ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಿಂದ ವಿನೂತನ ಕಾರ್ಯಕ್ರಮ: ಅ.29: ರಾಜ್ಯ ಮಟ್ಟದ ವಿಜ್ಞಾನ ಮತ್ತು ಕಲಾ ಉತ್ಸವ ‘ಶೋಧ-2022’ , ಅ.30ರಂದು ರಾಜ್ಯ ಮಟ್ಟದ ಸಾಹಿತ್ಯ ಮೇಳ ‘ಅಕ್ಷರೋತ್ಸವ-2022’

0

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾಗಳೊಂದಿಗೆ ಅ.29ರಂದು ರಾಜ್ಯ ಮಟ್ಟದ ವಿಜ್ಞಾನ ಮತ್ತು ಕಲಾ ಉತ್ಸವ ‘ಶೋಧ-2022’ ಹಾಗೂ ಅ.30ರಂದು ರಾಜ್ಯ ಮಟ್ಟದ ಸಾಹಿತ್ಯ ಮೇಳ ‘ಅಕ್ಷರೋತ್ಸವ-2022’ ಎಂಬ ವಿನೂತನ ಕಾರ್ಯಕ್ರಮವನ್ನು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಆವರಣದದಲ್ಲಿ ಮಹಾಕವಿ ಪಂಪ-ವೇದಿಕೆಯ ಡಾ.ಕೆ ಶಿವರಾಮಕಾರಂತ-ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ತಿಳಿಸಿದ್ದಾರೆ.
ಅವರು ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅ.27ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಎರಡು ರಾಜ್ಯಮಟ್ಟದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಅ.29: ಶೋಧ-2022:

ಅ.29ರಂದು ನಡೆಯುವ‘ರಾಜ್ಯ ಮಟ್ಟದ ವಿಜ್ಞಾನ ಮತ್ತು ಕಲಾ ಉತ್ಸವ ಶೋಧ-2022’ನ್ನು ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್ ಅಂಗಾರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಉಜಿರೆ ಅನುಗ್ರಹ ಕಾಲೇಜಿನ ಪ್ರಾಚಾರ್ಯ ರೆ|ಫಾ| ವಿಜಯ ಲೋಬೋ, ಬೆಳ್ತಂಗಡಿ ಹೋಲಿ ರಿಡಿಮರ್ ಶಾಲಾ ಮುಖ್ಯೋಪಾಧ್ಯಾಯ ರೆ|ಫಾ| ಕ್ಲಿರ್ಫಡ್ ಸೈಮನ್ ಲೋಬೋ, ಮಡಂತ್ಯಾರು ಸೇ.ಹಾ.ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಮೋಹನ್ ನಾಯಕ್, ಗುರುವಾಯಕೆರೆಯ ಖ್ಯಾತ ವೈದ್ಯರಾದ ಡಾ. ವೇಣುಗೋಪಾಲ ಶರ್ಮ, ಉಡುಪಿ ಶೆಟ್ಟಿಗಾರ್ ಇಂಡಸ್ಟ್ರೀಸ್‌ನ ಶ್ರೀನಿವಾಸ್ ಶೆಟ್ಟಿಗಾರ್, ಪುತ್ತೂರುನ ಹಿರಿಯ ಉಪನ್ಯಾಸಕ ಪ್ರೋ. ಹರೀಶ್ ಶಾಸ್ತ್ರಿ, ಪೊಳಲಿ ತೆಂಕಬೆಳ್ಳೂರಿನ ಕೃಷ್ಣ ನಾಯ್ಕ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ದಿನ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿಡಿಪಿಯು ಜಯಣ್ಣ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಪಿಲಿಕುಲ ನಿಸರ್ಗ ಧಾಮದ ನಿರ್ದೇಶಕ ಡಾ. ಕೆ.ವಿ ರಾವ್, ಮೂಡಬಿದ್ರೆ ಮಹಾವೀರ ಕಾಲೇಜಿನ ಪ್ರಾಚಾರ್ಯ ಪ್ರೋ. ರಮೇಶ್ ಭಟ್, ಉಜಿರೆ ಎಸ್.ಡಿ.ಎಂ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಪದ್ಮರಾಜ್, ಬೆಳ್ತಂಗಡಿ ಗುರುದೇವ ಕಾಲೇಜಿನ ಪ್ರಾಚಾರ್ಯ ಸುರೇಶ್ ಕುಮಾರ್, ವಾಣಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅ.30: ಅಕ್ಷರೋತ್ಸವ-2022:

