ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಬಿಳಿನೆಲೆ ವಲಯದ ಕೋಡಿಂಬಾಳ ಗ್ರಾಮದ ಎ ಮತ್ತು ಬಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ. 9ರಂದು ಕೋಡಿಂಬಾಳದ ಓಂತ್ರಡ್ಕ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಸಭಾಭವನದಲ್ಲಿ ನಡೆಯಿತು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಶ್ರೀ.ಕ್ಷೇ.ಧ ಗ್ರಾ.ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ ಸಂಸ್ಕಾರಯುತ ಸ್ವಾವಲಂಬಿ ಬದುಕು, ಆರ್ಥಿಕ ಸಬಲೀಕರಣದೊಂದಿಗೆ ಸದೃಢ ಸಮಾಜ ನಿರ್ಮಾಣದ ಮೂಲಕ ಭವ್ಯ ಭಾರತದ ಸಮಗ್ರ ಅಭಿವೃದ್ಧಿಯ ಧ್ಯೇಯ ನಮ್ಮ ಯೋಜನೆಯಲ್ಲಿದೆ, ಅನೇಕ ಜನಪರ ಯೋಜನೆಗಳನ್ನು ಶ್ರಮಿಕ ವರ್ಗದ ಜನರ ಮೂಲಕ ಅನುಷ್ಟಾನ ಮಾಡಿ ಗ್ರಾಮೀಣ ಭಾಗದ ಜನರಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ.ಇದರಿಂದಾಗಿ ಇಂದು ಅನೇಕ ಜನ ಸಂತೃಪ್ತ ಬದುಕು ಕಟ್ಟಿಕೊಂಡಿದ್ದು ಸ್ವಾಲಂಬಿಗಳಾಗಿದ್ದಾರೆ ಎಂದರು.
ತಾ.ಪಂ ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಇಂದು ಸಮಾಜದಲ್ಲಿ ಕ್ರಾಂತಿಕಾರಿ ಧನಾತ್ಮಕ ಬದಲಾವಣೆಯಾಗಿದ್ದು ಜನರಲ್ಲಿ ಪರಸ್ಪರ ಸೌಹಾರ್ದತೆ ಮನೋಭಾವ ಹಾಗೂ ಅನ್ಯೋನ್ಯತೆ ವೃದ್ಧಿಯಾಗಿದೆ ಎಂದರು.
ಕೋಡಿಂಬಾಳ ಬಿ ಒಕ್ಕೂಟದ ಅಧ್ಯಕ್ಷ ರುಕ್ಮಯ್ಯ ಗೌಡ ಅಧ್ಯಕ್ಷತೆ ವಹಿಸಿದ್ದರು. ಓಂತ್ರಡ್ಕ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ತುಕಾರಾಮ ಗೌಡ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು. ಜನಜಾಗೃತಿ ವೇದಿಕೆಯ ಬಿಳಿನಲೆ ವಲಯಾಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮಾಧವ ಭಟ್, ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ಧನ ಎಸ್ ಅತಿಥಿಗಳಾಗಿ ಭಾಗವಹಿಸಿದ್ದರು. ಎ ಒಕ್ಕೂಟದ ನೂತನ ಅಧ್ಯಕ್ಷ ಮಾಧವ ಕೊಪ್ಪ ಹಾಗೂ ಬಿ ಒಕ್ಕೂಟದ ನೂತನ ಅಧ್ಯಕ್ಷೆ ಕುಸುಮಾ ಮಾತನಾಡಿ ಎಲ್ಲರ ಸಹಕಾರ ಕೋರಿದರು.
ಎ ಒಕ್ಕೂಟದ ನಿರ್ಗಮನ ಪದಾಧಿಕಾರಿಗಳಾದ ಆನಂದ, ವೆಂಕಪ್ಪ, ಪ್ರಮೀಳಾ, ಅಣ್ಣಪ್ಪ, ವಾರಿಜಾಕ್ಷಿ, ಶ್ರೀಕಾಂತ್, ರಜಿಯಾ, ಕುಶಾಲಪ್ಪ, ಬಿ ಒಕ್ಕೂಟದ ನಿರ್ಗಮನ ಪದಾಧಿಕಾರಿಗಳಾದ ರುಕ್ಮಯ್ಯ, ಐತಪ್ಪ, ಶಕುಂತಳಾ, ಪುಷ್ಪಾವತಿ, ಗಿರಿಜಾ, ಪುರುಷೋತ್ತಮ, ಗಿರಿಜಾ, ನೆಬಿಸಾ, ರೋಹಿತ ಉಪಸ್ಥಿತರಿದ್ದರು. ನಿರ್ಗಮನ ಪದಾಧಿಕಾರಿಗಳು ದಾಖಲಾತಿಗಳನ್ನು ಹಸ್ತಾಂತರಿಸುವ ಮೂಲಕ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಓಂತ್ರಡ್ಕ ಶಾಲೆಯ ವತಿಯಿಂದ ಶಾಲೆಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವಂತೆ ಯೋಜನೆಯ ಸಮುದಾಯ ಸೇವಾ ವಿಭಾಗಕ್ಕೆ ಮನವಿ ಸಲ್ಲಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ನಳಿನಿ ಪರಪ್ಪು ಸ್ವಾಗತಿಸಿದರು. ಕಡಬ ಗ್ರಾ.ಪಂ ಸದಸ್ಯೆ ನೇತ್ರಾ ವಂದಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೆಂಕಪ್ಪ ವರದಿ ವಾಚಿಸಿದರು.