HomePage_Banner
HomePage_Banner
HomePage_Banner

ಉಚಿತ ಕೃತಕ ಕಾಲು ಜೋಡಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1

  • ಕಾಲಿಲ್ಲದವರಿಗೆ ನಡೆಯಲು ಅವಕಾಶ ಮಾಡಿಕೊಟ್ಟ ಆತ್ಮತೃಪ್ತಿಯಿದೆ-ಡಾ.ಸುಂದರ್

ಪುತ್ತೂರು: ಜೂ.16. ರೋಟರಿ ಪುತ್ತೂರು, ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ಚೆನ್ನೈ ಫ್ರೀಡಂ ಟ್ರಸ್ಟ್ ಆಶ್ರಯದಲ್ಲಿ ಕಾಲು ಕಳೆದುಕೊಂಡವರಿಗೆ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯಲ್ಲಿನ ಶಾರದಾ ಭಜನಾ ಮಂದಿರದಲ್ಲಿ    ನಡೆಯಿತು. ಕಾಲುಗಳನ್ನು ಕಳೆದುಕೊಂಡು ಮನೆಯಲ್ಲಿಯೇ ತೆವಳಿಕೊಂಡು ಅವರ ಅಗತ್ಯಗಳನ್ನು ಪೂರೈಸಿಕೊಳ್ಳುವ ಫಲಾನುಭವಿಗಳಿಗೆ ಅವರ ಕಾಲಿನ ಅಳತೆಯನ್ನು ತೆಗೆದುಕೊಂಡು ಕಾಲಿಗೆ ಒಪ್ಪುವ ರೀತಿಯಲ್ಲಿ ಜೋಡಣೆಗೊಳಿಸುವ ಕೃತಕ ಕಾಲುಗಳ ಪರಿಕರಗಳನ್ನು ಮಾಡಿಕೊಟ್ಟು ಅವರನ್ನು ನಡೆಯುವಂತೆ ಮಾಡುವ ಮೂಲಕ ಅವರ ಮುಖದಲ್ಲೂ ಮಂದಹಾಸ ಮೂಡುವಂತೆ ಮಾಡಿದ ಕಾರ್ಯವು ನಮಗೆ ಆತ್ಮತೃಪ್ತಿ ತಂದುಕೊಟ್ಟಿದೆ ಎಂದು ಚೆನ್ನೈ ಫ್ರೀಡಂ ಟ್ರಸ್ಟ್‌ನ ಸ್ಥಾಪಕ ಡಾ.ಎಸ್.ಸುಂದರ್‌ರವರು ಹೇಳಿದರು.

