HomePage_Banner
HomePage_Banner

ಆಸೀಸ್ ಬಗ್ಗುಬಡಿದ ಭಾರತಕ್ಕೆ ಸತತ ಎರಡನೇ ಗೆಲುವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 36 ರನ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ಪಡೆ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಮೊದಲು ದಕ್ಷಿಣ ಆಫ್ರಿಕಾ ನಡೆದ ಮೊದಲ ಪಂದ್ಯದಲ್ಲೂ ಭಾರತ ಅಧಿಕಾರಯುತ ಗೆಲುವು ದಾಖಲಿಸಿತ್ತು. ಭಾರತ ನೀಡಿದ 353ರನ್ ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 50 ಒವರ್ ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 316ರನ್ ಮಾಡಿ ಸೋಲೊಪ್ಪಿಕೊಂಡಿತು. ಇದೀಗ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಟೀಮ್ ಇಂಡಿಯಾ ಒಟ್ಟು ನಾಲ್ಕು ಅಂಕಗಳನ್ನು ಸಂಪಾದಿಸಿದೆ. ಅತ್ತ ಸತತ ಎರಡು ಗೆಲುವಿನಿಂದ ಗೆದ್ದು ಬೀಗುತ್ತಿದ್ದ ಹಾಲಿ ಚಾಂಪಿಯನ್ ಆಸೀಸ್‌ ಮೊದಲ ಸೋಲಿನ ಆಘಾತಕ್ಕೊಳಗಾಗಿದೆ. ಅಷ್ಟೇ ಯಾಕೆ ಆಸೀಸ್ ತಂಡವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಹಾಕಿರುವ ಟೀಮ್ ಇಂಡಿಯಾ ಮೂರನೇ ಸ್ಥಾನಕ್ಕೆ ನೆಗೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ಸರಿಯೆಂದು ಸಾಬೀತು ಮಾಡಿದ ಭಾರತ 352 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಶಿಖರ್ ಧವನ್ ಭರ್ಜರಿ ಶತಕ (117) ಬಾರಿಸಿದರೆ ರೋಹಿತ್ ಶರ್ಮಾ (57), ಸ್ವತ: ನಾಯಕ ವಿರಾಟ್ ಕೊಹ್ಲಿ (82) ಹಾಗೂ ಹಾರ್ದಿಕ್ ಪಾಂಡ್ಯ (48) ಉಪಯುಕ್ತ ಬ್ಯಾಟಂಗ್ ಪ್ರದರ್ಶಿಸಿದರು.

ಬಳಿಕ ಗುರಿ ಬೆನ್ನಟ್ಟಿದ ಆಸೀಸ್ ಡೇವಿಡ್ ವಾರ್ನರ್ (56), ಸ್ಟೀವ್ ಸ್ಮಿತ್ (69) ಹಾಗೂ ಅಲೆಕ್ಸ್ ಕ್ಯಾರಿ (55*) ಫೈಟ್ ಬ್ಯಾಕ್ ಅರ್ಧಶತಕದ ಹೊರತಾಗಿಯೂ 316 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.

ಬೃಹತ್ ಮೊತ್ತ ಬೆನ್ನಟ್ಟಿದ್ದ ಆಸೀಸ್ ಕೂಡಾ ಭಾರತದಂತೆ ಎಚ್ಚರಿಕೆಯ ಆರಂಭವನ್ನು ಪಡೆಯಿತು. ಹಾರ್ದಿಕ್ ಪಾಂಡ್ಯ ಎಸೆದ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ19 ರನ್ ಚಚ್ಚುವ ಮೂಲಕ ತಂಡದ ಮೊತ್ತ 48 ರನ್ ತಲುಪಿತು.

ಆದರೆ ಈ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ವಾರ್ನರ್ ಜತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಫಿಂಚ್ ರನೌಟ್‌ಗೆ ಬಲಿಯಾದರು. 35 ಎಸೆತಗಳನ್ನು ಎದುರಿಸಿದ ಫಿಂಚ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 36 ರನ್ ಗಳಿಸಿದರು. ಆದರೂ ಮೊದಲ ವಿಕೆಟ್‌ಗೆ 61 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

ಇನ್ನೊಂದೆಡೆ ವಾರ್ನರ್ ತೀರಾ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಇದು ಆರಂಭದಲ್ಲೇ ಆಸೀಸ್ ಹಿನ್ನಡೆಗೆ ಕಾರಣವಾಯಿತು. ವಾರ್ನರ್ ಅರ್ಧಶತಕವು 76 ಎಸೆತಗಳಲ್ಲಿ ದಾಖಲಾಗಿತ್ತು. ಇವರಿಗೆ ಸ್ಟೀವ್ ಸ್ಮಿತ್ ಸಾಥ್ ನೀಡಿದರು.

ಈ ಮಧ್ಯೆ ರನ್ ಗತ ಏರಿಸುವ ಭರದಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 84 ಎಸೆತಗಳನ್ನು ಎದುರಿಸಿದ ವಾರ್ನರ್ ಐದು ಬೌಂಡರಿಗಳಿಂದ 56 ರನ್ ಗಳಿಸಿದರು. ವಾರ್ನರ್ ಪತನದ ವೇಳೆಗೆ ಆಸೀಸ್ ಸ್ಕೋರ್ 24.4 ಓವರ್‌ಗಳಲ್ಲಿ 133/2.

ಅತ್ತ ಉಸ್ಮಾನ್ ಖವಾಜ ಜತೆಗೂಡಿದ ಸ್ಟೀವ್ ಸ್ಮಿತ್ ಇನ್ನಿಂಗ್ಸ್ ಬೆಳೆಸಿದರು. ಅಲ್ಲದೆ ಮಗದೊಂದು ಗಮನಾರ್ಹ ಜತೆಯಾಟದಲ್ಲಿ ಭಾಗಿಯಾದರು.

ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಅದ್ಭುತ ಫಾರ್ಮ್ ಮುಂದುವರಿಸಿದರು. ಅಲ್ಲದೆ 60 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಖವಾಜ ವಿಕೆಟ್ ನಷ್ಟವಾಯಿತು. 39 ಎಸೆತಗಳನ್ನು ಎದುರಿಸಿದ ಖವಾಜ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು.

ಈ ಹಂತದಲ್ಲಿ ಕ್ರೀಸಿಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನಿಂದ ರನ್ ಪೇರಿಸಲಾರಂಭಿಸಿದರು. ಇದರೊಂದಿಗೆ ಭಾರತೀಯ ಪಾಳೇಯದಲ್ಲಿ ಆತಂಕ ಮಡುಗಟ್ಟಿತು. ಆದರೆ ಇನ್ನಿಂಗ್ಸ್‌ನ 40ನೇ ಓವರ್‌ನಲ್ಲಿ ಸೆಟ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ (0) ಹೊರದಬ್ಬಿದ ಭುವನೇಶ್ವರ್ ಕುಮಾರ್ ಡಬಲ್ ಆಘಾತ ನೀಡಿದರು. ಇದರಿಂದ 40 ಓವರ್‌ಗಳಲ್ಲಿ ಆಸೀಸ್ 238 ರನ್‌ಗಳಿಗೆ ಐದು ವಿಕೆಟುಗಳನ್ನು ಕಳೆದುಕೊಂಡಿತು. 70 ಎಸೆತಗಳನ್ನು ಎದುರಿಸಿದ ಸ್ಮಿತ್ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 69 ರನ್ ಗಳಿಸಿದರು.

ಬೆನ್ನಲ್ಲೇ ಅಪಾಯಕಾರಿ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಚಹಲ್ ಹೊರದಬ್ಬಿದರು. ಕೇವಲ 14 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಐದು ಬೌಂಡರಿಗಳಿಂದ 28 ರನ್ ಗಳಿಸಿದರು.

ಇನ್ನೇನು ಭಾರತ ಪಂದ್ಯ ಗೆದ್ದೇ ಬಿಡ್ತು ಎನ್ನುವಷ್ಟರಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆಸೀಸ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ (55*) ಪಂದ್ಯಕ್ಕೆ ಹೆಚ್ಚಿನ ರೋಚಕತೆಯನ್ನು ತಂದರು. ಅವರಿಗೆ ಕಳೆದ ಪಂದ್ಯದ ಹೀರೊ ನಥನ್ ಕೌಲ್ಟರ್ ನೈಲ್‌ (4) ಹಾಗೂ ಪ್ಯಾಟ್ ಕಮಿನ್ಸ್‌ರಿಂದ (8) ಹೆಚ್ಚಿನ ಬೆಂಬಲ ಸಿಗದೇ ಹೋಯಿತು.

ಆದರೂ ಎದೆಗುಂದದ ಕ್ಯಾರಿ ಆಕ್ರಮಣಕಾರಿ ಆಟದ ಮೂಲಕ ಪ್ರತ್ಯುತ್ತರ ನೀಡಿದರು. ಅಲ್ಲದೆ 25 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದರು. ಆದರೂ ಗೆಲುವಿನ ದಡ ಸೇರಿಸಲಾಗಲಿಲ್ಲ.

