ಮಳೆಗಾಲದ ಆರಂಭದಲ್ಲೇ ಕೆಸರುಗದ್ದೆಯಂತಾದ ಆರೆಲ್ತಡಿ ಕೆಡೆಂಜಿ ಸಂಪರ್ಕ ರಸ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಸವಣೂರು ಗ್ರಾಮದ ಆರೆಲ್ತಡಿ ಕೆಡೆಂಜಿ ಭಾಗವನ್ನು ಸಂಪರ್ಕಿಸುವ ಜಿ.ಪಂ ರಸ್ತೆಯ ಅಸಮರ್ಪಕ ನಿರ್ವಹಣೆಯಿಂದ ಈ ಬಾರಿ ಮಳೆಗಾಲದ ಆರಂಭದಲ್ಲೇ ಕೆಸರುಗದ್ದೆಯಂತಾಗಿ ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ನೂರಾರು ಮಂದಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಸುತ್ತಮುತ್ತಲಿನ ಪರಿಸರದ ಮಕ್ಕಳು ಆರೆಲ್ತಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮತ್ತು ಅಂಗನವಾಡಿಗಳಿಗೆ ತೆರಳಬೇಕಾದರೆ ಇದೇ ರಸ್ತೆಯನ್ನು ಆಶ್ರಯಿಸಬೇಕಾಗಿದ್ದು, ಆದರೆ ನಡೆದಾಡಲೂ ಯೋಗ್ಯವಲ್ಲದ ಈ ರಸ್ತೆಯಲ್ಲಿ ಸಾಗಲು ಹರಸಾಹಸ ಪಡಬೇಕಾಗಿದೆ.ಈ ರಸ್ತೆಯಲ್ಲಿ ದಿನನಿತ್ಯ ನೂರಾರು ದ್ವಿಚಕ್ರ ವಾಹನಗಳು, ಆಟೋರಿಕ್ಷಾ ಶಾಲಾಬಸ್ಸುಗಳು ಹಾಗೂ ಇನ್ನಿತರ ವಾಹನಗಳು ಸಂಚರಿಸುತ್ತಿದ್ದು, ಚಾಲಕರು ಕೆಸರುಮಯವಾದ ರಸ್ತೆಯಲ್ಲಿ ವಾಹನ ಚಲಾಯಿಸಲು ಪಡುವ ಪಾಡು ಹೇಳತೀರದ್ದಾಗಿದೆ.

ಮಂಜೇಶ್ವರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಚಾಪಳ್ಳ ಎಂಬಲ್ಲಿಂದ ಆರೆಲ್ತಡಿ ಶಾಲೆಯ ಗೇಟಿನ ತನಕ ಸುಮಾರು ಎರಡು ಕಿ.ಮೀ ಉದ್ದದ ಈ ರಸ್ತೆಯ ಅರ್ಧ ಭಾಗ ಡಾಂಬರೀಕರಣ ಹಾಗೂ ಕಾಂಕ್ರಿಟೀಕರಣಗೊಂಡಿದ್ದು ಇನ್ನರ್ಧ ಭಾಗ ಮಣ್ಣಿನ ಕಚ್ಛಾ ರಸ್ತೆಯಾಗಿದೆ. ಈ ಬಾರಿ ಮಳೆಗಾಲದ ಆರಂಭಕ್ಕೆ ಮೊದಲು ಗ್ರಾಮ ಪಂಚಾಯತ್ ಅನುದಾನದಿಂದ ರಸ್ತೆಯ ಹೊಂಡಗಳಿಗೆ ಮಣ್ಣು ತುಂಬಿಸಿ ಅಲ್ಪಸ್ವಲ್ಪ ದುರಸ್ತಿ ಕಾಮಗಾರಿ ನಡೆಸಲಾಗಿದ್ದರೂ, ಅದು ಪ್ರಥಮ ಮಳೆಗೇ ಕೊಚ್ಚಿ ಹೋಗಿದೆ.ಅಷ್ಟೇ ಅಲ್ಲದೆ ರಸ್ತೆಗೆ ಬಿದ್ದ ಮಳೆಯ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ರಸ್ತೆ ಇನ್ನಷ್ಟು ಹದಗೆಡಲು ಕಾರಣವಾಗಿದೆ.ಪ್ರತೀ ಮಳೆಗಾಲದಲ್ಲಿಯೂ ಈ ಸಮಸ್ಯೆ ಮರುಕಳಿಸುತ್ತಿದ್ದು, ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆರೆಲ್ತಡಿ ಕೆಡೆಂಜಿ ಜಿ.ಪಂ ರಸ್ತೆಯನ್ನು ಈಗಾಗಲೇ ಗ್ರಾಮ ಪಂಚಾಯತ್ 14ನೇ ಹಣಕಾಸು ಆಯೋಗದ ಅನುದಾನವನ್ನು ಬಳಸಿ ದುರಸ್ತಿ ಮಾಡಲಾಗಿದೆ.ಸದರಿ ರಸ್ತೆಗೆ ಶಾಸಕರ ಅನುದಾನದಿಂದ ಸುಮಾರು ಹದಿನೈದು ಲಕ್ಷಗಳ ಕಾಂಕ್ರಿಟೀಕರಣ ಮಂಜೂರಾಗಿದ್ದು, ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲಾಗುವುದು – ಪ್ರಕಾಶ್ ಕುದ್ಮನಮಜಲು  ಗ್ರಾಮ ಪಂಚಾಯತ್ ಸದಸ್ಯರು

ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದರಿಂದ ಶಾಲೆಗೆ ನಡೆದುಕೊಂಡು ಬರುವ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗುತ್ತದೆ.ರಸ್ತೆಯಲ್ಲಿ ವಾಹನಗಳು ಸಾಗುವಾಗ ವಿದ್ಯಾರ್ಥಿಗಳ ಮೈಮೇಲೆ ಕೆಸರೆರಚುವ ಅಪಾಯ ಕೂಡಾ ಇದೆ.ಅಷ್ಟೇ ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಮರದ ಕೊಂಬೆಗಳು ರಸ್ತೆಗೆ ಬಾಗಿದ್ದು ಬಲವಾಗಿ ಗಾಳಿ ಬೀಸುವ ಸಮಯದಲ್ಲಿ ಮುರಿದು ಬೀಳುವ ಸಾಧ್ಯತೆಗಳಿವೆ.ಸಂಬಂಧಪಟ್ಟವರು ಈ ಕುರಿತು ಕೂಡಲೇ ಕ್ರಮ ಕೈಗೊಂಡು ಮುಂದೆರಗಬಹುದಾದ ಅಪಾಯವನ್ನು ತಪ್ಪಿಸಬೇಕಾಗಿದೆ – ಜಗನ್ನಾಥ್ ಎಸ್ ಮುಖ್ಯೋಪಾಧ್ಯಾಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿ

ಸುಸಜ್ಜಿತವಾದ ರಸ್ತೆಯೊಂದು ಬೇಕೆಂಬುದು ಈ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದೆ.ಈ ಕುರಿತು ಹಲವಾರು ಬಾರಿ ಮಾನ್ಯ ಸಂಸದರು, ಶಾಸಕರ ಬಳಿ ಮನವಿ ಸಲ್ಲಿಸಲಾಗಿದೆ.ಮಾನ್ಯ ಸಂಸದರು ಆದಷ್ಟು ಬೇಗ ಈ ಭಾಗದ ಸಂಪರ್ಕ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದಾರೆ.ಪ್ರತೀ ಮಳೆಗಾಲದಲ್ಲಿ ಉದ್ಭವಿಸುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗ ಮುತುವರ್ಜಿ ವಹಿಸಿ ಎಂಬುದೇ ಊರವರ ಒಕ್ಕೊರಲ ಬೇಡಿಕೆಯಾಗಿದೆ – ತೀರ್ಥರಾಮ ಕೆಡೆಂಜಿ ಗ್ರಾಮಸ್ಥರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.