ಅವರು ರೋಟರಿ ಪುತ್ತೂರು, ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ಚೆನ್ನೈ ಫ್ರೀಡಂ ಟ್ರಸ್ಟ್ ಆಶ್ರಯದಲ್ಲಿ ಜೂ.16ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯಲ್ಲಿನ ಶಾರದಾ ಭಜನಾ ಮಂದಿರದಲ್ಲಿ ನಡೆದ ಮೊಣಗಂಟಿನಿಂದ ಕೆಳಗೆ ಅಥವಾ ಎರಡೂ ಕಾಲುಗಳನ್ನು ಕಳಕೊಂಡವರಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ವಿತರಣೆ ಶಿಬಿರದಲ್ಲಿ ಅವರು ಮಾತನಾಡಿದರು. 2017ರ ಬಳಿಕ ರೋಟರಿ ಸಂಸ್ಥೆಯ ಸಹಯೋಗದಲ್ಲಿ ದೇಶದ ವಿವಿಧೆಡೆ ಚೆನ್ನೈ ಫ್ರೀಡಂ ಟ್ರಸ್ಟ್ ವತಿಯಿಂದ 249 ಶಿಬಿರಗಳು ನಡೆದಿದ್ದು, 2619 ಫಲಾನುಭವಿಗಳಿಗೆ `ವಾಕ್ ಇಂಡಿಯಾ’ ಎಂಬ ಧ್ಯೇಯೋದ್ಧೇಶದಿಂದ ಉಚಿತ ಕೃತಕ ಕಾಲು ಜೋಡಣೆ ಕಾರ್ಯವನ್ನು ಈಗಾಗಲೇ ಮಾಡಿದ್ದು ಉದು ಕರ್ನಾಟಕದಲ್ಲಿ ಮೊದಲ ಹೆಜ್ಜೆಯಾಗಿದೆ ಎಂದ ಅವರು ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಮತ್ತು ಮಿಷಿನ್ ಸಮೃದ್ಧಿ ಸ್ಕೂಲ್ ಚೆನ್ನೈ ಇದರ ಪೋಷಕರು, ಮಕ್ಕಳು ಸಂಗ್ರಹಿಸಿದ ದೇಣಿಗೆಯನ್ನು ಪ್ಯೂವೆಲ್ ಎ ಡೀಮ್ ಎಂಬ ಆನ್‌ಲೈನ್ ಸಂಸ್ಥೆಯ ಮೂಲಕ ಉಚಿತವಾಗಿ ಕೃತಕ ಕಾಲುಗಳ ನಿರ್ಮಾಣ ಮಾಡಿರುವುದಾಗಿದೆ. ಚೆನ್ನೈ ಫ್ರೀಡಂ ಟ್ರಸ್ಟ್‌ನ ಉದ್ಧೇಶ ಕಾಲಿಲ್ಲದವರು ಕೃತಕ ಕಾಲಿನ ಜೋಡಣೆಯ ಮೂಲಕ ನಡೆದಾಡಲು ಮಾಡುತ್ತಿರುವುದೇ ಆಗಿದೆ ಎಂದು ಅವರು ಹೇಳಿದರು.

ಕೃತಕ ಕಾಲು ಗಿಫ್ಟ್ ಆಗಿ ನೀಡುತ್ತಿದ್ದಾರೆ-ಜೋಸೆಫ್ ಮ್ಯಾಥ್ಯೂ:
ರೋಟರಿ ಜಿಲ್ಲೆ 3181, ವಲಯ 5ರ ನಿಯೋಜಿತ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂರವರು ಮಾತನಾಢಿ, ನಡೆದಾಡಲು ಅಶಕ್ತರಾದವರು, ಕಾಲಿಲ್ಲದವರನ್ನು ನೋಡಿದಾಗ ನನಗನಿಸುವುದು ಭಗವಂತ ಎಷ್ಟೊಂದು ಕಠೋರ ಎಂದು. ಕಾಲಿಲ್ಲದವರು ಜೀವನಪೂರ್ತಿ ದಿನ ಕಳೆಯುವುದು ಬಹಳ ಕಷ್ಟ ಎಂಬುದು ಮಾತ್ರ ಸತ್ಯ. ಜೀವನ ಎನ್ನುವುದು ಎಷ್ಟೊಂದು ಕಷ್ಟಕರ ಎನ್ನುವುದನ್ನು ಜಗತ್ತಿಗೆ ತೋರಿಸಲು ಇಂಥವರನ್ನು ದೇವರು ಆಯ್ಕೆ ಮಾಡಿದ್ದಾರೆ. ಚೆನ್ನೈ ಫ್ರೀಡಂ ಟ್ರಸ್ಟ್‌ರವರು ಒಳ್ಳೆಯ ಉದ್ಧೇಶದೊಂದಿಗೆ ಕಾಲಿಲ್ಲದವರಿಗೆ ಉಚಿತ ಕಾಲು ಜೋಡಣೆಯ ಮೂಲಕ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದ ಅವರು ಯಾರು ಒಳ್ಳೆಯ ಉದ್ಧೇಶದೊಂದಿಗೆ ಸಹಾಯಹಸ್ತ ಚಾಚುತ್ತಾರೋ ಅವರಿಗೆ ದೇವರು ಆಶೀರ್ವದಿಸಬಲ್ಲನು. ರೋಟರಿ ಸಂಸ್ಥೆಯ ಸಹಕಾರದೊಂದಿಗೆ ಚೆನ್ನೈ ಫ್ರೀಡಂ ಟ್ರಸ್ಟ್‌ರವರು ಕೃತಕ ಕಾಲು ಗಿಫ್ಟ್ ಆಗಿ ನೀಡುತ್ತಿದ್ದಾರೆ, ಇದನ್ನು ಫಲಾನುಭವಿಗಳು ಹತ್ತು ಜನರಿಗೆ ಹೇಳುವುದೇ ಅವರಿಗೆ ನೀಡುವ ಕೃತಜ್ಞತೆಗಳು ಎಂದು ಅವರು ಹೇಳಿದರು.

