ನ.2ರಿಂದ ಪಂಚಾಯತು ಸೇವೆಗಳು ಸ್ಥಗಿತ? ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಮುಂದಾದ ಪಿಡಿಒಗಳು

0

ವೇಣೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ. 2ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತೀರ್ಮಾನಿಸಿದ್ದು, ತಾಲೂಕಿನಲ್ಲಿ ಪಂಚಾಯತ್ ಸೇವೆಗಳಲ್ಲಿ ವ್ಯತ್ಯಯ ಆಗುವ ಸಂಭವ ಇದೆ.

ನ.2ರ ಒಳಗಾಗಿ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಂದು ನಡೆಯುವ ಧರಣಿ ಸತ್ಯಾಗ್ರಹದಲ್ಲಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿ ಕುಡಿಯುವ ನೀರು ಮತ್ತು ಬೀದಿದೀಪ ನಿರ್ವಹಣೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಪ್ರಮುಖ ಬೇಡಿಕೆಗಳು: 8 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪಿಡಿಒಗಳ ಹುದ್ದೆಯನ್ನು ಗ್ರೂಪ್ ಬಿಗೆ ಮೇಲ್ದರ್ಜೆಗೇರಿಸುವುದು. ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಗಳನ್ನು ಖಂಡಿಸಿ ಮತ್ತು ಹಲ್ಲೆ ನಡೆಸಿದವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಲು. ಕೋವಿಡ್‌ನಿಂದ ಮೃತಪಟ್ಟಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಕ್ಷಣ ಪರಿಹಾರ ಧನ ಒದಗಿಸುವುದು. ೧೬ಎ ರದ್ದು ಮಾಡಿರುವುದರಿಂದ ಅಂತರ್ ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಹಾಗಾಗಿ ವಿಶೇಷ ನಿಯಮಗಳನ್ನು ರಚಿಸಿ ನೌಕರರು ಇಚ್ಚಿಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆಗೆ ಅವಕಾಶ ನೀಡುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯಲಿರುವ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಬೆಳ್ತಂಗಡಿ ತಾಲೂಕು ಘಟಕ ಬೆಂಬಲ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here