ಕಾನೂನು ಬಾಹಿರವಾಗಿ ಕಡತ ತಯಾರಿಸಿದರೆ ಶಿಸ್ತುಕ್ರಮ ಕಡಬದಲ್ಲಿ ಕಂದಾಯ ಇಲಾಖಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಐವನ್ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸರ್ವೆ ಇಲಾಖೆಯ ಅಧಿಕಾರಿಗಳು ತರಾಟೆಗೆ, ಪರ್‍ಯಾವೇಕ್ಷಕ  ಸಿ.ಕೆ ಮಂಜುನಾಥ್‌ರಿಗೆ ಶೋಕಾಸ್ ನೋಟಿಸು ನೀಡಲು ಸೂಚನೆ

ಮುಖ್ಯಮಂತ್ರಿ ಕಡಬದಲ್ಲಿ ಗ್ರಾಮ ವಾಸ್ತವ್ಯ: ಮುಖ್ಯಮಂತ್ರಿಯವರ ಜನಮೆಚ್ಚಿದ ಕಾರ್ಯಕ್ರಮದಲ್ಲಿ ಒಂದಾದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕಡಬದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು, ಮಾತ್ರವಲ್ಲ ಮಂಗಳೂರಿನ ನೆಹರು ಮೈದಾನದಲ್ಲಿ ಜನತಾದರ್ಶನ ನಡೆಸಿ ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಐವನ್ ಡಿಸೋಜ ಹೇಳಿದರು.

ಕಡಬ: ಅಕ್ರಮ-ಸಕ್ರಮ ಅಥವಾ 94 ಸಿ ಹಕ್ಕು ಪತ್ರ ನೀಡುವಲ್ಲಿ ಕಡತ ತಯಾರು ಮಾಡುವಾಗ ಕಾನೂನು ಬಾಹಿರವಾಗಿ ವರದಿ ತಯಾರಿ ಮಾಡಿದರೆ ಅದಕ್ಕೆ ಗ್ರಾಮಕರಣಿಕರು ಮತ್ತು ಕಂದಾಯ ಅಧಿಕಾರಿಗಳು ಹೊಣೆಯಾಗುತ್ತಾರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಕಂದಾಯ ಸಚಿವರ ಸಂಸದೀಯ ಕಾರ್‍ಯದರ್ಶಿ ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ.

ಸರ್ವೆ ಇಲಾಖೆಯ ವಿರುದ್ಧ ದೂರುಗಳು ಬಂದ ಹಿನ್ನಲೆಯಲ್ಲಿ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ತಹಸೀಲ್ದಾರ್‌ರವರ ಸೂಚನೆಯನ್ನು ದಿಕ್ಕರಿಸುವ ಪರ್‍ಯಾವೇಕ್ಷಕ ಸಿ.ಕೆ. ಮಂಜುನಾಥ್ ಅವರಿಗೆ ಶೋಕಾಸ್ ನೋಟಿಸು ಕಳುಹಿಸುವಂತೆ ಸೂಚನೆ ನೀಡಿದರು.