ಸೇವಾ ಮನೋಭಾವನೆಯು ಸ್ವ-ಹಿತ ಮೀರಿದ ಸೇವೆ-ಆಸ್ಕರ್:
ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ಇದರ ಚೇರ್‌ಮ್ಯಾನ್ ಹಾಗೂ ರೋಟರಿಯ ಅಸಿಸ್ಟೆಂಟ್ ಗವರ್ನರ್ ಆಸ್ಕರ್ ಆನಂದ್‌ರವರು ಮಾತನಾಡಿ, ಹತ್ತು ವರುಷದಲ್ಲಿ ೨೬೧೯ ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಕೃತಕ ಕಾಲುಗಳ ಜೋಡಣೆ ಕಾರ್ಯವನ್ನು ಮಾಡುತ್ತಿರುವ ಚೆನ್ನೈ ಫ್ರೀಡಂ ಟ್ರಸ್ಟ್‌ರವರ ಸೇವಾ ಮನೋಭಾವನೆಯು ಸ್ವ-ಹಿತ ಮೀರಿದ ಸೇವೆಯಾಗಿದೆ. ವಾಕ್ ಇಂಡಿಯಾದ ಮೂಲಕ ಭಾರತದಾದ್ಯಂತ ಕಾಲಿಲ್ಲದವರನ್ನು ನಡೆದಾಡುವಂತೆ ಮಾಡುವ ಅವರ ಉದ್ಧೇಶವನ್ನು ಮೆಚ್ಚಲೇಬೇಕಾಗಿದೆ. ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂರವರ ಮುಂದಿನ ಯೋಜನೆಯಲ್ಲಿ ವಾಕ್ ಇಂಡಿಯಾ ಯೋಜನೆಯೂ ಒಂದಾಗಿದೆ ಎಂದು ಅವರು ಹೇಳಿದರು.

ಕಾಲಿಲ್ಲದ ಫಲಾನುಭವಿಗಳಿಗೆ ಈ ಯೋಜನೆ ಬಹಳಷ್ಟು ಪ್ರಯೋಜನಕಾರಿ-ಭುಜಂಗ:
ರೋಟರಿ ಕ್ಲಬ್ ಪುತ್ತೂರು ಇದರ ನಿಯೋಜಿತ ಅಧ್ಯಕ್ಷ ಭುಜಂಗ ಆಚಾರ್‌ರವರು ಮಾತನಾಡಿ, ಕಾಲು ಕಳೆದುಕೊಂಡವರಿಗೆ ಉಚಿತ ಕೃತಕ ಕಾಲು ಜೋಡಣೆ ಕಾರ್ಯಕ್ರಮವನ್ನು ಪ್ರತೀ ವರ್ಷ ಹಮ್ಮಿಕೊಳ್ಳಬೇಕೆಂಬ ಅನಿಸಿಕೆ ನನ್ನದು. ಕಾಲಿಲ್ಲದವರು ಮತ್ತೊಬ್ಬರ ನೆರವನ್ನು ಪಡೆಯದೇ ಜೀವನ ಸಾಗಿಸಲು ಸಾಧ್ಯವಿಲ್ಲ ಎನ್ನುವುದು ಬೇಸರದ ಸಂಗತಿ. ಇದೀಗ ಚೆನ್ನೈ ಫ್ರೀಡಂ ಟ್ರಸ್ಟ್‌ರವರು ಕಾಲಿಲ್ಲದ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಕೃತಕ ಕಾಲು ಜೋಡಣೆ ಮಾಡುತ್ತಿರುವುದರಿಂದ ಕಾಲಿಲ್ಲದ ಫಲಾನುಭವಿಗಳಿಗೆ ಈ ಯೋಜನೆ ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದರು.

