ಪುತ್ತೂರು: ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ, ಶ್ರೀವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಇದರ ವತಿಯಿಂದ ಒಡಿಯೂರು ಗ್ರಾಮ ವಿಕಾಸ ಯೊಜನೆಯ ಸಹಭಾಗಿತ್ವದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿಯವರ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ಗ್ರಾಮೋತ್ಸವದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ಜೂ.12ರಂದು ನೆಲ್ಲಿಕಟ್ಟೆ ಹಿ.ಪ್ರಾ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಒಡಿಯೂರು ಗುರುದೇವಾ ಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡಾ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರಾಕೃತಿಕ ಸಂಪತ್ತುಗಳನ್ನು ವ್ಯರ್ಥವಾಗಿ ಬಳಸುವುದೇ ಅಧಿಕ. ಇದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುವುದಲ್ಲದೆ ವಿನಾಶವನ್ನು ನಾವೇ ತಂದುಕೊಳ್ಳುತ್ತಿದ್ದೇವೆ. ಪ್ರಾಕೃತಿಕ ಸಂಪತ್ತುಗಳನ್ನು ಹಿತ ಮಿತವಾಗಿ ಬಳಸಿದಾಗ ಮಾನವ, ಪ್ರಾಣಿ, ಪಕ್ಷಿಗಳು ಬದುಕುವುದರ ಜೊತೆಗೆ ನಮ್ಮ ಪರಿಸರ ಉಳಿಯುವುದಲ್ಲದೆ ದೇಶವೂ ಉಳಿಯಲು ಸಾಧ್ಯ ಎಂದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಅಬೂಬಕ್ಕರ್ ಆರ್ಲಪದವು ಮಾತನಾಡಿ, ಒಡಿಯೂರು ಸ್ವಾಮೀಜಿಯವರ ಜನ್ಮ ದಿನದ ಅಂಗವಾಗಿ ವನಮಹೋತ್ಸವವನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ನಡೆಸುವುದು ವಿಶಿಷ್ಠ ಕಾರ್ಯಕ್ರಮವಾಗಿದೆ ಎಂದರು.
ಶಾಲೆ ದತ್ತು:
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ನಯನಾ ರೈ, ನೆಲ್ಲಿಕಟ್ಟೆ ಹಿ.ಪ್ರಾ ಶಾಲೆ ನಗರದ ಮಧ್ಯ ಭಾಗದಲ್ಲಿದ್ದರೂ ಯಾವುದೇ ಅಭಿವೃದ್ದಿ ಹೊಂದಿಲ್ಲ. ಈ ಶಾಲೆಯನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ಶಿಕ್ಷಣ ಸಂಪನ್ಮೂಲ ಕೇಂದ್ರದ ಮುಖಾಂತರ ಇತರ ಸಂಘ ಸಂಸ್ಥೆಗಳ ಸಹಕಾರ ಹಾಗೂ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನೆಲ್ಲಿಕಟ್ಟೆ ಶಾಲೆಯನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಲಾಗಿದೆ.
ಗುರುದೇವ ಸೇವಾ ಬಳಗದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಶಾಲಾ ಮುಖ್ಯಗುರು ಧನಲಕ್ಷ್ಮೀ ಸಂದರ್ಭೋಚಿತವಾಗಿ ಮಾತನಾಡಿದರು. ವಜ್ರಮಾತಾ ಮಹಿಳಾ ಮಂಡಲದ ಕಾರ್ಯದರ್ಶಿ ಶಾರದಾ ಕೇಶವ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷ ಫೆಡ್ರಿಕ್, ಸುಮಲತಾ ಶೆಣೈ, ನ್ಯಾಯವಾದಿ ಸಾಹಿರಾ ಜುಬೈರ್, ವತ್ಸಲಾ, ಗಣೇಶ್ ಹಾಗೂ ಕೇಶವ್ ನಾಕ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಮೀನಾಕ್ಷಿ ಸ್ವಾಗತಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಅವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನಡೆಲಾಯಿತು