HomePage_Banner
HomePage_Banner
HomePage_Banner

ಕುಕ್ಕೆ ದೇವಳ-ಮಠ ವಿವಾದ ಪರಿಹಾರಕ್ಕೆ ಪೇಜಾವರ ಶ್ರೀ ಮಧ್ಯಸ್ಥಿಕೆ

Puttur_Advt_NewsUnder_1
Puttur_Advt_NewsUnder_1
  • ಮಠ ಹಾಗೂ ದೇವಳಕ್ಕೆ ಆಗಮಿಸಿ ಮಾತುಕತೆ ಮಂಗಳೂರಿನಲ್ಲಿ ಜಂಟಿ ಸಭೆ ನಡೆಸಲು ನಿರ್ಧಾರ


ಪುತ್ತೂರು: ಸರ್ಪ ಸಂಸ್ಕಾರ ಸೇವೆ ಸೇರಿದಂತೆ ಹಲವು ಪೂಜಾ ಸೇವೆಗಳ ಕುರಿತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಮತ್ತು ಸುಬ್ರಹ್ಮಣ್ಯದಲ್ಲಿರುವ ಸಂಪುಟ ನರಸಿಂಹ ಮಠದ ನಡುವಿನ ವಿವಾದವು ಇತ್ತೀಚಿನ ದಿನಗಳಲ್ಲಿ ಸಂಘರ್ಷಾವಸ್ಥೆ ತಲುಪಿದ ಹಿನ್ನಲೆಯಲ್ಲಿ ಇದನ್ನು ಸಂಧಾನ ಸೂತ್ರದ ಮೂಲಕ ಬಗೆಹರಿಸಲು ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಮುಂದಡಿ ಇಟ್ಟಿದ್ದು, ಕ್ಷೇತ್ರಕ್ಕೆ ಆಗಮಿಸಿ ದೇವಸ್ಥಾನ ಮತ್ತು ಮಠದವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮುಂದಿನ ಹಂತವಾಗಿ ಮಂಗಳೂರಿನಲ್ಲಿ ಸಂಧಾನದ ಜಂಟಿ ಸಭೆಯನ್ನು ನಡೆಸಿ ಪರಿಹಾರ ಕಂಡು ಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ದಲ್ಲಿ ನಡೆಯುವ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆಗಳು ಮಠದಲ್ಲಿಯೂ ನಡೆಯುತ್ತಿರುವ ಹಿನ್ನಲೆಯಲ್ಲಿ ವಿವಾದ ತಲೆದೋರಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಹರಕೆ ಹೇಳಿಕೊಂಡು ಅಥವಾ ಪ್ರಾಯಶ್ಚಿತ್ತ ರೂಪದಲ್ಲಿ ದೇವರಿಗೆ ಸಮರ್ಪಿಸುವ ಸೇವೆಯನ್ನು ಸಲ್ಲಿಸಲು ಕ್ಷೇತ್ರಕ್ಕೆ ಬರುವ ಭಕ್ತರ ದಾರಿ ತಪ್ಪಿಸಿ ದೇವಳದ ಪಕ್ಕದಲ್ಲೆ ಇರುವ ಮಠಕ್ಕೆ ಕರೆದೊಯ್ದು ಹೆಚ್ಚು ದರ ವಿಧಿಸಿ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಗಳನ್ನು ಮಾಡಲಾಗುತ್ತಿರುವುದು ತಪ್ಪು ಎಂಬುದು ದೇವಸ್ಥಾನದವರ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೆವಸ್ಥಾನದ ಹಿತ ರಕ್ಷಣಾ ವೇದಿಕೆಯವರ ವಾದವಾಗಿ ದ್ದರೆ, ನಾವು ದೇವಸ್ಥಾನಕ್ಕೆ ಬಂದವರನ್ನು ದಾರಿ ತಪ್ಪಿಸಿ ಮಠಕ್ಕೆ ಕರೆದೊಯ್ದು ಪೂಜೆ ಮಾಡಿಸುತ್ತಿಲ್ಲ – ಮಠದಲ್ಲಿ ಪ್ರತ್ಯೇಕ ಪೂಜೆ ಮಾಡಿಕೊಡಬೇಕೆಂದು ಕೇಳಿಕೊಂಡು ಬರುವ ಭಕ್ತರಿಗೆ ಮಾತ್ರ ಪೂಜೆ ಮಾಡಿಕೊಡುತ್ತಿದ್ದೇವೆ. ಇದು ಆ ಭಕ್ತರ ಧಾರ್ಮಿಕ ಸ್ವಾತಂತ್ರ್ಯ ಕೂಡಾ ಆಗಿದೆ’` ಎಂಬುದು ಮಠದ ಪರ ಇರುವವರ ನಿಲುವಾಗಿದೆ.

ಕೆಲವು ತಿಂಗಳ ಹಿಂದೆ ಇದು ಉಲ್ಭಣಾವಸ್ಥೆಗೆ ಹೋಗಿ ಮಠದ ಮತ್ತು ದೇವಾಲಯದ ಪರವಾಗಿ ಪ್ರತ್ಯ ಪ್ರತ್ಯೇಕ ಸಭೆಗಳು ನಡೆದಿದ್ದವು. ಹೋರಾಟಕ್ಕಾಗಿ ಭಕ್ತ ಹಿತರಕ್ಷಣಾ ವೇದಿಕೆ ಕೂಡಾ ರಚನೆಗೊಂಡಿತ್ತು. ಕಳೆದ ವಾರ ಮಠದ ಅರ್ಚಕರೋರ್ವರಿಗೆ ದೇವಸ್ಥಾನದ ಕಡೆಯವರು ಮತ್ತು ಟ್ರಸ್ಟಿಯೊಬ್ಬರು ಹಲ್ಲೆ ನಡೆಸಿದರೆನ್ನಲಾದ ಘಟನೆ ನಡೆದು ಅವರು ಆಸ್ಪತ್ರೆಗೆ ದಾಖಲಾದ ಘಟನೆ ಕೂಡಾ ನಡೆದಿತ್ತು. ಇದರ ಮೇರೆಗೆ ದೇವಳದ ಟ್ರಸ್ಟಿ ಮಹೇಶ್ ಕರಿಕ್ಕಳ ಮತ್ತು ಗುರುಪ್ರಸಾದ್ ಪಂಜ, ಪ್ರಶಾಂತ್ ಭಟ್ ಮಾಣಿಲರವರ ಮೇಲೆ ಕೇಸು ಕೂಡಾ ದಾಖಲಾಗಿದೆ.

ಒಂದೇ ಊರಿನಲ್ಲಿರುವ ಎರಡು ಧಾರ್ಮಿಕ ಕೇಂದ್ರಗಳ ನಡುವೆ ಸಂಘರ್ಷಾವಸ್ಥೆ ನೆಲೆ ನಿಂತ ಹಿನ್ನಲೆಯಲ್ಲಿ ಪೇಜಾವರ ಮಠಾಧೀಶರು ಈ ವಿವಾದವನ್ನು ಸಂಧಾನಸೂತ್ರದ ಮೂಲಕ ಬಗೆಹರಿಸಲು ಮನಸ್ಸು ಮಾಡಿದ್ದರು. ಮಠದ ಹಿತೈಷಿಗಳ ಕೇಳಿಕೆಯ ಮೇರೆಗೆ ಪೇಜಾವರರವರು ಈ ನಿರ್ಧಾರಕ್ಕೆ ಬಂದಿದ್ದರೆನ್ನಲಾಗಿದೆ.

ಈ ವಿಷಯ ತಿಳಿದ ಕುಕ್ಕೆ ಸುಬ್ರ ಹ್ಮಣ್ಯ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಭಕ್ತ ಹಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್‌ಕುಮಾರ್ ಕರಿಕ್ಕಳರವರು ಗುರುಪ್ರಸಾದ್ ಪಂಜರವರನ್ನು ಕರೆದುಕೊಂಡು ಉಡುಪಿ ಕೃಷ್ಣ ಮಠಕ್ಕೆ ತೆರಳಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಮಠದವರ ಬಗ್ಗೆ ವಿವಾದದ ವಿಚಾರಗಳನ್ನು ಹೇಳಿ ಬಂದಿದ್ದರು. ಮಠದ ಅರ್ಚಕರಿಗೆ ಹಲ್ಲೆ ನಡೆದಿದೆಯೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ದೇವಸ್ಥಾನದ ಟ್ರಸ್ಟಿಯ ವಿರುದ್ಧ ಹೇಳಿಕೆ ನೀಡಿದ್ದ ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌ರವರು ಕೂಡಾ ಈ ಸಂದರ್ಭ ಉಪಸ್ಥಿತರಿದ್ದರು. ಜೂ.7ರಂದು ಸಂಜೆ 4 ಗಂಟೆಗೆ ಕುಕ್ಕೆಗೆ ಆಗಮಿಸಿ ಎರಡೂ ಕಡೆಯವರೊಡನೆ ಚರ್ಚಿಸಿ ವಿವಾದ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಸ್ವಾಮೀಜಿಗಳು ಹೇಳಿದರು.

ಪೇಜಾವರ ಶ್ರೀ ಸುಬ್ರಹ್ಮಣ್ಯಕ್ಕೆ : ನಿಗದಿತ ಕಾರ್ಯಕ್ರಮದಂತೆ ಜೂ. 7ರಂದು ಸಂಜೆ ವೇಳೆಗೆ ಪೇಜಾವರ ಶ್ರೀಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದರು. ಆಗ ಕುಕ್ಕೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ಪೇಜಾವರ ಶ್ರೀಗಳೊಂದಿಗೆ ಕಾರಿನಲ್ಲಿ ಧಾರ್ಮಿಕ ಮುಖಂಡರಾದ ಹರಿಕೃಷ್ಣ ಪುನರೂರು ಹಾಗೂ ಪ್ರದೀಪ್‌ಕುಮಾರ್ ಕಲ್ಕೂರ ಅವರಿದ್ದರು. ಸ್ವಾಮೀಜಿ ಆಗಮನಕ್ಕೆ ಸ್ವಲ್ಪ ಹೊತ್ತಿನ ಮೊದಲು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಯ ಮುಖಂಡರಾದ ಎಂ.ಬಿ. ಪುರಾಣಿಕ್, ಶರಣ್ ಪಂಪ್‌ವೆಲ್, ಜಗದೀಶ್ ಶೇಣವ, ಭಾಸ್ಕರ ಧರ್ಮಸ್ಥಳ ಮೊದಲಾದವರು ದೇವಸ್ಥಾನಕ್ಕೆ ಬಂದಿದ್ದರು.