ಸಹಕರಿಸಿದವರಿಗೆ ಗೌರವ:
ಕಾಲು ಕಳೆದುಕೊಂಡ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಕುರಿತು ಕಾಲು ಕಳೆದುಕೊಂಡವರ ಕಾಲಿನ ಅಳತೆಯನ್ನು ಮಾಡಿ ಸಹಕರಿಸಿದ ಫ್ರೀಡಂ ಟ್ರಸ್ಟ್‌ನ ಸಿಬ್ಬಂದಿಗಳಾದ ಜಯವೇಲು, ಸ್ಟೀಫನ್, ಬಾಲಾಜಿ, ರೋಯ್ ಹಾಗೂ ಕಾರ್ಯಕ್ರಮ ನಡೆಸಲು ಸ್ಥಳಾವಕಾಶವನ್ನು ಮಾಡಿಕೊಟ್ಟ ಶಾರದಾ ಭಜನಾ ಮಂದಿರದ ಅಧ್ಯಕ್ಷ ಸಾಯಿರಾಂರವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್‌ನ ದಂತ ವೈದ್ಯೆ ಡಾ.ಅಭಿನಿತಾ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರಿನ ಸಮುದಾಯ ಸೇವಾ ವಿಭಾಗದ ನಿಯೋಜಿತ ನಿರ್ದೇಶಕ ಡಾ.ಶ್ರೀಪ್ರಕಾಶ್ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ನಿಯೋಜಿತ ಕಾರ್ಯದರ್ಶಿ ಮಧು ನರಿಯೂರು ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಎ.ಜೆ ರೈರವರು ಚೆನ್ನೈ ಫ್ರೀಡಂ ಟ್ರಸ್ಟ್‌ನ ಸ್ಥಾಪಕ ಡಾ.ಸುಂದರ್ ಹಾಗೂ ರೋಟರಿ ಜಿಲ್ಲೆ ೩೧೮೧, ವಲಯ ೫ರ ನಿಯೋಜಿತ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂರವರ ಪರಿಚಯ ಮಾಡಿದರು. ನಿವೃತ್ತ ಶಿಕ್ಷಕ ಹಾಗೂ ರೋಟರಿ ಕ್ಲಬ್ ಪುತ್ತೂರು ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

೨೦ ಫಲಾನುಭವಿಗಳು, ರೂ.20 ಲಕ್ಷ ವೆಚ್ಚ..
ಚಿಕ್ಕಮಂಗಳೂರು, ಭದ್ರಾವತಿ, ಬೆಳಗಾವಿ, ಉಡುಪಿ, ಸುಳ್ಯ, ಬೆಳ್ತಂಗಡಿ, ಕಡಬ ಸೇರಿದಂತೆ ಪುತ್ತೂರು ಆಸುಪಾಸಿನ 20 ಮಂದಿ ಕಾಲಿಲ್ಲದ ಫಲಾನುಭವಿಗಳಿಗೆ ಅವರ ಕಾಲಿನ ಅಳತೆಗನುಗುಣವಾಗಿ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ಉಚಿತವಾಗಿ ಕೃತಕ ಕಾಲಿನ ಜೋಡಣೆಯನ್ನು ಮಾಡಿಕೊಡಲಾಯಿತು. ಜೊತೆಗೆ ಒಂದು ವರ್ಷದ ವಾರಂಟಿಯ ಕಿಟ್‌ನ್ನು ಕೂಡ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಒಂದು ವರ್ಷದೊಳಗೆ ನಿರ್ಮಿಸಿದ ಕೃತಕ ಕಾಲುಗಳಲ್ಲಿ ಬಿಗಿತ, ಸಡಿಲಿಕೆ ಹೀಗೆ ಯಾವುದಾದರೂ ತೊಂದರೆ ಕಂಡುಬಂದಲ್ಲಿ ಕೂಡಲೇ ಚೆನ್ನೈ ಫ್ರೀಡಂ ಟ್ರಸ್ಟ್‌ರವರಿಗೆ ಫೋನಾಯಿಸಿದ್ದಲ್ಲಿ ಅವರಿಗೆ ಕೂಡಲೇ ಬದಲಿ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಕೃತಕ ಕಾಲುಗಳು ಯಾವುದೇ ರೆಡಿಮೇಡ್ ಅಲ್ಲ ಬದಲಾಗಿ ಫಲಾನುಭವಿಗಳ ಕಾಲಿನ ಅಳತೆಯನ್ನು ತೆಗೆದುಕೊಂಡು ಮಾಡಿದುದಾಗಿದೆ. ಇದನ್ನು ಮತ್ತೊಬ್ಬ ವ್ಯಕ್ತಿಗೆ ಧರಿಸಲು ಸಾಧ್ಯವಾಗುವುದಿಲ್ಲ.