ಅವರು ಜೂ. 19ರಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಕಂದಾಯ ಇಲಾಖಾ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಹಕ್ಕು ಪತ್ರ ವಿತರಣೆ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಐವನ್ ಡಿಸೋಜಾ ಸರಕಾರ ಯೋಜನೆ ತಂದಿರುವುದು ಅರ್ಹ ಫಲಾನುಭವಿಗಳಿಗೆ ತಲುಪುವ ದೃಷ್ಠಿಯಿಂದ, ಆದರೆ ಕೆಲವು ಕಡತಗಳು ಮಂಜೂರಾತಿ ಪಡೆದ ಬಳಿಕ ಮತ್ತೆ ತಿರಸ್ಕೃತವಾಗುತ್ತದೆ ಅಂದರೆ ಕಡತ ತಯಾರಿಯಾಗಿ ಮಂಜೂರಾತಿ ನೀಡಿದವರೆ ಮತ್ತೆ ತಿರಸ್ಕೃತ ಮಾಡುವುದಲ್ಲವೇ? ಮೊದಲು ಸ್ಥಳ ನೋಡದೆ ಮಾಡುತ್ತೀರಾ? ಅಥವಾ ಒತ್ತಡಕ್ಕೆ ಮಣಿದು ಮಾಡುತ್ತೀರಾ ಎಂದು ಗ್ರಾಮಕರಣಿಕರನ್ನು ಪ್ರಶ್ನಿಸಿದರು. ಗ್ರಾಮಕರಣಿಕರು ಯಾವುದೇ ಒತ್ತಡ ಆಮಿಷಕ್ಕೆ ಬಲಿಯಾಗಿ ಕೆಲಸ ಮಾಡಬಾರದು ಕಾನೂನು ಬಾಹಿರವಾಗಿ ಕಡತ ತಯಾರು ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸರಕಾರದ ಯೋಜನೆಯಿಂದ ಬಡವರು ಅರ್ಹ ಫಲಾನುಭವಿಗಳು ವಂಚಿತರಾಗುತ್ತಾರೆ. ಅದಕ್ಕಾಗಿ ಕಡತ ತಯಾರಿಸುವ ಗ್ರಾಮಕರಣಿಕರು ಎಚ್ಚರಿಕೆಯಿಂದ ಇರಬೇಕು, ತಪ್ಪಿದಲ್ಲಿ ಅವರನ್ನು ಸೇವೆಯಿಂದ ವಜಾ ಮಾಡುವ ಕ್ರಮ ಜರಗಿಸಲಾಗುವುದು ಎಂದು ಐವನ್ ಎಚ್ಚರಿಸಿದರು. ಪ್ರತೀ ಕಡತಗಳನ್ನು ಸರದಿಯಂತೆ ವಿಲೇ ಮಾಡಬೇಕು ಮಧ್ಯ ಯಾವುದೇ ಒತ್ತಡಕ್ಕೆ ಮಣಿದು ಕಡತವನ್ನು ಬಿಡುವ ಹಾಗಿಲ್ಲ, 94 ಸಿ ಹಕ್ಕು ಪತ್ರ ನೀಡುವ ಬಗ್ಗೆ ಗ್ರಾಮಕರಣಿಕರು ಒಂದು ಪ್ರದೇಶಕ್ಕೆ ಸರ್ವೆಗೆ ಹೋದರೆ ಆ ಭಾಗದಲ್ಲಿರುವ ಇತರ ಅರ್ಜಿದಾರರಲ್ಲಿಗೂ ಹೋಗಬೇಕು, ಕೂಡಲೇ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು, ಅರ್ಜಿಗಳ ಪರಿಶೀಲನೆಯ ವೇಳೆ ಕಾನೂನು ಬಾಹಿರ ಎಂದು ಕಂಡು ಬಂದರೆ ಅದನ್ನು ತಿರಸ್ಕೃತಗೊಳಿಸಿ ಅರ್ಜಿದಾರರಿಗೆ ಮಾಹಿತಿ ನೀಡಬೇಕು, ಸಾರ್ವಜನಿಕರನ್ನು ಕಂದಾಯ ಇಲಾಖೆಗೆ ವೃಥಾ ಅಲೆದಾಡಿಸಬಾರದು ಎಂದು ಐವನ್ ಹೇಳಿದರು. ಕಂದಾಯ ಅಧಿಕಾರಿಗಳು ಜನರ ಬಳಿಗೆ ಹೋಗಿ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ, ಪಿಂಚಣಿ ಯೋಜನೆ, ಸಂಧ್ಯಾಸುರಕ್ಷಾ ಯೋಜನೆ, ವಿಧವಾ ವೇತನ, ವೃದ್ಧಾಪ್ಯವೇತನ ಮತ್ತಿತರ ಸರಕಾರ ಸವಲತ್ತುಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಕಂದಾಯ ಇಲಾಖೆಯೇ ಮಾಡಬೇಕು, ಫಲಾನುಭವಿಗಳು ತಮ್ಮ ಬಳಿ ಅರ್ಜಿ ನೀಡಲು ಬರಬಾರದು, ಗ್ರಾಮಕರಣಿಕರೇ ಫಲಾನುಭವಿಗಳ ಬಳಿ ಹೋಗಿ ಅರ್ಜಿ ಪಡೆಯಬೇಕು ಎಂದು ಸೂಚನೆ ನೀಡಿದ ಐವನ್, ಪ್ರತೀ ತಿಂಗಳು ಗ್ರಾಮಮಟ್ಟದಲ್ಲಿ ಕಂದಾಯ ಅದಲಾತ್ ನಡೆಸಿ ಕಂದಾಯ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.

