ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ರೂ. 400 ಕೋಟಿ ಮೌಲ್ಯದ ಭೂ ಡಿನೋಟಿಫಿಕೇಷನ್ ಆರೋಪ – ಮಾಜಿ ಶಾಸಕ ವಸಂತ ಬಂಗೇರರ ಶಿಫಾರಸ್ಸು ಎಂದು ದೂರುದಾರರ ಹೇಳಿಕೆ-ಇದಕ್ಕೂ ನನಗೂ ಸಂಬಂಧವಿಲ್ಲ ಎಂದ ಬಂಗೇರ

0

ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ 400 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರು ಬಿಜೆಪಿ ಮುಖಂಡ ಮತ್ತು ಬಿಬಿಎಂಪಿ ಸದಸ್ಯ ಎನ್ ಆರ್ ರಮೇಶ್ ಆರೋಪಿಸಿದ್ದಾರೆ. 400 ಕೋಟಿ ರೂಪಾಯಿ ಭೂ ಡಿನೋಟಿಫಿಕೇಷನ್ ಗೆ ಅಂದಿನ ಬೆಳ್ತಂಗಡಿ ಶಾಸಕ ವಸಂತ ಬಂಗೇರರ ಶಿಫಾರಸ್ಸು ಇತ್ತು ಎಂದು ದೂರು ದಾರರು ಆರೋಪಿಸಿದ್ದಾರೆ.

ಏನಿದು ಡಿ ನೋಟಿಫಿಕೇಷನ್ ಪ್ರಕರಣ:

400 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಆಈಅ ಸೊತ್ತು ಮೂರನೇ ವ್ಯಕ್ತಿಯ ಪಾಲಾಗುವಂತೆ ಮಾಡಿದ್ದಾರೆ ಅನ್ನುವುದೇ ಸಿದ್ಧರಾಮಯ್ಯರ ವಿರುದ್ಧದ ಆರೋಪವಾಗಿದೆ. ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾಗಿದ್ದ ಮಹೇಂದ್ರ ಕುಮಾರ್ ಜೈನ್, ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳಾಗಿದ್ದ ಎನ್. ನರಸಿಂಹಮೂರ್ತಿ, ನಗರಾಭಿವೃದ್ಧಿ ಇಲಾಖೆ ಕಾನೂನು ಕೋಶದ ಅಧಿಕಾರಿಗಳಾಗಿದ್ದ ಎರ್ಮಲ್ ಕಲ್ಪನಾ, ಬಿಡಿಎ ಆಯುಕ್ತರಾಗಿದ್ದ ಶಾಂಭಟ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ದೂರು ದಾರ ಎನ್ ಆರ್ ರಮೇಶ್ ತಿಳಿಸಿದ್ದಾರೆ.

ಭೂಪಸಂದ್ರ ಗ್ರಾಮದಲ್ಲಿ 06 ಎಕರೆ 26 ಗುಂಟೆ ವಿಸ್ತೀರ್ಣದ ಬಿಡಿಎ ಸೊತ್ತು

2ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು 1984 ರಲ್ಲಿ ಬಿಡಿಎ ಭೂಪಸಂದ್ರ ಗ್ರಾಮದ ಪ್ರದೇಶಗಳನ್ನ ಭೂಸ್ವಾಧೀನ ಪಡಿಸಿಕೊಂಡಿತ್ತು. 2016ರಲ್ಲಿ ಬಿಡಿಎ ಸೊತ್ತನ್ನು ಡಿನೊಟಿಫಿಕೇಷನ್ ಮಾಡಿದ್ದಾರೆಂದು ರಮೇಶ್ ಆರೋಪಿಸಿದ್ದಾರೆ. ಕೀರ್ತಿರಾಜ್ ಶೆಟ್ಟಿ ಎನ್ನುವವರಿಗೆ ಡಿನೊಟಿಫಿಕೇಷನ್ ಮಾಡಿಕೊಡಲಾಗಿದೆ ಅಂತ ದೂರಿನಲ್ಲಿ ಹೇಳಲಾಗಿದೆ.

ದೂರುದಾರರ ಪ್ರಕಾರ ವಸಂತ ಬಂಗೇರರ ಪಾತ್ರವೇನು?

ಸಿದ್ಧರಾಮಯ್ಯನವರು ಮಾಜಿ ಶಾಸಕ ವಸಂತ ಬಂಗೇರರ ಶಿಫಾರಸ್ಸಿನ ಮೇರೆಗೆ ಡಿನೋಟಿಫಿಕೇಶನ್ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ 2014ರಲ್ಲಿ ಇದಕ್ಕೆ ವಸಂತ ಬಂಗೇರರು ಶಿಫಾರಸ್ಸು ಮಾಡಿದ್ದಾರೆಂದು ತನ್ನ ಆರೋಪದಲ್ಲಿ ತಿಳಿಸಿದ್ದಾರೆ.

ಸಿಎಂ ಮತ್ತು ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲಿ ಬಂಗೇರ ಹೆಸರಿಲ್ಲ

ಆದರೆ ದೂರು ದಾರರು ಲೋಕಾಯುಕ್ತಕ್ಕೆ ಬರೆದಿರುವ ಪತ್ರದಲ್ಲಿ ಮತ್ತು ಸಿಎಂಗೆ ಬರೆದಿರುವ ಪತ್ರದಲ್ಲಿ ವಸಂತ ಬಂಗೇರರ ಹೆಸರು ಸೇರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಆದರೆ ದೂರಿನ ಜೊತೆಗೆ ನೀಡಿದ ದಾಖಲೆಯಲ್ಲಿ ವಸಂತ ಬಂಗೇರರು ಶಿಫಾರಸ್ಸಿಗಾಗಿ 2014ರಲ್ಲಿ ಸಿದ್ಧರಾಮಯ್ಯನವರಿಗೆ ಬರೆದ ಪತ್ರದ ಪ್ರತಿಯನ್ನು ಲಗ್ಗತ್ತಿಸಿರುವುದಾಗಿ ತಿಳಿಸಿದ್ದಾರೆ.

