ಕೊಡಗು ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುನ್ನೆಚ್ಚರಿಕೆ ನೀಡಿದೆ. ಜೂನ್ 15ರಿಂದ 20ರ ನಡುವೆ ಮಳೆಯ ಪ್ರಮಾಣ ತಗ್ಗಲಿದೆ.20ರ ನಂತರ ಮತ್ತೆ ಮುಂಗಾರು ಮಳೆ ಚುರುಕು ಪಡೆಯಲಿದ್ದು ಮಳೆ ಹಾಗೂ ಗಾಳಿ ವೇಳೆ ಸಾರ್ವಜನಿಕರು, ಜಿಲ್ಲೆಗೆ ಬರುವ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ನಾಪೋಕ್ಲು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೂ ಬಿರುಸಿನ ಮಳೆ ಸುರಿಯಿತು. ನಾಪೋಕ್ಲು ಹಾಗೂ ಭಾಗಮಂಡಲಕ್ಕೆ ವಿದ್ಯುತ್ ಪೂರೈಸುವ ಮಾರ್ಗದಲ್ಲಿ ಸೋಮವಾರ ರಾತ್ರಿ ಗಾಳಿಗೆ ಕಂಬಗಳು ಧರೆಗುರುಳಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.