HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ಮಲಂಕರ ಧರ್ಮಪ್ರಾಂತ್ಯದಿಂದ ವಿಶ್ವ ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಮಾನವ ಸ್ವಾರ್ಥತೆಯೇ ಪರಿಸರ ನಾಶಕ್ಕೆ ಕಾರಣ-ಶಕುಂತಳಾ ಶೆಟ್ಟಿ

ಪುತ್ತೂರು: ತಾನು ಉದ್ಧಾರವಾಗಬೇಕು ಎನ್ನುವ ಮಾನವನ ಸಂಕುಚಿತ ಮನೋಭಾವ ಪರಿಸರದ ಅಧೋಗತಿಗೆ ಕಾರಣವಾಗಿದೆ. ತಾಯಿಯ ಎದೆ ಹಾಲೇ ಇಂದು ವಿಷವಾಗುತ್ತಿರುವ ಅಕ್ಷಮ್ಯ ಸ್ಥಿತಿಯಲ್ಲಿ ನಾವಿದ್ದೇವೆ. ಮಾನವನ ಸ್ವಾರ್ಥತೆಯ ಪರಿಣಾಮವಾಗಿ ಇಂದು ಪರಿಸರದ ಮೇಲೆ ಆಗುವ ಅತಿಯಾದ ದುರುಪಯೋಗದಿಂದಾಗಿ ಪರಿಸರವೇ ನಾಶ ಆಗುತ್ತಿರುವ ಕಾಲ ಬಂದೊದಗಿದೆ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿರವರು ಹೇಳಿದರು.

ಅವರು ಜೂ.5 ರಂದು ಮಲಂಕರ ಸಿರಿಯನ್ ಕಥೋಲಿಕ್ ಧರ್ಮಸಭೆ, ಮಲಂಕರ ಕಥೋಲಿಕ್ ಎಸೋಸಿಯೇಶನ್(ಎಂಸಿಎ) ಕೇಂದ್ರೀಯ ಕಾರ್ಯಾಲಯ ಹಾಗೂ ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಸಹಯೋಗದಲ್ಲಿ ಪಂಜಳದ ಶಾಂತಿಭವನದ ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಚಾನ್ಸಲರ್ ಆಗಿರುವ ವಂ|ಜಾನ್ ಕುನ್ನತ್ತೇತ್‌ರವರಿಗೆ `ಹಲಸಿನ ಗಿಡ’ ಹಸ್ತಾಂತರ ಮಾಡುತ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಲ್ಕು ತಿಂಗಳ ಮಗುವಿನಿಂದ ಹಿಡಿದು ತೊಂಭತ್ತು ವರ್ಷದ ವೃದ್ಧನವರೆಗೆ ಇಂದು ಕ್ಯಾನ್ಸರ್, ಕಿಡ್ನಿ ತೊಂದರೆ ಮುಂತಾದ ಕಾಯಿಲೆಗಳು ಬಾಧಿಸುತ್ತಿರುವುದು ನಾವು ಕಾಣುತ್ತಿದ್ದೇವೆ ಮಾತ್ರವಲ್ಲದೆ ಇಂತಹ ಕಾಯಿಲೆಗೆ ಮುಖ್ಯಮಂತ್ರಿಗಳ ರಿಲೀಫ್ ಫಂಡಿನಿಂದ ತಾನು ಶಾಸಕಿಯಾಗಿದ್ದಾಗ ಸಾಕಷ್ಟು ಅನುದಾನವನ್ನು ತಂದುಕೊಟ್ಟಿದ್ದೇನೆ. ಮೊಬೈಲ್ ಟವರ್‌ನಿಂದಾಗಿ ಇಂದು ಪಕ್ಷಿ ಸಂಕುಲನ ಕೂಡ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ ಜೊತೆಗೆ ಮನುಷ್ಯನ ಆಯಸ್ಸು ಕಡಿಮೆಯಾಗಿ ಸಾಯುವ ಸ್ಥಿತಿ ಬಂದೊದಗಿದೆ ಎಂದ ಅವರು ಮಂಗಳೂರಿನಿಂದ ಪುತ್ತೂರಿಗೆ ಆಗಮಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಕಾಣುವ ತ್ಯಾಜ್ಯಗಳ ರಾಶಿ ಅಷ್ಟಿಷ್ಟಲ್ಲ. ಸ್ವಚ್ಚ ಭಾರತದ ಪ್ರಗತಿಯಲ್ಲಿ ಮಾನವನ ಚಿಂತನೆ ಬದಲಾಗದಿದ್ದರೆ ಮುಂದೆ ಅಪಾಯ ಖಂಡಿತಾ ಎಂದು ಅವರು ಹೇಳಿದರು.