ಅ.30ರಂದು ನಡೆಯುವ ರಾಜ್ಯ ಮಟ್ಟದ ಸಾಹಿತ್ಯ ಮೇಳದಲ್ಲಿ ಬೆಳಗ್ಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|ಜೋಸೆಫ್ ಎನ್.ಎಂ ರಾಷ್ಟ್ರ ಧ್ವಜಾರೋಹಣ ಗೈಯಲಿದ್ದು, ಕನ್ನಡ ಧ್ವಜಾರೋಹಣವನ್ನು ಪುಂಜಾಲಕಟ್ಟೆ ಪ್ರ.ದ.ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಎ ಶರತ್ ಕುಮಾರ್ ನೆರವೇರಿಸಲಿದ್ದಾರೆ.

ಕಾಲೇಜು ಧ್ವಜಾರೋಹಣವನ್ನು ಶ್ರೀ ಗುರುದೇವ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಜಾತ ನೆರವೇರಿಸಲಿದ್ದಾರೆ.ಅಕ್ಷರೋತ್ಸವ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಕುವೆಂಪು ಭಾಷಾ ಪ್ರಾಧಿಕಾರ ಬೆಂಗಳೂರಿನ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ನೆರವೇರಿಸಲಿದ್ದು, ಉಜಿರೆ ಎಸ್.ಡಿ.ಎಂ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪಿ.ಎನ್ ಉದಯಚಂದ್ರ ‘ಅಕ್ಷರೋತ್ಸವ ಕವಿತೆಗಳು’ ಭಾಗ-೧ನ್ನು ಲೋಕಾರ್ಪಣೆ ಮಾಡಲಿದ್ದಾರೆ. ‘ಕಾವ್ಯಯಾನ’ ಕವನ ಸಂಕಲನವನ್ನು ಶ್ರೀ ಎಸ್.ಡಿ.ಎಂ ವಿದ್ಯಾಲಯದ ವಿಶ್ರಾಂತ ಕುಲ ಸಚಿವ ಡಾ. ಬಿ.ಪಿ ಸಂಪತ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಪ್ರಾಧ್ಯಾಪಕ ಕೇಶವ ಬಂಗೇರ ಭಾಗವಹಿಸಲಿದ್ದಾರೆ. ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಉದ್ಯಮಿ ಶಮಂತ್ ಕುಮಾರ್ ಜೈನ್, ಕಾಲೇಜಿ ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಬಿ.ಎಸ್. ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಬಳಿಕ ನವಮಾಧ್ಯಮ-ಭಾಷೆ ಮತ್ತು ಸಾಹಿತ್ಯದ ಭವಿಷ್ಯ ಎಂಬ ವಿಷಯದಲ್ಲಿ ಖ್ಯಾತ ಸಾಹಿತಿ ಡಾ. ನರೇಂದ್ರ ರೈ ದೆರ್ಲ ಇವರಿಂದ ಉಪನ್ಯಾಸ ನಡೆಯಲಿದೆ

ಎಕ್ಸೆಲ್ ಅಕ್ಷರ ಗೌರವ ಸಮರ್ಪಣೆ:

ಮಧ್ಯಾಹ್ನ 12ಕ್ಕೆ ನಡೆಯುವ ಎಕ್ಸೆಲ್ ಅಕ್ಷರ ಗೌರವ ಸಮರ್ಪಣಾ ಸಮಾರಂಭ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್ ಪೂಂಜ ಅವರು 10 ಮಂದಿ ಸಾಧಕರಿಗೆ ಎಕ್ಸೆಲ್ ಅಕ್ಷರ ಗೌರವ ಸಮರ್ಪಿಸಲಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಪ್ರೊ. ನಾಗರಾಜ ಪೂವಣಿ, ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಎಚ್.ಜಿ ಶ್ರೀಧರ್, ಸಂಶೋಧನಾ ಕ್ಷೇತ್ರದಲ್ಲಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಬಂಟ್ವಾಳದ ಡಾ. ತುಕರಾಮ ಪೂಜಾರಿ, ಪುಸ್ತಕ ಪ್ರಕಾಶನದಲ್ಲಿ ಸೃಷ್ಠಿ ಪ್ರಕಾಶನ ಮೈಸೂರಿನ ಸೃಷ್ಟಿ ನಾಗೇಶ, ಅಭಿಯಂತರ ಸಾಧಕ ಡಾ.ಶಿವಪ್ರಸಾದ್ ಕಾರ್ಕಳ, ಯಕ್ಷಗಾನ ಕ್ಷೇತ್ರದಲ್ಲಿ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಚಲನಚಿತ್ರ ಕ್ಷೇತ್ರದಲ್ಲಿ ನಟ ಪ್ರಕಾಶ್ ತೂಮಿನಾಡು, ಕನ್ನಡ ಪ್ರೀತಿಯ ಅಧಿಕಾರಿ ನಳಿನಿ ಐ.ಬಿ ಗ್ರಂಥಾಲಯ ಅಧಿಕಾರಿ ಉಡುಪಿ, ಅನ್ನತ ಎಚ್. ಧನಕೀರ್ತಿ ಬಲಿಪ ಮೂಡಬಿದ್ರೆ, ದೈವ ನರ್ತಕ ಅಶೋಕ್ ಬೊಳಂಬಾರ್ ಬಂಟ್ವಾಳ ಇವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನವಶಕ್ತಿ ಗ್ರೂಪ್ಸ್ ಮಾಲಕ ಶಶಿಧರ ಶೆಟ್ಟಿ ಬರೋಡ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ಎಂ. ಪಿ ಶ್ರೀನಾಥ್, ತಾಲೂಕು ಅಧ್ಯಕ್ಷ ಯದುಪತಿ ಗೌಡ ಭಾಗವಹಿಸಲಿದ್ದು, ಬೆಳ್ತಂಗಡಿ ಸರಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ರಾಜ್ಯಮಟ್ಟದ ಕವಿ ಗೋಷ್ಠಿ

ವಾಚನ-ಗಾಯನ-ನೃತ್ಯ-ಕುಂಚ:

ಮಧ್ಯಾಹ್ನ 2 ಗಂಟೆಯ ನಂತರ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಲಿದ್ದು, ಆಯ್ದ ಕವನಗಳ ವಾಚನ-ಗಾಯನ-ನೃತ್ಯ-ಕುಂಚ ಕಾರ್ಯಕ್ರಮ ಆಕರ್ಷಣಿಯವಾಗಿದೆ. ಸಮನ್ವಯಕಾರರಾಗಿ ಗೋಕಾಕ ಜೆಎಸ್‌ಎಸ್ ಮಹಾವಿದ್ಯಾಲಯದ ಡಾ. ವಿಜಯಲಕ್ಷ್ಮೀ ಬಸವರಾಜ ಪಲೋಟಿ ಭಾಗವಹಿಸಲಿದ್ದಾರೆ. ಸಂಜೆ 3.30ಕ್ಕೆ ಸಂಶೋಧಕರು ಹಾಗೂ ಕಾಸರಗೋಡು ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಇವರಿಂದ ಸಾಹಿತ್ಯ ಭಾವ-ಭಾಷೆ-ಬದುಕು ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನಡೆಯಲಿದೆ.

ಸಂಜೆ 4ಕ್ಕೆ ರೂಪಕಲಾ ಕುಳ್ಳಪ್ಪು ಕುಂದಾಪುರ ಮೂರುಮುತ್ತು ಕಲಾವಿದರಿಂದ ಕನ್ನಡ ರಂಗಭೂಮಿಯ ಅಪೂರ್ವ ಹಾಸ್ಯಮಯ ನಾಟಕ “ಮೂರುಮುತ್ತು” 2300ನೇ ಪ್ರದರ್ಶನ ಗೊಳ್ಳಲಿದೆ ಎಂದು ಸುಮಂತ್ ಕುಮಾರ್ ಜೈನ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ನವೀನ್ ಕುಮಾರ್ ಮರೀಕೆ, ಭೌತಶಾಸ್ತ್ರ ಉಪನ್ಯಾಸಕ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here