HomePage_Banner
HomePage_Banner
HomePage_Banner

ಸಂಭ್ರಮ ಸಡಗರದ ಪ್ರತೀಕ ‘ಈದ್ ಉಲ್ ಫಿತ್ರ್’

Puttur_Advt_NewsUnder_1
Puttur_Advt_NewsUnder_1

ಕಳೆದ ಒಂದು ತಿಂಗಳುಗಳ ಕಾಲ ಹಗಲಿನ ವೇಳೆ ಅನ್ನಪಾನೀಯಗಳನ್ನು ತ್ಯಜಿಸಿ, ಹಗಲಿರುಳೆನ್ನದೆ ಅಲ್ಲಾಹನ ಆರಾಧನೆಯಲ್ಲಿ ತಲ್ಲೀನರಾದ ಮುಸ್ಲಿಂ ಬಾಂಧವರಿಗೆ ಜೂ.5 ರಂದು ಈದ್ ಹಬ್ಬದ ಸಂಭ್ರಮ. ಆತ್ಮ ಶುದ್ಧೀಕರಣದ ಪವಿತ್ರ ರಮಝಾನ್ ಮಾಸವನ್ನು ಸತ್ಕರ್ಮಗಳ ಮೂಲಕ ಸಂಪನ್ನಗೊಳಿಸಿದ ವಿಶ್ವಾಸಿಗಳಿಗೆ ಅಲ್ಲಾಹನು ನೀಡಿದ ಕೊಡುಗೆಯಾಗಿದೆ ಈದ್ ಉಲ್ ಫಿತ್ರ್.

ಇಸ್ಲಾಂ ಕ್ಯಾಲೆಂಡರಿನ ಪ್ರಕಾರ ಶವ್ವಾಲ್ ಮಾಸದ ಚಂದ್ರ ಬಾನಂಗಳದಲ್ಲಿ ಉದಯಿಸಿದರೆ ಈದ್ ಉಲ್ ಪಿತ್ರ್ ಹಬ್ಬವನ್ನು ಘೋಷಿಸಲಾಗುತ್ತದೆ. ಆಯಾ ಮೊಹಲ್ಲಾದ ಖಾಝಿಗಳು ಈ ಚಂದ್ರದರ್ಶನವನ್ನು ಖಚಿತಪಡಿಸಿಕೊಂಡು ಹಬ್ಬದ ಆಚರಣೆಗೆ ಶುಭ ಸೂಚನೆಯನ್ನು ನೀಡುತ್ತಾರೆ. ಸಾಮಾನ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಮತ್ತು ಕೇರಳ ಭಾಗದಲ್ಲಿ ಚಂದ್ರದರ್ಶನವಾದರೆ ದ.ಕ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಈದ್ ಘೋಷಿಸಲಾಗುತ್ತದೆ. ಆದ್ದರಿಂದ ಕೇರಳದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಕರಾವಳಿ ಭಾಗಗಳಲ್ಲಿ ಕೆಲವೊಮ್ಮೆ ಒಂದು ದಿನ ಮುಂಚಿತವಾಗಿ ಈದ್ ಆಚರಿಸಿದರೆ, ಉಳಿದ ಭಾಗಗಳಲ್ಲಿ ಮಾರನೇ ದಿವಸ ಈದ್ ಹಬ್ಬ ಆಚರಿಸಲಾಗುತ್ತದೆ.