ತೋಡಿದ ಗುಂಡಿಗೆ ಗಿಡ ನೆಡುವ ಪರಿಪಾಠ ನಿಲ್ಲಲಿ-ಲ್ಯಾನ್ಸಿ ಡಿ’ಕುನ್ಹಾ:
ಪುತ್ತೂರು ಧರ್ಮಪ್ರಾಂತ್ಯದ ವಾರ್ಷಿಕ ಕ್ರಿಯಾಯೋಜನೆಯನ್ನು ಉದ್ಘಾಟಿಸಿದ ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್ ನ ರಾಷ್ಟ್ರೀಯ ಅಧ್ಯಕ್ಷ ಲ್ಯಾನ್ಸಿ ಡಿ’ಕುನ್ಹಾರವರು ಮಾತನಾಡಿ, ಕರಾವಳಿ ಭಾಗದ ಪ್ರಮುಖ ನಂಬಿಕೆಯಾಗಿರುವ ಪತ್ತನಾಜೆ ಬಳಿಕ ಮಳೆ. ಆದರೆ ಪ್ರಸ್ತುತ ಜೂನ್ ತಿಂಗಳಾದರೂ ಮಳೆ ಬರುವ ಸೂಚನೆಯಿಲ್ಲ. ಇದಕ್ಕೆ ಕಾರಣ ಮರ-ಗಿಡಗಳ ನಾಶ, ಪರಿಸರ ನಾಶ ಕಾರಣವಾಗಿದೆ. ವರ್ಷಂಪ್ರತಿ ಜನರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಿದೆ. ಬಹುತೇಕ ಕಡೆಯಲ್ಲಿ ತೋಡಿದ ಗುಂಡಿಯಲ್ಲಿಯೇ ಮತ್ತೊಮ್ಮೆ ಗಿಡ ನೆಡುವ ಪರಿಪಾಠ ಇಂದು ಬೆಳೆಯುತ್ತಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ನಾವು ನೆಟ್ಟ ಗಿಡದ ಲಾಲನೆ-ಪೋಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆಯೇ ವಿನಹ ತೋರ್ಪಡಿಕೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಸರಿಯಲ್ಲ ಎಂದ ಅವರು ಸಂಘಟನೆಗಳು ಸಮಾಜವನ್ನು ಜಾಗೃತಗೊಳಿಸುವ ಮೂಲಕ ಸಂಬಂಧ ಹಾಗೂ ಬಾಂಧವ್ಯವನ್ನು ವೃದ್ಧಿಗೊಳಿಸುವುದಕ್ಕಾಗಿದೆ. ಮಲಂಕರ ಕಥೋಲಿಕ್ ಅಸೋಸಿಯೇಶನ್ ಹಾಗೂ ಅಖಿಲ ಭಾರತ ಕ್ಯಾಥೋಲಿಕ್ ಯೂನಿಯನ್‌ನ ಉದ್ಧೇಶವು ದೇಶದ ಮತ್ತು ಸಮುದಾಯದ ಅಭಿವೃದ್ಧಿ ಮತ್ತು ನಿಷ್ಪಕ್ಷಪಾತ ಸೇವೆ ಆಗಿದೆ ಎಂದು ಅವರು ಹೇಳಿದರು.

