HomePage_Banner
HomePage_Banner
HomePage_Banner

ಫಿಲೋಮಿನಾ ಪಿಯು ಕಾಲೇಜಿನಲ್ಲಿ ಪ್ರದರ್ಶನ ಕಲಾ ವಿಭಾಗ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ನಿರಂತರ ಅಭ್ಯಾಸ, ಸಾಧಿಸುವ ಛಲವಿದ್ದಾಗ ಕಲೆ ಒಲಿಯಬಲ್ಲುದು-ವಿದುಷಿ ನಯನಾ ರೈ
ಪುತ್ತೂರು: ನೃತ್ಯವಾಗಲಿ, ಹಾಡುಗಾರಿಕೆಯಾಗಲಿ ಒಮ್ಮಿಂದೊಮ್ಮೆಲೆ ಬರುವುದಿಲ್ಲ. ಇವುಗಳು ಸಿದ್ಧಿಸಬೇಕಾದರೆ ವರ್ಷಾನುಗಟ್ಟಲೇ ಕಾಯಬೇಕಾಗುತ್ತದೆ. ನೃತ್ಯ-ಶಿಲ್ಪ-ಸಂಗೀತ ಎಂಬುದು ಪರಸ್ಪರ ಹೊಂದಾಣಿಕೆಯ ಕಲೆಯಾಗಿದ್ದು ಸಾಧಿಸುತ್ತೇನೆ ಎಂಬ ಛಲ ಹಾಗೂ ನಿರಂತರ ಅಭ್ಯಾಸವೆಂಬ ತಪಸ್ಸು ಇದ್ದಾಗ ಕಲೆಯ ಒಲಿಯಬಲ್ಲುದು ಎಂದು ವಿಶ್ವಕಲಾನಿಕೇತನ ನೃತ್ಯ ಸಂಸ್ಥೆಯ ನಿರ್ದೇಶಕಿ ವಿದುಷಿ ನಯನಾ ವಿ ರೈಯವರು ಹೇಳಿದರು.

ಅವರು ಜೂ.7 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನಲ್ಲಿ ನೂತನವಾಗಿ ಸ್ಥಾಪಿತವಾದ ಪ್ರದರ್ಶನ ಕಲಾ ವಿಭಾಗದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಲೆಯನ್ನು ಪ್ರವೇಶಿಸಬೇಕಾದರೆ ಸುತ್ತಮುತ್ತಲಿನ ವಾತಾವರಣ, ಪರಿಸರ ಹಾಗೂ ಹೆತ್ತವರ ಪ್ರೋತ್ಸಾಹ ಖಂಡಿತಾ ಬೇಕಾಗುತ್ತದೆ. ಕಲೆ ಎಂಬುದು ಕಲಿಯದೆ ಬರುವುದಿಲ್ಲ. ಕಲೆಯೊಂದಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ ಬಹಳ ಕಷ್ಟವಿದೆ. ನಿರಂತರ ಪರಿಶ್ರಮ ಹಾಗೂ ಸಮಯದ ಹೊಂದಾಣಿಕೆಯನ್ನು ಮೈಗೂಡಿಸಿಕೊಂಡಲ್ಲಿ ಸಾಧನೆಗೆ ಮುನ್ನುಡಿ ಇಡಬಹುದಾಗಿದೆ ಎಂದ ಅವರು ನೃತ್ಯವನ್ನು ಶಾಸ್ತ್ರೀಯವಾಗಿ ಕಲಿತಾಗ ಮಾತ್ರ ಸಾಧ್ಯವಾಗುತ್ತದೆ. ಮನುಷ್ಯನ ದೇಹ-ಮನಸ್ಸುಗಳ ಬೆಳವಣಿಗೆಗೆ, ಯೌವ್ವನವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯವಂತರಾಗಿ ಕಾಣಲು ನೃತ್ಯ ಬಹಳ ಸಹಕಾರಿ ಎನಿಸಿದೆ. ನೃತ್ಯವನ್ನು ಆಭ್ಯಾಸ ಮಾಡಿದವರಿಗೆ ತಮ್ಮ ದೇಹವನ್ನು ಸದೃಢವಾಗಿ ಹಾಗೂ ಸದಾ ಚಟುವಟಿಕೆಯಿಂದಿರಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಕಾಲೇಜಿನ 2018-19ನೇ ಸಾಲಿನ ನಿರ್ಗಮಿತ ಡಿಸ್ಟಿಂಕ್ಷನ್ ವಿದ್ಯಾರ್ಥಿನಿ ಹಾಗೂ ಸಾಹಿತ್ಯಕ/ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದ ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿರುವ ಶ್ರೀದೇವಿ ಕೆ.ರವರು ಮಾತನಾಡಿ, ಪ್ರತಿಭೆ ಎನ್ನುವುದು ಶಕ್ತಿ ಇದ್ದ ಹಾಗೆ. ಪ್ರತಿಭೆ ಹಾಗೂ ಶಕ್ತಿ ಮೇಳೈಸಿದಾಗ ಆತ್ಮವಿಶ್ವಾದೊಂದಿಗೆ ಸಮಾಜದಲ್ಲಿ ಗುರುತಿಸಲು ಸಾಧ್ಯವಾಗುತ್ತದೆ. ವಿದ್ಯಾಭ್ಯಾಸ ಸಂದರ್ಭದಲ್ಲಿ ಕಾಲೇಜ್‌ನಲ್ಲಾಗಲಿ ಅಥವಾ ಇತರ ಸಂದರ್ಭದಲ್ಲಾಗಲಿ ವಿದ್ಯಾರ್ಥಿಗಳಿಗೆ ಪ್ರತಿಭೆ ಅನಾವರಣಕ್ಕೆ ಪ್ರತಿನಿಧಿಸಲು ಸಿಕ್ಕಿದ ಅವಕಾಶವನ್ನು ವ್ಯರ್ಥ ಮಾಡದೆ ಅದರ ಸದುಪಯೋಗ ಮಾಡುವಂತಾಗಬೇಕು. ಅವಕಾಶ ಹಾಗೂ ಕಾಲ ಎಂದಿಗೂ ಮರಳಿ ಸಿಗುವುದಿಲ್ಲ ಎಂದ ಅವರು ವಿದ್ಯಾರ್ಥಿ ಜೀವನದಲ್ಲಿ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಬ್ಯಾಲೆನ್ಸ್‌ನೊಂದಿಗೆ ಸಾಗಿದಾಗ `ಇಂಪಾಸಿಬಲ್’ ಎನ್ನುವುದನ್ನು `ಪಾಸಿಬಲ್’ ಎಂದು ತೋರಿಸಲು ಸಾಧ್ಯವಾಗುತ್ತದೆ. ವಿದ್ಯೆ ಕೊಟ್ಟಂತಹ ಸಂಸ್ಥೆಯು ದೇವಸ್ಥಾನವಾಗಿದ್ದು, ನಮಗೆ ಉತ್ತಮ ಅಡಿಪಾಯವಿತ್ತ ಸಂಸ್ಥೆ ಹಾಗೂ ಕಲಿಸಿದ ಗುರುಗಳನ್ನು ಗೌರವಿಸುವ ಗುಣ ನಮ್ಮದಾಗಲಿ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಕಳೆದೆರಡು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಿರಿಯ ವಿದ್ಯಾರ್ಥಿನಿಯಾಗಿರುವ ಶ್ರೀದೇವಿಯವರು ನಮ್ಮ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಮುಖ್ಯ ಅತಿಥಿಯಾಗಿರುವ ನಯನಾ ವಿ ರೈಯವರು ಕೂಡ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಅವರ ಗರಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ನೃತ್ಯಾಭ್ಯಾಸವನ್ನು