ನಿಡ್ಪಳ್ಳಿ: ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘದಲ್ಲಿ 2019-20ನೇ ಸಾಲಿನ ಉಚಿತ ಯಕ್ಷಗಾನ ನಾಟ್ಯ ತರಗತಿ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ಜೂ. 15ರಂದು ಉದ್ಘಾಟನೆಗೊಂಡಿತು.
ಸುಬೋಧ ಪ್ರೌಢಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ದೀಪ ಬೆಳಗಿಸಿ ಉದ್ಘಾಟಿಸಿ, ಯಕ್ಷಗಾನಕ್ಕೂ ಪಾಣಾಜೆಗೂ ಬಹಳ ಹತ್ತಿರದ ಸಂಬಂಧ ಬಹಳ ವರ್ಷಗಳಿಂದ ಇದೆ. ಯಕ್ಷಗಾನ ರಂಗದಲ್ಲಿ ಮಹಾನ್ ಸಾಧನೆಗೈದ ದಿ.ಕೆ.ಪಿ.ವೆಂಕಪ್ಪ ಶೆಟ್ಟಿಯಂತವರು ಹುಟ್ಟಿ ಬೆಳೆದ ಕ್ಷೇತ್ರ ಇದು. ಇವರೆಲ್ಲರ ಆದರ್ಶದಿಂದ ಇಂದಿಗೂ ಪಾಣಾಜೆಯಂತಹ ಗ್ರಾಮದಲ್ಲಿ ಯಕ್ಷಗಾನ ಉಳಿದುಕೊಂಡು ಬರುತ್ತಿರುವುದಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಮಂಡಳಿ ನಿದರ್ಶನ ಎಂದು ಶುಭ ಹಾರೈಸಿದರು.
ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಪಾಣಾಜೆ ಗ್ರಾ.ಪಂ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ವೇದಮೂರ್ತಿ ರಾಮ ಭಟ್ ನೀರ್ಚಾಲು, ಪಾಣಾಜೆ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಭಂಡಾರು ಬೈಂಕ್ರೊಡು , ಆರ್ಲಪದವು ಪ್ರಾಥಮಿಕ ಶಾಲಾ ಶಿಕ್ಷಕಿ ವಿಶಾಲಾಕ್ಷಿ, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆ ಶಿಕ್ಷಕ ಶ್ರೀಪ್ರಸಾದ್ ನಡುಕಟ್ಟ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಯಕ್ಷಗಾನ ಕಲಾ ಸಂಘ 30 ವರ್ಷ ಪೂರೈಸಿದ್ದು ಕಳೆದ 9 ವರ್ಷದಿಂದ ಬಾಲಕೃಷ್ಣ ಪೂಜಾರಿ ಉಚಿತ ತರಬೇತಿ ನೀಡುತ್ತಿದ್ದಾರೆ.
ಭಾಗವತರಾದ ಅಮೃತ ಅಡಿಗ. ಎ ಪ್ರಾರ್ಥಿಸಿ ಸಂಘದ ಅಧ್ಯಕ್ಷ ನಾಟ್ಯಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ಸ್ವಾಗತಿಸಿ, ವಂದಿಸಿದರು. ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಅಡಿಗ. ಎ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಕಾಟುಕುಕ್ಕೆ ಹಾಗೂ ಮತ್ತೀತರರು ಸಹಕರಿಸಿದರು.