ಮಾನವೀಯ ಸಂಪನ್ಮೂಲಗಳ ಸಂರಕ್ಷಣೆಗೆ ಆದ್ಯತೆ ಕೊಡಿ-ಮೊ|ಡಾ|ಪುತ್ರನಕಂಡತ್ತಿಲ್:
ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಧಾರ್ಮಿಕ ನಿರ್ದೇಶಕರಾದ ಮೊ|ಡಾ|ಎಲ್ದೊ ಪುತ್ರನಕಂಡತ್ತಿಲ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವರು ಮನುಷ್ಯನಿಗೆ ಒಳ್ಳೇಯದನ್ನೇ ಬಯಸುತ್ತಾರೆ ಆದರೆ ಮಾನವ ಮಾತ್ರ ತನ್ನ ಸ್ವಾರ್ಥವನ್ನು ಬಿಟ್ಟುಕೊಡದೆ ತನ್ನ ಏಳಿಗೆಯನ್ನೇ ಬಯಸಿ ಪರಿಸರವನ್ನು ನಾಶಗೆಡವುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಜೈವಿಕ ಕೃಷಿ ಪದ್ಧತಿಯೊಂದಿಗೆ ಮಾನವೀಯ ಸಂಪನ್ಮೂಲಗಳ ಸಂರಕ್ಷಣೆಗೆ ನಾವು ಯಾವಾಗ ಮೊದಲ ಆದ್ಯತೆ ಕೊಡುತ್ತವೆಯೋ ಆವಾಗ ಪರಿಸರವೂ ಸಮೃದ್ಧಿಯಾಗಿ ಬೆಳೆಯಬಲ್ಲುದು ಮಾತ್ರವಲ್ಲದೆ ಕಾಲ-ಕಾಲಕ್ಕೆ ಮಳೆ-ಬೆಳೆ ಆಗಲು ಸಾಧ್ಯವಾಗುತ್ತದೆ. ದೈವದತ್ತವಾಗಿ ನಮಗೆ ಸಿಕ್ಕಂತಹ ಫಲವತ್ತಾದ ಭೂಮಿ ಮಣ್ಣಿನ ಮಹಿಮೆಯ ಕುರಿತು ನಮಗೆ ಅರಿವು ಬಹಳ ಮುಖ್ಯವಾದದ್ದೇ. ಮಣ್ಣಿನಲ್ಲಿರುವ ಪ್ರತಿಯೊಂದು ಸೂಕ್ಷ್ಮಜೀವಿಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡಾಗ ಕಾಲ-ಕಾಲಕ್ಕೆ ಮಳೆ-ಬೆಳೆ-ನೀರು-ಸಂಪತ್ತು ನಮಗೆ ದೊರಕಬಲ್ಲುದು ಎಂದು ಅವರು ಹೇಳಿದರು.

