ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಜ್ಞಾನ ಸಂಘದ ಉದ್ಘಾಟನಾ ಸಮಾರಂಭ ಜೂನ್ 6ರಂದು ವಿಶ್ವ ಪರಿಸರ ದಿನಾಚರಣೆಯಂದು ಜರಗಿತು.
ಸಂಸ್ಥೆಯ ಪ್ರಾಚಾರ್ಯ ರವೀಂದ್ರ ಡಿ ಮತ್ತು ಕಾಲೇಜಿನ ಶೈಕ್ಷಣಿಕ ಸಲಹೆಗಾರ ಎಚ್. ಕೆ. ಪ್ರಕಾಶ್ ಕಾಲೇಜಿನ ಆವರಣದಲ್ಲಿ ಗಿಡ ನೆಟ್ಟು ನೀರೆರೆಯುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ರವೀಂದ್ರ ಮಾತನಾಡಿ ಬದುಕಿನ ಸಂತಸದ ಕ್ಷಣಗಳನ್ನು ಕೇಕ್ ಕತ್ತರಿಸುವ ಬದಲಾಗಿ ಗಿಡ ನೆಡುವ ಮೂಲಕ ಆಚರಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶೈಕ್ಷಣಿಕ ಸಲಹೆಗಾರ ಎಚ್.ಕೆ. ಪ್ರಕಾಶ್ ಮಾತನಾಡಿ ಪ್ರಾಕೃತಿಕ ಅಸಮತೋಲನದ ದುರಂತ ಅಂತ್ಯಗಳ ವಿವಿಧ ಮುಖಗಳನ್ನು ತೆರೆದಿಡುವ ಮೂಲಕ ಪರಿಸರ ಸ್ನೇಹಿಯಾಗಿರುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸಂಸ್ಥೆಯ ಶಿಕ್ಷಕರಾದ ಜಾರ್ಜ್ ಮತ್ತು ಪ್ರಜ್ಞಾ ತೀರ್ಪುಗಾರರಾಗಿ ಸಹಕರಿಸಿದರು.
ಕಾಲೇಜಿನ ರಸಾಯನ ಶಾಸ್ತ್ರ ಉಪನ್ಯಾಸಕಿ ರಜತಾ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕಿ ಹರಿಣಾಕ್ಷಿ ಪಿ.ಆರ್. ನಿರೂಪಿಸಿ ವಂದಿಸಿದರು.