ರಾಮಕುಂಜ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನ ಬಳಿಯಿರುವ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ದಿನಸಿ ವಸ್ತುಗಳು ಹಾಗೂ ನಗದು ಕಳವು ಮಾಡಿದ ಘಟನೆ ಜೂ.8ರಂದು ತಡ ರಾತ್ರಿ ನಡೆದಿದೆ.
ಪಲ್ಲಡ್ಕ ನಿವಾಸಿ ಸೋಮನಾಥ ಗೌಡ ಎಂಬರಿಗೆ ಸೇರಿದ ದಿನಸಿ ಹಾಗೂ ಹೋಟೇಲ್ ಹೊಂದಿರುವ ಅಂಗಡಿ ಕಟ್ಟಡದ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಸುಮಾರು ಹತ್ತು ಸಾವಿರ ರೂ. ಮೌಲ್ಯದ ದಿನಸಿ ಸೊತ್ತುಗಳು ಹಾಗೂ ಮೂರು ಸಾವಿರ ರೂ. ನಗದು ಕಳವುಗೈದಿದ್ದಾರೆ. ಸೋಮನಾಥರವರು ಜೂ.8ರಂದು ರಾತ್ರಿ 9 ಗಂಟೆಯ ತನಕ ಅಂಗಡಿಯಲ್ಲಿದ್ದು, ಬಳಿಕ ಮನೆಗ ಹೋಗಿದ್ದಾರೆ. ಜೂ.9ರಂದು ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಬೀಗ ಮುರಿದು ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದ್ದು, ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗರವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.