ಅಂತಿಮವಾಗಿ ಭರ್ತಿ 50 ಓವರ್‌ಗಳಲ್ಲಿ 316 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. 35 ಎಸೆತಗಳನ್ನು ಎದುರಿಸಿದ ಕ್ಯಾರಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 55 ರನ್ ಗಳಿಸಿ ಅಜೇಯರಾಗುಳಿದರು. ಇನ್ನುಳಿದಂತೆ ಮಿಚೆಲ್ ಸ್ಟಾರ್ಕ್ (3) ಹಾಗೂ ಆ್ಯಡಂ ಜಾಂಪಾ (1) ರನ್ ಗಳಿಸಿದರು. ಭಾರತದ ಪರ ಭುವಿ ಹಾಗೂ ಬುಮ್ರಾ ತಲಾ ಮೂರು ಮತ್ತು ಚಹಲ್ ಎರಡು ವಿಕೆಟುಗಳನ್ನು ಕಬಳಿಸಿದರು.

ಧವನ್ 118, ಕೊಹ್ಲಿ 82, ರೋಹಿತ್ 57; ಭಾರತ 352/5

ಈ ಮೊದಲು ಬ್ಯಾಟಿಂಗ್ ನಡೆಸಿರುವ ಭಾರತ, ಶಿಖರ್ ಧವನ್ ಅಮೋಘ ಶತಕ (117) ಮತ್ತು ರೋಹಿತ್ ಶರ್ಮಾ (57), ವಿರಾಟ್ ಕೊಹ್ಲಿ (82) ಹಾಗೂ ಹಾರ್ದಿಕ್ ಪಾಂಡ್ಯ (48) ಉಪಯುಕ್ತ ಬ್ಯಾಟಂಗ್ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 352 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾಗೆ ಅನುಭವಿ ಓಪನರ್‌ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಎಚ್ಚರಿಕೆಯ ಆರಂಭವೊದಗಿಸಿದರು.

ಕಳೆದ ಪಂದ್ಯ ಹೀರೊ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಂತೆ ಪಿಚ್ ಅವಲೋಕಿಸಿ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು. ಇನ್ನೊಂದೆಡೆ ಧವನ್ ಆರಂಭದಲ್ಲಿ ಎಚ್ಚರಿಕೆಯ ಜತೆಗೆ ಆಕ್ರಮಣಕಾರಿ ಬ್ಯಾಟ್ ಬೀಸಿದರು. ಈ ಮೂಲಕ ಭಾರತ ಮೊದಲ 10 ಓವರ್‌ಗಳಲ್ಲಿ 41 ರನ್ ಗಳಿಸಿ ಉತ್ತಮ ಆರಂಭ ಪಡೆಯಿತು.

ಅಲ್ಲಿಂದ ಬಳಿಕ ಧವನ್ ಹಾಗೂ ರೋಹಿತ್ ಸಹಜ ಆಟದತ್ತ ಮರಳಿದರು. ಈ ಮೂಲಕ ಆಸೀಸ್ ಬೌಲರ್‌ಗಳ ಮೇಲೆ ನಿರಂತರ ಒತ್ತಡ ಹೇರುತ್ತಲೇ ಸಾಗಿದರು.

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಧವನ್ 53 ಎಸೆತಗಳಲ್ಲಿ 28ನೇ ಫಿಫ್ಟಿ ಸಾಧನೆ ಮಾಡಿದರು. 19 ಓವರ್‌ಗಳಲ್ಲಿ ಭಾರತ 100ರ ಗಡಿ ದಾಟಿತು. ಇದಾದ ಸ್ವಲ್ಪರದಲ್ಲೇ ರೋಹಿತ್ ಸಹ 61 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ರೋಹಿತ್ ಬ್ಯಾಟ್‌ನಿಂದ ಸಿಡಿದ 42ನೇ ಪಿಫ್ಟಿ ಸಾಧನೆಯಾಗಿದೆ.

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ರೋಹಿತ್ ತಮ್ಮದೇ ತಪ್ಪಿನಿಂದಾಗಿ ವಿಕೆಟ್ ಒಪ್ಪಿಸಿದರು. ಆಗಲೇ ಮೊದಲ ವಿಕೆಟ್‌ಗೆ 22.3 ಓವರ್‌ಗಳಲ್ಲಿ 127 ರನ್‌ಗಳ ಜತೆಯಾಟ ನೀಡಿದ್ದರು. 70 ಎಸೆತಗಳನ್ನು ಎದುರಿಸಿದರ ರೋಹಿತ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು.

ರೋಹಿತ್ ಪತನದ ಬಳಿಕ ಕ್ರೀಸಿಗಿಳಿದ ನಾಯಕ ವಿರಾಟ್ ಕೊಹ್ಲಿ ಪ್ರಾರಂಭದಲ್ಲಿ ರನ್ ಗಳಿಸಲು ಅಲ್ಪ ತಡಕಾಡಿದರು. ಇನ್ನೊಂದೆಡೆ ಧವನ್ ಆಕ್ರಮಣಕಾರಿ ಶಾಟ್‌ಗಳ ಮೂಲಕ ಗಮನ ಸೆಳೆದರು. ಅಲ್ಲದೆ ಶತಕದತ್ತ ದಿಟ್ಟ ಹೆಜ್ಜೆಯನ್ನಿಟ್ಟರು.