ಕೃತಕ ಕಾಲು ಜೋಡಣೆಗೆ ಆಗಮಿಸಿದ 20 ಮಂದಿ ಫಲಾನುವಿಗಳಿಗೆ ಚೆನ್ನೈಯಿಂದ ನಿರ್ಮಾಣ ಮಾಡಿಸಿದ ಅವರವರ ಕಾಲಿನ ಪರಿಕರವನ್ನು ಕಾಲಿಗೆ ಜೋಡಿಸಲಾಗಿದ್ದು, ಬಳಿಕ ಆ 20 ಮಂದಿಯಲ್ಲಿ ಯಾರಿಗೆ ನಡೆಯಲು ಶಕ್ತರಾಗಿದ್ದಾರೋ ಅವರನ್ನು ದೇವಸ್ಥಾನದ ವರಾಂಡದಲ್ಲಿ ನಡೆಸುವ ಮೂಲಕ ಕಾಲಿನ ಪರಿಕರಗಳು ಸರಿಯಾಗಿವೆಯೇ ಎಂಬುದನ್ನು ಪರೀಕ್ಷಿಸಲಾಯಿತು. ಬಳಿಕ ಎದ್ದುನಿಂತು ಫಲಾನುಭವಿಗಳೊಂದಿಗೆ ಎಲ್ಲರೂ ಸೇರಿಕೊಂಡು ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಶಿಬಿರಕ್ಕೆ ಸಮಾಪ್ತಿ ಹಾಡಲಾಯಿತು.

ಅಂಗವಿಕಲರಿಗೆ ಅನುಕಂಪ ಬೇಡ ಬದಲಿಗೆ ಅವಕಾಶ ಕೊಡಿ ಎಂಬಂತೆ ಚೆನ್ನೈ ಫ್ರೀಡಂ ಟ್ರಸ್ಟ್‌ರವರು ರೋಟರಿ ಪುತ್ತೂರುರವರ ಸಹಕಾರದಲ್ಲಿ ನಮ್ಮಂತಹ ಕಾಲು ಕಳೆದುಕೊಂಡವರಿಗೆ ಕೃತಕ ಕಾಲುಗಳನ್ನು ಕೊಟ್ಟು ಉತ್ತಮ ಅವಕಾಶ ಮಾಡಿಕೊಟ್ಟಿರುವುದಕ್ಕೆ ವಿಶೇಷ ಧನ್ಯವಾದಗಳು. ನಮಗಿಲ್ಲಿ ನೀಡಿದ ಕಾಲಿನ ಪರಿಕರಗಳು ಉತ್ತಮ ಗುಣಮಟ್ಟದಿಂದ ಕೂಡಿದ ಪರಿಕರಗಳಾಗಿವೆ ಮಾತ್ರವಲ್ಲದೆ ಪರಿಕರಗಳ ಬಗ್ಗೆ ಗ್ಯಾರಂಟಿಯನ್ನು ಕೂಡ ನೀಡಿರುವುದು ಸಂತೋಷ ತಂದಿದೆ-ಕಿರಣ್, ಓರ್ವ ಫಲಾನುವಿ, ಸಂಯುಕ್ತ ಕರ್ನಾಟಕದ ವರದಿಗಾರರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.