ಚಿತ್ರ/ಬರಹ: ಸಿದ್ದಿಕ್ ನೀರಾಜೆ
- ಉಪ್ಪಿನಂಗಡಿಯಲ್ಲಿ ನೀರಿಲ್ಲದೆ ಬರಡಾಗಿದ್ದ ನೇತ್ರಾವತಿ ಮತ್ತೆ ಹರಿವು ಆರಂಭಿಸಿದ್ದಾಳೆ..!!!
- 3 ದಿನದಲ್ಲಿ ಒಟ್ಟು 6 ಸೆ.ಮೀ. ಮಳೆ
- ಕುಮಾರಧಾರದಲ್ಲಿ ಆಧಿಕ ನೀರು

ಉಪ್ಪಿನಂಗಡಿ: ತಿಂಗಳ ಹಿಂದೆ ನೀರು ಇಲ್ಲದೆ ಬರಡಾಗಿ, ಬಟಾ ಬಯಲಿನಂತಾಗಿದ್ದ ಕುಮಾರಧಾರಾ ಮತ್ತು ನೇತ್ರಾವತಿ ಕಳೆದ 3 ದಿನಗಳಿಂದ ಆಗಾಗ್ಗೆ ಸುರಿದ ತುಂತುರು ಮಳೆಗೆ ಜೀವ ತಳೆದುಕೊಂಡಿದ್ದು, ಜೂ.11ರಿಂದ ಹರಿವು ಆರಂಭಿಸಿದ್ದಾಳೆ.
ಉಪ್ಪಿನಂಗಡಿಗೆ ಮುಂಗಾರು ಮಳೆ ಇನ್ನೂ ದೂರವಾಗಿದೆ. ಆದರೆ ಒಂದು ವಾರದಿಂದ ಉಪ್ಪಿನಂಗಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ತುಂತುರು ಮಳೆ ಸುರಿಯಲಾರಂಭಿಸಿದ್ದು ಮತ್ತು ಧರ್ಮಸ್ಥಳ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಸುರಿದ ಮಳೆಯ ಪರಿಣಾಮದಿಂದಾಗಿ ನದಿಯಲ್ಲಿ ಅಂತರ್ಜಲ ಹೆಚ್ಚಳವಾಗಿ ನೀರು ಸರಾಗವಾಗಿ ಹರಿಯಲಾರಂಭಿಸಿರುವುದು ಕಂಡು ಬಂದಿದೆ.
3 ದಿನದಲ್ಲಿ ಒಟ್ಟು 6 ಸೆ.ಮೀ. ಮಳೆ:
ಕೇರಳದಲ್ಲಿ ಮುಂಗಾರು ಆರಂಭವಾದ ಬೆನ್ನಿಗೇ ಸಹಜವಾಗಿ ಕರಾವಳಿಯಲ್ಲಿಯೂ ಆರಂಭವಾಗುತ್ತದೆ. ಹೀಗಾಗಿ ಮಳೆ ಬಿರುಸಿನ ಪ್ರವೇಶವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದ ಮಳೆ ತುಂತುರು ಆಗಿ ಸುರಿದು ಹೋಗುತ್ತಿದೆ. ಕಳೆದ ಗುರುವಾರ 2 ಸೆ.ಮೀ., ಸೋಮವಾರ-3, ಮಂಗಳವಾರ-1 ಸೆ.ಮೀ. ಮಳೆಯಾಗಿದ್ದು, ಒಟ್ಟಾರೆಯಾಗಿ ಉಪ್ಪಿನಂಗಡಿಯಲ್ಲಿ 6 ಸೆ.ಮೀ. ಮಳೆಯಾಗಿರುತ್ತದೆ.

ಕುಮಾರಧಾರದಲ್ಲಿ ಆಧಿಕ ನೀರು:
ಸುಬ್ರಹ್ಮಣ್ಯ ಕಡೆಯಿಂದ ಹರಿದು ಬಂದು ಉಪ್ಪಿನಂಗಡಿಯಲ್ಲಿ ನೇತ್ರಾವತಿಯನ್ನು ಸೇರುವ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿತ್ತು. ಆದರೆ ಹರಿವು ನಿಲ್ಲಿಸಿರಲಿಲ್ಲ. ಅದರಂತೆ ಇದೀಗ ನೇತ್ರಾವತಿಯಲ್ಲಿ ಹರಿಯುವ ನೀರಿಗಿಂತ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಅಧಿಕ ಇರುವುದು ಕಂಡು ಬಂದಿದೆ.
ಒಟ್ಟಿನಲ್ಲಿ ಒಂದು ತಿಂಗಳಿನಿಂದ ನೀರಿಲ್ಲದೆ ಹರಿವು ನಿಲ್ಲಿಸಿ ಬರಡಾಗಿದ್ದರಿಂದಾಗಿ ನದಿ ಪಾತ್ರದ ಮಂದಿ ಕುಡಿಯುವ ನೀರಿಗೂ ಸಮಸ್ಯೆ ಮೂಡಿಸುವಂತಿತ್ತು. ಹಾಗೂ ನದಿ ಸಂಗಮ ತಾಣದಲ್ಲಿಯೂ ನೀರು ಇಲ್ಲದೆ ಪಿಂಡ ಪ್ರಧಾನ ಕ್ರಿಯೆಗಳಿಗೂ ನೀರಿನ ತಾತ್ಸರ ಎದುರಾಗಿತ್ತು. ಜಿಲ್ಲೆಯ ಜೀವನದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನೇತ್ರಾವತಿ ಬರಡಾಗುವ ಮೂಲಕ ಜೀವನದಿ ಎಂಬ ಹೆಸರಿಗೆ ಲೋಪವುಂಟಾಗಿತ್ತು. ಇದೀಗ ಮಂಗಳವಾರದಿಂದ ಹರಿವು ಪ್ರಾರಂಭಿಸಿ ಜೀವ ತಳೆದಿದ್ದಾಳೆ. ನದಿ ಪಾತ್ರದ ಗ್ರಾಮಸ್ಥರಲ್ಲಿ ಮತ್ತೆ ಮಂದಹಾಸ ಮೂಡತೊಡಗಿರುವುದಂತೂ ಸತ್ಯ.