HomePage_Banner
HomePage_Banner

ಸರ್ಕಾರಿ ಶಾಲೆಗೆ ಮಕ್ಕಳನ್ನು ಕಲೆ ಹಾಕಿಸಿದ ‘ಕಲನ’ – ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ಶಿಕ್ಷಕರಿಂದ ವಿನೂತನ ಸಾಧನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇದೊಂದು ಬಹಳ ವಿಪರ್‍ಯಾಸ ಮತ್ತು ಕಟು ಸತ್ಯದ ಮಾತು. `ನಮಗೆ ಸೌಲಭ್ಯ, ಸೌಕರ್‍ಯ, ಉದ್ಯೋಗ ಎಲ್ಲವೂ ಸರ್ಕಾರಿ ಆಗಬೇಕು. ಆದರೆ ಸರಕಾರಿ ಶಾಲೆ, ಸರಕಾರಿ ಬಸ್ ಅಂದರೆ ಅಷ್ಟಕಷ್ಟೆ’. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಾಕಿಸಿದರೆ ಎಲ್ಲಿ ನಮ್ಮ ಪ್ರತಿಷ್ಟೆ ಕಡಿಮೆಯಾಗುತ್ತದೋ ಎಂಬ ಹೆದರಿಕೆ ಮಕ್ಕಳ ಹೆತ್ತವರದ್ದು. ಮಕ್ಕಳ ಪೋಷಕರ ಕಥೆ ಹೀಗಾದರೆ ಇನ್ನು ಶಿಕ್ಷಕರಂತೂ (ಕೆಲವೆಡೆ) ತಾವಾಯಿತು, ತಮ್ಮ ಪಾಠವಾಯಿತು ಎಂದು ತಮ್ಮ ಕರ್ತವ್ಯದಷ್ಟು ಮಾಡಿ ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಆದರೆ ತಮ್ಮ ಕರ್ತವ್ಯಕ್ಕೂ ಮೀರಿ ಪ್ರಯತ್ನ ಮಾಡಿದರೆ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೇಗೆ ಹೆಚ್ಚು ಮಾಡಬಹುದೆಂಬುದಕ್ಕೆ ಪುತ್ತೂರಿನ ಶತಮಾನ ಕಂಡ ಬೋರ್ಡ್ ಹೈಸ್ಕೂಲ್ ಮಾದರಿ ಪ್ರಯತ್ನ ಮಾಡಿದೆ.

‘ಕಲನ’. ಹೆಸರೇ ಕಲಿಕೆಯನ್ನು ಕಲೆ ಹಾಕುವಂತೆ ಸೂಚಿಸುತ್ತಿದೆ. ಹೌದು. ಕಲಿಕೆಯ ಬಯಸಿ ಬರುವ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಒಂದೆಡೆಯಾದರೆ, ಸರಕಾರಿ ಶಾಲೆಯೊಂದರಲ್ಲಿ ಎಲ್ಲಾ ಸೌಲಭ್ಯ ಪಡೆದುಕೊಂಡು ಪರಿಣಾಮಕಾರಿ ಕಲಿಕೆ ಹೇಗೆ ಸಾಧ್ಯ? ಎಂಬುದನ್ನು ಶಾಲೆ ಶಾಲೆಗೆ ಭೇಟಿ ನೀಡಿ ಪ್ರಚಾರ ಮಾಡಿ ವಿದ್ಯಾರ್ಥಿಗಳನ್ನು ಹೈಸ್ಕೂಲ್ ದಾಖಲಾತಿಗಾಗಿ ಕಲೆ ಹಾಕಿರುವುದೇ ಈ `ಕಲನ’ದ ವಿಶೇಷವಾಗಿದೆ.

ಪುತ್ತೂರಿನ ಶತಮಾನದ ಇತಿಹಾಸ ಕಂಡ ಸರ್ಕಾರಿ ಪ್ರೌಢಶಾಲೆ ಕೊಂಬೆಟ್ಟು ಇಲ್ಲಿ ಪ್ರಸ್ತುತ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಶಾಲೆಯ ಶಿಕ್ಷಕರು ವಿಶಿಷ್ಟ ಪ್ರಯತ್ನವೊಂದರ ಮೂಲಕ ತಮ್ಮ ಶಾಲೆಯ ದಾಖಲಾತಿಯನ್ನು ಹೆಚ್ಚಿಸುವ ಸಾಧನೆ ಮಾಡಿದ್ದಾರೆ.

