ಪುತ್ತೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೊಡಮಾಡುವ ೨೦೧೯ರ ಮಾಸ್ತಿ ಪ್ರಶಸ್ತಿಗೆ ಹಿರಿಯ ಸಾಹಿತಿ ಕನ್ನಡ ಕಾದಂಬರಿಕಾರ ಬೊಳುವಾರು ಮುಹಮ್ಮದ್ ಕುಂಞಿ ಆಯ್ಕೆಯಾಗಿರುತ್ತಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಜೂ.೨೯ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಜರಗಲಿದೆ. ಸನ್ಮಾನ, ಮಾಸ್ತಿ ಪ್ರಶಸ್ತಿ ಫಲಕ, ೨೫ ಸಾವಿರ ರೂ. ನೀಡಲಾಗುತ್ತಿದೆ.
೨೦೧೬ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಬೊಳುವಾರು ಮಹಮ್ಮದ್ ಕುಂಞಿ ಅವರ `ಸ್ವಾತಂತ್ರ್ಯದ ಓಟ’ ಕಾದಂಬರಿ ಆಯ್ಕೆಯಾಗಿತ್ತು.
೧೯೫೧ ಅಕ್ಟೋಬರ್ ೨೨ರಂದು ಪುತ್ತೂರಿನಲ್ಲಿ ಜನಿಸಿದ ಬೊಳುವಾರು ಮಹಮ್ಮದ್ ಕುಂಞಿ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದಾರೆ. ೧೯೭೨ರಲ್ಲಿ ಸಿಂಡಿಕೇಟ್
ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿಯನ್ನು ಆರಂಭಿಸಿದರು. ಪ್ರವೃತಿಯಲ್ಲಿ ಸಾಹಿತಿಯಾಗಿ ಹೆಸರುವಾಸಿಯಾದ ಅವರು ೨೦೧೧ರಲ್ಲಿ ಸೇವೆಯಿಂದ ನಿವೃತ್ತಿಯನ್ನು ಹೊಂದಿದ್ದರು. ಮಹಮ್ಮದ್ ಕುಂಞಿಯವರು ಆರಂಭದಿಂದಲೂ ಸಣ್ಣ ಕಥೆಗಳ ಮೂಲಕ ಗುರುತಿಸಿಕೊಂಡಿದ್ದು, ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊದಲಬಾರಿಗೆ ೧೯೭೩ರಲ್ಲಿ ಪರಿಚಯಿಸಿದ ಕೀರ್ತಿ ಇವರದ್ದಾಗಿದೆ. ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ಚರ್ಚೆಗೆ ನಾಂದಿ ಹಾಡಿದ್ದ ಬೊಳುವಾರು ಮಹಮ್ಮದ್ ಕುಂಞಿ ಅವರ ಇನ್ನೂರಕ್ಕೂ ಹೆಚ್ಚು ಕತೆಗಳು ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದು, ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ. ವಿಶಿಷ್ಟ ಸಂವೇದನೆಯ ಸಾಹಿತಿಯಾಗಿ ಹೊರಹೊಮ್ಮಿರುವ ಕುಂಞ ಅವರು, ಒಂದು ತುಂಡು ಗೋಡೆ, ಆಕಾಶಕ್ಕೆ ನೀಲಿ ಪರದೆ, ದೇವರುಗಳ ರಾಜ್ಯದಲಿ, ಅಂಕ ಮೊದಲಾದ ಕಥಾಸಂಕಲನಗಳನ್ನು ಹೊರತಂದಿದ್ದಾರೆ. `ಜಿಹಾದ್’, `ಓದಿರಿ’ ಅವರ ಪ್ರಮುಖ ಕಾದಂಬರಿಯಾಗಿದೆ.
ಸಿನಿಮಾ ಕ್ಷೇತ್ರಕ್ಕೂ ಚಿರಪರಿಚಿತರಾದ ಬೊಳುವಾರು ಮಹಮ್ಮದ್ ಕುಂಞಿ ಅವರ ಮುನ್ನುಡಿ ಮತ್ತು ಅತಿಥಿ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿವೆ. `ತಟ್ಟು ಚಪ್ಪಾಳೆ ಪುಟ್ಟ ಮಗು’ ಶೀರ್ಷಿಕೆಯ ಮಕ್ಕಳ ಪದ್ಯಗಳ ಸಂಕಲನ ನಾಡಿನ ಮಕ್ಕಳ ಸಾಹಿತ್ಯದಲ್ಲಿ ವಿಶೇಷವಾದ ಗೌರವ ಪಡೆದುಕೊಂಡಿದೆ. ಅವರ ಪಾಪು ಗಾಂಧಿ ಬಾಪು ಆದ ಕತೆ ಕೃತಿಗೆ ೨೦೧೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೧೯೯೭ರಲ್ಲಿ ಗೌರವ ಪ್ರಶಸ್ತಿಗೆ ಬಾಜನರಾಗಿದ್ದ ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಸಾಹಿತ್ಯ ಅಕಾಡೆಮಿಯಿಂದ ೧೯೮೩ ಮತ್ತು ೧೯೯೨ರಲ್ಲಿ ಪುಸ್ತಕ ಬಹುಮಾನ ಲಭಿಸಿದೆ. ೧೯೮೩ರಲ್ಲಿ ಕೋಲ್ಕತದ ಭಾಷಾ ಸಂಸ್ಥಾನ ಕೂಡ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೯೧ರಲ್ಲಿ ಆರ್ಯಭಟ, ೧೯೯೨ರಲ್ಲಿ ಪರಶುರಾಮ, ೧೯೯೪ರಲ್ಲಿ ದೆಹಲಿಯ ಕಥಾ ಪ್ರಶಸ್ತಿ, ೨೦೧೦ರಲ್ಲಿ ತೌಳವ ಪ್ರಶಸ್ತಿಗಳು ಲಭಿಸಿವೆ. ೧೯೯೭ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಹೆಮ್ಮೆ ಬೊಳುವಾರು ಅವರದ್ದಾಗಿದೆ.