ಗುತ್ತಿಗೆದಾರನ ಎಡವಟ್ಟು ನಾಲ್ಕು ವರ್ಷಗಳಿಂದ ಮುಗಿಯದ ಮಾದೋಡಿ ಕೆರೆ ಅಭಿವೃದ್ಧಿ ಕಾಮಗಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು: ಎಲ್ಲೆಡೆ ನೀರಿನ ಆಹಾಕಾರ ಕೇಳಿ ಬರುತ್ತಿದೆ, ಅಂತರ್‌ಜಲ ಮಟ್ಟ ಕುಸಿದು ಪಾತಾಳಕ್ಕೆ ಹೋಗಿದೆ, ಸರಕಾರ ಜಲ ಮರುಪೂರಣ, ಕೆರೆಗಳ ಅಭಿವೃದ್ಧಿ ಮುಂತಾದ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡುತ್ತಿದೆ, ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕೆರೆಗಳ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ಆದರೆ ಕಡಬ ತಾಲೂಕಿನ ಬೆಳಂದೂರು ಗ್ರಾಮದ ಮಾದೋಡಿ ಎಂಬಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಕೆರೆ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದು ಇನ್ನೂ ಮುಗಿಯದೆ ಉತ್ತಮ ಯೋಜನೆಯೊಂದು ಹಳ್ಳ ಹಿಡಿದಿದೆ.

ಸಣ್ಣ ನೀರಾವರಿ ಇಲಾಖೆ ಮುಖಾಂತರ ಕೇರಳ ಮೂಲದ ಗುತ್ತಿಗೆದಾರರೊಬ್ಬರು ಮಾಡಿರುವ ಎಡವಟ್ಟಿನಿಂದಾಗಿ ಕಾಮಗಾರಿ ಪೂರ್ಣಗೊಳ್ಳದೆ ಕೆರೆ ಸುತ್ತ ಗಿಡಗಂಟಿಗಳು ಬೆಳೆದು ಅಂತರ್‌ಜಲ ಅಭಿವೃದ್ಧಿಯ ಮೂಲವಾಗಿದ್ದ ಕೆರೆ ನಿರುಪಯುಕ್ತವಾಗಿದೆ. ಸುಮಾರು ಐವತ್ತು ಲಕ್ಷ ರೂ ವೆಚ್ಚದಲ್ಲಿ ಮಾಡುತ್ತಿರುವ ಕೆರೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸದೆ ಸರಕಾರಿ ಹಣವನ್ನು ಪೋಲು ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಮಾದೋಡಿಯಲ್ಲಿನ ಮಾದೋಡಿ, ಕಟ್ಟತ್ತೋಡಿ, ಯಾವಾಜೆ ಮುಂತಾದ ಪ್ರದೇಶದಲ್ಲಿ ಇಲ್ಲಿನ ಹಿರಿಯರು ಸುಮಾರು ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆ ನಾಲ್ಕೈದು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ನಾವು ಇಂದು ಅಂತರ್‌ಜಲ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಮಾಡಿದರೆ, ಮಾದೋಡಿಯ ಹಿರಿಯ ತಲೆಗಳು ಅಂದೇ ಅಂತರ್‌ಜಲ ಅಭಿವೃದ್ಧಿ ಸಂಕಲ್ಪ ತೊಟ್ಟು ಈ ಭಾಗದ ಎತ್ತರ ಪ್ರದೇಶಗಳಲ್ಲಿ ಬೃಹತ್ ಗಾತ್ರದ ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಇದರಿಂದಾಗಿ ಈ ಭಾಗದಲ್ಲಿ ಕುಡಿಯುವ ನೀರು, ಅಥವಾ ಕೃಷಿ ಬಳಕೆಗೆ ಉಪಯೋಗಿಸುವ ಕೆರೆ ಬಾವಿಗಳಲ್ಲಿ ಬಿರು ಬೇಸಿಗೆಯಲ್ಲೂ ನೀರು ಬತ್ತುತ್ತಿರಲಿಲ್ಲ. ಈ ಪರಂಪರೆ ಇಂದಿಗೂ ಮುಂದುವರಿದಿದೆ, ಕೆರೆಗಳನ್ನು ಅಭಿವೃದ್ಧಿ ಪಡಿಸಿ ಹೂಳೆತ್ತುವ ಕಾರ್ಯ ಮಾಡದಿದ್ದರೂ ಇಂದಿಗೂ ಆ ಕೆರೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಬೇಸಿಗೆಗೆ ನೀರಿನ ಭವಣೆ ಇಲ್ಲದಂತೆ ಮಾಡುತ್ತಿದೆ. ಐದು ವರ್ಷಗಳ ಹಿಂದೆ ಇಲ್ಲಿ ಕೆರೆ ಇರುವುದನ್ನು ಕಂಡ ಸ್ಥಳೀಯ ಶಾಸಕ ಎಸ್.ಅಂಗಾರ ಈ ಕೆರೆಗಳನ್ನು ಅಭಿವೃದ್ಧಿ ಮಾಡಿದರೆ ಬೆಳಂದೂರು, ಕಾಣಿಯೂರು ಪ್ರದೇಶಗಳಿಗೆ ಭರಪೂರ ಕುಡಿಯುವ ನೀರು ಪೂರೈಕೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಿ ಕೆರೆಗಳ ಅಭಿವೃದ್ದಿಗೆ ಮುನ್ನುಡಿ ಬರೆದರು. ಮಾದೋಡಿ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾದರು. ಈ ಕರೆ ಖಾಸಗಿಯವರ ಭೂಮಿಯಲ್ಲಿದ್ದುದರಿಂದ ಭೂಮಿಯ ಮಾಲಕಿ ಸುಶೀಲ ಜೆ.ರೈ ಕೆರೆಯಿದ್ದ ಹತ್ತು ಸೆಂಟ್ಸು ಜಾಗವನ್ನು ಸರಕಾರಕ್ಕೆ ಬಿಟ್ಟುಕೊಟ್ಟು ಶಾಸಕರ ಕನಸಿಗೆ ಸಹಕಾರ ನೀಡಿದರು.

ಮುಂದೆ ಸಣ್ಣ ನೀರಾವರಿ ಇಲಾಖೆ ಮುಖಾಂತರ ೫೦ ಲಕ್ಷ ರೂ ಅನುದಾನ ಮಂಜೂರು ಮಾಡಿಸುವಲ್ಲಿಯೂ ಶಾಸಕರು ಯಶಸ್ವಿಯಾದರು. ಇ- ಟೆಂಡರ್ ಮೂಲಕ ಕೇರಳ ಮೂಲದ ವ್ಯಕ್ತಿ ಕಾಮಗಾರಿಯ ಗುತ್ತಿಗೆ ಪಡೆದರು. ಟೆಂಡರ್ ಪಡೆದು ಒಂದು ವರ್ಷದ ಬಳಿಕ ಕೆರೆ ಅಭಿವೃದ್ಧಿ ಕಾರ್ಯ ಮಾಡಲು ಪ್ರಾರಂಭಿಸಿದರು. ಸುಮಾರು ಮೂರು ಮೀಟರ್ ಉದ್ದ, ೪೫ ಮೀಟರ್ ಅಗಲ, ೫ ಮೀಟರ್ ಆಳವಿರುವ ಈ ಕೆರೆಯ ಹೂಳೆತ್ತುವ ಕಾರ್ಯ ಮಾಡಿ ಕಾಮಗಾರುಗಾಗಿ ಕಟ್ಟೆ ಒಡೆದು ಅಡಿಪಾಯ ಹಾಗೂ ಕೆರೆಯ ಸುತ್ತ ಕಲ್ಲು ಕಟ್ಟುವ ಕಾರ್ಯ ಮಾಡಲಾಗಿತ್ತು. ಆದರೆ ಒಂದು ಭಾಗದಲ್ಲಿ ಕಟ್ಟಿದ ಕಲ್ಲು ಕುಸಿದು ಕೆಳಗೆ ಬಿದ್ದಿದ್ದು ಕಳಪೆ ಕಾಮಗಾರಿಯಾಗಿದೆ ಎನ್ನುವ ಆರೋಪ ಕೂಡಾ ಕೇಳಿ ಬರುತ್ತಿದೆ. ಒಂದು ವರ್ಷದಲ್ಲಿ ಕಾಮಗಾರಿ ನಡೆಸಿ ಕಾಮಗಾರಿ ನಡೆದಿರುವುದಕ್ಕೆ ಬಿಲ್ ಪಡೆದು ಹೋದ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ವಿಶೇಷವೆಂದರೆ ಈ ಗುತ್ತಿಗೆದಾರ ಇಲಾಖಾ ಅಧಿಕಾರಿಗಳ ಕೈಗೂ ಸಿಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ,. ಇಲಾಖಾಧಿಕಾರಿಗಳ ಪ್ರಕಾರ ಆತ ಅರ್ಧ ಕಾಮಗಾರಿ ಮುಗಿಸಿ ಮತ್ತೆ ಕಾಮಗಾರಿ ಪ್ರಾರಂಭ ಮಾಡುವಾಗ ಮಳೆ ಪ್ರಾರಂಭವಾಗಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗಿಲ್ಲ ಎನ್ನುವ ಸಬೂಬು ದೊರೆಯುತ್ತದೆ. ಕಾಮಗಾರಿ ನಡೆಸಲು ಕಟ್ಟೆಯನ್ನು ಒಡೆದು ಹಾಕಿರುವ ಜಾಗವನ್ನು ಸರಿ ಮಾಡಿಲ್ಲ, ಅದು ಎರಡು ದಿನದ ಕೆಲಸ ಎನ್ನುವ ಮಾತುಗಳನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇನ್ನೇನು ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿದೆ, ಮತ್ತೆ ಕೆರೆ ಅಭಿವೃದ್ಧಿ ಕಾಮಗಾರಿ ದೂರದ ಮಾತು, ಇನ್ನೂ ಒಂದು ವರ್ಷ ಡೌಟ್ ಎನ್ನುವ ಇಲ್ಲಿನ ಸ್ಥಳೀಯರು ನಾಲ್ಕು ವರ್ಷಗಳಿಂದ ಕಾಮಗಾರಿ ಮುಗಿಸಲು ಸಾಧ್ಯವಾಗದ ಗುತ್ತಿಗೆದಾರ ಇನ್ನು ಮಳೆಗಾಲ ಪ್ರಾರಂಭವಾಗುವ ಹೊತ್ತಿಗೆ ಹೇಗೆ ಮುಗಿಸುತ್ತಾರೆ, ಈ ಬಾರಿ ಕಟ್ಟೆ ನಿರ್ಮಾಣದ ಕಾರ್ಯ ಮಾಡದಿದ್ದರೆ ನಾವೇ ಮಣ್ಣು ಹಾಕಿ ಕಟ್ಟೆ ನಿರ್ಮಿಸಿ ಈ ಮಳೆಗಾಲದಲ್ಲಿ ನೀರು ಶೇಖರಣೆ ಮಾಡುತ್ತೇವೆ ಎಂದು ನಾಗರಿಕರು ಅಕ್ರೋಶ ವ್ಯಕ್ತಪಡಿಸುತ್ತಾರೆ.

ಒಂದೊಳ್ಳೆಯ ನೀರಿನ ಮೂಲವಾದ ಮಾದೋಡಿ ಕೆರೆಯನ್ನು ಅಭಿವೃದ್ಧಿಪಡಿಸಬೇಕೆನ್ನುವ ಉzಶದಿಂದ ಅನುದಾನ ಮಂಜೂರು ಮಾಡಲಾಗಿದೆ, ಆದರೆ ಇಂದಿನ ಇ- ಟೆಂಡರ್ ವ್ಯವಸ್ಥೆಯಲ್ಲಿ ಎಲ್ಲಿಂದಲೋ ಬರುವ ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣ ಮಾಡದೆ ಅರ್ಧದಲ್ಲಿ ಕೈಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ, ಕಾಮಗಾರಿ ಮುಗಿಸಬೇಕು ಎಂದು ಸಂಬಂಧಪಟ್ಟ ಇಲಾಖಾಧಿಕಾರಿಯವರಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು –ಎಸ್.ಅಂಗಾರ, ಶಾಸಕರು ಸುಳ್ಯ ವಿಧಾನ ಸಭಾ ಕ್ಷೇತ್ರ.

ಕಾಮಗಾರಿಯನ್ನು ಈಗಾಗಲೇ ಮುಗಿಸಬೇಕಿತ್ತು, ಗುತ್ತಿಗೆದಾರ ಸರಿಯಾಗಿ ಕಾಮಗಾರಿ ಮಾಡದೆ ತೊಂದರೆಯಾಗಿದೆ. ಕಾಮಗಾರಿ ತಕ್ಷಣ ಮುಗಿಸಿಕೊಡಬೇಕು ಎಂದು ಗುತ್ತಿಗೆದಾರರಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಲಾಗಿದೆ. ಗುತ್ತಿಗೆದಾರ ರಂಝಾನ್ ಹಬ್ಬ ಮುಗಿದ ಬಳಿಕ ಕಾಮಗಾರಿ ಮುಗಿಸಿಕೊಡುವುದಾಗಿ ಹೇಳಿದ್ದಾರೆ.ಇನ್ನು ಒಂದು ವಾರದಲ್ಲಿ ಕಾಮಗಾರಿ ಮುಗಿಸಿಕೊಡಲಾಗುವುದು -ಪರಮೇಶ್ವರ ನಾಯ್ಕ್, ಇಂಜಿನಿಯರ್ ಸಣ್ಣ ನಿರಾವರಿ ಇಲಾಖೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.