- ಹಲಸಿನ ಮರಗಳನ್ನು ಕಡಿಯದೆ ಕೃಷಿಕರು ಉಳಿಸಿಕೊಳ್ಳುವ ಜಾಣತನ ಪ್ರದರ್ಶಿಸಬೇಕು
- ಹಲಸು ಸಾರ ಮೇಳದ ಗೋಷ್ಠಿಯಲ್ಲಿ ಹಲಸು ಕೃಷಿಕ ಶಿವಪ್ರಸಾದ್ ವರ್ಮುಡಿ
ಪುತ್ತೂರು: ಆಹಾರ ಕ್ಷಾಮದ ಸಂದರ್ಭದಲ್ಲಿ ಹಲಸು ಪರ್ಯಾಯ ಆಹಾರವಾಗಿ ಬಳಸಲು ಉತ್ತಮ ಫಲವಾಗಿದೆ. ಉತ್ತರ ಕರ್ನಾಟಕದ ಅಥವಾ ಹೊರ ರಾಜ್ಯಗಳ ಹಲಸಿನ ತಳಿಗಳನ್ನು ಅಭಿವೃದ್ಧಿ ಪಡಿಸುವುದು ಅಥವಾ ತೋಟಗಳನ್ನಾಗಿ ಮಾಡುವುದು ಇಲ್ಲಿಯ ಹವಾಗುಣಕ್ಕೆ ಸೂಕ್ತವಲ್ಲ. ಸ್ಥಳೀಯ ತಳಿಗಳನ್ನು ಬೆಳೆಸುವುದು, ಅಡಿಕೆ ಹಾಗೂ ತೆಂಗಿನ ತೋಟಗಳಲ್ಲಿ, ಮನೆಯ ಪರಿಸರದಲ್ಲಿರುವ ಹಲಸಿನ ಮರಗಳನ್ನು ಕಡಿಯದೆ ಅವುಗಳನ್ನು ಉಳಿಸಿಕೊಳ್ಳುವ ಜಾಣತನವನ್ನು ಕೃಷಿಕರು ಪ್ರದರ್ಶಿಸಬೇಕು ಎಂದು ಕೃಷಿಕ ಪೆರ್ಲದ ವರ್ಮುಡಿ ಶಿವಪ್ರಸಾದ್ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಪುತ್ತೂರಿನ ಹಲಸು ಸ್ನೇಹ ಸಂಗಮ, ಐ.ಐ.ಎಚ್.ಆರ್. ಬೆಂಗಳೂರು, ಕ್ಯಾಂಪ್ಕೋ ಮಂಗಳೂರು, ಮುಳಿಯ ಜ್ಯುವೆಲ್ಲರ್ಸ್, ಶಿಬರ ನವನೀತ ನರ್ಸರಿ ಸಹಯೋಗದಲ್ಲಿ ನಡೆಯುತ್ತಿರುವ ಹಲಸು ಸಾರ ಮೇಳದಲ್ಲಿ ಜೂ.16ರಂದು ನಡೆದ ಗೋಷ್ಠಿಯಲ್ಲಿ ಹಲಸು ಕೃಷಿ ಅನುಭವ ಕುರಿತು ಉಪನ್ಯಾಸ ನೀಡಿದರು.
ಹಿಂದೆ ಪುತ್ತೂರು-ಕಾಸರಗೋಡು ರಸ್ತೆಯ ಇಕ್ಕಡೆಗಳಲ್ಲೂ ನೂರಾರು ಹಲಸಿನ ಮರಗಳನ್ನು ನಾವು ಕಾಣಬಹುದಾಗಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ಹಲಸಿನ ಮರಗಳನ್ನು ನಾಶ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಈಗ ಹಲಸಿನ ಗಿಡಗಳನ್ನು ನೆಟ್ಟು ತೋಟಗಳನ್ನು ಮಾಡಬೇಕಾದ ಪರಿಸ್ಥಿತಿ ಬಂದಿದೆ. ಆರೋಗ್ಯಕರ ಫಲವಾದ ಹಲಸು ಜಾಗತಿಕ ಮನ್ನಣೆ ಪಡೆದಿದೆ. ಹಲಸು ನೆಟ್ಟು ಬೆಳೆಸಿದವರ ಜೀವನ ನಿರ್ವಹಣೆಗೆ ಹಲಸು ಆರ್ಥಿಕ ಪ್ರೊತ್ಸಾಹ ನೀಡುತ್ತಿದೆ. ವಿನಾಶದ ಅಂಚಿಗೆ ತಲುಪಿರುವ ಹಲಸು ತಳಿಗಳ ಸಂರಕ್ಷಣೆಗೆ ಕೃಷಿಕರು ಮುಂದಾಗಬೇಕಾಗಿದೆ. ಎಲ್ಲಾ ಕೃಷಿಕರು ಸಾಧ್ಯವಾದಷ್ಟು ಹಲಸಿನ ಗಿಡಗಳನ್ನು ನೆಟ್ಟು ತೋಟ ಮಾಡಬೇಕು. 2ಎಕರೆಗಳಷ್ಟು ಹಲಸಿನ ತೋಟ ಇದ್ದರೆ ಇದರಲ್ಲಿ ಬೆಳೆಯುವ ಹಲಸಿನ ಹಣ್ಣು ಮತ್ತು ಕಾಯಿಗಳಿಂದ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದೆ. ಅಲ್ಲದೇ ಹಲಸಿನ ಕಾಯಿ ಮತ್ತು ಹಣ್ಣುಗಳಿಗೆ ಮಾರುಕಟ್ಟೆಯ ವಾತಾವರಣವಿದೆ ಎಂದರು. ಹಲಸಿನ ಗಿಡಗಳು ನಾಲ್ಕು ವರ್ಷದ ಪೋಷಣೆಯ ಬಳಿಕ ಫಲ ನೀಡಲು ಆರಂಭಿಸುತ್ತವೆ. ಹಲಸಿನ ವಿವಿಧ ತಳಿಗಳನ್ನು ಒಂದೇ ತೋಟದಲ್ಲಿ ಬೆಳೆಸುವ ಬದಲು ಸ್ಥಳೀಯವಾಗಿ ಮಾರುಕಟ್ಟೆ ಇರುವ ಹಲಸಿನ ಒಂದೆರಡು ತಳಿಗಳನ್ನು ನೆಟ್ಟು ತೋಟ ಮಾಡಿದರೆ ಅದು ಲಾಭದಾಯಿಕವಾಗುತ್ತದೆ. ಹಲಸಿನ ತಳಿಗಳ ಸಂಗ್ರಹ ಉತ್ತಮ ಹವ್ಯಾಸವಾದರೂ ಹಲಸು ಕೃಷಿಯ ಮಟ್ಟಿಗೆ ಒಂದೆರಡು ತಳಿಗಳ ತೋಟವನ್ನು ಮಾಡುವುದು ಕ್ಷೇಮಕರ ಎಂದು ಅವರು ಹೇಳಿದರು.
ಹಲಸು ಸ್ನೇಹ ಸಂಗಮದ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ ಉಪಸ್ಥಿತರಿದ್ದರು. ಕೃಷಿ ಅಂಕಣಕಾರ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.