ಅರಣ್ಯಾಧಿಕಾರಿಗಳ ಕಾರ್ಯಾಚರಣೆ; ಸುರಕ್ಷಿತವಾಗಿ ಮತ್ತೆ ಕಾಡಿಗೆ
ನೆಲ್ಯಾಡಿ: ಪಾಲು ಕೆರೆಗೆ ರಾತ್ರಿ ವೇಳೆ ಬಿದ್ದಿದ್ದ ಜಿಂಕೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಸುರಕ್ಷಿತವಾಗಿ ಮೇಲಕ್ಕೆತ್ತಿ ಮತ್ತೆ ಕಾಡಿಗೆ ಬಿಟ್ಟಿರುವ ಘಟನೆ ಗೋಳಿತ್ತೊಟ್ಟು ಸಮೀಪದ ಆಲಂತಾಯದಲ್ಲಿ ಜೂ.16ರಂದು ನಡೆದಿದೆ.
ಗೋಳಿತ್ತೊಟ್ಟು ಸಮೀಪದ ಆಲಂತಾಯ ಗ್ರಾಮದ ತಿರ್ಲೆ ನಿವಾಸಿ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯೆ ಹೇಮಲತಾ ಎಂಬವರ ತೋಟದಲ್ಲಿನ ನೀರಿಲ್ಲದ ಪಾಲುಬಿದ್ದ ಕೆರೆಗೆ ಜಿಂಕೆಯೊಂದು ಬಿದ್ದಿರುವುದು ಜೂ.16ರಂದು ಬೆಳಿಗ್ಗೆ ಮನೆಯವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ಪಂಜ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಸುಮಾರು 9 ಗಂಟೆಯ ವೇಳೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳೀಯರ ನೆರವಿನೊಂದಿಗೆ ಸುಮಾರು ಒಂದೂವರೇ ತಾಸು ಕಾರ್ಯಾಚರಣೆ ನಡೆಸಿ ಬಾವಿಗೆ ಬಿದಿದ್ದ ಜಿಂಕೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಶಿವಾರು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ಪಂಜ ವಲಯದ ಉಪವಲಯ ಅರಣ್ಯಾಧಿಕಾರಿ ಸುನಿಲ ಕುಮಾರ, ಅರಣ್ಯ ರಕ್ಷಕ ನಾರಾಯಣ ಸಿಂಗ, ಅರಣ್ಯ ರಕ್ಷಕ ಮಂಜುನಾಥ ನಾಯ್ಕ್ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಸಂದೇಶ್, ತೀರ್ಥೇಶ್, ದಿನೇಶ್, ಭಾಸ್ಕರ ಗೌಡ, ಕೊರಗಪ್ಪ ಗೌಡ ಕಲ್ಲಡ್ಕ ಮತ್ತಿತರರು ಸಹಕರಿಸಿದರು.