HomePage_Banner
HomePage_Banner
HomePage_Banner

ಕಡಬ ಭಾಗದಲ್ಲಿ ವ್ಯಾಪಕಗೊಂಡ ಡೆಂಗ್ಯೂ ಜ್ವರ! ಕೋಡಿಂಬಾಳ, 102ನೆಕ್ಕಿಲಾಡಿ, ನೂಜಿಬಾಳ್ತಿಲ, ರೆಂಜಿಲಾಡಿ ಹಲವರಿಗೆ ಡೆಂಗ್ಯೂ ಜ್ವರ

Puttur_Advt_NewsUnder_1
Puttur_Advt_NewsUnder_1

ವರದಿ: ವಿಜಯ ಕುಮಾರ್ ಕಡಬ

ಕೋಡಿಂಬಾಳ ಗ್ರಾಮದ ಕಕ್ಕೆತ್ತಿಮಾರ್ ಎಂಬಲ್ಲಿರುವ ಘನತ್ಯಾಜ್ಯ ಘಟಕದದಲ್ಲಿ ಸೊಳ್ಳೆ ಉತ್ಪತ್ತಿ ಕೇಂದ್ರ
  • ಸಾರ್ವಜನಿಕ ವಲಯದಲ್ಲಿ ಭೀತಿಯ ವಾತಾವರಣ
  • ಜಿಲ್ಲಾ ಪ್ರಯೋಗಾಲಯ ವರದಿಯಲ್ಲಿ 5 ಡೆಂಗ್ಯೂ ಪ್ರಕರಣ ದೃಢ
  • ಖಾಸಗಿ ಪ್ರಯೋಗಾಲಯ ವರದಿಯಲ್ಲಿ 100ಕ್ಕೂ ಹೆಚ್ಚು ಮಂದಿಗೆ ಶಂಕಿತ ಡೆಂಗ್ಯೂ
  • ಸೊಳ್ಳೆ ಉತ್ಪತ್ತಿ ಕೇಂದ್ರವಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕ

ಕಡಬ: ಕಡಬ ಭಾಗದ ಕೋಡಿಂಬಾಳ, 102ನೆಕ್ಕಿಲಾಡಿ, ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮದಲ್ಲಿ ವ್ಯಾಪಕ ಡೆಂಗ್ಯೂ ಜ್ವರ ಇದ್ದು ಹಲವಾರು ಮಂದಿ ಮಂಗಳೂರು ಹಾಗೂ ಪುತ್ತೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೆಲವರಿಗೆ ಜ್ವರ ಪ್ರಾರಂಭವಾಗಿದ್ದು ಇನ್ನು ಕೆಲವರಿಗೆ ಜ್ವರ ಉಲ್ಬಣವಾಗುತ್ತಿದೆ, ಕೋಡಿಂಬಾಳ ಗ್ರಾಮದ ಉದೇರಿ, ಕೊಠಾರಿ, ಪಾಲಪ್ಪೆ, ಕುಕ್ಕೆರಬೆಟ್ಟು ಮಡ್ಯಡ್ಕ ಭಾಗಗಳಲ್ಲಿ ಜ್ವರ ವ್ಯಾಪಕವಾಗಿದೆ. ಕೋಡಿಂಬಾಳ ಗ್ರಾಮದ ಉದೇರಿ ಮುತ್ತಪ್ಪ ಗೌಡ, ಶ್ರೀಧರ ಗೌಡ, ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕುಕ್ಕರೆಬೆಟ್ಟುವಿನ ಪುಷ್ಪ, ಪಾಲಪ್ಪೆಯ ವೀಣಾ, ಮಡ್ಯಡ್ಕದ ಇಕ್ಬಾಲ್, ಕೊಠಾರಿಯ ಪ್ರತಿಭಾ, ಕಿಟ್ಟಮ್ಮ, ಉದೇರಿಯ ಗಣೇಶ್ ಅಂತೆಯೇ 102ನೆಕ್ಕಿಲಾಡಿ ಗ್ರಾಮದ ಹಲವರಿಗೆ ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದಲ್ಲಿ ಹಲವರಿಗೆ ಡೆಂಗ್ಯೂ ಜ್ವರ ಭಾದಿಸಿದ ಬಗ್ಗೆ ವರದಿಯಾಗಿದೆ. ಇತ್ತ ಕಡಬದ ಖಾಸಗಿ ಕ್ಲೀನಿಕ್‌ನಲ್ಲಿಯೂ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಕಡಬದ ನೂಜಿಬಾಳ್ತಿಲ, ರೆಂಜಿಲಾಡಿ, 102 ನೆಕ್ಕಿಲಾಡಿ ಹಾಗೂ ಕೋಡಿಂಬಾಳ ಗ್ರಾಮದ ಕೆಲ ಪ್ರದೇಶಗಳಲ್ಲಿ ಜನರು ವ್ಯಾಪಕವಾಗಿ ಶಂಕಿತ ಡೆಂಗ್ಯೂ ಜ್ವರ ಪೀಡಿತರಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಆರೋಗ್ಯ ಇಲಾಖೆಯ ಸಿಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಜ್ವರ ಪೀಡಿತ ಪ್ರದೇಶಗಳಲ್ಲಿ ಮನೆ ಮನೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಜ್ವರ ಪೀಡಿತರ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಮೂಲಕ ಜ್ವರದ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಡಿಂಬಾಳದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ, ನೆಲ್ಲಿಪಡ್ಡು, ಕುಕ್ಕೆರೆಬೆಟ್ಟು ಪ್ರದೇಶಗಳ ಸುಮಾರು ೫೦ ಮನೆಗಳಲ್ಲಿ ಬಹುತೇಕ ಎಲ್ಲರೂ ಜ್ವರದ ಬಾದೆಗೆ ಒಳಗಾಗಿದ್ದಾರೆ. ಕೆಲವು ಮಂದಿ ರೋಗಿಗಳು ಮಂಗಳೂರು ಹಾಗೂ ಪುತ್ತೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ವರ್ಷ ಇದೇ ಸಮಯದಲ್ಲಿ ಕೋಡಿಂಬಾಳದ ಮಜ್ಜಾರು, ಮಡ್ಯಡ್ಕ ಪ್ರದೇಶಗಳಲ್ಲಿ ಇದೇ ರೀತಿ ಜ್ವರ ಕಾಣಿಸಿಕೊಂಡಿತ್ತು. ಅದಕ್ಕೂ ಹಿಂದಿನ ವರ್ಷ ಕಡಬ ವ್ಯಾಪ್ತಿಯ ನೂಜಿಬಾಳ್ತಿಲ, ಮೀನಾಡಿ, ಕಲ್ಲುಗುಡ್ಡೆ, ಕೋಡಿಂಬಾಳ, ಹೊಸ್ಮಠ, ಮರ್ದಾಳ, ಐತ್ತೂರು ಪ್ರದೇಶಗಳಲ್ಲಿ ಹೆಚ್ಚಿನ ಜನರು ಶಂಕಿತ ಡೆಂಗ್ಯೂ ಜ್ವರದ ಬಾದೆಗೊಳಗಾಗಿದ್ದರು. ಕಡಬ ಸರಕಾರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಈ ಬಾರಿ ಡೆಂಗ್ಯೂ ಜ್ವರದ ೫ ಪ್ರಕರಣಗಳು ದೃಢಪಟ್ಟಿವೆ. ಖಾಸಗಿ ಪ್ರಯೋಗಾಲಯಗಳ ವರದಿಯ ಪ್ರಕಾರ ಕಳೆದ ೨ ತಿಂಗಳ ಅವಧಿಯಲ್ಲಿ ೧೦೦ಕ್ಕೂ ಹೆಚ್ಚು ಮಂದಿ ಶಂಕಿತ ಡೆಂಗ್ಯೂ ಜ್ವರ ಪೀಡಿತರು ಕಡಬ ಪರಿಸರದಲ್ಲಿ ಪತ್ತೆಯಾಗಿದ್ದಾರೆ. ಪೀಡಿತರಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಡಿಂಬಾಳದ ಉದೇರಿ ನಾರಾಯಣ ಗೌಡರ ಪತ್ನಿ ರತ್ನಾವತಿ ಅವರು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ಆದರೆ ಅವರ ಪುತ್ರ ಗಣೇಶ್ ಇದೀಗ ಜ್ವರ ಪೀಡಿತರಾಗಿದ್ದಾರೆ.

ಸೊಳ್ಳೆ ಉತ್ಪತ್ತಿ ಕೇಂದ್ರವಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕ:
ಕಡಬ ಗ್ರಾಮ ಪಂಚಾಯತ್‌ನ ಘನ ತ್ಯಾಜ್ಯ ವಿಲೇವಾರಿ ಘಟಕ ಇರುವ ಕೋಡಿಂಬಾಳ ಗ್ರಾಮದ ಕಕ್ಕೆತ್ತಿಮಾರು ಆಸುಪಾಸಿನ ಪ್ರದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜ್ವರ ಬಾಧಿತರಿದ್ದು, ತ್ಯಾಜ್ಯ ಘಟಕದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ನಡೆಯದೇ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡಲು ಕಾರಣವಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಕುರಿತು ಆರೋಗ್ಯ ಇಲಾಖಾಧಿಕಾರಿಗಳು ಹಾಗೂ ಪಂಚಾಯತ್ ಆಡಳಿತ ಗಮನಹರಿಸುವ ಅಗತ್ಯವಿದೆ.