ಈದ್ ಉಲ್ ಫಿತ್ರ್ ಹಬ್ಬಕ್ಕೆ ಇಸ್ಲಾಮಿನಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಈದ್ ಹಬ್ಬದಂದು ಹೊಸ ದಿರಿಸುಗಳನ್ನು ಧರಿಸಿ, ಆಹ್ಲಾದ ತುಂಬಿದ ಮನದೊಂದಿಗೆ ಅಬಾಲವೃದ್ಧರೆನ್ನದೆ ಗಂಡಸರೆಲ್ಲ ಮಸೀದಿ ಅಥವಾ ಈದ್ಗಾ ಮೈದಾನಗಳಿಗೆ ತೆರಳಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ಹಬ್ಬದಂದು ಮನೆಗೆ ಬರುವ ನೆಂಟರಿಷ್ಟರಿಗೆ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸಿ ಬಡಿಸುವ ಮಹಿಳೆಯರ ಸಡಗರ. ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ಕೈಗಳಿಗೆ ಮೆಹಂದಿ ಹಚ್ಚಿ ಗೆಳತಿಯರೊಂದಿಗೆ ಮನೆಮನೆ ತಿರುಗುವ ಎಳೆ ಹುಡುಗಿಯರ ಗೌಜಿ ಗದ್ದಲಗಳು ಒಂದೆಡೆಯಾದರೆ ಹೊಸವಸ್ತ್ರಗಳನ್ನುಟ್ಟು ಊರು ಕೇರಿ ಸುತ್ತುವ ಹದಿಹರೆಯದ ಹುಡುಗರ ಸಡಗರ ಹಬ್ಬಕ್ಕೆ ವಿಶೇಷ ಕಳೆಯನ್ನು ತಂದೊಡ್ಡುತ್ತದೆ. ಈದ್ ಹಬ್ಬದಂದು ಬಂಧುಮಿತ್ರರ ಮನೆಗಳಿಗೆ ತೆರಳಿ ಕ್ಷೇಮ ಸಮಾಚಾರ ವಿಚಾರಿಸುವ ಪರಿಪಾಠವನ್ನು ಅನುಸರಿಸಲಾಗುತ್ತದೆ. ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಮುಗಿಸಿದ ಬಳಿಕ ಅಗಲಿದ ಕುಟುಂಬಸ್ಥರ ಗೋರಿಗಳನ್ನು ಸಂದರ್ಶಿಸಿ, ಮರಣ ಹೊಂದಿದವರ ಸದ್ಗತಿಗಾಗಿ ಪ್ರಾರ್ಥನೆ ನೆರವೇರಿಸಲಾಗುತ್ತದೆ.

ಈದ್ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಬಡಬಗ್ಗರಿಗೆ ದಾನ ನೀಡುವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ. ಈದ್ ದಿನದ ವಿಶೇಷ ನಮಾಝಿಗಿಂತ ಮೊದಲು ಕುಟುಂಬದ ಪ್ರತೀ ಸದಸ್ಯನ ಪರವಾಗಿ ಇಂತಿಷ್ಟು ಆಹಾರಧಾನ್ಯಗಳನ್ನು ಬಡವರಿಗೆ ಹಾಗೂ ನಿರ್ಗತಿಕರಿಗೆ ದಾನ ಮಾಡಲು ಇಸ್ಲಾಂ ನಿರ್ದೇಶಿಸುತ್ತದೆ. ಈ ದಾನವನ್ನು ‘ಫಿತ್ರ್ ಝಕಾತ್’ ಎಂದು ಕರೆಯಲಾಗುತ್ತದೆ. ಉಣ್ಣಲು ಅನ್ನವಿಲ್ಲದ ಬಡಜನರು ಹಬ್ಬದ  ಸಂಭ್ರಮಾಚರಣೆಯಿಂದ ಹೊರಗುಳಿಯಬಾರದು ಎಂಬುದು ಈ ಕಡ್ಡಾಯ ದಾನದ ಮೂಲ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ ತಿಂಗಳುಗಳ ಕಾಲ ನಡೆಸಿದ ರಮಝಾನ್ ವೃತಾಚರಣೆಯಲ್ಲಿ ಉಂಟಾದ ಕುಂದುಕೊರತೆಗಳನ್ನು ಈ ಕಡ್ಡಾಯ ದಾನದ ಮೂಲಕ ನಿವಾರಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.

ಮುಸಲ್ಮಾನ ಬಾಂಧವರ ಪಾಲಿಗೆ ಬಹಳ ಮಹತ್ವದ ಹಾಗೂ ಸಂತಸದಾಯಕವಾದ ಈದುಲ್ ಫಿತ್ರ್ ಅಥವಾ ಪೆರ್ನಾಳ್ ಹಬ್ಬದ ಅನುಗ್ರಹದಿಂದ ಲೋಕದೆಲ್ಲೆಡೆ ಶಾಂತಿ ಸಹನೆ ನೆಲೆಗೊಳ್ಳಲಿ, ಜಗದೊಡೆಯ ಅಲ್ಲಾಹನು ಸಕಲ ಜೀವಜಾಲಗಳಿಗೂ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಹಾರೈಸುತ್ತಾ, ನಾಡಿನ ಸಮಸ್ತ ಜನತೆಗೆ ‘ಈದ್ ಉಲ್ ಫಿತ್ರ್’ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತಿದ್ದೇನೆ.

~ಸಫ್ವಾನ್ ಸವಣೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.