30 ಓವರ್‌ಗಳಲ್ಲಿ ಭಾರತ ಒಂದು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಇನ್ನೊಂದೆಡೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಧವನ್ ಶತಕ ಸಾಧನೆ ಮಾಡಿದರು.

ಕೆಲವೇ ಹೊತ್ತಿನಲ್ಲಿ ಕೊಹ್ಲಿ ಸಹ ತಮ್ಮ ನೈಜ ಫಾರ್ಮ್‌ಗೆ ಮರಳಿದರು. ಇದರೊಂದಿಗೆ 33.5 ಓವರ್‌ಗಳಲ್ಲಿ ಭಾರತದ ಮೊತ್ತ 200ರ ಗಡಿ ಸೇರಿತು. ಶತಕದ ಬೆನ್ನಲ್ಲೇ ದೊಡ್ಡ ಹೊಡೆತಕ್ಕೆ ಮುಂದಾದ ಧವನ್ ವಿಕೆಟ್ ಒಪ್ಪಿಸಿದರು. 109 ಎಸೆತಗಳನ್ನು ಎದುರಿಸಿದ ಧವನ್ 16 ಬೌಂಡರಿಗಳಿಂದ 117 ರನ್ ಗಳಿಸಿದರು. ಅಲ್ಲದೆ ಕೊಹ್ಲಿ ಜತೆಗೆ ದ್ವಿತೀಯ ವಿಕೆಟ್‌ಗೆ 93 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

ಧವನ್ ಪತನದ ಬಳಿಕ ಹಾರ್ದಿಕ್ ಪಾಂಡ್ಯ ಬಡ್ತಿ ಪಡೆದು ಬಂದರು. 40 ಓವರ್‌ಗಳಲ್ಲಿ ಭಾರತದ ಸ್ಕೋರ್ 236/2. ಅತ್ತ ನಾಯಕನ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 55 ಎಸೆತಗಳಲ್ಲಿ 50ನೇ ಅರ್ಧಶತಕ ಸಾಧನೆ ಮಾಡಿದರು.

ಕೊನೆಯ ಹಂತದಲ್ಲಿ ನಾಯಕ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಬಿರುಸಿನ ಆಟವಾಡುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ತಮ್ಮ ಸಾಮರ್ಥ್ಯಕ್ಕೆ ತಕ್ಕ ಬ್ಯಾಟ್ ಬೀಸಿದ ಪಾಂಡ್ಯ ಕೇವಲ 2 ರನ್ನಿನಿಂದ ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನ ಅತಿ ವೇಗದ ಅರ್ಧಶತಕ ಸಾಧನೆಯನ್ನು ಮಿಸ್ ಮಾಡಿದರು.

ಕೊಹ್ಲಿ ಜತೆಗೆ 81 ರನ್‌ಗಲ ಜತೆಯಾಟ ನೀಡಿದ ಪಾಂಡ್ಯ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 48 ರನ್ ಗಳಿಸಿದರು. ಆಗಲೇ ಭಾರತದ ಮೊತ್ತ 300ರ ಗಡಿ ದಾಟಿತು. ಅಂತಿಮ ಹಂತದಲ್ಲಿ ನಾಯಕ ಕೊಹ್ಲಿಗೆ ಧೋನಿ ಕೈಜೋಡಿಸಿದರು. ಅಲ್ಲದೆ ಕೇವಲ 14 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 27 ರನ್ ಸಿಡಿಸಿದರು.

ಈ ಮೂಲಕ ಭಾರತ ಐದು ವಿಕೆಟ್ ನಷ್ಟಕ್ಕೆ 352 ರನ್‌ಗಳ ಬೃಹತ್ ಮೊತ್ತ ಪೇರಿಸುವಂತಾಯಿತು. ಅಂತಿಮ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ಕೊಹ್ಲಿ 77 ಎಸೆತಗಳಲ್ಲಿ 82 ರನ್ ಗಳಿಸಿದರು. ಕೊಹ್ಲಿ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಇನ್ನುಳಿದಂತೆ ಕೆಎಲ್ ರಾಹುಲ್ ಕೇವಲ 3 ಎಸೆತಗಳಲ್ಲೇ ಬೌಂಡರಿ ಸಿಕ್ಸರ್ ನೆರವಿನಿಂದ ಅಜೇಯ 11 ರನ್ ಗಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.