ಕೋಲ್ಪಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಬೆಳಾಲು ಇದರ ವತಿಯಿಂದ ಬೆಳಾಲು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ, ಕೋಲ್ಪಾಡಿ ಇಲ್ಲಿಗೆ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ನ.9ರಂದು ಶಾಲೆಯಲ್ಲಿ ಶಾಲಾ ಎಸ್ ಡಿಎಂಸಿ ನೇತೃತ್ವದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಹೆಚ್. ಪದ್ಮ ಗೌಡರು ನೆರವೇರಿಸಿ, ಸಂಘದ ಸದಸ್ಯರ ವ್ಯವಹಾರದಿಂದ ಸಿಕ್ಕಿದ ಲಾಭಾಂಶದಲ್ಲಿ ಸಂಘವು ಪೂರೈಸಿದ ಈ ಶುದ್ಧ ನೀರಿನ ಸೌಲಭ್ಯವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಸಂಘದ ನಿರ್ದೇಶಕರಾದ ಸುಲೈಮಾನ್ ರವರು ಮಾತನಾಡಿ, ಸಂಘವು ನೀಡಿದ ಕೊಡುಗೆಗಾಗಿ ಇತರರಿಗೆ ಮಾದರಿಯೋಗ್ಯ ಸರಳ ಕೃತಜ್ಞತಾ ಸಮಾರಂಭ ಏರ್ಪಡಿಸಿದ್ದಕ್ಕಾಗಿ ಶಾಲೆಯವರನ್ನು ಕೊಂಡಾಡಿದರು. ಮತ್ತು ಬೆಳಾಲು ಎಸ್ ಡಿಎಂ ಹೈಸ್ಕೂಲ್ ತಾಲೂಕಿನ ಏಕೈಕ “ಉತ್ತಮ ಕನ್ನಡ ಶಾಲೆ” ಯಾಗಿ ರಾಜ್ಯ ಮಟ್ಟದ 18,000 ಶಾಲೆಗಳಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದ ಸಂತಸದ ವಿಚಾರವನ್ನು ಕೂಡಾ ಹೈಸ್ಕೂಲ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರ ನೆಲೆಯಲ್ಲಿ ಹಂಚಿಕೊಂಡರು.
ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ತನ್ನ ಸಾಮಾಜಿಕ ಜವಾಬ್ದಾರಿ ನೆಲೆಯಲ್ಲಿ ಬೆಳಾಲು ಗ್ರಾಮದ ಏಳು ಅಂಗನವಾಡಿಗಳಿಗೆ ಮತ್ತು ನಾಲ್ಕು ಶಾಲೆಗಳಿಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉಚಿತವಾಗಿ ಒದಗಿಸಿದೆ. ಇದೇ ರೀತಿಯಲ್ಲಿ ಗ್ರಾಮದ ಹಲವಾರು ಕಾರ್ಯಕ್ರಮಗಳಿಗೆ ಸಂಘವು ಸಾಧ್ಯವಾದಷ್ಟು ನೆರವು ನೀಡುತ್ತಿದೆ.
ಎಸ್ ಡಿಎಂಸಿ ಅಧ್ಯಕ್ಷರಾಗಿರುವ ಮಾಧವ ಗೌಡರು ಅಧ್ಯಕ್ಷತೆ ವಹಿಸಿದ್ದು ನೀಡಿದ ಕೊಡುಗೆಗಾಗಿ ಧನ್ಯವಾದ ಸಲ್ಲಿಸಿದರು.
ಸಹಕಾರಿ ಸಂಘದ ಉಪಾಧ್ಯಕ್ಷರಾಗಿರುವ ಸುರೇಂದ್ರ ಗೌಡ, ನಿರ್ದೇಶಕರುಗಳಾದ ದಾಮೋದರ ಗೌಡ, ವಿಜಯ ಗೌಡ, ಮಾಣಿಗ, ಸಿಇಓ ನಾರಾಯಣ ಗೌಡ, ಶಾಲಾ ಮುಖ್ಯ ಅಧ್ಯಾಪಕರು ಮತ್ತು ಶಿಕ್ಷಕರು, CRP ಪ್ರತಿಮಾ, SDMC ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಗೌರವ ಶಿಕ್ಷಕ ಕರಿಯಣ್ಣ ಗೌಡರು ಧನ್ಯವಾದ ಸಲ್ಲಿಸಿದರು.