ಭವ್ಯ ಸ್ವಾಗತ: ದೇವಳದ ಪರವಾಗಿ ವ್ಯ ವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ, ಸದಸ್ಯರಾದ ಮಹೇಶ್‌ಕುಮಾರ್ ಕರಿಕ್ಕಳ, ಬಾಲಕೃಷ್ಣ ಗೌಡ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಮಾಧವ ಡಿ., ಶ್ರೀಮತಿ ರಾಜೀವಿ ಆರ್.ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ವಿಮಲಾ ರಂಗಯ್ಯ, ಸತೀಶ್ ಕೂಜುಗೋಡು ಮೊದಲಾದವರು ದೇವಳದ ಬಾಗಿಲಲ್ಲಿ ನಿಂತು ಕಾಯುತ್ತಿದ್ದರು.

ದೇವಳಕ್ಕೆ ಆಗಮಿಸಿದ ಪೇಜಾವರ ಸ್ವಾಮೀಜಿಯವರನ್ನು ನಿತ್ಯಾನಂದ ಮುಂಡೋಡಿ ಹಾಗೂ ಮಹೇಶ್ ಕುಮಾರ್ ಕರಿಕ್ಕಳರ ಮುಂದಾಳತ್ವದಲ್ಲಿ ಆನೆ ಮತ್ತು ವಾದ್ಯ ವೃಂದದ ನಿನಾದದ ಮೂಲಕ ಭವ್ಯವಾಗಿ ಸ್ವಾಗತಿಸಿ ದೇವಾಲಯದೊಳಗೆ ಕರೆದೊಯ್ಯಲಾಯಿತು.

ದೇವರ ದರ್ಶನ: ಆರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದ ಪೇಜಾವರ ಸ್ವಾಮೀಜಿಗಳು ಬಳಿಕ ಮಠದ ಆಡಳಿತಕ್ಕೊಳಪಟ್ಟ ಸಂಪುಟ ನರಸಿಂಹ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಆ ಬಳಿಕ ಸ್ವಾಮೀಜಿಯವರು ಮತ್ತು ಅವರೊಂದಿಗೆ ಬಂದವರು ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮುಖಂಡರು ಮಠಕ್ಕೆ ತೆರಳಿದರೆ, ದೇಗುಲದ ವ್ಯವಸ್ಥಾಪನಾ ಸಮಿತಿಯವರು ಮತ್ತು ಭಕ್ತ ಹಿತರಕ್ಷಣಾ ವೇದಿಕೆಯವರು ದೇಗುಲದ ಆಡಳಿತ ಕಚೇರಿಗೆ ಹಿಂತಿರುಗಿದರು.

ಬಾಗಿಲು ಮುಚ್ಚಿ ಸಮಾಲೋಚನೆ: ಮಠದ ಬಾಗಿಲಿನಲ್ಲಿ ಆಡಳಿತಾ ಧಿಕಾರಿ ಸುದರ್ಶನ ಜೋಯಿಸರು ತುಳಸಿ ಮಾಲೆ ಹಾಕಿ ಪುಷ್ಪ ವೃಷ್ಠಿಯ ಮೂಲಕ ಪೇಜಾವರ ಶ್ರೀಗಳನ್ನು ಸ್ವಾಗತಿಸಿದರು. ಒಳಗೆ ಬಂದ ಪೇಜಾವರರನ್ನು ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಕಾಲು ಮುಟ್ಟಿ ಆಶೀರ್ವಾದ ಪಡೆದು ಬರಮಾಡಿಕೊಂಡು ಮಠದ ಮಹಡಿಯ ಕೊಠಡಿಗೆ ಕರೆದೊಯ್ದರು. ಮುಖಂಡರು ಕೂಡಾ ಒಳಗೆ ತೆರಳಿದರು. ಮಾಧ್ಯಮದವರನ್ನು ಒಳಗೆ ಬಿಡಲಿಲ್ಲ.

ಮುಚ್ಚಿದ ಬಾಗಿಲ ಕೊಠಡಿಯಲ್ಲಿ ಸುಮಾರು 45ನಿಮಿಷಗಳ ಕಾಲ ಮಾತುಕತೆ ನಡೆಯಿತು. ಈ ವೇಳೆ ವಿದ್ಯಾಪ್ರಸನ್ನ ತೀರ್ಥರು ಹಲವು ಕಡತ ಮತ್ತು ದಾಖಲೆಗಳನ್ನು ಮುಂದಿಟ್ಟು, ಪೇಜಾವರ ಶ್ರೀಗಳಿಗೆ ಮಠದ ಪರವಾಗಿ ವಾದಗಳನ್ನು ಮನವರಿಕೆ ಮಾಡಿಕೊಟ್ಟರೆಂದೂ ತನಗಾದ ಹಲವು ನೋವುಗಳ ಕುರಿತು ವಿವರಿಸಿದರೆಂದೂ ತಿಳಿದುಬಂದಿದೆ. ಮಾತುಕತೆ ಅಂತ್ಯ ಗೊಂಡ ಬಳಿಕ ಮಾಧ್ಯಮಗಳ ಛಾಯಾಚಿತ್ರ ಗ್ರಾಹಕರನ್ನು ಒಳಗೆ ಕರೆದು ಫೊಟೋ ತೆಗೆಯಲು ಅವಕಾಶ ಮಾಡಿಕೊಡಲಾಯಿತು.

ಪೇಜಾವರರ ಪ್ರತಿಕ್ರಿಯೆ: ಬಳಿಕ ಹೊರಬಂದ ಪೇಜಾವರ ಶ್ರೀಗಳನ್ನು ಮಾಧ್ಯಮದವರು ಸುತ್ತುವರಿದಾಗ ಪ್ರತಿಕ್ರಿಯೆ ನೀಡಿದ ಅವರು “ಸಂಧಾನಸೂತ್ರ ನಡೆಸಲು ಇಲ್ಲಿಗೆ ಬಂದಿದ್ದೇನೆ. ಎರಡೂ ಕಡೆಯ ವರೊಂದಿಗೆ ಮಾತನಾಡುತ್ತೇನೆ. ಮಾಹಿತಿ ಪಡೆಯುತ್ತೇನೆ. ಮಠದಲ್ಲಿ ಏನು ಮಾತನಾಡಿದ್ದೇನೆ ಎಂದು ಬಹಿರಂಗ ಪಡಿಸುವುದಿಲ್ಲ. ಇನ್ನು ದೇಗುಲದ ಕಡೆಯವರೊಂದಿಗೆ ಮಾತನಾಡುತ್ತೇನೆ. ಬಳಿಕ ಇತ್ತಂಡದವರೊಂದಿಗೆ ಮಾತು ಕತೆ ನಡೆಸುತ್ತೇನೆ. ಈ ವಿವಾದ ಮಾತು ಕತೆ ಮೂಲಕ ಸೌಹಾರ್ದವಾಗಿ ಬಗೆಹರಿಯುವ ವಿಶ್ವಾಸವಿದೆ. ಇಲ್ಲಿಗೆ ಬಂದ ಮುಖಂಡರು ಕೂಡಾ ಇದಕ್ಕೆ ಒಪ್ಪಿದ್ದಾರೆ“ ಎಂದು ಹೇಳಿದರು.

ಯಾಗಶಾಲೆಗೆ ಭೇಟಿ : ಅಲ್ಲಿಂದ ಪೇಜಾವರ ಶ್ರೀಗಳು ಕಾರಿನಲ್ಲಿ ಮಠದ ವತಿಯಿಂದ ಸರ್ಪಸಂಸ್ಕಾರ ನಡೆಸುವ ಯಾಗಶಾಲೆಯತ್ತ ತೆರಳಿದರೆ ಮಠದಲ್ಲಿ ಮಾತುಕತೆಯಲ್ಲಿ ಭಾಗಿಯಾಗಿದ್ದ ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳ ಮುಖಂಡರು ಮಠದಿಂದ ನೇರವಾಗಿ ಆಡಳಿತ ಕಛೇರಿಯ ಮೇಲಂತಸ್ತಿ ನಲ್ಲಿರುವ ಸಭಾಂಗಣಕ್ಕೆ ಹೋಗಿ ಕುಳಿತರು. ಯಾಗಶಾಲೆ ವೀಕ್ಷಣೆಯ ಬಳಿಕ ಪೇಜಾವರ ಶ್ರೀಗಳು ದೇಗುಲದ ಆಡಳಿತ ಕಚೇರಿಯತ್ತ ಬಂದರು.

ದೇಗುಲದ ಸಭಾಂಗಣದಲ್ಲಿ ಸಭೆ: ಆಡಳಿತ ಕಚೇರಿಯ ಮುಂಭಾ ಗಕ್ಕೆ ಅವರು ಆಗಮಿಸಿದಾಗ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಸದಸ್ಯರು ಅವರನ್ನು ಸ್ವಾಗತಿಸಿದರು. ಸ್ವಾಮೀಜಿಯವರು ಲಿಫ್ಟ್ ಮೂಲಕ ಮೇಲಂತಸ್ತಿನ ಸಭಾಂಗಣಕ್ಕೆ ಬಂದರೆ ಉಳಿದವರು ನಡೆದುಕೊಂಡೇ ಅಲ್ಲಿಗೆ ಬಂದರು.

ಸಭಾಂಗಣದಲ್ಲಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರಾ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಮುಖಂ ಡರಾದ ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್, ಜಗದೀಶ್ ಶೇಣವ, ಡಾ| ಪಿ.ಅನಂತಕೃಷ್ಣ ಭಟ್, ಮುರಳೀಕೃಷ್ಣ ಹಸಂತಡ್ಕ, ಭಾಸ್ಕರ ಧರ್ಮಸ್ಥಳ, ಡಾ.ಪ್ರಸನ್ನ, ಆಗಮಶಾಸ್ತ್ರ ಪಂಡಿತರಾದ ಭಾಸ್ಕರ ಭಟ್ ಪಂಜ, ಭಕ್ತ ಹಿತರಕ್ಷಣಾ ವೇದಿಕೆಯ ಮಹೇಶ್‌ಕುಮಾರ್ ಕರಿಕ್ಕಳ, ಮೋನಪ್ಪ ಮಾನಾಡು, ಶ್ರೀನಾಥ್ ಭಟ್, ಕಿಶೋರ್‌ಕುಮಾರ್ ಶಿರಾಡಿ, ಗೋಪಾಲ ಎಣ್ಣೆಮಜಲು, ಗುರುಪ್ರಸಾದ್ ಪಂಜ ಮತ್ತಿತರರು, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಮೊದ ಲಾದವರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಮಹೇಶ್ ಕುಮಾರ್ ಕರಿಕ್ಕಳ, ಕೇನ್ಯ ರವೀಂದ್ರನಾಥ ಶೆಟ್ಟಿ, ರಾಜೀವಿ ರೈ, ಮಾಧವ ಮಲೆ, ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿಯವರು, ಶಿವರಾಮ ರೈ, ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಸತೀಶ್ ಕೂಜುಗೋಡು, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್.ರವೀದ್ರ ಮೊದಲಾದ ಹಲವಾರು ಮಂದಿ ಇದ್ದರು. ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ಪತ್ರಕರ್ತರು ಅಲ್ಲಿ ನೆರೆದಿದ್ದರು.

