ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪುತ್ತೂರು ಹಾಗೂ ವಿಜ್ಞಾನ ಸಂಘ ಮತ್ತು ಇಕೋ ಕ್ಲಬ್ಗಳ ಜಂಟಿ ಆಶ್ರಯದಲ್ಲಿ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕಲಿಕೆಯ ಜೊತೆಗೆ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಯವರು ಈ ವರ್ಷದ ಪರಿಸರ ದಿನದ ಧ್ಯೇಯ ವಾಕ್ಯವಾದ ವಾಯು ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ಮತ್ತು ಪರಿಸರ ಶುಚಿತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಅಶ್ವತ್ಥ ಗಿಡಕ್ಕೆ ಕೆಂಪು ಹೂ ಮಣ್ಣನ್ನು ಹಾಕುವ ಮೂಲಕ ಅಧ್ಯಕ್ಷರು ಮತ್ತು ಗಣ್ಯರು ಸಂತಸದಿಂದ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ರೂಪಕಲಾ ಕೆ ಯವರು ಅತಿಥಿಗಳಿಗೆ ಬೀಜದ ಉಂಡೆಯನ್ನು ನೀಡಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮದ ನಡುವೆ ಪರಿಸರ ಗೀತೆ ಹಾಡಿ ರಂಜಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಪ್ರಣತಿ ಮತ್ತು ಮೋಕ್ಷಿತಾ ರವರು ಸಾಮಾನ್ಯವಾಗಿ ಪರಿಸರದಲ್ಲಿ ದೊರಕುವ ತರಕಾರಿ ಮತ್ತು ಹಣ್ಣುಗಳ ಬೀಜಗಳ ಪರಿಚಯವನ್ನು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು. ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಥನಿ ವಿದ್ಯಾಸಂಸ್ಥೆಯ ಶಿಕ್ಷಕಿ ಮೈತ್ರಿ ಮತ್ತು ಸ್ಕೌಟ್ & ಗೈಡ್ಸ್ಗಳು, ಚಿತ್ರಕಲಾ ಶಿಕ್ಷಕ ರುಕ್ಮಯ್ಯ ಗೌಡ, ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿ ಪ್ರದೀಪ್ ಎಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ಬೀಜದ ಉಂಡೆಯನ್ನು ವಿತರಿಸಲಾಯಿತು.