ಮಿತ್ತ ಬಾಗಿಲು ಗ್ರಾ.ಪಂ ಗ್ರಾಮ ಸಭೆ:  ಅಂಗನವಾಡಿ ಕಾರ್ಯಕರ್ತೆಯನ್ನು  ನೇಮಿಸಲು ಗ್ರಾಮಸ್ಥರ ಆಗ್ರಹ

0

ಮಿತ್ತ ಬಾಗಿಲು: ಮಿತ್ತಬಾಗಿಲು ಗ್ರಾ.ಪಂ  ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ನ.4 ರಂದು ಜರುಗಿತು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಮದ ಕೊಲ್ಲಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಇಲ್ಲದೆ ನಾಲ್ಕು ವರ್ಷಗಳು ಸಂದಿವೆ. ಇಲ್ಲಿ ಅಡುಗೆ ಸಹಾಯಕಿಯೆ ಮಕ್ಕಳ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದು ಇದರಿಂದ ಇಲ್ಲಿನ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿಗೆ ತಕ್ಷಣ ಅಂಗನವಾಡಿ ಕಾರ್ಯಕರ್ತೆಯನ್ನು ನೇಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು.

ಜನಾಕರ್ಷಕ ಎರ್ಮಾಯಿ ಜಲಪಾತದ ಸಂಪರ್ಕದ ಗುತ್ತು, ಕಲ್ಲಂಡ ರಸ್ತೆ ಕಳೆದ ಮೂರು ವರ್ಷಗಳ ಹಿಂದೆ ಪಂಚಾಯತ್ ರಸ್ತೆ ಎಂದು ಘೋಷಣೆಯಾಗಿದ್ದು ಇದುವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ, ಹಾಗೂ ಓಣಿರೆ ಪ್ರದೇಶದಲ್ಲಿ ಮೋರಿ ನಿರ್ಮಾಣವಾಗದೆ ಸಾಕಷ್ಟು ತೊಂದರೆಗಳು ಉಂಟಾಗುತ್ತಿರುವ ಕುರಿತು ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಯಿತು.

ಗ್ರಾಮದ ಪರಿಸರದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ಕೋಳಿ ಸಾಗಾಟ ವಾಹನ ಸಹಿತ ಇತರ ವಾಹನಗಳನ್ನು ತೊಳೆಯುವುದರಿಂದ ನದಿಯ ನೀರು ಕಲುಷಿತಗೊಂಡು ತಗ್ಗು ಪ್ರದೇಶದ ಜನರಿಗೆ ನೀರು ಉಪಯೋಗಿಸಲು ತೊಂದರೆಯಾಗುತ್ತಿದ್ದು ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕಾಗಿ ಗ್ರಾಮಸ್ಥರು ತಿಳಿಸಿದರು.

ಉಪಾಧ್ಯಕ್ಷ ವಿನಯ ಚಂದ್ರ,ಸದಸ್ಯರು ಉಪಸ್ಥಿತರಿದ್ದರು. ಪಿಡಿಒಜಯಕೀರ್ತಿ ಸ್ವಾಗತಿಸಿದರು. ಸಿಬ್ಬಂದಿ ಮಧುಕರ ಪ್ರಭು ಲೆಕ್ಕಪತ್ರ ಮಂಡಿಸಿದರು. ಸುಂದರ ವಾರ್ಡ್ ಸಭೆಯ ಮಾಹಿತಿ ನೀಡಿದರು.
ಮೆಸ್ಕಾಂ,ಅರಣ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಆರೋಗ್ಯ, ಕಂದಾಯ, ಪಶುಸಂಗೋಪನೆ, ತೋಟಗಾರಿಕೆ,ಶಿಕ್ಷಣ ಕೃಷಿ ಇಲಾಖೆಗಳ ಪ್ರತಿನಿಧಿಗಳು ಮಾಹಿತಿ ನೀಡಿದರು.

ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಮಿತ್ತಬಾಗಿಲು ಗ್ರಾಮದಲ್ಲಿ ಪವರ್ ಮ್ಯಾನ್ ಗಳು ಸರಿಯಾಗಿ ಕಾರ್ಯನಿರ್ವಹಿಸದ ಕುರಿತು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳಲ್ಲಿ ದೂರಿದರು. ಕೊಲ್ಲಿ ಆಸು ಪಾಸು ವಿದ್ಯುತ್ ಲೈನ್ ಮೇಲೆ ಬಿದ್ದಿರುವ ಮರವನ್ನು ತೆರವುಗೊಳಿಸದ ಕುರಿತು ಆಕ್ಷೇಪಿಸಿದರು. ಕಳೆದ ಗ್ರಾಮ ಸಭೆಯಲ್ಲಿ ನಿರ್ಣಯಿಸಲಾದ ಬೇಡಿಕೆಗಳು ಪೂರ್ಣಗೊಳ್ಳದ ಕುರಿತು ಚರ್ಚೆ ನಡೆಯಿತು.

LEAVE A REPLY

Please enter your comment!
Please enter your name here