ಪರಿಸರವನ್ನು ಗಿಡ-ಮರಗಳಿಂದ ಹಸಿರೀಕರಣಗೊಳಿಸಿ-ವಿ.ಪಿ ಮತ್ತಾಯಿ:
ಅಧ್ಯಕ್ಷತೆ ವಹಿಸಿದ ಮಂಗಳೂರು ಕಥೋಲಿಕ್ ಅಸೋಸಿಯೇಶನ್ ಇದರ ಕೇಂದ್ರೀಯ ಕಾರ್ಯಾಲಯದ ಅಧ್ಯಕ್ಷ ವಿ.ಪಿ ಮತ್ತಾಯಿರವರು ಮಾತನಾಡಿ, ಇಂದಿನ ಪರಿಸರದ ವಸ್ತುಸ್ಥಿತಿಯ ಬಗ್ಗೆ ಅವಲೋಕಿಸಿ ಕುಟುಂಬದೊಡನೆ ದೇವರಲ್ಲಿ ಮೊರೆಯಿಟ್ಟಾಗ ದೇವರು ಆಶೀರ್ವಾದ ಖಂಡಿತಾ ನೀಡುತ್ತಾನೆ. ದೇವರ ಸೃಷ್ಟಿಯಾದ ಈ ಸುಂದರ ಪ್ರಪಂಚವನ್ನು ಸಂರಕ್ಷಿಸಲು ಹಾಗೂ ಸವಿಯಲು ಮಾನವನಿಗೆ ಬದ್ಧತೆ ಮತ್ತು ಜವಾಬ್ದಾರಿ ಎಲ್ಲವೂ ಇದೆ ಎಂದ ಅವರು ಪ್ರಸ್ತುತ ವಿದ್ಯಾಮಾನವನ್ನು ಗಮನಿಸಿದರೆ ಸೂರ್ಯನ ತಾಪ ಹೆಚ್ಚುತ್ತಿರುವುದು, ಪ್ರಾಕೃತಿಕ ವಿಕೋಪಗಳು ತಾಂಡವವಾಡುತ್ತಿರುವುದು ಇಂದಿನ ದುರಂತಗಳಲ್ಲೊಂದಾಗಿದೆ. ಆದ್ದರಿಂದ ನಮ್ಮ ಪರಿಸರವನ್ನು ಗಿಡ-ಮರಗಳಿಂದ ಹಸಿರೀಕರಣಗೊಳಿಸಿ ಪರಿಸರದ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರುಬ ಹೇಳಿದರು.

ಗಿಡ ನೆಡಿ, ಮರ ಬೆಳೆಸಿ, ನೀರು ಉಳಿಸಿ, ಪರಿಸರ ಸಂರಕ್ಷಸಿ-ಚಂದ್ರಕಲಾ ಮುಕ್ವೆ:
ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಮುಕ್ವೆರವರು ಮಾತನಾಡಿ, ಗಿಡ ನೆಡಿ-ಮರ ಬೆಳೆಸಿ-ನೀರು ಉಳಿಸಿ-ಪರಿಸರ ಸಂರಕ್ಷಣೆ ಎಂಬ ಧೋರಣೆ ನಮ್ಮದಾಗಬೇಕಾಗಿದೆ. ಹಿರಿಯರು ಉಳಿಸಿ-ಬೆಳೆಸಿದ ಪರಿಸರವನ್ನು ನಾವು ಸಂರಕ್ಷಿಸಬೇಕಾಗಿದೆ. ತಾತ ಇದ್ದಾಗ ಕೆರೆ, ತಂದೆ ಇದ್ದಾಗ ಬಾವಿ, ಪ್ರಸ್ತುತ ಕೊಳವೆ ಬಾವಿ ಆದರೆ ಮುಂದಿನ ದಿನಗಳಲ್ಲಿ ಎಷ್ಟೇ ಕೊಳವೆ ಬಾವಿ ಕೊರೆದರೂ ಭೂಮಿ ಕೊಳ್ಳೆ ಹೋಗುವುದಂತೂ ಗ್ಯಾರಂಟಿ ಎಂದ ಅವರು ತಮ್ಮ ಮಗುವಿನ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡಗಳನ್ನು ನೆಡುತ್ತಾ, ಮಗುವಿನ ಬೆಳವಣಿಗೆಯ ಜೊತೆಗೆ ಗಿಡದ ಬೆಳವಣಿಗೆಯನ್ನು ಮಾಡಿದಾಗ ಮಗುವಿಗೂ ಗಿಡ-ಮರಗಳ ಪ್ರಯೋಜನವೇನು