ಇದು ಸತ್ಯಕ್ಕೆ ದೂರವಾದ ಮಾತು: – ಮಾಜಿ ಶಾಸಕ ಕೆ. ವಸಂತ ಬಂಗೇರ

ಇದೊಂದು ರೆವಿನ್ಯೂ ಸೈಟಿನ ವಿಚಾರ. ಈ ರೆವೆನ್ಯೂ ಸೈಟಿನ ವಿಚಾರದಲ್ಲಿ ಒಬ್ಬರು ಬೆಂಗಳೂರಿನವರು ನನ್ನ ಹತ್ತಿರ ಬಂದು ನಾನು ರೆವೆನ್ಯೂ ಸೈಟಿನಲ್ಲಿ ಅಕ್ರಮವಾಗಿ ಮನೆ ಕಟ್ಟಿದಿದ್ದೇನೆ, ಅದನ್ನು ಸಕ್ರಮ ಮಾಡಿಸಿಕೊಡಬೇಕೆಂದು ಕೇಳಿಕೊಂಡರು. ಆ ಸಂದರ್ಭ ನಾನು ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರಿಗೆ ಒಂದು ಪತ್ರ ಬರೆದಿದಿದ್ದೇನೆ. ಕಾನೂನು ಪ್ರಕಾರ ಸಾಧ್ಯವಾದ್ರೆ ಮನೆಯನ್ನು ಸಕ್ರಮ ಮಾಡಿಕೊಡುವ ಕೆಲಸ ಮಾಡಿಕೊಡಿ ಅಂತ ಬರೆದಿದ್ದೇನೆ. ಆ ಪತ್ರದಲ್ಲಿ ಸಿದ್ಧರಾಮಯ್ಯನವರು ಸೂಕ್ತ ತನಿಖೆ ನಡೆಸಿ ವಿಚಾರ ತಿಳಿಸುವುದು ಅಂತ ಕಮಿಷನರ್ ಗೆ ಬರೆದರು. ಬರೆಯುವ ಮೊದಲು ಇದನ್ನು ಎಬ್ಬಿಸಿದವರು ಅಂದು ಎಂ ಎಲ್ ಸಿ ಆಗಿದ್ದ ಪುಟ್ಟಸ್ವಾಮಿ. ಆ ಸಂದರ್ಭದಲ್ಲಿ ದೂರು ದಾಖಲಾದಾಗ ತನಿಖೆಗೆ ಹೋಯ್ತು, ತನಿಖೆ ನಡೆಸಿದ ಕಮಿಷನರ್ ಆ ಸೈಟ್ ನಲ್ಲಿ ಮನೆಯೂ ಇಲ್ಲ, ಯಾವ ಕಟ್ಟಡವೂ ಇಲ್ಲ ಅಂತ ತಿಳಿಸಿದರು. ಸುಮಾರು ವರ್ಷದ ಹಿಂದೆ ಬಿಡಿಎ ಕೈವಶವಾಗಿತ್ತು. ಆ ನಂತರ ಕೇಸ್ ರಿಜೆಕ್ಟ್ ಆಗಿತ್ತು. ಐದಾರು ವರ್ಷದ ಹಿಂದೆ ಪುಟ್ಟಸ್ವಾಮಿ ಆರೋಪಿಸಿದರು, ಈಗ ರಮೇಶ ಅಂತ ಹುಟ್ಟಿಕೊಂಡಿದ್ದಾರೆ. 400 ಕೋಟಿ ಅಂತ ಆರೋಪ ಮಾಡ್ತಿದ್ದಾರೆ. ನನ್ನಂತವರು ಏನಾದ್ರೂ ಕೊಟ್ರೆ ಸರಿ ಮಾಡುವ ಅಂತ ದುಡ್ಡು ಹೊಡೆಯಲು ಮಾಡುವ ತಂತ್ರವಿದು. ಇದರ ಕೇಸ್ ಕ್ಲೋಸ್ ಆಗಿದೆ, ಇದರಲ್ಲಿ ಸಿದ್ಧರಾಮಯ್ಯರಿಗೆ ಆಗಲಿ ನನಗಾಗಲಿ ಯಾವುದೇ ಸಂಬAಧವಿಲ್ಲ ಅಂತ ಹೇಳುವುದಕ್ಕೆ ಇಚ್ಚಿಸುತ್ತೇನೆ. ಡಿ ನೋಟಿಫಿಕೇಷ್ ಆಗಿಯೇ ಇಲ್ಲ, ಅದಕ್ಕೆ ನಾನು ಪತ್ರ ಬರೆದಿದ್ದೂ ಅಲ್ಲ. ರೆವೆನ್ಯೂ ಸೈಟ್‌ನಲ್ಲಿ ಕಟ್ಟಡ ಇದ್ದ ಭಾಗವಾದರು ಕೊಡಿಸಿ ಅಂತ ಹೇಳಿದರು, ಅದನ್ನೇ ನಾನು ಪತ್ರದಲ್ಲಿ ಬರೆದಿದ್ದೇನೆ. ಲೋಕಾಯುಕ್ತಕ್ಕಲ್ಲ ಅದಕ್ಕಿಂತ ಮೇಲಿನ ತನಿಖಾ ಸಂಸ್ಥೆಗಳಿಗೂ ಬೇಕಾದ್ರೂ ದೂರು ನೀಡಲಿ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

LEAVE A REPLY

Please enter your comment!
Please enter your name here