ಸವಣೂರು: ಇಲ್ಲಿನ ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಮದರಸದ ಅಧ್ಯಯನ ವರ್ಷಾರಂಭ ‘ಮಿಹ್ರಜಾನುಲ್ ಬಿದಾಯ 2019’ ಕಾರ್ಯಕ್ರಮವು ಇಂದು ಬೆಳಿಗ್ಗೆ ಮದರಸದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಪುತ್ತುಬಾವ ಹಾಜಿ ವಹಿಸಿದ್ದರು.ಮಸೀದಿಯ ಮುದರ್ರಿಸರಾದ ಬಹುಮಾನ್ಯ ಅಶ್ರಫ್ ಫಾಝಿಲ್ ಬಾಖವಿರವರು ದುವಾ ನೇತೃತ್ವ ವಹಿಸಿದ್ದರು. ಬಳಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಮಕ್ಕಳಿಗೆ ಧಾರ್ಮಿಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಕಲಿಸುವ ಮದರಸ ಶಿಕ್ಷಣವು ಮನುಷ್ಯನ ನೆಮ್ಮದಿಯ ಬದುಕಿಗೆ ಸುಭದ್ರ ಅಡಿಪಾಯವನ್ನು ಕಟ್ಟಿಕೊಡುತ್ತದೆ.ವಿದ್ಯಾರ್ಥಿಗಳು ತರಗತಿಗಳಿಗೆ ಸರಿಯಾಗಿ ಹಾಜರಾಗಿ ಕಲಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು.ಪೋಷಕರು ಮಕ್ಕಳು ಕ್ಲಪ್ತಸಮಯಕ್ಕೆ ತರಗತಿಗೆ ಹಾಜರಾಗುವ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು” ಎಂದರು.
ಮದರಸದ ಮುಖ್ಯಗುರು ರಫೀಕ್ ಫೈಝಿ ಅಡ್ಯನಡ್ಕ ಸಂದರ್ಭೋಚಿತವಾಗಿ ಮಾತನಾಡಿ ಪೋಷಕರ ಸಹಕಾರ ಕೋರಿದರು. ಜಮಾಅತ್ ಸಮಿತಿಯ ಕಾರ್ಯದರ್ಶಿ ಪಿ.ಕೆ ಅಬೂಬಕರ್, ಸದಸ್ಯರಾದ ಉಮ್ಮರ್ ಹಾಜಿ ಅತಿಕೆರೆ, ಹಂಝ ಹಾಜಿ ರೋಯಲ್, ಮುಹಮ್ಮದ್ ಹಾಜಿ ಕಣಿಮಜಲು, ಸಹ ಅಧ್ಯಾಪಕನವಾಝ್ ಅಝ್ಹರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮದರಸ ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮದರಸದ ಸಹ ಅಧ್ಯಾಪಕರಾದ ಸಿದ್ದೀಕ್ ಅರ್ಶದಿ ಸ್ವಾಗತಿಸಿದರು.ಇನ್ನೋರ್ವ ಸಹಶಿಕ್ಷಕ ಸಿದ್ದೀಕ್ ಅಝ್ಹರಿ ವಂದಿಸಿದರು.ಸಹಶಿಕ್ಷಕರಾದ ಮನ್ಸೂರ್ ಮುಸ್ಲಿಯಾರ್ ಅಮ್ಚಿನಡ್ಕ ಕಾರ್ಯಕ್ರಮ ನಿರ್ವಹಿಸಿದರು.