
ಪುತ್ತೂರು: ಜೂ.12- ‘ವಾಯು’ ಚಂಡಮಾರುತ ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಕರಾವಳಿ ತೀರ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಅರೇಬಿಯಾ ಸಮುದ್ರ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಅದು ಚಂಡಮಾರುತವಾಗಿ ಬದಲಾಗಿ ಗುಜರಾತ್ ತೀರವನ್ನು ತಾಕಿದ್ದು ಭಾರೀ ಮಳೆ ಸುರಿಯುತ್ತಿದೆ. ಇಂದಿನಿಂದ ಎರಡು ದಿನಗಳ ಕಾಲ ಸತತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ವಾಯು ಚಂಡಮಾರುತದ ಪರಿಣಾಮ ದೇಶದ ಪಶ್ಚಿಮ ಕರಾವಳಿಯುದ್ದಕ್ಕೂ ಗಂಟೆಗೆ 120 ಕಿಮೀ ವೇಗದ ಬಿರುಗಾಳಿ ಬೀಸಲಿದ್ದು ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸಮುದ್ರ ಪಾಲಾದ ರೆಸಾರ್ಟ್! ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ
ಉಳ್ಳಾಲ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಕಡಲಿನ ಅಬ್ಬರ ಹೆಚ್ಚಾಗಿದ್ದು ಉಳ್ಳಾಲ-ಉಚ್ಚಿಲ ಭಾಗದಲ್ಲಿ ಕಡಲ್ಕೊರೆತದಿಂದ ಎರಡು ಮನೆಗಳು, ಎರಡು ಶೆಡ್ ಹಾಗೂ ಒಂದು ರೆಸಾರ್ಟ್ ಸಂಪೂರ್ಣ ಸಮುದ್ರ ಪಾಲಾದ ಘಟನೆ ನಡೆದಿದೆ. ಉಳ್ಳಾಲದಲ್ಲಿ ಐದು ಮನೆಗಳು ಹಾಗೂ ಸೋಮೇಶ್ವರ ಉಚ್ಚಿಲದಲ್ಲಿ ಎರಡು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ. ಕಿಲ್ರಿಯಾ ನಗರದಲ್ಲಿ ಮೈಮುನಾ ಇಕ್ಬಾಲ್ ಮತ್ತು ಝೊಹರಾ ಎಂಬವರ ಮನೆ ಸಂಪೂರ್ಣ ಸಮುದ್ರ ಪಾಲಾಗಿದೆ. ಉಳ್ಳಾಲ ಬೀಚ್ ಸಮೀಪದ ಅಲ್ಬುಕರ್ಕ್ ಅವರಿಗೆ ಸೇರಿದ ಸಮ್ಮರ್ ಸ್ಯಾಂಡ್ ರೆಸಾರ್ಟ್ನ ಶೌಚಾಲಯ ಕಟ್ಟಡ, ಉಚ್ಚಿಲ ಕೋಟೆ ಬಳಿ ವಿಶ್ವನಾಥ್ ಮತ್ತು ನಾಗೇಶ್ ಎಂಬವರ ಶೆಡ್, ಒಂದು ಗೆಸ್ಟ್ ಹೌಸ್ ಸಮುದ್ರ ಪಾಲಾಗಿವೆ.