ಸರ್ವೆ ಇಲಾಖೆ ಅಧಿಕಾರಿಗಳು ತರಾಟೆಗೆ, ಪರ್‍ಯಾವೇಕ್ಷಕ ಸಿ.ಕೆ ಮಂಜುನಾಥ್‌ರಿಗೆ ಶೋಕಾಸ್ ನೋಟಿಸು: ಸರ್ವೆ ಇಲಾಖೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಡಬ ತಹಶಿಲ್ದಾರ್ ಜೋನ್‌ಪ್ರಕಾಶ್ ರೋಡ್ರಿಗಸ್ ಅವರಲ್ಲಿ ವಿಚಾರಿಸಿದಾಗ, ಸರ್ವೆ ಇಲಾಖೆಯ ಪರ್‍ಯಾವೇಕ್ಷಕ ಸಿ.ಕೆ.ಮಂಜುನಾಥ್ ನಮ್ಮ ಕಡತಗಳನ್ನೇ ನೋಡುತ್ತಿಲ್ಲ ಎಂದು ಆರೋಪಿಸಿದರು, ಇದರಿಂದ ಅಸಮಾಧಾನಗೊಂಡ ಐವನ್ ಡಿಸೋಜಾ ಮಂಜುನಾಥ್‌ರವರನ್ನು ಎಲ್ಲಿದ್ದೀರಿ ಎಂದು ಸಭೆಯಲ್ಲಿ ಕರೆದರು. ಆದರೆ ಮಂಜುನಾಥ್ ಅವರು ಸಭಿಕರ ಮಧ್ಯೆ ಹಿಂಬದಿಯಲ್ಲಿ ಕೂತಿದ್ದರು. ಇದರಿಂದ ಮತ್ತಷ್ಟು ಅಕ್ರೋಶಗೊಂಡ ಐವನ್ ಏನ್ರಿ ಸರಿ ಕೆಲಸ ಮಾಡಲು ಸಾದ್ಯವಾಗುತ್ತಿಲ್ವಾ, ಪರ್‍ಯಾವೇಕ್ಷಕರಾಗಿ ಹಿಂಬದಿಯಲ್ಲಿ ಕೂತಿದ್ದಿರಿ, ಪ್ರಶ್ನೆ ಕೇಳುತ್ತಿರುವಾಗ ಎಲ್ಲಿಯೂ ಕಾಣುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರಲ್ಲದೆ ಅವರಿಗೆ ಶೋಕಾಸ್ ನೀಡಿ ಎಂದು ತಹಶಿಲ್ದಾರ್‌ಗೆ ಸೂಚಿಸಿದರು.

