ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ವಿರುದ್ಧ ಸೋತು ಅಭಿಮಾನಿಗಳಿಂದ, ಅವರ ದೇಶದ ಜನರಿಂದಲೇ ಟೀಕೆಗೊಳಗಾಗಿರುವ ಪಾಕಿಸ್ತಾನ ತಂಡದ ಆಟಗಾರರು ಮ್ಯಾಚ್ ಮುಗಿದ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದಾರೆನ್ನಲಾದ ಫೋಟೋ, ವಿಡಿಯೋಗಳು ವೈರಲ್ ಆಗಿವೆ. ಇದೇ ವಿಡಿಯೋ ಪಾಕ್ ಆಟಗಾರ ಶೋಯೆಬ್ ಮಲ್ಲಿಕ್ ಪತ್ನಿ, ಭಾರತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕ್ ನಟಿ ವೀಣಾ ಮಲ್ಲಿಕ್ ನಡುವಿನ ಟ್ವೀಟ್ ಸಮರಕ್ಕೆ ಕೂಡ ಕಾರಣವಾಗಿದೆ. ಭಾರತ ವಿರುದ್ಧ ಸೋತರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಪಾಕ್ ಆಟಗಾರರು ಶೀಶಾ ಪ್ಲೇಸ್ನಲ್ಲಿ ಪಾರ್ಟಿ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದನ್ನು ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಹಿಗ್ಗಾಮುಗ್ಗಾ ಬೈದಿದ್ದಾರೆ. ಆದರೆ, ಈ ಪಾರ್ಟಿಯಲ್ಲಿ ಸಾನಿಯಾ ಮಿರ್ಜಾ ತನ್ನ 9ತಿಂಗಳ ಮಗ ಇಜಾನ್ ಜತೆ ಇರುವುದೂ ಕಾಣಿಸಿದ್ದು ಈ ಬಗ್ಗೆ ನಟಿ ವೀಣಾ ಮಲ್ಲಿಕ್ ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಟ್ವೀಟ್ನಿಂದ ಸಿಟ್ಟಾದ ಸಾನಿಯಾ ಮಿರ್ಜಾ, ವೀಣಾ ಅವರೇ ನಾನು ನನ್ನ ಮಗುವನ್ನು ಶೀಶಾ ಸ್ಥಳಕ್ಕೆ ಕರೆದುಕೊಂಡು ಹೋಗಿಲ್ಲ. ನನಗೆ ಅನ್ನಿಸುವ ಪ್ರಕಾರ ಈ ವಿಚಾರದಲ್ಲಿ ನೀವಾಗಲಿ, ಜಗತ್ತಿನ ಇನ್ಯಾರೇ ಆಗಲಿ ಮೂಗುತೂರಿಸುವ ಅಗತ್ಯವಿಲ್ಲ. ಇನ್ನು ಹೇಳಬೇಕೆಂದರೆ ಪಾಕ್ ಕ್ರಿಕೆಟ್ ಆಟಗಾರರು ಏನು ತಿನ್ನಬೇಕು, ಅವರು ಎಷ್ಟು ಹೊತ್ತಿಗೆ ಏಳಬೇಕು, ನಿದ್ರಿಸಬೇಕು ಎಂದೆಲ್ಲ ಹೇಳಲು, ನಾನು ಅವರ ಡಯೆಟಿಷಿಯನ್ ಆಗಲೀ, ಅಮ್ಮನಾಗಲೀ, ಟೀಚರ್ ಆಗಲೀ ಅಲ್ಲ ಎಂದು ಕಿಡಿಕಾರಿದ್ದಾರೆ. ಹಾಗೇ ನಿಮ್ಮ ಕಾಳಜಿಗೆ ಧನ್ಯವಾದ ಎಂದೂ ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿ, ಇದು ಆಟದ ದಿನ ನಡೆದ ಪಾರ್ಟಿಯಿಲ್ಲ. ಆಟಗಾರರು ನಿಯಮ ಮೀರಿಲ್ಲ ಎಂದು ಹೇಳಿದೆ. ಆದರೆ, ಈ ಪಾರ್ಟಿ ವಿಡಿಯೋವನ್ನಂತೂ ಜನರು ಸಿಕ್ಕಾಪಟೆ ಟ್ರೋಲ್ ಮಾಡುತ್ತ ವೈರಲ್ ಮಾಡುತ್ತಿದ್ದಾರೆ.