ಅಭಿಪ್ರಾಯಗಳು ಬೇಡ: ಸಭೆಯ ಆರಂಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ಪೇಜಾವರ ಸ್ವಾಮೀಜಿಯವರನ್ನು ಮತ್ತು ಇತರರನ್ನು ಸ್ವಾಗತಿಸಿದರು. ದೇವಳದ ಪರವಾದ ಅಭಿಪ್ರಾಯ ಗಳನ್ನು ಸ್ವಾಮೀಜಿಯವರು ಆಲಿಸಬೇಕೆಂದು ಅವರು ಹೇಳಿದರು. ಆದರೆ ಪೇಜಾವರ ಸ್ವಾಮೀಜಿಯವರು ‘ಅಭಿಪ್ರಾಯ ಆಲಿಕೆ ಈಗ ಬೇಡ. ನನಗೆ ಹೋಗಲು ತಡವಾಗುತ್ತದೆ. ಎರಡೂ ಕಡೆಯವರನ್ನು ಕರೆಸಿ ಮಾತ ನಾಡುತ್ತೇನೆ` ಎಂದು ಹೇಳಿದರು. ಆದ್ದರಿಂದಾಗಿ ದೇವಳದ ಕಡೆಯಿಂದ ಮಠದ ವಿರುದ್ಧ ಅಭಿಪ್ರಾಯ ಹೇಳ ಬಂದವರಿಗೆ ಅವಕಾಶವಾಗಲಿಲ್ಲ.

ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ಧೇಶಿಸಿ ಮಾತನಾಡಿದ ಪೇಜಾವರ ಶ್ರೀಗಳು “ಇಲ್ಲಿ ಎಲ್ಲರೂ ನಮ್ಮನ್ನು ಸ್ವಾಗತ ಮಾಡಿ ನಮ್ಮ ಪ್ರಯತ್ನಕ್ಕೆ ಉತ್ಸಾಹ ತುಂಬುವ ಕಾರ್ಯ ಮಾಡಿದ್ದಾರೆ. ಒಳ್ಳೆಯ ಮನಸ್ಸಿನಿಂದ ಸಹಕಾರ ನೀಡಿದ್ದಾರೆ. ಅದಕ್ಕಾಗಿ ಆಡಳಿತ ಮಂಡಳಿ ಸೇರಿದಂತೆ ಎಲ್ಲರನ್ನೂ ಅಭಿನಂದಿಸುತ್ತೇನೆ“ ಎಂದು ಹೇಳಿದರು. ನಂತರ ವಿ.ಹಿ.ಪ.ದವರಿಗೂ ಭಕ್ತ ಹಿತರಕ್ಷಣಾ ವೇದಿಕೆಯವರಿಗೂ ಚರ್ಚೆ ಆರಂಭವಾದಾಗ, ಸ್ವಾಮೀಜಿಯವರು ಎದ್ದು ನಿಂತು ಗಣ್ಯರಿಗೆ ಮಂತ್ರಾಕ್ಷತೆ ನೀಡಿ ಸಭೆಯಿಂದ ಹೊರ ಹೊರಟರು. ಇದರಿಂದಾಗಿ ಸಭೆಯೂ ಮುಕ್ತಾಯ ಗೊಂಡಿತು. ಸಭೆಯ ಬಳಿಕ ಹೊರಗೆ ಬಂದ ವಿಶ್ವ ಹಿಂದೂ ಪರಿಷತ್ ಮುಖಂಡರೊಂದಿಗೆ ಮಹೇಶ್‌ಕುಮಾರ್ ಕರಿಕ್ಕಳ ಕುಶಲೋಪರಿ ನಡೆಸಿದರು. ಬಳಿಕ ಮುಖಂಡರು ಕೂಡಾ ತೆರಳಿದರು.

ಎರಡೂ ಶ್ರದ್ಧಾ ಕೇಂದ್ರಗಳು ಪರಸ್ಪರ ಅನ್ಯೋನ್ಯವಾಗಿರಬೇಕು ಎಂಬುದಷ್ಟೇ ನಮ್ಮ ಉದ್ಧೇಶ : ಪುರಾಣಿಕ್
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ.ಬಿ.ಪುರಾಣಿಕ್‌ರವರು, “ಚಿಕ್ಕ ಪುಟ್ಟ ಅಭಿಪ್ರಾಯ ವ್ಯತ್ಯಾಸಗಳ ಕಾರಣದಿಂದ ದೇವಸ್ಥಾನ ಮತ್ತು ಮಠದ ನಡುವೆ ಒಂದಷ್ಟು ಗೊಂದಲಗಳಿರುವುದು ನಮಗೆ ಕಂಡುಬಂದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳಕ್ಕೆ ವೈಯಕ್ತಿಕವಾಗಿ ಯಾರ ಮೇಲೂ ಹೆಚ್ಚು ಒಲವು, ಯಾರ ಮೇಲೂ ಕಡಿಮೆ ಒಲವು ಅಂತ ಇಲ್ಲ. 2 ಶ್ರದ್ಧಾಕೇಂದ್ರಗಳು ಪರಸ್ಪರ ಅನ್ಯೋನ್ಯವಾಗಿರಬೇಕು ಮತ್ತು ಭಕ್ತರ ಮನಸ್ಸಿನಲ್ಲಿ ಅನಗತ್ಯ ಗೊಂದಲ ಇರಬಾರದು ಎಂಬುದು ನಮ್ಮ ನಿಲುವು. ವಿಶ್ವ ಹಿಂದೂ ಪರಿಷತ್‌ಗೆ ಬೇರೆ ಯಾವ ಉದ್ಧೇಶ ಕೂಡಾ ಇಲ್ಲ. ಇಲ್ಲಿನ ಅಧಿಕಾರದಲ್ಲಾಗಲಿ ಬೇರೆ ಯಾವುದರಲ್ಲೂ ನಾವು ಹಸ್ತಕ್ಷೇಪ ಮಾಡುತ್ತಿಲ್ಲ. ನಮ್ಮ ಪ್ರಾಮಾಣಿಕ ಕಳಕಳಿ ಏನು ಎಂದರೆ ಯಾವುದೇ ಘರ್ಷಣೆ ಇಲ್ಲದೆ ಅತೀ ಶೀಘ್ರ ಕಲುಷಿತವಾದ ಈ ಸಂಬಂಧ ಮತ್ತೆ ಸರಿಯಾಗಬೇಕು ಎಂದು ಹೇಳಿದರು.

ಸೌಹಾರ್ದ ಪರಿಹಾರದ ವಿಶ್ವಾಸ : ಮುಂಡೋಡಿ
ಪೇಜಾವರ ಶ್ರೀಗಳ ಭೇಟಿಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರು “ದೇವಸ್ಥಾನಕ್ಕೂ ಮಠಕ್ಕೂ ಇರುವಂತಹ ವಿಷಯಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನಮಗೆ ಕೊಡಿ. ಎರಡೂ ಕಡೆಯಿಂದ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ದಿನ ನಿಗದಿ ಮಾಡಿ ಮಾತುಕತೆ ಮಾಡೋಣ ಎಂಬ ಮಾತನ್ನು ಸ್ವಾಮೀಜಿಯವರು ಹೇಳಿದ್ದಾರೆ. ದೇವಸ್ಥಾನಕ್ಕೂ, ಮಠಕ್ಕೂ ಇರುವ ವಿವಾದವನ್ನು ಬಗೆಹರಿಸುವುದು ಹೇಗೆ ಎಂಬ ದೃಷ್ಟಿಯಲ್ಲಿ ಸ್ವಾಮೀಜಿಯರು ಮಾಹಿತಿ ಪಡೆದಿದ್ದಾರೆ. ಎರಡು ಸಂಸ್ಥೆಗಳು ಸೌಹಾರ್ದತೆಯಲ್ಲಿ ಇರಬೇಕು ಎಂಬ ಭಾವನೆಯಲ್ಲಿ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಜೂ. 10ರೊಳಗೆ ಸಭೆ ನಡೆಸಬೇಕೆಂದು ಅವರು ಸಲಹೆ ನೀಡಿದ್ದಾರೆ. ಆದರೆ ದಿನಾಂಕ ನಿಗದಿಯಾಗಿಲ್ಲ. ಸ್ಥಳದ ಕುರಿತು ನಿಗದಿಯಾಗಿಲ್ಲ. ಭಕ್ತರಿಂದ ಎಲ್ಲಿ ನಡೆಸುವುದು ಎಂಬ ಬಗ್ಗೆ ಬೇರೆ ಬೇರೆ ಅಭಿಪ್ರಾಯ ಬಂದಿದೆ. ಸ್ವಾಮೀಜಿಗಳಿಗೆ ಇಲ್ಲಿಗೆ ಬರಲು ಕಷ್ಟವಾದರೆ ಅವರು ಎಲ್ಲಿಗೆ ಕರೆಯುತ್ತಾರೋ, ಅಲ್ಲಿ ಭಾಗವಹಿಸುವುದು ಎಂದು ನಿರ್ಧರಿಸಲಾಗಿದೆ. ದೇವಸ್ಥಾನ, ಮಠ ಹಾಗೂ ಹಿತರಕ್ಷಣಾ ವೇದಿಕೆ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಈ ಮಾತುಕತೆ ನಡೆಸಬಹುದೆಂಬ ಅಭಿಪ್ರಾಯ ಅವರಿಂದ ಬಂದಿದೆ” ಎಂದು ಹೇಳಿದರು.

ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆಗಳನ್ನು ಒತ್ತಾಯದಿಂದ ಮಾಡಿಸುತ್ತಿಲ್ಲ : ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಪೇಜಾವರ ಶ್ರೀಗಳ ಭೇಟಿಯ ಬಳಿಕ ಸುದ್ದಿಯೊಂದಿಗೆ ಮಾತನಾಡಿದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಸುಬ್ರಹ್ಮಣ್ಯ ಮಠ ಮತ್ತು ಸುಬ್ರಹ್ಮಣ್ಯ ದೇವಸ್ಥಾನ ಎರಡೂ ಕೂಡಾ ಈ ಊರಿನ ಜನರ 2 ಕಣ್ಣುಗಳಿದ್ದಂತೆ. ಈ ಎರಡೂ ಸನ್ನಿಧಾನಗಳ ಮಧ್ಯೆ ವೈಮನಸ್ಸು ಬರುವಂತಹ ಘಟನೆಗಳು ನಡೆಯುತ್ತಿರುವುದು ನಮಗೂ ಇಷ್ಟವಿಲ್ಲ, ಭಕ್ತರಿಗೂ ಇಷ್ಟವಿಲ್ಲ. ಎರಡೂ ಸಂಸ್ಥೆಗಳು ಪರಸ್ಪರ ಸಾಮರಸ್ಯದಿಂದ ನಡೆದುಕೊಂಡು ಹೋಗಬೇಕೆಂಬುದೇ ನಮ್ಮ ವಿಚಾರ. ಆದರೆ ಇದಕ್ಕೆ ವಿರುದ್ಧವಾಗಿ ಇತ್ತೀಚೆಗೆ ಒಂದು ಸಂಸ್ಥೆ ಇನ್ನೊಂದು ಸಂಸ್ಥೆಯ ಮೇಲೆ ಹಸ್ತಕ್ಷೇಪ ಮಾಡುವಂತಹ ಪ್ರಸಂಗ ಬಂದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ದೇವಸ್ಥಾನದ ಆಡಳಿತ ಮಂಡಳಿಯವರ ಜವಾಬ್ದಾರಿ ಏನೆಂದರೆ ದೇವಸ್ಥಾನದ ನಿರ್ವಹಣೆಯೇ ವಿನಹಃ ಮಠದ ಜವಾಬ್ದಾರಿ ಅಲ್ಲ. ಮಠಕ್ಕೆ ಸಂಬಂಧಪಟ್ಟ ವ್ಯವಹಾರಗಳಿಗೆ ಕೈ ಹಾಕಿ ಇಲ್ಲಿ ಸರ್ಪ ಸಂಸ್ಕಾರ ಆಗಬಾರದು, ಆಶ್ಲೇಷ ಬಲಿ ಆಗಬಾರದು ಎಂದು ಅವರು ಹೇಳತೊಡಗಿದ್ದಾರೆ. ಆದರೆ ಯಾವಾಗ ಮೈಗೆ ಕೈ ಹಾಕಿ ದಬ್ಬಾಳಿಕೆ ನಡೆಸುವಂತಹ ಪರಿಸ್ಥಿತಿ ಬಂತೊ ಇದು ಅತಿರೇಕಕ್ಕೆ ಹೋಯಿತು. ಈ ಹಿನ್ನಲೆಯಲ್ಲಿ ಸಂಧಾನಕ್ಕೆ ಪೇಜಾವರ ಶ್ರೀಗಳು ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿಕೊಂಡಿದ್ದರು. ನಾವು ಕೂಡಾ ಸಂತೋಷಪಟ್ಟಿದ್ದೇವೆ” ಎಂದರು.

ಕೆಲವರ ಬೇಡಿಕೆ ತುಂಬಾ ಅಪ್ರಸ್ತುತವಾದದ್ದು ಮತ್ತು ಈಡೇರಿಸಲು ಸಾಧ್ಯವಾಗದೇ ಇರುವಂತದ್ದು. ಸುಬ್ರಹ್ಮಣ್ಯ ಮಠ ಎಂದು ಹಾಕಲು ನಾನು ಶುರು ಮಾಡಿದ್ದಲ್ಲ. ಇದು ಪರಂಪರೆಯಿಂದ ನಡೆದು ಬಂದದ್ದು. ಇದನ್ನು ನಾನು ಬದಲಾವಣೆ ಮಾಡಬೇಕು ಎಂದು ಹೇಳುವುದರಲ್ಲಿ ಅರ್ಥವಿಲ್ಲ.

ನಮ್ಮ ಮಠದಲ್ಲಿ ನಡೆಯುವ ಸರ್ಪಸಂಸ್ಕಾರದಂತಹ ಸೇವೆಗಳು ಧಾರ್ಮಿಕ ಸ್ವಾತಂತ್ರ್ಯ. ನಾವೇನೂ ಒತ್ತಾಯಪೂರ್ವಕವಾಗಿ ಅದನ್ನು ಮಾಡಿಸುತ್ತಿಲ್ಲ. ಅವರು ಅವರ ಇಚ್ಛೆಗೆ ಅನುಸಾರವಾಗಿ ಬಂದು ಮಾಡುತ್ತಾರೆ. ಗಣಪತಿ ದೇವರಿಗೆ ಸಂಬಂಧಪಟ್ಟ ಹಾಗೆ ನ್ಯಾಯಾಲಯದಲ್ಲೇ ಸುದೀರ್ಘವಾದ ವ್ಯಾಜ್ಯ ನಡೆದು ತೀರ್ಪು ಬಂದಿದೆ. ತೀರ್ಪು ಬಂದ ವಿಚಾರವನ್ನು ಕೂಡಾ ಮತ್ತೆ ಮತ್ತೆ ಕೆದಕುವುದರಲ್ಲಿ ಅರ್ಥವಿಲ್ಲ. ಈ ಎಲ್ಲಾ ಸತ್ಯಾಂಶಗಳನ್ನು ಪೇಜಾವರ ಶ್ರೀಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಎಂದು ಸ್ವಾಮೀಜಿ ಹೇಳಿದರು. ಒಂದು ವೇಳೆ ಪೇಜಾವರ ಶ್ರೀಗಳು ಮಠದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸದಂತೆ ತಿಳಿಸಿದರೆ ಅದನ್ನು ಪಾಲಿಸುತ್ತೀರಾ ಎಂದು ಸ್ವಾಮೀಜಿಯವರನ್ನು ಕೇಳಿದಾಗ ನಾವು ಪೇಜಾವರ ಶ್ರೀಗಳಿಗೆ ಮನವರಿಕೆ ಮಾಡಿಕೊಡುತ್ತೇವೆ. ಎಲ್ಲಿ ಪೂಜೆ ಮಾಡಿಸಬೇಕೆಂಬುದು ಭಕ್ತರ ಧಾರ್ಮಿಕ ಸ್ವಾತಂತ್ಯವಾಗಿದೆ’` ಎಂದರು.

“ಸರ್ಪಸಂಸ್ಕಾರ ಮತ್ತು ಆಶ್ಲೇಷ ಬಲಿಗಳು ಮಠಕ್ಕೆ ಆದಾಯದ ಮೂಲವಾಗಿರುವುದರಿಂದ ಅದನ್ನು ನಿಲ್ಲಿಸಲು ನೀವು ಒಪ್ಪುತ್ತಿಲ್ಲವೇ?“ ಎಂದು ಸುದ್ದಿ ಪ್ರಶ್ನಿಸಿದಾಗ “ಅದರಲ್ಲಿ ಭಾರೀ ಉಳಿತಾಯ ಆಗುವುದಿಲ್ಲ. ನಾವು ದೇವಸ್ಥಾನದಲ್ಲಿ ಮಾಡಿದಂತೆ ಸಾಮೂಹಿಕವಾಗಿ ಮಾಡುವುದಲ್ಲ. ಪ್ರತಿಯೊಬ್ಬ ಭಕ್ತನಿಗೂ ಪ್ರತ್ಯಪ್ರತ್ಯೇಕವಾಗಿ ನಡೆಸುತ್ತೇವೆ. ನಾವು ವಿಧಿಸುವ 6 ಸಾವಿರ ರೂ.ಗಳಲ್ಲಿ ಎಷ್ಟು ಉಳಿತಾಯವಾಗುತ್ತದೆ ಎಂದು ಜನರೇ ಯೋಚಿಸಲಿ. ಅಲ್ಪ ಸ್ವಲ್ಪ ಉಳಿತಾಯವಾದರೂ ನಾವು ಸ್ವಂತಕ್ಕೆ ಬಳಸುವುದಿಲ್ಲ. ಶಾಲೆ ಮತ್ತು ಗೋಶಾಲೆ ನಡೆಸುವುದಕ್ಕೆ ಬಳಸುತ್ತೇವೆ. ಆದಾಯ ಮೂಲವೆಂದಲ್ಲ. ಅದರ ಮೂಲಕ ಸುಮಾರು 250 ಮಂದಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಅದನ್ನು ನಿಲ್ಲಿಸಲಾಗದು’` ಎಂದು ತಿಳಿಸಿದರು.

