ಪುತ್ತೂರು: ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದ್ದು, ಎಲ್ಲೆಡೆ ಮಳೆಗೆ ಮೊರೆ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೇ ದೇವರ ಮೊರೆ ಹೋಗಿದ್ದು, ಜೂ.6ರಂದು ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ, ಹೋಮ, ಅಭಿಷೇಕ ನಡೆಸಲು ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೂ.6ರಂದು ಬೆಳಿಗ್ಗೆ ಪರ್ಜನ್ಯ ಜಪ ನಡೆಸಲಾಯಿತು.
ಮುಂಗಾರು ಪೂರ್ವ ಮಳೆ ಈ ಬಾರಿ ಹಲವು ಜಿಲ್ಲೆಗಳಿಗೆ ಬಂದೇ ಇಲ್ಲ. ಪರಿಣಾಮ ಬಾವಿ, ಕೆರೆ, ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ರಾಜ್ಯದ ಬಹುತೇಕ ಜೀವನದಿಗಳು ಒಂದೆರಡು ತಿಂಗಳ ಹಿಂದೆಯೇ ನೀರಿನ ಹರಿವು ನಿಲ್ಲಿಸಿದೆ. ಮಳೆ ಬಾರದಿದ್ದರೆ ನೀರಿನ ಸಮಸ್ಯೆ ಮತ್ತಷ್ಟು ಬಿಗಿಡಾಯಿಸುವುದು ಎಂದು ರಾಜ್ಯ ಸರಕಾರ ದೇವರ ಮೊರೆ ಹೋಗಿದ್ದು ವರುಣದೇವನ ಪ್ರಾರ್ಥನೆಗಾಗಿ ರಾಜ್ಯ ಮುಜರಾಯಿ ಇಲಾಖೆಗೆ ಸಂಬಂಧಪಡುವ ದೇವಾಲಯಗಳಲ್ಲಿ ಜೂ.6ರ ಬ್ರಾಹ್ಮಿ ಮುಹೂರ್ತದಲ್ಲೇ ಅಭಿಷೇಕ, ಪರ್ಜನ್ಯ ಜಪ, ಹೋಮ ನಡೆಸಬೇಕು ಎಂದು ಸುತ್ತೋಲೆ ಹೊರಡಿಸಿತ್ತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೂ ಮುಜುರಾಯಿ ಸುತ್ತೋಲೆ ಬಂದ ಹಿನ್ನೆಲೆಯಲ್ಲಿ ಜೂ. 6ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಎನ್.ಸುಧಾಕರ್ ಶೆಟ್ಟಿಯವರು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿ, ಬಳಿಕ ದೇವಳದ ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಎ ವಸಂತ ಕುಮಾರ್ ಕೆದಿಲಾಯ ಮತ್ತು ಜಯರಾಮ ಭಟ್ ಅವರು ಪ್ರರ್ಜನ್ಯ ಜಪ ನೆರವೇರಿಸಿದರು.