗ್ ಮೆಹ್ತ ಮೆಮೋರಿಯಲ್ ಸಂಸ್ಥೆ ರಾಷ್ಟ್ರೀಯ ಗೌರವವನ್ನು ನೀಡಿದೆ.ಜಾಗತಿಕ ಮಟ್ಟದಲ್ಲಿ ಅವರು ಮಂಡಿಸಿದ ಟ್ರೆಂಡ್ ಆಂಡ್ ಸ್ಟೇಟಸ್ ಆಫ್ ಕಾರ್ಪೊರೇಟ್ ಇ-ಲರ್ನಿಂಗ್ ಆನ್ ಇಂಡಿಯನ್ ಎಕ್ಸ್‌ಪೀರಿಯನ್ಸ್ ಸಂಶೋಧನಾ ಪ್ರಬಂಧಕ್ಕೆ ಸ್ಕಾಟ್‌ಲ್ಯಾಂಡ್ ಎಡಿನ್‌ಬರಾದಲ್ಲಿ ೨೦೦೩ರಲ್ಲಿ ಒ.ಇ.ಲರ್ನಿಂಗ್ ಅಂತರ್ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಉದ್ಯೋಗ ಕ್ಷೇತ್ರದ ಬೇಡಿಕೆಗಳನ್ನು ಅರಿತು ವಿಶಿಷ್ಟವಾದ ಎರಡು ಸುಪರ್ ಸ್ಪೆಷಾಲಿಟಿ ಕೋರ್ಸ್‌ಗಳಾದ ಮಾಸ್ಟರ್ ಆಫ್ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಮತ್ತು ಮಾಸ್ಟರ್ ಆಫ್ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್ ಆರಂಭಿಸಲು ಡಾ| ಸುಬ್ರಹ್ಮಣ್ಯ ಯಡಪಡಿತ್ತಾಯರು ನಿರ್ಣಾಯಕ ಪಾತ್ರ ವಹಿಸಿದ್ದರು.

ಪರೀಕ್ಷಾಂಗ ಕುಲಸಚಿವರಾಗಿದ್ದ ಸಂದರ್ಭ ಮೌಲ್ಯಮಾಪನ ಮುಕ್ತಾಯಗೊಂಡ ೪೮ ಗಂಟೆಗಳಲ್ಲಿ ಸುಮಾರು ೬೦೦೦ ಬಿ.ಬಿ.ಎಂ ವಿದ್ಯಾರ್ಥಿಗಳ ಫಲಿತಾಂಶ ಘೋಷಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಹೆಗ್ಗಳಿಕೆ ಡಾ| ಸುಬ್ರಹ್ಮಣ್ಯ ಯಡಪಡಿತ್ತಾಯರದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.