ಶಾಲೆಯಲ್ಲಿರುವ ಸೌಲಭ್ಯಗಳು ಮತ್ತು ವಿಶೇಷತೆಗಳ ಬಗ್ಗೆ ಬರೆಯಲಾಗಿರುವ ಪ್ರಚಾರ ಪತ್ರಿಕೆಯೊಂದನ್ನು ತಯಾರಿಸಿ ಸುತ್ತ ಮುತ್ತಲ 35 ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳು ಕೊಂಬೆಟ್ಟು ಸರಕಾರಿ ಶಾಲೆಗೆ ಬರುವಂತೆ ಪ್ರೇರೇಪಿಸಿ ಅಭಿಯಾನ ನಡೆಸಲಾಗಿದೆ. ಅದಕ್ಕೆ ಬೇಕಾಗಿ ಬೇಸಿಗೆ ರಜೆಯನ್ನು ಶಿಕ್ಷಕರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಮನಸೆಳೆಯಲು ನಾನಾ ಪ್ರಯತ್ನ ಮಾಡಿದ್ದಾರೆ. ಇದರ ಪರಿಣಾಮ ಸುಮಾರು 300 ಕ್ಕೂ ಅಧಿಕ ಮಕ್ಕಳು ಈಗಾಗಲೇ ಹೈಸ್ಕೂಲ್‌ಗೆ ದಾಖಲಾಗಿದ್ದಾರೆ.

ಶತಮಾನ ಕಂಡ ಈ ಶಾಲೆ ಅಟಲ್ ಟಿಂಕರಿಂಗ್ ಲ್ಯಾಬ್ ಹೊಂದಿರುವ ಜಿಲ್ಲೆಯ ಏಕೈಕ ಸರಕಾರಿ ಶಾಲೆ ಎಂಬ ಖ್ಯಾತಿ ಜತೆಗೆ ಕೊಂಬೆಟ್ಟು ಪದವಿಪೂರ್ವ ಕಾಲೇಜು ಎನ್‌ಸಿಸಿ ಕೆಡೆಟ್ ಇರುವ ಜಿಲ್ಲೆಯ ಮೊದಲ ಸರ್ಕಾರಿ ಪ್ರೌಢಶಾಲೆಯಾಗಿದೆ. ವೃತ್ತಿಪರ ಕೋರ್ಸು ಆರಂಭಿಸಿರುವ ಜಿಲ್ಲೆಯ ಮೊದಲ ಸರ್ಕಾರಿ ಶಾಲೆ, ಸ್ಟೂಡೆಂಟ್ ಪೊಲೀಸ್ ಕೆಡೆಟ್, ಸ್ಮಾರ್ಟ್ ಕ್ಲಾಸ್ ಹೀಗೆ ಸುಮಾರು 10ಕ್ಕಿಂತಲೂ ಹೆಚ್ಚಿನ ಸೌಲಭ್ಯಗಳಿವೆ. ೧೪ ರಷ್ಟು ವಿವಿಧ ಸಂಘಗಳಿವೆ.
ಜಗನ್ನಾಥ್ ಅರಿಯಡ್ಕ ಎಂಬ ಕಲಾ ಶಿಕ್ಷಕರ ನೇತೃತ್ವದಲ್ಲಿ ಇದೀಗ ‘ಕಲನ’ ಅಭಿಯಾನದ ಮೂಲಕ ಯಶಸ್ವಿ ಸಾಧನೆ ಮಾಡಿದ ಶಿಕ್ಷಕರ ತಂಡ ಸರ್ಕಾರಿ ಶಾಲೆಗಳನ್ನು ಉಳಿಸುವ ಕಾಯಕದಲ್ಲಿ ನಿರತರಾಗಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಕಲನ ಸಾಧನೆಯ ಹಿಂದೆ…: ಶಿಕ್ಷಕರ ತಂಡದ ಈ ವಿಭಿನ್ನ ಪ್ರಯತ್ನಕ್ಕೆ ಕೊಂಬೆಟ್ಟು ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಜಯಶ್ರೀ ಬಿ ಮಾರ್ಗದರ್ಶನ ನೀಡಿದ್ದು, ಶಿಕ್ಷಕರಾದ ಬಾಲಕೃಷ್ಣ ಡಿ.ಟಿ, ಗ್ರೆಗೋರಿ ರಾನಿ ಪಾಯಸ್, ಗೀತಾಮಣಿ, ಸಿಂಧು ವಿ.ಕೆ, ಆಶ್ಲೇಷ್ ಕುಮಾರ್, ಶಶಿಕುಮಾರ್, ಉಮೇರಾ ತಬಸ್ಸಮ್, ಪೂರ್ಣಿಮಾ ನಾಯಕ್, ಮಮತಾ ಮೋನಿಸ್, ಮಾಲಿನಿ, ವಿಮಲ ಮತ್ತು ರಶ್ಮೀ ಅವರ ತಂಡ ತಮ್ಮದೇ ಖರ್ಚು ವೆಚ್ಚದಲ್ಲಿ ಈ ವಿಶಿಷ್ಟ ಪ್ರಯೋಗ ಮಾಡಿದ್ದಾರೆ.

