ಪುತ್ತೂರು: ರಸ್ತೆ ಬದಿಯಲ್ಲಿ ಬರೆಗಳ ಮಣ್ಣು ಸಡೀಲಗೊಂಡ ಹಿನ್ನಲೆಯಲ್ಲಿ ಕೆಮ್ಮಾಯಿ, ಕೇಪುಳು, ಬನ್ನೂರಿಗೆ ನೀರಿನ ಸಂಪರ್ಕವನ್ನು ಹೊಂದಿದ 300 ಎಮ್,ಎಮ್ ವ್ಯಾಸದ ಡಿ.ಐ ಬೃಹತ್ ಗಾತ್ರದ ಪೈಪ್ ಬರೆಯಿಂದ ಕುಸಿದು ಪೈಪ್ಗೆ ಹಾನಿಯಾದ ಘಟನೆ ಜೂ.15ರಂದು ಸಂಜೆ ನಡೆದಿದೆ. ಇದೀಗ ಅದರ ದುರಸ್ಥಿ ಕಾರ್ಯವೂ ನಡೆಯುತ್ತಿದ್ದು ಸದ್ಯದ ಮಟ್ಟಿಗೆ ಕೆಮ್ಮಾಯಿ, ಕೇಪುಳು, ಬನ್ನೂರು ಪರಿಸರಕ್ಕೆ ಕುಡಿಯುವ ನೀರಿನ ಸಂಪರ್ಕಕ್ಕೆ ತೊಂದರೆಯಾಗಿದೆ. ಪುತ್ತೂರು, ಉಪ್ಪಿನಂಗಡಿ ರಸ್ತೆಗೆ ಸಂಬಂಧಿಸಿ ಕೇಪುಳುವಿನಿಂದ ಕೃಷ್ಣನಗರ ತನಕ ನಡೆದ ರಸ್ತೆ ಅಗಲೀಕರಣ ಸಂದರ್ಭ ರಸ್ತೆಯ ಬದಿಯ ಬರೆಯನ್ನು ಅಗೆಯಲಾಗಿತ್ತು.
ಆದರೆ ಬರೆಯ ಬದಿಯಲ್ಲೇ ಹಾದು ಹೊದ ಎಡಿಬಿ ನೀರಿನ ಪೈಪ್ ಲೈನ್ ಇದೀಗ ಮಳೆಗೆ ಸಡೀಲಗೊಂಡು ಕುಸಿದಿದೆ. ಪರಿಣಾಮ ಸುಮಾರು 6 ಮೀಟರ್ ಉದ್ದದ 9 ಪೈಪ್ ತುಂಡುಗಳು ಜೋಯಿಂಟ್ ಬಿಟ್ಟು ಧರೆಗುರುಳಿದೆ. ಇದೀಗ ಪೈಪ್ನ್ನು ಜೆಸಿಬಿ ಮೂಲಕ ಎತ್ತಿ ರಸ್ತೆಯ ಪಕ್ಕಕ್ಕೆ ಇಟ್ಟು ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ನಗರಸಭ ಸದಸ್ಯ ಸುಂದರ ಪೂಜಾರಿ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಕಾರ್ಯನಿರ್ವಾಹಕ ಇಂಜಿನಿಯರ್ ಅರುಣ್, ನೀರಿನ ವಿಭಾಗದ ಮುಖ್ಯಸ್ಥ ವಸಂತ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಹಗಲು ರಾತ್ರಿ ಕೆಲಸ:
ಕುಡಿಯುವ ನೀರಿನ ಪೈಪ್ ಹಾನಿಯಾದ ಹಿನ್ನೆಲೆಯಲ್ಲಿ ತಕ್ಷಣ ಪೈಪ್ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆ ಅವರು ರಸ್ತೆ ಅಗಲೀಕರಣ ಕಾಮಗಾರಿರ ವೇಳೆ ತಡೆಗೋಡೆ ಕಟ್ಟಿ ಕೊಡುತ್ತೇವೆ ಎಂದು ತಿಳಿಸಿದ್ದರು. ಆದರೆ ತಡೆಗೋಡೆ ಪೂರ್ಣಗೊಳಿಸ ಹಿನ್ನಲೆಯಲ್ಲಿ ಧರೆಕುಸಿತ ಉಂಟಾಗಿ ಪೈಪ್ಗೆ ಹಾನಿಯಾಗಿದೆ. ಇದೀಗ ಪೈಪ್ ದುರಸ್ಥಿ ಕಾರ್ಯಕ್ಕೆ ಮಣ್ಣು ತೆಗೆಯುವ ಕೆಲಸ ನಡೆಸಲಾಗುತ್ತಿದೆ. ಪೈಪ್ ಕಾಮಗಾರಿಗೆ ಸುಮಾರು ರೂ. 4 ರಿಂದ 5ಲಕ್ಷ ತಗಲಬಹುದು. ಹಗಲು ರಾತ್ರಿ ಕೆಲಸ ಮಾಡಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ದುರಸ್ಥಿ ಕಾರ್ಯ ಪೂರ್ಣಗೊಳ್ಳಲಿದೆ