ಉಜಿರೆ ಎಸ್. ಡಿ. ಎಂ. ಕಾಲೇಜು ಸಸ್ಯಶಾಸ್ತ್ರ ವಿಭಾಗದಿಂದ “ಭತ್ತೋತ್ಸವ”

0


ಉಜಿರೆ : ನಶಿಸುತ್ತಿರುವ ಭಾರತದ ಪಾರಂಪರಿಕ ಕೃಷಿ ಪದ್ಧತಿಯಾದ ಭತ್ತದ ಬೇಸಾಯ ಮತ್ತು ಕಾಲಕ್ರಮದಲ್ಲಿ ಅದರ ಬೆಳವಣಿಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಎಸ್.ಡಿ.ಎಂ. ಕಾಲೇಜು ಉಜಿರೆಯ ಸಸ್ಯಶಾಸ್ತ್ರ ವಿಭಾಗದಿಂದ “ಭತ್ತೋತ್ಸವ” ಎಂಬ ಕಾರ್ಯಕ್ರಮಕ್ಕೆ ಜುಲೈ 2ರಂದು ಚಾಲನೆ ನೀಡಲಾಗಿತ್ತು. ‘ಕಜೆ ಜಯ’ಎಂಬ ತಳಿಯ 30 ದಿನಗಳ ಸಸಿಗಳನ್ನು ವಿದ್ಯಾರ್ಥಿಗಳು ಕೃಷಿ ಪರಿಕರಗಳೊಂದಿಗೆ ಪಾಡ್ದನವನ್ನು ಹಾಡುತ್ತಾ ಸಾಂಪ್ರದಾಯಿಕ ರೀತಿಯಲ್ಲಿ ಸಸಿಗಳನ್ನು ನಾಟಿ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಇದು ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅನುಭವ ಮತ್ತು ಕಲಿಕೆಯನ್ನು ಸಂಯೋಜಿಸುವ ದೂರದೃಷ್ಟಿಯ ಮೊದಲ ಪ್ರಯತ್ನವಾಗಿದೆ. ‘ಸಸ್ಯಸೌರಭ’ ವಿಭಾಗದ ವಿದ್ಯಾರ್ಥಿ ಸಮಿತಿಯು ಭತ್ತದ ದೈನಂದಿನ ಬೆಳವಣಿಗೆಯನ್ನು ಪರಿಶೀಲಿಸುತ್ತಾ ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಮತ್ತು ಉಪಯೋಗಗಳನ್ನೂ ತಿಳಿಸುವ ಸಲುವಾಗಿ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಭತ್ತದ ಕುರಿತಾದ ವಿಶೇಷ ಮಾಹಿತಿಯನ್ನು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಚಿತ್ರೀಕರಣಗೊಳಿಸಿ ಶೈಕ್ಷಣಿಕ ದಾಖಲೀಕರಣ ಮಾಡಲಾಯಿತು. ಜೊತೆಗೆ ವೈವಿಧ್ಯಮಯ ರೀತಿಯಲ್ಲಿ ಸರಿಸುಮಾರು 120 ದಿನಗಳ ನಂತರ 205 ಪಾಲಿಬ್ಯಾಗ್‌ಗಳಲ್ಲಿ ಬೆಳೆದ ಭತ್ತದ ಪೈರುಗಳನ್ನು ನ. 5ರಂದು ಕಾರ್ಯಕ್ರಮದ ಮುಖ್ಯ ಅತಿಥಿ ಜೆ.ಎಸ್.ಎಸ್ ಕಾಲೇಜು ಧಾರವಾಡ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ  ರತ್ನ ಐರಸಿಂಗ ಅವರಿಂದ ಉದ್ಘಾಟಿಸಲಾಯಿತು.

 

ಇವರೊಂದಿಗೆ ಪ್ರೊ. ಯೋಗೀಶ ಕುಮಾರ್,  ಭುವನೇಂದ್ರ ಕಾಲೇಜು ಕಾರ್ಕಳ, ಪ್ರೊ. ಸುಧಾಮ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜು ಚಿಕ್ಕಮಗಳೂರು, ಡಾ. ಶ್ರುತಿ ಎಸ್.ಡಿ. ಮಾಲಕರು ಬಯೋ ಎಜ್ ಸೊಲ್ಯೂಷನ್ಸ್. ಬೆಂಗಳೂರು ಹಾಗೂ ಡಾ. ವೆರಿನಾ ರೊಡ್ರಿಗಸ್, ಸಂತ ಜೋಸೆಫ್ ವಿಶ್ವ ವಿದ್ಯಾನಿಲಯ ಬೆಂಗಳೂರು ಇವರ ಉಪಸ್ಥಿತಿಯಲ್ಲಿ ಕೊಯ್ಲು ಮಾಡಲಾಯಿತು.

ಭತ್ತದ ಕಟಾವಿನಲ್ಲಿ ವಿದ್ಯಾರ್ಥಿಗಳೆಲ್ಲರೂ ಉತ್ಸಾಹದಿಂದ ಪಾಲ್ಗೊಂಡು, ಸುಮಾರು 5 ಕೆಜಿಯಷ್ಟು ಭತ್ತ ಹಾಗೂ 25 ಕಟ್ಟಿನಷ್ಟು ಬೈಹುಲ್ಲನ್ನು ಬೆಳೆಯುವ ಮೂಲಕ ‘ಬತ್ತದೋತ್ಸಾಹ’ ಕಾರ್ಯಕ್ರಮವು ಯಶಸ್ವಿಯಾಗುವಲ್ಲಿ ಮುಖ್ಯ ಪಾತ್ರವಹಿಸಿದರು.

ಇದಕ್ಕೆ ಸಾಕ್ಷಿಯಾಗಿ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯಚಂದ್ರ ಪಿ.ಎನ್. , ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕುಮಾರ ಹೆಗ್ಡೆ .ಬಿ.ಎ. ಮತ್ತು ಪ್ರಾಧ್ಯಾಪಕರುಗಳಾದ ಗಣೇಶ್.ವಿ.ಶೆಂಡ್ಯೆ, ಅಭಿಲಾಷ್‌ರವರ ಮಾರ್ಗದರ್ಶನದೊಂದಿಗೆ ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರ ಪ್ರೋತ್ಸಾಹ ಹಾಗೂ ಜಿನಪ್ಪ ಮತ್ತು ಮಂಜುನಾಥ್‌ರವರ ಸಹಕಾರದೊಂದಿಗೆ ‘ಬತ್ತದೋತ್ಸಾಹ’ ಕಾರ್ಯಕ್ರಮವು ಸಂಪನ್ನಗೊಂಡಿತು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರರವರು ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here