ಮಾಡಿದ್ದಾರೆ. ಆದ್ದರಿಂದ ಇವರೀರ್ವರು ಪ್ರಸಕ್ತ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಪ್ರದರ್ಶನ ಕಲಾ ವಿಭಾಗದ ನಿರ್ದೇಶಕಿಯರಾದ ಸುಮನಾ ಪ್ರಶಾಂತ್ ಹಾಗೂ ರಶ್ಮಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿ ಸತ್ಯಾತ್ಮ ಭಟ್ ಸ್ವಾಗತಿಸಿ, ಅನುಶ್ರೀ ವಂದಿಸಿದರು. ಬೆವನ್ ಮ್ಯಾಥ್ಯೂ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜ್‌ನಲ್ಲಿ ಸಾಂಸ್ಕೃತಿಕ ಘಟಕ ಶ್ಲಾಘನೀಯ…
ಕಾಲೇಜ್‌ನಲ್ಲಿ ಸಾಂಸ್ಕೃತಿಕ ಘಟಕವನ್ನು ಆರಂಭಿಸಿರುವುದು ಶ್ಲಾಘನೀಯವಾಗಿದೆ ಮಾತ್ರವಲ್ಲದೆ ಒಳ್ಳೆಯ ಶಾಸ್ತ್ರೀಯ ನೃತ್ಯ ತಂಡವಿದ್ದಾಗ ಪ್ರದರ್ಶನಕ್ಕೆ ಯಾವ ಕೊರತೆಯೂ ಕಾಣಿಸದು. ಹೆಜ್ಜೆಗಾರಿಕೆ, ಬಣ್ಣಗಾರಿಕೆ ಹಾಗೂ ಹಸ್ತ ವಿನ್ಯಾಸ ವೈವಿಧ್ಯತೆ ಶಾಸ್ತ್ರೀಯ ನೃತ್ಯಗಾರಿಕೆಯ ಹೆಚ್ಚುಗಾರಿಕೆಯಾಗಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಘಟಕದಲ್ಲಿ ಹೆಚ್ಚೆಚ್ಚು ಉತ್ಸಾಹದಿಂದ ಭಾಗವಹಿಸಿ ಘಟಕವನ್ನು ಜೀವಾಳವಾಗಿಡಲು ಪ್ರಯತ್ನಿಸಬೇಕು. ಶಾಸ್ತ್ರೀಯ ನೃತ್ಯ ಅಥವಾ ಹಾಡುಗಾರಿಕೆಯನ್ನು ಕಲಿತರೆ ಮನೆಯಲ್ಲಿಯೇ ಹತ್ತಾರು ಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸಲು ಸಹಕಾರಿಯಾಗುತ್ತದೆ -ವಿದುಷಿ ನಯನಾ ವಿ ರೈ, ವಿಶ್ವಕಲಾನಿಕೇತನ ನೃತ್ಯ ಕಲಾಶಾಲೆ

ಕಾಲೇಜ್‌ನ 2018-19ನೇ ಸಾಲಿನ ನಿರ್ಗಮಿತ ಡಿಸ್ಟಿಂಕ್ಷನ್ ವಿದ್ಯಾರ್ಥಿನಿ ಹಾಗೂ ಸಾಹಿತ್ಯಕ/ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದ ಪ್ರತಿಭಾವಂತೆ ವಿದ್ಯಾರ್ಥಿಯಾಗಿರುವ ಶ್ರೀದೇವಿ ಕೆ.ರವರ ಪ್ರತಿಭೆಯನ್ನು ಗುರುತಿಸಿ ಪ್ರದರ್ಶನ ಕಲಾ ವಿಭಾಗದಿಂದ ಅವರಿಗೆ ಸ್ಮರಣಿಕೆ ಹಾಗೂ ಹೂ ನೀಡಿ ಅಭಿನಂದಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.