ಮಠದಲ್ಲಿ ನಡೆಯುವ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆಗಳು ನಿಲ್ಲಲೇ ಬೇಕು : ಮಹೇಶ್‌ಕುಮಾರ್ ಕರಿಕ್ಕಳ
ಪೇಜಾವರ ಶ್ರೀಗಳು ಬಂದು ಹೋದ ಬಳಿಕ ಸುದ್ದಿಯೊಂದಿಗೆ ಮಾತನಾಡಿದ ಭಕ್ತರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್‌ಕುಮಾರ್ ಕರಿಕ್ಕಳರವರು, “ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಟ್ರಸ್ಟಿಗಳ ನೆಲೆಯಲ್ಲಿ ನಾವು ಸ್ವಾಮೀಜಿಯವರ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದ್ದೇವೆ. ಈ ಮೂರು ಬೇಡಿಕೆಗಳು ಇತ್ಯರ್ಥವಾದರೆ ಉಳಿದ ಬೇಡಿಕೆಗಳು ಇತ್ಯರ್ಥವಾಗುತ್ತದೆ. ಮೊದಲನೆಯದಾಗಿ ಸುಬ್ರಹ್ಮಣ್ಯ ದೇವರ ಪಕ್ಕ ಒಂದು ಗಣಪತಿ ದೇವರ ವಿಗ್ರಹವಿದೆ. ಅಷ್ಟಮಂಗಲ ಪ್ರಶ್ನೆಯ ಪ್ರಕಾರ ಅದು ಸ್ವಸ್ಥಾನದಲ್ಲಿ ಸ್ಥಾಪನೆಯಾಗಬೇಕು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಎಲ್ಲಾ ಸಮಸ್ಯೆಗಳಿಗೂ ಮುಖ್ಯ ಕಾರಣ ಗಣಪತಿ ವಿಗ್ರಹ ಸ್ವಸ್ಥಾನದಲ್ಲಿ ಸ್ಥಾಪನೆಯಾಗಿ ಪೂಜೆಗೊಳ್ಳದೆ ಇರುವುದು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಯಾವುದೇ ಮಠಾಧೀಶರು ಇಲ್ಲ. ಅನೇಕರು ತಪ್ಪುಗ್ರಹಿಕೆಯಿಂದ ಕುಕ್ಕೆ ಸುಬ್ರಹ್ಮಣ್ಯದ ಸ್ವಾಮಿ ಎಂದು ಸಂಬೋಧಿಸುತ್ತಾರೆ. ಯಾಕೆಂದರೆ ಮಠದವರು ಅದೇ ರೀತಿ ಹಾಕಿಕೊಳ್ಳುತ್ತಿದ್ದಾರೆ. ಆದುದರಿಂದ ಅದನ್ನು ತೆಗೆದು ಅವರು ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯ ಎಂದೇ ಹಾಕಬೇಕು. ಎಲ್ಲಾ ಸಂಘರ್ಷಕ್ಕೂ ಮುಖ್ಯ ಕಾರಣ ನಮ್ಮ ದೇವಾಲಯದಲ್ಲಿ ನಡೆಯುವ ಸರ್ಪಸಂಸ್ಕಾರ, ಆಶ್ಲೇಷ ಬಲಿ ಮೊದಲಾದ ಸೇವೆಗಳನ್ನು ಅವರು ತಮ್ಮ ಮಠದಲ್ಲಿ ಆರಂಭಿಸಿರುವುದು. ಇದರಿಂದ ಭಕ್ತಾದಿಗಳಿಗೆ ತುಂಬಾ ತೊಂದರೆಯಾಗಿದೆ. ದೇವಸ್ಥಾನ ಮತ್ತು ಮಠ ಬೇರೆ ಬೇರೆ ಎಂದು ಇಲ್ಲಿಗೆ ಬರುವ ಯಾವುದೇ ಭಕ್ತಾದಿಗಳಿಗೆ ಗೊತ್ತಿಲ್ಲ. ಆದುದರಿಂದ ಮಠದಲ್ಲಿ ನಡೆಯುವ ಈ ಸೇವೆಗಳು ನಿಲ್ಲಬೇಕು. ಈ ಎಲ್ಲಾ ವಿವಾದಗಳು ಪರಿಹಾರಗೊಂಡರೆ ನ್ಯಾಯಾಲಯದಲ್ಲಿರುವ ಕೇಸುಗಳನ್ನೂ ವಾಪಾಸು ಪಡೆದು ಯಾವುದೇ ಸಮಸ್ಯೆ ಇಲ್ಲದೆ ಬಗೆಹರಿಸಬಹುದು. ಪೇಜಾವರ ಶ್ರೀಗಳು ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆಂಬ ವಿಶ್ವಾಸವಿದೆ” ಎಂದು ಹೇಳಿದರು.

ಸ್ಥಳೀಯ ವಿ.ಹಿಂ.ಪ ಮುಖಂಡರ ಅನುಪಸ್ಥಿತಿ
ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನದ ನಡುವೆ ಪೂಜೆಗೆ ಸಂಬಂಧಿಸಿ ಉದ್ಭವಿಸಿ, ಉಲ್ಬಣಗೊಂಡಿರುವ ವಿವಾದವನ್ನು ಮಾತುಕತೆಯಲ್ಲಿ ಪರಿಹರಿಸುವ ಉದ್ದೇಶದಿಂದ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಶ್ರೀಪಾದರು ಜೂ.7ರಂದು ಸುಬ್ರಹ್ಮಣ್ಯಕ್ಕೆ ಬಂದಿದ್ದಾಗ ವಿಶ್ವ ಹಿಂದು ಪರಿಷತ್ತಿನ ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಬಂದಿದ್ದರು. ಆದರೆ ಈ ಸಂದರ್ಭ ಸುಬ್ರಹ್ಮಣ್ಯದ ವಿ.ಹಿಂ.ಪ. ಅಧ್ಯಕ್ಷ ಅಶೋಕ್ ಆಚಾರ್ಯರಾಗಲೀ ಇತರ ಪದಾಧಿಕಾರಿಗಳಾಗಲೀ ಕಂಡುಬರಲಿಲ್ಲ. ಸ್ಥಳೀಯ ಮುಖಂಡರೇ ಬಾರದಿದ್ದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಜಿಲ್ಲಾ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಡಾ. ಕೆ.ಪ್ರಸನ್ನರವರು ಪ್ರತಿಕ್ರಿಯಿಸಿ “ಪೇಜಾವರ ಸ್ವಾಮೀಜಿಯವರು ಮತ್ತು ಸುಬ್ರಹ್ಮಣ್ಯದ ಮಠದವರು ವಿ.ಹಿಂ.ಪ. ದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಕರೆದ ಮೇರೆಗೆ ಬಂದಿದ್ದೇವೆ. ಸ್ಥಳೀಯ ವಿ.ಹಿಂ.ಪ. ಪದಾಧಿಕಾರಿಗಳನ್ನು ಅವರು ಕರೆದಿರಲಿಲ್ಲ. ಅಪೇಕ್ಷಿತರಲ್ಲವಾದುದರಿಂದ ಅವರು ಸಭೆಗೆ ಬಂದಿರಲಿಲ್ಲ. ಆದರೆ ನಮ್ಮೊಡನೆ ಬಂದು ಮಾತನಾಡಿ ಹೋಗಿದ್ದಾರೆ” ಎಂದು ಹೇಳಿದ್ದಾರೆ.

ಜೂನ್ 10ರ ಒಳಗೆ ಸಂಧಾನ ಸೂತ್ರ ಸಭೆ ನಡೆಸಲು ಪೇಜಾವರ ಶ್ರೀ ಸಲಹೆ  ಉಭಯ ಮುಖಂಡರ ನಡುವಿನ ಮಾತಿನ ಸಂಘರ್ಷಕ್ಕೆ ಅಧ್ಯಕ್ಷರ ಬ್ರೇಕ್: 
ಪೇಜಾವರ ಶ್ರೀಗಳು ಮಠದಿಂದ ಆಗಮಿಸಿದ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ಎಲ್ಲರ ಸಮ್ಮುಖ ಸಭೆ ಆರಂಭವಾಯಿತು. ಆರಂಭದಲ್ಲಿ ನಿತ್ಯಾನಂದ ಮುಂಡೋಡಿಯವರು ಸ್ವಾಮೀಜಿಯವರನ್ನು ಸ್ವಾಗತಿಸಿ, ಪೂಜ್ಯರ ಪಾದಸ್ಪರ್ಶ ಇಂದು ದೇಗುಲಕ್ಕೆ ಆಗಿದ್ದು, ಅದಕ್ಕಾಗಿ ಸಂತೋಷ ಪಡುತ್ತೇವೆ ಎನ್ನುತ್ತಾ ಅವರ ಸಂಧಾನ ಸೂತ್ರದ ನಡೆಯನ್ನು ಸ್ವಾಗತಿಸಿದರು.

“ಮಠ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಹಾಗೆ ಕೆಲವು ವಿಚಾರ ಮತ್ತು ವಿವಾದಗಳಿವೆ. ಇದೆಲ್ಲವನ್ನೂ ಹೋಗಲಾಡಿಸಿ ಎಲ್ಲರೂ ಒಂದೇ ಭಾವನೆಯಿಂದ ಹೋಗಬೇಕೆನ್ನುವುದು ನಮ್ಮ ಉದ್ಧೇಶ ಕೂಡಾ. ದೇವಸ್ಥಾನ ಹಾಗೂ ಮಠ ಬಹಳ ವರ್ಷಗಳಿಂದ ಇರುವ ವ್ಯವಸ್ಥೆ. ಒಂದೇ ಪರಿಸರದಲ್ಲಿ ಇರುವ ಕಾರಣ ಸಣ್ಣ ಪುಟ್ಟ ಘರ್ಷಣೆಗಳು ಸಹಜ. ಇಲ್ಲಿ ಈಗ ಇರುವುದು ಕೆಲವು ಸಣ್ಣ ಪುಟ್ಟ ವಿವಾದಗಳಾದರೆ ಮತ್ತೆ ಕೆಲವು ನ್ಯಾಯಾಲಯದಲ್ಲಿದೆ. ಈ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು ಪೂಜ್ಯರು ಬಂದಿದ್ದಾರೆ. ಮೊದಲು ಅವರು ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ಈಗಾಗಲೇ ಅವರು ಮಠಕ್ಕೆ ಹೋಗಿ ಅಭಿಪ್ರಾಯ ಪಡೆದಿದ್ದಾರೆ. ಇಲ್ಲಿ ಇರುವವರಿಂದ ಕೂಡಾ ಮಾಹಿತಿ ಮತ್ತು ನಡೆದ ಘಟನೆಗಳ ವಿವರ ಪಡೆಯಬೇಕು. ಹಳೆಯ ಘಟನೆಗಳನ್ನು ಮತ್ತೆ ನೆನಪಿಸುವುದಕ್ಕಿಂತಲೂ ಮುಂದೆ ಇಂತಹ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದು ಮುಖ್ಯ. ಹೀಗಾಗಿ ಯಾವುದೇ ಸಂಘರ್ಷವಿಲ್ಲದೆ ಈ ಸಭೆ ಮುಂದುವರಿಯಬೇಕು“ ಎಂದು ಹೇಳಿದರು.

ಬಳಿಕ ಮಾತನಾಡಿದ ಪೇಜಾವರ ಶ್ರೀಗಳು ಇಲ್ಲಿರುವ ವಿವಾದಗಳನ್ನು ಶಾಂತಿ ಸೌಹಾರ್ದತೆಯಿಂದ ಬಗೆಹರಿಸುವುದಕ್ಕೆ ಯಾವುದೇ ಕಷ್ಟವಿಲ್ಲ. ಇಲ್ಲಿ ಅಂತಹ ದೊಡ್ಡ ಮೂಲಭೂತವಾದಂತಹ ಭಿನ್ನಾಭಿಪ್ರಾಯ ಯಾವುದೂ ಇಲ್ಲ. ಅಭಿಪ್ರಾಯ ಬೇಧ ಉಂಟು. ಮಾತುಕತೆ ಮೂಲಕ ಅದನ್ನು ಸರಿಪಡಿಸಬಹುದು. ಅದೆಲ್ಲಾ ವಿವರಗಳನ್ನು ನಾನು ಈಗ ಹೇಳುವುದಿಲ್ಲ. ಹಳೆಯದ್ದನ್ನೆಲ್ಲಾ ಮತ್ತೆ ಮತ್ತೆ ಕೆದಕದೆ ಹೊಸ ಯುಗ ಆರಂಭ ಮಾಡಬೇಕು. ಮುಂದೆ ಅಂತಹದ್ದು ಆಗದಂತೆ ನೋಡಿಕೊಳ್ಳಬೇಕು. ಯಾವುದೇ ಸಂಘರ್ಷ ಆಗದಂತೆ ಎರಡೂ ಕಡೆಯವರು ಮನಸ್ಸು ಮಾಡಿದರೆ ಯಾವುದೇ ಸಮಸ್ಯೆಯಿಲ್ಲ. ಬೇಡ ಎಂದು ಮನಸ್ಸು ಮಾಡಿದರೆ ಯಾವುದೂ ಆಗುವುದಿಲ್ಲ. ಎರಡೂ ಕಡೆಯವರು ಸಂಧಾನ ಮಾಡೋಣ ಎಂದು ಮನಸ್ಸು ಮಾಡಿದರೆ ಎಲ್ಲಾ ಪ್ರಮುಖರು ಇದ್ದು ಆದಷ್ಟು ಬೇಗ ಇದನ್ನು ಮುಗಿಸುವುದು ಸೂಕ್ತ. ಜೂ. 11ರ ಬಳಿಕ ನಾನು ಪ್ರವಾಸದಲ್ಲಿರುತ್ತೇನೆ. ಹಾಗಾಗಿ ಜೂ. 10ರ ಒಳಗೆ ಆಗಬೇಕು ಎನ್ನುವುದು ನನ್ನ ಅಪೇಕ್ಷೆ ಹಾಗೆಂದು ಸಂಕಲ್ಪ ಮಾಡಿದ್ದೇನೆ“ ಎಂದು ಹೇಳಿದರು. ನಂತರ ನಿತ್ಯಾನಂದರು `ಜನರ ಅಭಿಪ್ರಾಯ ಹೇಳಬಹುದಲ್ಲವೇ’ ಎಂದು ಸ್ವಾಮೀಜಿಯವರಲ್ಲಿ ಕೇಳಿದರು. ಆಗ ಸ್ವಾಮೀಜಿಯವರು ‘`ಬೇಡ. ವಿದ್ಯಾಪ್ರಸನ್ನ ಸ್ವಾಮೀಜಿಯವರೂ ಕೂಡ ಇದ್ದು ಮಾತುಕತೆ ನಡೆಸೋಣ“ ಎಂದರು.

ಬಳಿಕ ಚರ್ಚೆ ಮಾತುಕತೆಯ ಸ್ಥಳ ಎಲ್ಲಿ ಎಂಬ ಕುರಿತು ಕೇಂದ್ರೀಕೃತಗೊಂಡಿತು. “ನೀವು ಎಲ್ಲಿಗೆ ಕರೆಯುತ್ತೀರೋ ನಾವು ಅಲ್ಲಿಗೆ ಬರುತ್ತೇವೆ. ನಿಮಗೆ 90 ವರ್ಷ ವಯಸ್ಸಾಗಿದೆ. ನಿಮಗೆ ತ್ರಾಸ ಕೊಡಲು ಸಿದ್ಧರಿಲ್ಲ`’ ಎಂದ ಮಹೇಶ್‌ಕುಮಾರ್ ಕರಿಕ್ಕಳ, ಸಂಧಾನ ಸಭೆ ಸಂಘದ ಕಡೆಯಲ್ಲಿ ಬೇಡ. ಎಲ್ಲರಿಗೂ ಒಪ್ಪಿತವಾಗುವ ಸ್ಥಳ ಹೇಳಿ ನಾವು ಬರುತ್ತೇವೆ ಎಂದು ಹೇಳಿದರು. ಸತೀಶ್ ಕೂಜುಗೋಡು, ಕೃಷ್ಣಮೂರ್ತಿ ಭಟ್, ಮೋನಪ್ಪ ಮಾನಾಡು ಮೊದಲಾದವರು “ಸಭೆ ಹೊರಗಡೆ ಆಗುವುದು ಬೇಡ. ಸುಬ್ರಹ್ಮಣ್ಯದಲ್ಲೆ ಆಗಲಿ“ ಎಂದು ಹೇಳಿದರು. ಈ ವೇಳೆ ಮಾತನಾಡಿದ ಎಂ.ಬಿ.ಸದಾಶಿವರು, “ಈ ಹಿಂದೆ ರಮಣ ರೆಡ್ಡಿಯವರು ಜಿಲ್ಲಾಧಿಕಾರಿಯಾಗಿದ್ದಾಗ ಕದ್ರಿಯ ಕೃಷ್ಣ ಸಭಾಭವನದಲ್ಲಿ ಇತ್ತಂಡದವರನ್ನೂ ಕರೆಸಿ ಮಾತನಾಡಿದ ಉದಾಹರಣೆ ಇದೆ. ಮಾತುಕತೆಯ ವೇಳೆ ಜಿಲ್ಲಾಧಿಕಾರಿಯೂ ಇರಲಿ“ ಎಂದು ಹೇಳಿದರು. `’ಕೃಷ್ಣ ಸಭಾಭವನದಲ್ಲಿ ಆದರೂ ಆಗಬಹುದು`’ ಎಂದು ಪುರಾಣಿಕ್ ಹೇಳಿದರು. ಆಗ ನಿತ್ಯಾನಂದ ಮುಂಡೋಡಿಯವರು, “ಜಿಲ್ಲಾಧಿಕಾರಿಯವರೊಂದಿಗೆ ನಾನು ಕೂಡಾ ಮಾತನಾಡಿದ್ದೇನೆ. ಈ ವಿವಾದದ ಕೆಲವೊಂದು ಅಂಶಗಳು ನ್ಯಾಯಾಲಯದಲ್ಲಿದೆ. ಹಾಗಿರುವಾಗ ನಾನು ಬಂದು ಮಾತನಾಡುವಂತದ್ದೇನಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಬರಲಿಕ್ಕಿಲ್ಲ“ ಎಂದರು.

ಈ ಸಭೆಯಲ್ಲಿ ಎರಡೂ ಕಡೆಯಿಂದ ಯಾರೆಲ್ಲಾ ಭಾಗವಹಿಸುತ್ತಾರೆಂದು ಲಿಸ್ಟ್ ಮಾಡುವುದು ಒಳ್ಳೆಯದು. ಸಭೆಗೆ ಅನಪೇಕ್ಷಿತ ವ್ಯಕ್ತಿಗಳು, ಸಭೆಯನ್ನು ಕಳಂಕಿಸುವವರು ಬರುವುದು ಬೇಡ. ಯಾರು ಒಂದೇ ಮನ್ಸಸಿನಿಂದ ಸಮಸ್ಯೆ ಬಗೆಹರಿಯಬೇಕು ಎಂಬ ಭಾವನೆಯಲ್ಲಿರುತ್ತಾರೋ ಅಂತವರು ಮಾತ್ರ ಬಂದರೆ ಸಾಕು. ಪೇಜಾವರ ಶ್ರೀಗಳು ಹಿಂದೂ ಸಮಾಜದ ಶ್ರೇಷ್ಠರು. ಅವರು ಏನು ಜಡ್ಜ್‌ಮೆಂಟ್ ಕೊಡುತ್ತಾರೋ ಅದನ್ನು ನಾವು ಒಪ್ಪುವಂತಾಗಬೇಕು. ಕೆಲವು ಸ್ಥಾಪಿತ ಹಿತಾಸಕ್ತಿಗಳೆನಿಸಿಕೊಂಡವರು ಇರುತ್ತಾರೆ. ಅವರು ಬಂದರೆ ಇದು ಬಗೆಹರಿಯುವುದಿಲ್ಲ’` ಎಂದು ಮಹೇಶ್‌ಕುಮಾರ್ ಕರಿಕ್ಕಳ ಹೇಳಿದರು. ಆಗ ನಿತ್ಯಾನಂದ ಮುಂಡೋಡಿಯವರು “ಇಲ್ಲಿ ಎಲ್ಲರೂ ಕೂಡಾ ಭಕ್ತರೇ. ಸ್ಥಾಪಿತ ಹಿತಾಸಕ್ತಿ ಎಂದು ಹೇಳಲಾಗುವುದಿಲ್ಲ . ಯಾರು ಮುಖಂಡತ್ವ ವಹಿಸಿದ್ದಾರೋ ಅವರ ಮುಖಾಂತರ ನಾವು ಮಾತುಕತೆ ಮಾಡೋಣ. ಅವರು ಬೇಡ ಇವರು ಬೇಡ ಎಂಬ ವಿಚಾರ ಇಲ್ಲಿ ಇಲ್ಲ“ ಎಂದು ಹೇಳಿದರು.

ಈ ವೇಳೆ ಶರಣ್ ಪಂಪ್‌ವೆಲ್, “ವಿಶ್ವ ಹಿಂದೂ ಪರಿಷತ್ ಹಿಂದೂಗಳಲ್ಲಿ ಸಮಸ್ಯೆಗಳುಂಟಾದಾಗ ಪರಿಹಾರಕ್ಕೆ ಮುಂದಾಗುವ ಸಂಘಟನೆ. ಇಲ್ಲಿಯ ಸಮಸ್ಯೆ ಪರಿಹಾರವಾಗಲು ನಾವು ಕೂಡಾ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಹೀಗಾಗಿ ನಮ್ಮನ್ನು ಆಹ್ವಾನಿಸಬೇಕು ಎಂದು ಹೇಳಿ ಕುಳಿತುಕೊಳ್ಳುತ್ತಿದ್ದಂತೆ, ಗುರುಪ್ರಸಾದ್ ಪಂಜ “ನಿನ್ನೆ ನಿಮ್ಮ ರಾಜ್ಯಾಧ್ಯಕ್ಷ ಎಂ.ಬಿ.ಪುರಾಣಿಕ್‌ರು ಅಷ್ಟಮಂಗಲದಲ್ಲಿ ವಿಶ್ವಾಸ ಇಲ್ಲ ಎಂದು ಹೇಳಿದ್ದಾರೆ. ಎಂದು ಹೇಳ ತೊಡಗಿದಾಗ, “ಅದೆಲ್ಲಾ ಇಲ್ಲಿ ಬೇಡ. ವಿವಾದ ಪರಿಹಾರಗೊಳ್ಳಲು ಇಲ್ಲಿ ಸಭೆ ನಡೆಯುತ್ತಿದೆ, ನಾವು ಜಗಳ ಮಾಡಲು ಬಂದಿಲ್ಲ“ ಎಂದು ಶರಣ್ ಪಂಪ್‌ವೆಲ್ ಹೇಳಿದರು.ಆಗ ಮಹೇಶ್ ಕರಿಕ್ಕಳ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮತ್ತಿತರರು ಗುರುಪ್ರಸಾದ್‌ಗೆ ಕುಳಿತುಕೊಳ್ಳುವಂತೆ ಸೂಚಿಸಿದರು.

