ಕಳಿಯ: ರೇಷ್ಮೆರೋಡ್ ಪ್ರದೀಪ್ ಕೊಲೆ ಪ್ರಕರಣ: ಆರೋಪಿ ದಿನೇಶ್ ಗೆ ಜೀವಾವಧಿ ಶಿಕ್ಷೆ

0

ಕಳಿಯ; 2017 ರಲ್ಲಿ ಕಳಿಯ ಗ್ರಾಮದ ರೇಷ್ಮೆರೋಡ್ ಎಂಬಲ್ಲಿ ಪೂರ್ವ ಧ್ವೇಷದಿಂದ ಪ್ರದೀಪ್ ಎಂಬವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿ ದಿನೇಶ್ ನ್ಯಾಯತರ್ಪು ಎಂಬಾತ ಅಪರಾಧಿ ಎಂದು ನ್ಯಾಯಾಲಯ ಅಭಿಪ್ರಾಯಕ್ಕೆ ಬಂದಿದ್ದು, ಅ.31 ರಂದು ಅಪರಾಧಿಗೆ ಶಿಕ್ಷೆ ಪ್ರಕಟವಾಗಿದೆ.

2017 ರ ನವಂಬರ್ 24 ರಂದು ಆರೋಪಿ ದಿನೇಶ ಎಂಬಾತನು ತನ್ನ ಟಿಪ್ಪರ್ ಲಾರಿಯಲ್ಲಿ  ಕಳಿಯ ಗ್ರಾಮದ ರೇಷ್ಮೆ ರೋಡ್ ಬಳಿ ಮಧ್ಯಾಹ್ನ 1.30 ರ ಸಮಯದಲ್ಲಿ ಪ್ರದೀಪ ಎಂಬಾತನನ್ನು ಕಂಡು ಪೂರ್ವದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪನನ್ನು ಕೈ ಸನ್ನೆ ಮಾಡಿ ಟಿಪ್ಪರ್ ಲಾರಿ ಬಳಿ ಕರೆದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಲಿವರ್ ನಿಂದ ಪ್ರದೀಪನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ.

ಈ ಘಟನೆಗೆ ಸಂಬಂಧಿಸಿದಂತೆ ಅಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆಗೆ ಕೈಗೆತ್ತಿಕೊಂಡಿದ್ದ ಆ ಸಮಯದಲ್ಲಿ ಬೆಳ್ತಂಗಡಿ ಪೊಲೀಸ್‌ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ, ಪ್ರಸ್ತುತ ಕೊಡಗು ಜಿಲ್ಲೆಯ ಡಿ.ಸಿ ಆರ್ ಬಿ ಆಗಿರುವ ನಾಗೇಶ್ ಕದ್ರಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸದ್ರಿ ಚಾರ್ಜ್‌ಶೀಡ್ ಅನ್ನು ಕೈಗೆತ್ತಿಕೊಂಡ ಮಂಗಳೂರು ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಕ್ಷ್ಯಾಧಾರಗಳ ಪ್ರಕಾರ ಆರೋಪಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 10,000/- ರೂ ದಂಡವನ್ನು ವಿಧಿಸಿರುತ್ತದೆ.

ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಈಗಿನ ವೇಣೂರು ಎಎಸ್‌ಐ ಆಗಿರುವ ವೆಂಕಟೇ‌ಶ್ ನಾಯ್ಕ ಇವರು ಸಹಕರಿಸಿದ್ದು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಶೇಖರ್ ಶೆಟ್ಟಿ ಹಾಗೂ ಶ್ರೀಮತಿ ಜುಡಿತ್ ಕ್ರಾಸ್ತಾ ರವರು  ವಾದ ಮಂಡಿಸಿರುತ್ತಾರೆ.

LEAVE A REPLY

Please enter your comment!
Please enter your name here