ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2019-20ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪ್ರಥಮ ಪೋಷಕರ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಮಕ್ಕಳ ಶಿಕ್ಷಣದ ಬಗ್ಗೆ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೂ, ಪೋಷಕರ ಜವಾಬ್ದಾರಿ ಸಹ ಅತೀ ಮುಖ್ಯವಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿ ನಡೆಯುವ ವಿಶೇಷ ತರಬೇತಿಗಳಾದ ಎನ್.ಟಿ.ಎಸ್.ಇ, ಜೆಇಇ, ನೀಟ್, ಇದರ ಫೌಂಡೇಶನ್ ಕೋರ್ಸ್ಗಳನ್ನು ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು ಎಂದು ಹೇಳಿದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ್.ಎಸ್.ಟಿ,ಯವರು ಶಾಲಾ ಶೈಕ್ಷಣಿಕ ಪ್ರಗತಿ ಹಾಗೂ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಪ್ರದೀಪ್ ಕುಮಾರ್.ರೈ ಮನವಳಿಕೆ, ಉಪಾಧ್ಯಕ್ಷರುಗಳಾಗಿ ಬಾಬು ಪೂಜಾರಿ, ಸರೋಜ, ಜೊತೆ ಕಾರ್ಯದರ್ಶಿಯಾಗಿ ವೀಣಾ ಆಯ್ಕೆಗೊಂಡರು. ನಂತರ ಶಿಕ್ಷಕ-ರಕ್ಷಕ ಸಂಘ, ವಿದ್ಯಾರ್ಥಿ ಸುರಕ್ಷಾ ಸಮಿತಿಯನ್ನು ರಚಿಸಲಾಯಿತು. ಪ್ರಾ.ಶಾಲಾ ಮುಖ್ಯಗುರು ಲೋಹಿತ, ಮ್ಯಾನೇಜರ್ ರಮೇಶ್.ರೈ, ತಾ.ಪಂ.ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಸಹ ಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್. ಸ್ವಾಗತಿಸಿ, ಶಿಕ್ಷಕಿ ಶಶಿರೇಖಾ ವಂದಿಸಿದರು. ಸಹಶಿಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.