ಚರ್ಚೆ ಚಕಮಕಿಯ ಹಂತಕ್ಕೆ ಬರುವ ಲಕ್ಷಣ ಕಂಡ ಕೂಡಲೇ ಪೇಜಾವರ ಸ್ವಾಮೀಜಿಯವರು ಕುಳಿತಲ್ಲಿಂದ ಎದ್ದು ಹಣ್ಣು ಮತ್ತು ಅಕ್ಷತೆ ಕೊಡತೊಡಗಿದರು.

“ಇಲ್ಲಿ ಚರ್ಚೆ ಬೇಡ. ಮಠದ ಕಡೆಯಿಂದ ಯಾರು ಬರುತ್ತಾರೆ ಎಂದು ಅವರು ಪಟ್ಟಿಕೊಡಲಿ. ದೇವಸ್ಥಾನದ ಕಡೆಯಿಂದ ಯಾರೆಲ್ಲ ಬರುತ್ತೇವೆಂದು ನಾವು ಪಟ್ಟಿ ಕೊಡುತ್ತೇವೆ. ಎಲ್ಲರೂ ಒಮ್ಮತದಿಂದ ಕುಳಿತು ಮಾತನಾಡೋಣ“ ಎಂದು ನಿತ್ಯಾನಂದ ಮುಂಡೋಡಿಯವರು ಹೇಳಿ ಎಲ್ಲರನ್ನೂ ಸುಮ್ಮನಿರಿಸಿದರು.

ಹಿತರಕ್ಷಣಾ ವೇದಿಕೆಯವರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದ ಕಿಶೋರ್ ಶಿರಾಡಿಯವರು ಮಾತುಕತೆ ವೇಳೆ ಸ್ಥಳೀಯ ಮುಖಂಡರನ್ನು ಕರೆಯಬೇಕು ಎಂದು ಹೇಳಿದರು. ಮಹೇಶ್ ಕರಿಕ್ಕಳರವರು, ಈ ಹಿಂದೆ ದೇವಳದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಪ್ರತಿ ಹಾಗೂ ಕೋರ್ಟು ಕೇಸಿನ ತೀರ್ಪಿನ ಪ್ರತಿಯನ್ನು ಪೇಜಾವರ ಸ್ವಾಮೀಜಿಯವರ ಕೈಯಲ್ಲಿ ಕೊಟ್ಟು, ದೇವಸ್ಥಾನಕ್ಕೆ ಮತ್ತು ಮಠಕ್ಕೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನು ನಾವು ಉಡುಪಿಗೆ ಬಂದು ನಾಳೆಯೇ ನಿಮಗೆ ಕೊಡುತ್ತೇವೆ“ ಎಂದರು. ಬಳಿಕ ಅವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಸಭೆ ಮುಕ್ತಾಯಗೊಂಡು ಪೇಜಾವರ ಸ್ವಾಮೀಜಿ ಉಡುಪಿಗೆ ತೆರಳಿದರು.

ದೇವಳದ ಆಡಳಿತ ಕಚೇರಿಯಲ್ಲಿ ಸಭೆ ಮುಗಿದ ಬಳಿಕ ಎಂ.ಬಿ.ಪುರಾಣಿಕ್ ಹೊರಬರುತ್ತಿದ್ದ ವೇಳೆ ಗುರುಪ್ರಸಾದ್ ಪಂಜ ಅವರೊಡನೆ ಮಾತನಾಡಲು ಪ್ರಯತ್ನಿಸಿದಾಗ ಪುರಾಣಿಕರು ಮಾತನಾಡಲು ನಿರಾಕರಿಸಿದ ಘಟನೆಯೂ ನಡೆಯಿತು.
ಉಡುಪಿ ಕೃಷ್ಣಮಠದಲ್ಲಿ ಮಾತುಕತೆಯ ವೇಳೆ ಪುರಾಣಿಕ್ ಅಷ್ಟಮಂಗಲ ಪ್ರಶ್ನೆಯಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆಂದು ಗುರುಪ್ರಸಾದ್ ಹಾಗೂ ಮಹೇಶ್ ಕರಿಕ್ಕಳ ಸುಬ್ರಹ್ಮಣ್ಯಕ್ಕೆ ಬಂದು ಇತರರಲ್ಲಿ ತಿಳಿಸಿದ್ದರು. ಭಕ್ತ ಹಿತರಕ್ಷಣಾ ವೇದಿಕೆ ಸಭೆಯಲ್ಲೂ ಇದು ದೊಡ್ಡ ಚರ್ಚೆಗೆ ಕಾರಣವಾಗಿತ್ತು ಎಂದು ಹೇಳಲಾಗಿದೆ.

ಮಠದಲ್ಲಿ ಅಭಿಪ್ರಾಯ ಆಲಿಕೆ-ದೇವಸ್ಥಾನದಲ್ಲಿ ಅಭಿಪ್ರಾಯ ಆಲಿಸಿಲ್ಲ
ಪೇಜಾವರ ಸ್ವಾಮೀಜಿಯವರು ಸುಬ್ರಹ್ಮಣ್ಯಕ್ಕೆ ಬಂದು ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಮಠಕ್ಕೆ ತೆರಳಿದರು. ಮಠದ ಮಹಡಿಯಲ್ಲಿ ಮಠದ ಹಿತೈಷಿಗಳನ್ನು ಮತ್ತು ವಿಶ್ವ ಹಿಂದೂ ಪರಿಷತ್‌ನವರನ್ನು ಕರೆಸಿ, ಮಾಧ್ಯಮದವರನ್ನು ಹೊರಗಿಟ್ಟು, ಮುಚ್ಚಿದ ಬಾಗಿಲ ಸಭೆ ನಡೆಸಲಾಯಿತು.

ಆ ಸಭೆಯಲ್ಲಿ ಪೇಜಾವರ ಸ್ವಾಮೀಜಿ, ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮಠದ ಆಡಳಿತಾಧಿಕಾರಿಯಾದ ಸ್ವಾಮೀಜಿಯವರ ಸಹೋದರ ಸುದರ್ಶನ್, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕುರಾ, ವಿ.ಹಿಂ.ಪ.ದ ರಾಜ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್, ಜಗದೀಶ ಶೇಣವ, ಡಾ. ಕೆ.ಪ್ರಸನ್ನ, ಭಜರಂಗದಳ ದ ಮುರಳೀಕೃಷ್ಣ ಹಸಂತಡ್ಕ, ಮೊದಲಾದ ಹಲವರು ಇದ್ದರು. ಸ್ವಲ್ಪ ಹೊತ್ತಿನಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವರು ಹಾಗೂ ದೇವಸ್ಥಾನದ ಟ್ರಸ್ಟಿಯೂ ಆಗಿರುವ ಕೇನ್ಯ ರವೀಂದ್ರನಾಥ ಶೆಟ್ಟಿಯವರು ಅಲ್ಲಿಗೆ ಬಂದರು. ಅವರನ್ನು ಬಾಗಿಲು ತೆರೆದು ಒಳಗೆ ಬರಮಾಡಿಕೊಳ್ಳಲಾಯಿತು.

ಈ ಸಭೆಯಲ್ಲಿ ಉಡುಪಿ ಮಠಕ್ಕೆ ಬಂದು ಮಹೇಶ್ ಕರಿಕ್ಕಳ ರವರು ಮಠದ ಬಗ್ಗೆ ಹೇಳಿದ ವಿಚಾರಗಳನ್ನು ಪೇಜಾವರ ಸ್ವಾಮೀಜಿಯವರು ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನ ಸ್ವಾಮೀಜಿಯವರೊಡನೆ ಕೇಳಿದರೆಂದೂ, ವಿದ್ಯಾಪ್ರಸನ್ನರು ಮಠದ ಪರವಾಗಿ ಇರುವ ದಾಖಲೆಗಳನ್ನು ವಿವರಿಸಿದರಲ್ಲದೆ, “ಮಠದಲ್ಲಿ ಸರ್ಪ ಸಂಸ್ಕಾರ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಕೆಲವು ಪ್ರಮುಖರು ಫೋನ್ ಮಾಡಿ ಪ್ರತ್ಯೇಕವಾಗಿ ನಮಗೆ ಪೂಜೆಯ ವ್ಯವಸ್ಥೆ ಮಾಡಿ ಕೊಡಬೇಕೆಂದು ಕೇಳುವಾಗ, ಆಗುವುದಿಲ್ಲ ಎಂದು ಹೇಳಲಾಗುವುದಿಲ್ಲವೆಂದೂ, ಹಾಗೆ ಬರುವ ಭಕ್ತಾದಿಗಳಿಗೆ ಮಾತ್ರ ಮಠದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮಾಡಲಾಗುತ್ತಿದ್ದು, ಅದನ್ನು ನಿರ್ವಹಿಸಲು ಸುಮಾರು 250 ರಷ್ಟು ಬ್ರಾಹ್ಮಣರು ಇರುವುದಾಗಿಯೂ, ನಿಲ್ಲಿಸಿದರೆ ಅವರ ಜೀವನಕ್ಕೆ ತೊಂದರೆಯಾಗುವುದಾಗಿಯೂ ಹೇಳಿದರೆನ್ನಲಾಗಿದೆ.
ನರಸಿಂಹ ಗುಡಿಯಲ್ಲಿ ಗಣಪತಿಯ ಮೂರ್ತಿ ಇರಿಸಬೇಕೆಂದು ಅವರು ಹೇಳುವುದಿದ್ದರೆ, ಮೂಲಮೃತ್ತಿಕೆಯನ್ನು ಹಿಂದೆ ಸ್ವಾಮೀಜಿಗಳು ತೆಗೆದು ಕೊಡುತ್ತಿದ್ದ ವಿಚಾರ, ದೇವಳದ ಆಡಳಿತವನ್ನು ಸ್ವಾಮೀಜಿಗಳು ನೋಡಿಕೊಳ್ಳುತ್ತಿದ್ದ ವಿಚಾರದ ಆಧಾರದಲ್ಲಿ ನಾವೂ ಕೇಳಬಹುದು ಎಂದೂ ಸ್ವಾಮೀಜಿ ಹೇಳಿದರೆನ್ನಲಾಗಿದೆ. ಸರ್ಪ ಸಂಸ್ಕಾರದ ಮೊದಲ ದಿನದ ಕಾರ್ಯವನ್ನು ನಾವು ದರ್ಪಣ ತೀರ್ಥ ನದಿಯ ಆಚೆ ಬದಿಯಲ್ಲಿ ಮಾಡುತ್ತಿದ್ದು, ದೇವಸ್ಥಾನಕ್ಕೆ ಯಾವ ಸೂತಕವೂ ತಟ್ಟದಂತೆ ನೋಡಿಕೊಳ್ಳುವುದಾಗಿಯೂ ಸ್ವಾಮೀಜಿ ವಿವರಿಸಿದರೆಂದು ತಿಳಿದು ಬಂದಿದೆ.

ದೇವಳದಲ್ಲಿ ಅಹವಾಲು ಆಲಿಕೆ ಇಲ್ಲ: ಅಲ್ಲಿ ಸಭೆ ಮುಗಿಸಿದ ಬಳಿಕ ಪೇಜಾವರ ಸ್ವಾಮೀಜಿಯವರು ಸಮಾಲೋಚನೆಗಾಗಿ ದೇವಳಕ್ಕೆ ಬಂದರು. ದೇವಳದ ಕಚೇರಿ ಕಟ್ಟಡದ ಮಹಡಿಯಲ್ಲಿ ಸಭೆ ಆಯೋಜಿತವಾಗಿತ್ತು. ಈ ಸಭೆಗೆ ಪೂರ್ವಭಾವಿಯಾಗಿ ಪುರ್ವಾಹ್ನ ಭಕ್ತ ಹಿತರಕ್ಷಣಾ ವೇದಿಕೆ ಯ ಸಭೆ ನಡೆದು, ತಾವು ಸಭೆಯಲ್ಲಿ ಯಾವ ನಿಲುವಿನಿಂದ ಮಾತನಾಡಬೇಕೆಂದು ನಿರ್ಧಾರವಾಗಿತ್ತು. ಆದರೆ ಪೇಜಾವರರು ಸಭೆಯಲ್ಲಿ ‘ಅಭಿಪ್ರಾಯ ಹೇಳುವುದು ಬೇಡವೆಂದೂ, ಎರಡೂ ಕಡೆಯವರು ಇದ್ದು ಬೇರೆ ಕಡೆ 10 ತಾರೀಕಿನೊಳಗೆ ಸಭೆ ಮಾಡುವ` ಎಂದು ಹೇಳಿದ್ದರಿಂದ ವಾದ ಮಂಡನೆಗೆ ಸಿದ್ಧರಾಗಿ ಬಂದಿದ್ದವರಿಗೆ ಅವಕಾಶ ಆಗಲಿಲ್ಲ. ಈ ಬಗ್ಗೆ ಸಭೆಯಲ್ಲಿದ್ದ ಹಲವರು ಸಭೆಯ ಬಳಿಕ ಅಸಮಾಧಾನ ಹೊರಹಾಕುತ್ತಿದ್ದುದು ಕೇಳಿ ಬಂತು.

ಮಂಗಳೂರಿನಲ್ಲಿ ಸಭೆಗೆ ಆಕ್ಷೇಪ: ಜೂ.10ಕ್ಕೆ ಸಭೆ ಅನುಮಾನ
ಜೂ.೧೧ರ ನಂತರ ತಾನು ಪ್ರವಾಸದಲ್ಲಿರುವುದರಿಂದ ಜೂ.೧೦ರ ಒಳಗೆ ಮಾತುಕತೆ ನಡೆಸೋಣ ಎಂದು ಪೇಜಾವರ ಸ್ವಾಮೀಜಿ ಸಭೆಯಲ್ಲಿ ಹೇಳಿದ್ದರು. ಅದಕ್ಕೆ ದೇವಸ್ಥಾನದ ಕಡೆಯವರೂ ಒಪ್ಪಿದ್ದರು. 10 ನೇ ತಾರೀಕಿನಂದು ಮಂಗಳೂರಿನಲ್ಲಿ ಸಭೆ ನಡೆಯಬಹುದೆಂದು ಅಭಿಪ್ರಾಯ ಮೂಡಿತ್ತು. ಆದರೆ ಮಂಗಳೂರಿನಲ್ಲಿ ಸಭೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿರುವುದು ಹಾಗೂ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮಾಡುವ ಹಾಗೂ ಮಾಡಬಾರದೆನ್ನುವ ನಿಲುವಿಗೆ ಎರಡೂ ಕಡೆಯವರು ಅಂಟಿಕೊಳ್ಳುವ ಸಾಧ್ಯತೆ ಕಂಡು ಬರುತ್ತಿರುವುದರಿಂದ ಜೂ.10ರಂದು ಸಭೆ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಜೂ.೧೦ರಂದು ಮಂಗಳುರಿನ ಕದ್ರಿಯಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಜೂ.೮ರಂದು ಹೇಳಲಾಗುತ್ತಿತ್ತು. ಆದರೆ ಭಕ್ತರ ಹಿತರಕ್ಷಣಾ ವೇದಿಕೆಯಲ್ಲಿರುವ ಸುಬ್ರಹ್ಮಣ್ಯ ಗ್ರಾಮಸ್ತರು, ಸಂಧಾನ ಸಭೆಯನ್ನು ಸುಬ್ರಹ್ಮಣ್ಯ ಹೊರತು ಪಡಿಸಿ, ಹೊರಗಡೆ ಮಾಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ’ ಅವರ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ಅಭಿಪ್ರಾಯಗಳು ವಿನಿಮಯವಾಗುತ್ತಿದೆ.

ಜತೆಗೆ “ ಭಕ್ತರ ಪ್ರಮುಖ ಬೇಡಿಕೆಗಳಾದ ಸರ್ಪಸಂಸ್ಕಾರ ಆಶ್ಲೇಷ ಬಲಿ- ಮಠದಲ್ಲಿ ಸ್ಥಗಿತ, ಗಣಪತಿ ಪ್ರತಿಷ್ಠಾಪನೆ ಮತ್ತು ಸುಬ್ರಹ್ಮಣ್ಯ ಮಠ ಎಂದು ನಮೂದಿಸಬಾರದು ಎಂಬುದಕ್ಕೆ ಮಠದವರು ಒಪ್ಪುವವುದಿಲ್ಲವಾದರೆ ನಾವು ಮಾತುಕತೆಗೆ ಬರುವ ಅಗತ್ಯವಿಲ್ಲ“ ಎಂದು ಭಕ್ತರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಕರಿಕ್ಕಳರವರು ಪೇಜಾವರ ಮಠದ ವಕ್ತಾರರೊಡನೆ ಜೂ.೮ರಂದು ಹೇಳಿದ್ದಾರೆಂದು ತಿಳಿದು ಬಂದಿದೆ.

ಮಹೇಶ್ ಕುಮಾರ್ ಕರಿಕ್ಕಳರನ್ನು ಈ ಬಗ್ಗೆ ಇಚಾರಿಸಿದಾಗ ‘ತಾನು ಹಾಗೆ ಹೇಳಿರುವುದು ನಿಜವೆಂದು’ ಅವರು ತಿಳಿಸಿದ್ದಾರೆ. 10ನೇ ತಾರೀಕಿಗೆ ಸಭೆ ಇದೆ ಎಂದು ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ನಾವು ನಮ್ಮ ವಿಚಾರವನ್ನು ಉಡುಪಿಗೆ ಹೋಗಿ ಸ್ವಾಮೀಜಿಯವರಿಗೂ ಹೇಳಿದ್ದೇವೆ. ನಿನ್ನೆ ಫೋನ್ ಮಾಡಿದ್ದ ಪೇಜಾವರ ಮಠದ ವಿಷ್ಣು ಎಂಬವರೊಡನೆಯೂ ಹೇಳಿದ್ದೇನೆ. ಮಾತುಕತೆಗೆ ಸುಬ್ರಹ್ಮಣ್ಯದಿಂದ ಹೊರಗಡೆ ಹೋಗುವುದಕ್ಕೆ ನಮ್ಮ ಸ್ಥಳೀಯ ಜನರ ವಿರೋಧವಿದೆ“ ಎಂದು ಹೇಳಿದರು.

ಸಂಪುಟ ನರಸಿಂಹ ಮಠದ ಆಡಳಿತಾಧಿಕಾರಿಯಾಗಿರುವ ಸುದರ್ಶನ್‌ರನ್ನು ಸಂಪರ್ಕಿಸಿ ವಿಚಾರಿಸಿದಾಗ “10 ನೇ ತಾರೀಕಿನ ಸಭೆಯ ಬಗ್ಗೆ ಮಾಹಿತಿ ಬಂದಿಲ್ಲ. ಕರೆ ಬಂದರೆ ಹೋಗುತ್ತೇವೆ“ ಎಂದರು. ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಸಂಪರ್ಕಿಸಿ ವಿಚಾರಿಸಿದಾಗ `ನಾವು ಹಿಂದೆ ಆಗಿರುವ ಕೋರ್ಟ್ ತೀರ್ಪಿನ ಆಧಾರದಲ್ಲಿ ಮತ್ತು ಭಕ್ತರ ಧಾರ್ಮಿಕ ಸ್ವಾತಂತ್ರ್ಯದ ಆಧಾರದಲ್ಲಿ ನಮ್ಮ ನಿಲುವಿಗೆ ಬದ್ಧರಾಗಿರುತ್ತೇವೆ. ಪೇಜಾವರ ಸ್ವಾಮೀಜಿಯವರ ಮಧ್ಯಸ್ಥಿಕೆಯಲ್ಲಿ ಮಾತುಕತೆಯಲ್ಲಿ ವಿವಾದ ಪರಿಹಾರವಾಗದಿದ್ದರೆ ಕೋರ್ಟ್ ತೀರ್ಪಿನ ಮೂಲಕ ವಿವಾದ ಬಗೆ ಹರಿಯಬೇಕು. ಅದರ ನಡುವಿನಲ್ಲಿ ಅಶಾಂತಿಯ ಕೃತ್ಯಗಳು ನಡೆಯಬಾರದು” ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.