- ಕೋಳಿ ಗೊಬ್ಬರ ಹೇರಿಕೊಂಡು ಬರುತ್ತಿದ್ದ ಲಾರಿ
- ಚಾಲಕ, ಕ್ಲೀನರ್ ಅಪಾಯದಿಂದ ಪಾರು
- ಕಡಬ ರಸ್ತೆಯಲ್ಲಿ ಸಾಗಿ ಪರ್ಯಾಯ ರಸ್ತೆಯಾಗಿ ಸಾಗಿದ ಬಸ್, ಲಘು ವಾಹನಗಳು
- ಬಹುತೇಕ ಘನ ವಾಹನಗಳು ಸ್ಥಳದಲ್ಲೇ ಸ್ಥಗಿತ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಜೂನ್ 15ರಂದು ಬೆಳಗ್ಗೆ ಲಾರಿಯೊಂದು ಪಲ್ಟಿ ಆಗಿ ರಸ್ತೆಗೆ ಅಡ್ಡವಾಗಿ ಮಗುಚಿ ಬಿದ್ದಿದ್ದು, ಪರಿಣಾಮ ಸುಮಾರು 5 ತಾಸು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿ, ಸಂಚಾರಿ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತು.
ಚೆನ್ನೈಯಿಂದ ಮಂಗಳೂರು ಬೈಕಂಪಾಡಿಗೆ ಕೋಳಿ ಗೊಬ್ಬರ ಹೇರಿಕೊಂಡು ಬರುತ್ತಿದ್ದ ಲಾರಿ ನೀರಕಟ್ಟೆ ತಿರುವಿನಲ್ಲಿ ಬೇರೊಂದು ವಾಹನಕ್ಕೆ ಸೈಡ್ ಕೊಡುವ ಯತ್ನದಲ್ಲಿ ರಸ್ತೆಯ ಎಡ ಬದಿಯ ಧರೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನ ಚಾಲಕ ಲಾರಿಯನ್ನು ಬಲಕ್ಕೆ ತಿರುಗಿಸುತ್ತಿದ್ದಂತೆ ಲಾರಿ ಪಲ್ಟಿಯಾಗಿ ಮಗುಚಿಕೊಂಡು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಲಾರಿ ಚಾಲಕ ರಾಜ್ಕಮಾರ್ ಮತ್ತು ಕ್ಲೀನರ್ ಗಜೇಂದ್ರ ಸಣ್ಣಪುಟ್ಟ ತರಚಿದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಅಡ್ಡವಾಗಿ ಬಿದ್ದ ಲಾರಿ ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿದ್ದಿದೆ, ರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನ ಹೋಗುವಷ್ಟು ಜಾಗ ಮಾತ್ರ ಇದ್ದು, ಅದೇ ಬದಿಯಲ್ಲಿ ತೋಡು ಹರಿಯುತ್ತಿದ್ದು ತೀರಾ ಜಾಗ್ರತೆಯಿಂದ ದ್ವಿಚಕ್ರಗಳು ಅತ್ತಿತ್ತ ಹೋಗುತ್ತಿದ್ದುದು ಕಂಡು ಬಂದಿದೆ. ಉಳಿದಂತೆ ಇತರೇ ವಾಹನಗಳು ಮುಂದಕ್ಕೆ ಹೋಗಲಾಗದೆ ಅಲ್ಲೇ ಸ್ಥಗಿತಗೊಂಡಿದ್ದವು.
ಪರ್ಯಾಯ ರಸ್ತೆಯಾಗಿ ಸಾಗಿದ ಬಸ್ಸು, ಲಘು ವಾಹನಗಳು:
ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಲಾರಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಬಳಿಕ ಕ್ರೇನ್ ತರಿಸಲಾಗಿ ಲಾರಿಯನ್ನು ಲಾರಿಯಲ್ಲಿದ್ದ ಗೊಬ್ಬರದ ಚೀಲವನ್ನು ಲಾರಿಯಿಂದ ತೆಗೆದು ಬೇರೆ ಲಾರಿಗೆ ಸ್ಥಳಾಂತರಿಸಲಾಯಿತು. ಆ ಬಳಿಕ ಲಾರಿಯನ್ನು ರಸ್ತೆಯಿಂದ ಕ್ರೇನ್ ಮೂಲಕ ತೆಗೆದು, ಬದಿಗೆ ಸರಿಸಿ ನಿಲ್ಲಿಸಲಾಯಿತು. ಆ ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಲಾರಿಯನ್ನು ರಸ್ತೆಯಿಂದ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ತೆರವು ಮಾಡಲಾಗಿದ್ದು, 5 ತಾಸು ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿತ್ತು. ಈ ಮಧ್ಯೆ ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ ಬಸ್ಸು, ಇತರೇ ಕಾರು ಮೊದಲಾದ ಲಘು ವಾಹನಗಳು ಕಡಬ ರಸ್ತೆಯಾಗಿ ಸಾಗಿ ಪೆರಿಯಡ್ಕ-ಕಾಂಚನ ಮೂಲಕ ಮತ್ತು ರಾಮಕುಂಜ-ಗೋಳಿತೊಟ್ಟು ಮೂಲಕ ಪರ್ಯಾಯ ರಸ್ತೆ ಬಳಸಿಕೊಂಡು ಯಾನ ಮುಂದುರಿಸಿತ್ತು. ಆದರೆ ಲಾರಿ, ಟ್ಯಾಂಕರ್ ಮೊದಲಾದ ಘನ ವಾಹನಗಳು ನೀರಕಟ್ಟೆಯಿಂದ ಉಪ್ಪಿನಂಗಡಿ ತನಕ ಹಾಗೂ ಅತ್ತ ನೀರಕಟ್ಟೆಯಿಂದ ಗೋಳಿತೊಟ್ಟು ತನಕವೂ ರಸ್ತೆ ಬದಿಯಲ್ಲಿ ನಿಲುಗಡೆಗೊಂಡು ರಸ್ತೆ ಸಂಚಾರಕ್ಕೆ ಮುಕ್ತವಾದ ಬಳಿಕ ಯಾನ ಮುಂದುವರಿಸಿದವು.
ಘಟನಾ ಸ್ಥಳದಲ್ಲಿ ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ನಂದಕುಮಾರ್, ಸಂಚಾರಿ ಪೊಲೀಸ್ ಎ.ಎಸ್.ಐ. ರುಕ್ಮಯ ಮತ್ತು ಸಿಬ್ಬಂದಿಗಳು ಬಂದೋಬಸ್ತಿನಲ್ಲಿ ನಿರತರಾಗಿದ್ದರು.