ಎಂಬುದರರಿವಾಗುತ್ತದೆ. ಜೊತೆಗೆ ಮನೆಯಲ್ಲಿ ನೀರಿಂಗಿಸುವಿಕೆ, ಮಳೆಕೊಯ್ಲು, ಇಂಗುಗುಂಡಿ ಮಾಡಿದಾಗ ಸರಕಾರ ಕೂಡ ಸಹಾಯಧನ ನೀಡುವ ಮೂಲಕ ಯೋಜನೆಯನ್ನು ಮನೆ-ಮನೆಗೆ ತಲುಪಿಸುವ ಕಾರ್ಯವನ್ನು ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಗಿಡ-ಮರಗಳು ಬೆಳೆದಾಗ ಮಾನವನಿಗೆ ಆಕ್ಸಿಜನ್ ಪ್ರಾಪ್ತಿ-ಬಾಬು ಅಂಬಲತ್ತಿನ್‌ಕಾಲ:
ಮಂಗಳೂರು ಕೇಂದ್ರೀಯ ಸಮಿತಿಯ ಕೋಶಾಧಿಕಾರಿ ಬಾಬು ಅಂಬಲತ್ತಿನ್‌ಕಾಲರವರು ಮಾತನಾಡಿ, ಪರಿಸರ ಸಂರಕ್ಷಣೆ ಆಗಬೇಕಾದರೆ ನಮ್ಮಲ್ಲಿ ಶ್ರೇಷ್ಟಮಟ್ಟದ ಸಂಸ್ಕಾರ ಮತ್ತು ಸಂಸ್ಕೃತಿ ಮೇಳೈಸಬೇಕಾಗುತ್ತದೆ. ಮಾನವನ ಲೌಕಿಕತೆಯ ಮೇಲಿರುವ ಆವೇಶ ಪ್ರಪಂಚದ ಮೂಲ ಸೌಂದರ್ಯವನ್ನು ಸರ್ವನಾಶದೆಡೆಗೆ ಕೊಡೊಯ್ಯಲು ಸಾಧ್ಯವಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡ-ಮರಗಳು ಸೊಂಪಾಗಿ ಬೆಳೆದಾಗ ಅವುಗಳಿಂದ ಮಾನವನಿಗೆ ಉಸಿರಾಡಲು ಬೇಕಾದ ಆಕ್ಸಿಜನ್ ಪ್ರಾಪ್ತವಾಗುತ್ತದೆ ಎಂದರು.

ನಮ್ಮ ಪರಿಸರವನ್ನು ನಾವೇ ಸಂರಕ್ಷಿಸೋಣ-ಜೋನ್ ಕೆ.ಕೆ:
ಮಂಗಳೂರು ಕೇಂದ್ರೀಯ ಸಮಿತಿಯ ಪುತ್ತೂರು ಧರ್ಮಪ್ರಾಂತ್ಯದ ಅಧ್ಯಕ್ಷ ಜೋನ್ ಕೆ.ಕೆರವರು ಮಾತನಾಡಿ, ಐಕ್ಯ ರಾಷ್ಟ್ರ ಸಂಘಟನೆಯ ಪ್ರತಿಫಲವಾಗಿ ೧೯೭೨ರಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದ್ದು, ಪ್ರತೀ ವರ್ಷದ ಜೂನ್ ಐದರಂರು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಪರಿಸರದ ದಿನದ ಅಂಗವಾಗಿ ಪ್ರತೀ ವರ್ಷ ಆಪ್ತವಾಕ್ಯ(ಸ್ಲೋಗನ್)ವನ್ನು ಬಿಡುಗಡೆಗೊಳಿಸುತ್ತಿದ್ದು, ಈ ವರ್ಷ ವಾಯುಮಾಲಿನ್ಯದ ಕುರಿತಾಗಿ ಸ್ಲೋಗನ್‌ನ್ನು ಹೊರಡಿಸಲಾಗಿದೆ. ವಾಯುಮಾಲಿನ್ಯದ ಸಂರಕ್ಷಣೆಯೊಂದಿಗೆ ನಮ್ಮ ಪರಿಸರವನ್ನು ನಾವೇ ಸಂರಕ್ಷಿಸೋಣ ಎಂಬ ಹೊಣೆಗಾರಿಕೆಯನ್ನು ನಾವು ಹೊತ್ತುಕೊಳ್ಳಬೇಕಾಗಿದೆ ಎಂದರು.