5 ಶಂಕಿತ ಡೆಂಗ್ಯೂ ಜ್ವರ ಪ್ರಕರಣ ಪತ್ತೆ-ಡಾ| ಸುಚಿತ್ರಾ ರಾವ್
ಈ ಬಗ್ಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಮಾಹಿತಿ ನೀಡಿ, ಕಡಬದ ನೂಜಿಬಾಳ್ತಿಲ, ರೆಂಜಿಲಾಡಿ, ೧೦೨ ನೆಕ್ಕಿಲಾಡಿ ಹಾಗೂ ಕೋಡಿಂಬಾಳ ಗ್ರಾಮಗಳಲ್ಲಿ ಶಂಕಿತ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಕೋಡಿಂಬಾಳ ಪರಿಸರದಿಂದ ಶಂಕಿತ ಡೆಂಗ್ಯೂ ಜ್ವರ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ. ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಿದ್ದಾರೆ. ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ರೋಗಿಗಳ ರಕ್ತದ ಮಾದರಿಯ ವರದಿ ಬಂದಿದ್ದು ಕಡಬ ಸಮುದಾಯ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಒಟ್ಟು ೫ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಜ್ವರದ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದುದರಿಂದ ಜನರು ಆತಂಕಪಡಬೇಕಿಲ್ಲ. ಜ್ವರ ಪೀಡಿತ ಪ್ರದೇಶಗಳಲ್ಲಿ ಫಾಗಿಂಗ್ ನಡೆಸುವುದರೊಂದಿಗೆ ಜಾಗೃತಿ ಕರಪತ್ರಗಳನ್ನು ಹಂಚುವ ಕೆಲಸ ನಡೆಯುತ್ತಿದೆ.

*ಡೆಂಗ್ಯೂ ಜ್ವರದ ಗುಣಲಕ್ಷಣಗಳು:
ಇದ್ದಕ್ಕಿದ್ದಂತೆಯೇ ತೀವ್ರ ಜ್ವರ, ಹಣೆಯ ಭಾಗದಲ್ಲಿ ನೋವು, ಕಣ್ಣುಗುಡ್ಡೆಗಳಲ್ಲಿ ನೋವು, ಮಾಂಸಖಂಡಗಳಲ್ಲಿ ತೀವ್ರ ನೋವು ಇದ್ದಲ್ಲಿ ಅದನ್ನು ಡೆಂಗ್ಯೂ ಜ್ವರ ಎಂದು ತಿಳಿಯಬಹುದು. ಮೈಮೇಲೆ ಕೆಂಪು ಗುಳ್ಳೆಗಳು, ಕಣ್ಣು ಕೆಂಪಾಗುವುದು, ವಸಡು ಹಾಗೂ ಮೂಗಿನಲ್ಲಿ ರಕ್ತಸ್ರಾವದ ಲಕ್ಷಣ, ಕೆಂಪಾದ ಮೂತ್ರ, ಮಲ ಕಪ್ಪಾಗಿದ್ದಲ್ಲಿ ಕೂಡಲೇ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳಬೇಕು.

*ನಿಯಂತ್ರಣ ಮಾರ್ಗಗಳು:
ಸೋಂಕು ಹೊಂದಿದ ಈಡಿಸ್ ಈಜಿಪ್ಟೈ ಸೊಳ್ಳೆಗಳಿಂದಾಗಿ ಡೆಂಗ್ಯೂ ಹರಡುತ್ತದೆ. ಮುಖ್ಯವಾಗಿ ಈ ಸೊಳ್ಳೆಗಳು ಮುಸ್ಸಂಜೆ ಮತ್ತು ಮುಂಜಾನೆಯ ವೇಳೆ ಕಚ್ಚುತ್ತವೆ. ಆದುದರಿಂದ ಡೆಂಗ್ಯೂ ಜ್ವರದಿಂದ ತೊಂದರೆಗೊಳಗಾದವರು ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಹಗಲು ಹೊತ್ತಿನಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವ ಮಕ್ಕಳು, ಗರ್ಭಿಣಿಯರು, ಬಾಣಂತಿ, ಹಾಗೂ ವಯಸ್ಸಾದವರು ಕೂಡ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಪರಿಸರದಲ್ಲಿ ಸ್ವಚ್ಛತೆ, ಘನತ್ಯಾಜ್ಯ ಸಮರ್ಪಕ ವಿಲೇವಾರಿ, ನೀರು ಸಂಗ್ರಹಿಸುವಾಗ ಭದ್ರವಾದ ಮುಚ್ಚಳ ಅಳವಡಿಸುವುದು, ನೀರು ನಿಂತ ಸ್ಥಳಗಳಿಗೆ ವಾರದಲ್ಲಿ ೧ ಸಲ ಟೆಮೋಫಾಸ್ ರಾಸಾಯನಿಕ ಸಿಂಪಡಣೆ ಮಾಡುವುದು ಇತ್ಯಾದಿ ಕ್ರಮ ಕೈಗೊಂಡಾಗ ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.