
ಕಡಬ : ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪರಿಶಿಷ್ಟ ಕಾಲೋನಿಯಿಂದ ಜಾಲು ಬೈಲಿಗೆ ಸಂಪರ್ಕಿಸಲಾದ ವಿದ್ಯುತ್ ಲೈನ್ನ ಕಂಬಗಳು ವಾಲಿದ್ದು ತಂತಿಗಳು ಅಲ್ಲಲ್ಲಿ ತುಂಡಾಗಿ ಬಿದ್ದಿದ್ದು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
ಅದೆಷ್ಟೋ ವರ್ಷಗಳ ಹಿಂದೆ ಅಳವಡಿಸಿದ್ದ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿ ಅಲ್ಲಲ್ಲಿ ತುಂಡಾಗಿ ಬೀಳುತ್ತಿದ್ದು ,ಕಳೆದೊಂದು ವರ್ಷದಿಂದ ಸ್ಥಳೀಯ ಗ್ರಾ.ಪಂ ಸದಸ್ಯ ರಾಮಚಂದ್ರ ಗೌಡ ಎಸ್. ಸೇರಿದಂತೆ ಗ್ರಾಮಸ್ಥರು ಕಡಬ ಮೆಸ್ಕಾಂಗೆ ದೂರು ನೀಡಿದ್ದರೂ ಈ ತನಕ ಮೆಸ್ಕಾಂನವರು ದೂರಿಗೆ ಸ್ಪಂದಿಸಿಲ್ಲ. ಕಳೆದೆರಡು ದಿನಗಳ ಹಿಂದೆ ಕಲ್ಲುಗುಡ್ಡೆ ಪರಿಶಿಷ್ಟ ಕಾಲೋನಿಯ- ಜಾಲು ರಸ್ತೆ ಮಧ್ಯದಲ್ಲಿ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದಲ್ಲದೆ ವಿದ್ಯುತ್ ಕಂಬ ವಾಲಿದೆ. ಆದರೂ ಮೆಸ್ಕಾಂ ಲೈನ್ಮೆನ್ ಆಗಲಿ ಅಧಿಕಾರಿಗಳಾಗಲೀ ಸ್ಪಂದಿಸುತ್ತಿಲ್ಲವೆಂದು ದೂರಿದ ಸ್ಥಳೀಯ ಗ್ರಾಮಸ್ಥರು , ದಿನಂಪ್ರತಿ ಶಾಲೆಗೆ ಹೋಗುವ ಮಕ್ಕಳು, ಸಾರ್ವಜನಿಕರು, ವೃದ್ಧರು, ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ ಅದೃಷ್ಟವಶಾತ್ ಕಾಲೋನಿಯಲ್ಲಿಯೇ ವಿದ್ಯುತ್ ಗುತ್ತಿಗೆದಾರನಾಗಿರುವ ಸುಧಾಕರ ಎಂಬವರ ಸಮಯ ಪ್ರಜ್ಞೆಯಿಂದ ಘಟನೆಯ ವೇಳೆ ಈ ಭಾಗದ ವಿದ್ಯುತ್ ಲೈನ್ ಆಫ್ ಮಾಡಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ . ನಾವು ತುಂಬಾ ಸಲ ಕಡಬ ಮೆಸ್ಕಾಂ ಎಇಇ, ಜೆಇ ಗೆ ದೂರವಾಣಿ ಮೂಲಕ ಸಂಪರ್ಕಿಸಿದರೂ ಸ್ಪಂದಿಸಿರುವುದಿಲ್ಲ. ಹೊಸಲೈನ್ಗೆ ತಂತಿ ವ್ಯವಸ್ಥೆ ಆಗಿದೆ. ಟೆಂಡರ್ ಆದ ಕೂಡಲೇ ಹೊಸ ತಂತಿ ಅಳವಡಿಸಲಾಗುತ್ತದೆ ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಹೊಸ ತಂತಿ ಬದಲಾವಣೆ ಆಗುವ ತನಕ ಈ ಹಳೆಯ ಜೋತು ಬಿದ್ದಿರುವ ತಂತಿಗಳು ತುಂಡಾಗಿ ಕೆಳಗೆ ಅನಾಹುತ ಸಂಭವಿಸಿ ಜೀವ ಹಾನಿಯಾದರೆ ಯಾರು ಹೊಣೆ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಆದುದರಿಂದ ತಕ್ಷಣ ಮೆಸ್ಕಾಂ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳಿಯರಾದ ವೆಂಕಟರಮಣ ಎಸ್ ಜಾಲು, ಸುಧಾಕರ ಕಲ್ಲುಗುಡ್ಡೆ, ಮಹೇಶ್ ಎಸ್, ಸಿಂಗಾರವೇಲು ಕಲ್ಲುಗುಡ್ಡೆ, ಗಿರಿಜ ಕಲ್ಲುಗುಡ್ಡೆ, ಆಗ್ರಹಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದು ಜೀವ ಹಾನಿಯಾಗಿರುವ ವಿಚಾರಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಜಾನುವಾರುಗಳು ಕೂಡಾ ಮೃತಪಟ್ಟ ಸಾಕಷ್ಟು ಉದಾಹರಣೆಗಳು ಇವೆ. ಆದರೂ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ. ಅನಾಹುತ ಸಂಭವಿಸಿದ ಮೇಲೆ ಸಮಸ್ಯೆ ಬಗೆಹರಿಸುವುದಕ್ಕೆ ಕಾಯುವ ಬದಲು ಕೂಡಲೇ ಈ ವಿಚಾರಕ್ಕೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಂಡು ಸಂಭವನೀಯ ಅಪಾಯವನ್ನು ತಪ್ಪಿಸಬೇಕು-ರಾಮಚಂದ್ರ ಗೌಡ ಎಸ್. ಗ್ರಾ.ಪಂ ಸದಸ್ಯ ನೂಜಿಬಾಳ್ತಿಲ