ಮಾನವ ನಿರ್ಮಿತದಿಂದ ಪ್ರಾಕೃತಿಕ ವಿಕೋಪಗಳು-ಮಾಮಚ್ಚನ್ ಎಂ:
ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ.ರವರು ಮಾತನಾಡಿ, ಹವಾಮಾನ ವೈಪರೀತ್ಯ ಸಂಭವಿಸುತ್ತಿರುವ ಈ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಆಗುತ್ತಿರುವುದು ದುರಂತವೆನಿಸಿದೆ. ಒಟ್ಟಾರೆ ಮಾನವನ ಸ್ವಾರ್ಥತೆಯಿಂದ ಇವೆಲ್ಲವೂ ನಡೆಯುತ್ತಿದ್ದು ಇದೊಂದು ಮಾನವ ನಿರ್ಮಿತ ಎಂದೇ ಹೇಳಬಹುದು. ಪರಿಸರವನ್ನು ಸಂರಕ್ಷಿಸುವ ಕೃಷಿ ಪದ್ಧತಿಗೆ ನಾವಿಂದು ಪ್ರೋತ್ಸಾಹ ನೀಡಬೇಕಾಗಿದೆ ಜೊತೆಗೆ ಪರಿಸರವನ್ನು ಸಂರಕ್ಷಿಸುವ ಸಂಸ್ಕೃತಿಯನ್ನು ಬೆಳೆಸುವ ಹೊಣೆಗಾರಿಕೆಯೂ ನಮ್ಮದಾಗಬೇಕಿದೆ. ಕ್ರೈಸ್ತ ಬಂಧುಗಳ ವಿರುದ್ಧ ಅನ್ಯಾಯವಾದಲ್ಲಿ ನಾವೆಲ್ಲರೂ ಹೋರಾಟ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದರು.

ಮಲಂಕರ ಕಥೋಲಿಕ್ ಅಸೋಸಿಯೇಶನ್‌ನ ಕೇಂದ್ರೀಯ ಸಮಿತಿಯ ಸದಸ್ಯ ತೋಮಸ್ ಫೈಲಿ, ಮಂಗಳೂರು ಕಥೋಲಿಕ್ ಅಸೋಸಿಯೇಶನ್‌ನ ಪುತ್ತೂರು ಧರ್ಮಪ್ರಾಂತ್ಯದ ಕಾರ್ಯದರ್ಶಿ ಜೋಸ್ ಸ್ಯಾಮುವೆಲ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಶಾ ಹಾಗೂ ನೇಹಾರವರ ತಂಡ ಪ್ರಾರ್ಥಿಸಿದರು. ಮಲಂಕರ ಕಥೋಲಿಕ್ ಅಸೋಸಿಯೇಶನ್‌ನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಚೆರಿಯಾನ್ ಚೆನ್ನೀರ್‌ಕರ ಸ್ವಾಗತಿಸಿ, ಪುತ್ತೂರು ಧರ್ಮಪ್ರಾಂತ್ಯ(ಎಂಸಿಎ)ದ ಉಪಾಧ್ಯಕ್ಷ ಸಜಿತ್ ಕೆ.ಜಿ ವಂದಿಸಿದರು. ಎಂಸಿಎ ಇದರ ಪ್ರಧಾನ ಕಾರ್ಯದರ್ಶಿ ಜೋರ್ಜ್ ಕೆ.ತೋಮಸ್ ಕಾರ್ಯಕ್ರಮ ನಿರೂಪಿಸಿದರು.

