ಉಪ್ಪಿನಂಗಡಿ: ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ನಿಗದಿತ 200 ವೈದ್ಯಕೀಯ ಸೀಟುಗಳಿಗೆ ನಡೆಸುವ JIPMER ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಪ್ರತೀಕ್ಷಾ ಕಾಮತ್ ಅರ್ಹತೆ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ಗುರುತಿಸಿಕೊಳ್ಳುತ್ತಿರುವುದು ಸಂಸ್ಥೆಯ ಹಿರಿಮೆಯಾಗಿದೆ.
ಸಾಧಕ ವಿದ್ಯಾರ್ಥಿನಿ ಪ್ರತೀಕ್ಷಾ ಕಾಮತನ್ನು ಅಭಿನಂದಿಸಿದ ಸಂಸ್ಥೆಯ ಅಧ್ಯಕ್ಷರಾದ ಯು. ಎಸ್. ಎ ನಾಯಕ್, ಪದವಿಪೂರ್ವ ತರಗತಿಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಯು ಇಲ್ಲಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗುತ್ತಿರುವುದು ಅತೀವ ಸಂತಸ ತಂದಿದೆ ಎಂದು ಶ್ಲಾಘಿಸಿದ್ದಾರೆ.
ಉತ್ಕೃಷ್ಟ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಗೆ ಹೆಸರಾದ JIPMER ಶಿಕ್ಷಣ ಸಂಸ್ಥೆಗಳು ನಮ್ಮ ದೇಶದಲ್ಲಿ ತಮಿಳುನಾಡಿನ ಕರೈಕಲ್ ಹಾಗೂ ಪುದುಚೇರಿಯಲ್ಲಿ ಮಾತ್ರಾ ಸ್ಥಾಪಿತವಾಗಿದೆ. 200 ಸೀಟುಗಳಿಗೆ ರಾಷ್ಟ್ರಮಟ್ಟದಲ್ಲಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಒಬ್ಬರಾಗಿ ಅರ್ಹತೆ ಪಡೆದಿರುವುದು ಮಹತ್ತರ ಸಾಧನೆಯಾಗಿರುತ್ತದೆ. JEE, NEET, CET ಮೊದಲಾದ ಪ್ರವೇಶ ಪರೀಕ್ಷೆಗಳಲ್ಲಿ ಈಗಾಗಲೇ ಉನ್ನತ ಸಾಧನೆ ತೋರಿದ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಪ್ರಥಮ ತಂಡದ ವಿದ್ಯಾರ್ಥಿಗಳು JIPMER ಪ್ರವೇಶ ಪರೀಕ್ಷೆಯಲ್ಲೂ ಆಯ್ಕೆಯಾಗುವ ಮೂಲಕ ಶೈಕ್ಷಣಿಕ ಸಾಧನೆಯಲ್ಲಿ ತಮ್ಮನ್ನು ರಾಷ್ಟ್ರವ್ಯಾಪಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ರವೀಂದ್ರ ಡಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.