ರಜೆಯ ಅವಧಿಯನ್ನು ವ್ಯರ್ಥಗೊಳಿಸಲಿಲ್ಲ
ಕಲನ ಎಂದರೆ ಸೇರಿಸುವುದು ಎಂದು ಅರ್ಥ. ನಮ್ಮ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಹೊಸ ಅಭಿಯಾನವೊಂದನ್ನು ಹುಟ್ಟು ಹಾಕಿದೆವು. ನಮ್ಮ ರಜೆಯ ಅವಧಿಯನ್ನು ಬಳಸಿಕೊಂಡು ಸುಮಾರು 35ಪ್ರಾಥಮಿಕ ಶಾಲೆಗಳಿಗೆ ಹೋದೆವು. ನಮ್ಮ ಶಾಲೆಯಲ್ಲಿರುವ ಸೌಲಭ್ಯ ಅವಕಾಶಗಳ ಬಗ್ಗೆ ಹಾಡು, ಚಿತ್ರ ಬಿಡಿಸುವುದು, ಪಿಪಿಟಿ ಜತೆಗೆ ಆ ಮಕ್ಕಳೊಂದಿಗೆ ಬೆರೆತೆವು. ನಮ್ಮ ಈ ಅಭಿಯಾನಕ್ಕೆ ದೊಡ್ಡ ಮಟ್ಟದ ಸ್ಪಂದನೆ ಸಿಕ್ಕಿದೆ. ಈ ಬಾರಿ 268 ಮಕ್ಕಳು ಈಗಾಗಲೇ ಕೊಂಬೆಟ್ಟು ಶಾಲೆಯಲ್ಲಿ ದಾಖಲಾತಿ ಪಡೆದುಕೊಂಡಿದ್ದಾರೆ. 350 ಮಕ್ಕಳು ದಾಖಲಾತಿ ಪಡೆದುಕೊಳ್ಳಲು ಮುಂದಾಗಿದ್ದಾರೆ ಜಗನ್ನಾಥ್ ಅರಿಯಡ್ಕ, ಕಲಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕೊಂಬೆಟ್ಟು

ಶ್ರೀಲಕ್ಷ್ಮಿ ಗೆ 616 ಅಂಕ
ಈ ಬಾರಿಯ ಕೊಂಬೆಟ್ಟು ಪ್ರೌಢ ಶಾಲೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಮಕ್ಕಳಲ್ಲಿ 42 ಮಂದಿ 500ಕ್ಕಿಂತ ಹೆಚ್ಚು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಆಂಗ್ಲ ಮತ್ತು ಕನ್ನಡ ಮಾಧ್ಯಮ ಹೊಂದಿರುವ ಕೊಂಬೆಟ್ಟು ಪ್ರೌಢ ಶಾಲೆ ಶೇ.70 ಫಲಿತಾಂಶ ಪಡೆದು ಸರ್ಕಾರಿ ಶಾಲೆಗಳ ಪೈಕಿ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕನ್ನಡ ಮಾಧ್ಯಮ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ 616 ಅಂಕ ಪಡೆದು ಜಿಲ್ಲೆಯ ಸರ್ಕಾರಿ ಪ್ರೌಢಶಾಲಾ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.