`ಗುಡ್‌ಫ್ರೈಡೇ’ ರಜೆ ಯಥಾಸ್ಥಿತಿಗೆ ಮನವಿ…
ರಾಜ್ಯ ಸರಕಾರದ ಆರನೇ ವೇತನ ಆಯೋಗದ ಸಚಿವ ಸಂಪುಟವು ಇತ್ತೀಚೆಗೆ ಗುಡ್‌ಫ್ರೈಡೇ ಸೇರಿದಂತೆ ಕೆಲವು ಸರಕಾರಿ ರಜೆಗಳನ್ನು ಹಿಂಪಡೆದಿತ್ತು. ಕ್ರೈಸ್ತ ಬಾಂಧವರ ಪ್ರಮುಖ ದಿನಗಳೆನಿಸಿದ ಯೇಸುಕ್ರಿಸ್ತರ ಪುನರ್ಜನ್ಮ ಸಾರುವ ಕ್ರಿಸ್ತಜಯಂತಿ ಹಾಗೂ ಯೇಸುಕ್ರಿಸ್ತರ ಬಲಿದಾನ ಸಾರುವ ಗುಡ್‌ಫ್ರೈಡೆ ದಿನವನ್ನು ಸಾರ್ವತ್ರಿಕ ಸರಕಾರಿ ರಜೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಇದರಲ್ಲಿ ಗುಡ್‌ಫ್ರೈಡೆ ದಿನವನ್ನು ಸರಕಾರಿ ರಜೆಯಿಂದ ಹಿಂಪಡೆದಿದ್ದು, ಮಲಂಕರ ಕಥೋಲಿಕ್ ಎಸೋಸಿಯೇಶನ್(ಎಂಸಿಎ) ಹಾಗೂ ಅಖಿಲ ಭಾರತ ಕ್ಯಾಥೋಲಿಕ್ ಯೂನಿಯನ್(ಎಐಸಿಯು) ಜೊತೆಗೂಡಿ ಗುಡ್‌ಫ್ರೈಡೆ ದಿನವನ್ನು ಎಂದಿನಂತೆ ರಜಾದಿನವೆಂದು ಘೋಷಿಸಿ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯಮಂತ್ರಿಗಳಿಗೆ ಮನವಿ ಮುಖೇನ ವಿನಂತಿಸಲಾಗುವುದು ಎಂದು ಎಂಸಿಎ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಯೋಹನ್ನಾನ್ ಎಂ.ರವರು ಸಭೆಯಲ್ಲಿ ಮನವಿ ಮಾಡಿದರು.

ವಿಕಾರ್ ಜನರಲ್ ಮೊ|ಡಾ|ಎಲ್ದೋ ಪುತ್ರನಕಂಡತ್ತಿಲ್‌ರವರ ನೇತೃತ್ವದಲ್ಲಿ ಮೊದಲಿಗೆ ಪ್ರಾರ್ಥನಾ ಕೂಟ, ಬಳಿಕ ಎಂಸಿಎ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಯೋಹನ್ನಾನ್ ಎಂ.ರವರು ಧ್ವಜಾರೋಹಣವನ್ನು ನೆರವೇರಿಸಿದರು. ಸಭಾ ಕಾರ್ಯಕ್ರಮದ ಬಳಿಕ `ಪರಿಸರ ಸ್ನೇಹಿ ಕೃಷೀಯ ಆಧ್ಯಾತ್ಮಿಕತೆ’ ಬಗ್ಗೆ ಸಂಪನ್ಮೂಲ ವ್ಯಕ್ತಿ ಜೆಪಿಡಿ ಆಯೋಗದ ಕಾರ್ಯದರ್ಶಿ(ಕೆಸಿಬಿಸಿ) ಹಾಗೂ ಕೆಸಿಎಫ್‌ನ ಮಹಾನಿರ್ದೇಶಕರಾದ ವಂ|ಜೋರ್ಜ್ ವೆಟ್ಟಿಕಾಟ್ಟಿಲ್‌ರವರಿಂದ ಕಾರ್ಯಾಗಾರವು ನೆರವೇರಲ್ಪಟ್ಟಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.