ಕಡಬದಲ್ಲಿ ನೂತನ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣಕ್ಕೆ ಈಗಾಗಲೇ ಸ್ಥಳ ನಿಗದಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಆದರೆ ಖಾಸಗಿಯವರೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿ ವಿಳಂಬವಾಗಿದೆ, ಇದನ್ನು ಆದಷ್ಟು ಬೇಗ ಇತ್ಯರ್ಥ ಮಾಡಿ ಕ್ರಮ ಕೈಗೊಳ್ಳಬೇಕು, ಪಾಲೋಳಿ ಸೇರಿದಂತೆ ಕಡಬ ವ್ಯಾಪ್ತಿಯ ಹಲವೆಡೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರಕಾರ ಈಗಾಗಲೇ ಅನುದಾನ ಮಂಜೂರುಗೊಳಿಸಿದೆ, ಆದರೆ ಅದು ಅನುಷ್ಠಾನವಾಗುತ್ತಿಲ್ಲ. ಇದರ ಬಗ್ಗೆ ತಕ್ಷಣ ಸರಕಾರ ಸ್ಪಂದನೆ ನೀಡಬೇಕು, ಎಲ್ಲಾ ಇಲಾಖೆಗಳು ಕಡಬದಲ್ಲಿ ತಕ್ಷಣ ಪ್ರಾರಂಭವಾಗಬೇಕು, ಶಿರಾಡಿಯಲ್ಲಿನ ವಸತಿ ನಿವೇಶನದಲ್ಲಿ ಜಾಗ ಮಂಜೂರು ಮಾಡಲು ಅರಣ್ಯ ಇಲಾಖೆಯ ತಕರಾರು ಇದೆ, ಇದನ್ನು ತಕ್ಷಣ ಪರಿಹರಿಸಬೇಕು, ಆಧಾರ್ ಕಾರ್ಡ್ ಸರಿಪಡಿಸುವ ನಿಟ್ಟಿನಲ್ಲಿ ಸಮರ್ಪಕವಾಗಿ ಕೆಲಸಗಳು ನಡೆಯುತ್ತಿಲ್ಲ, ಹೊಸಮಠ ಉಳಿಪು ರಸ್ತೆ ಅಭಿವೃದ್ಧಿಗೆ ಅನುದಾನ ನೀಡಬೇಕು. ವಿದ್ಯುತ್ ಲೈನ್‌ಗಳ ಹಳೆಯ ವೈರ್‌ಗಳನ್ನು ತಕ್ಷಣ ಬದಲಿಸಿ ಹೊಸತನ್ನು ಅಳವಡಿಸಬೇಕು, ಕಡಬದಲ್ಲಿ ಹಾಸ್ಟೆಲ್ ಕಟ್ಟಡಕ್ಕೆ ಅಲ್ಪಸಂಖ್ಯಾತರ ನಿಗಮದಿಂದ ಹಣ ಬಿಡುಗಡೆಯಾದರೂ ಆ ಜಾಗಕ್ಕೆ ಹೋಗಲು ರಸ್ತೆಯೇ ಇಲ್ಲ ಈ ಸಮಸ್ಯೆಯನ್ನು ಸರಿಪಡಿಸಬೇಕು, ವ್ಯಕ್ತಿಯೊಬ್ಬರ 1961ರ ಜನನ ಪ್ರಮಾಣ ಪತ್ರದ ಬಗ್ಗೆ ಸರಿಯಾದ ಉತ್ತರ ನೀಡುವುದು ಮುಂತಾದ ಬೇಡಿಕೆಗಳನ್ನು ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಹರೀಶ್ ರೈ ನಡುಮಜಲು, ಟಿ.ಎಂ.ಮ್ಯಾಥ್ಯೂ, ಕೆ.ಎಂ.ಹನೀಫ್, ಎಲ್ಸಿ ತೋಮಸ್, ಅಶ್ರಫ್ ಶೇಡಿಗುಂಡಿ, ತೋಮಸ್ ವರ್ಗೀಸ್, ಪಿ.ಎಸ್.ಪೌಲೋಸ್ ಮೊದಲಾದವರು ಚರ್ಚಿಸಿದರು. ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ.ಕೃಷ್ಣ ಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್, ಸುಳ್ಯ ತಾಲುಕು ಪಂಚಾಯತಿ ಉಪಾಧ್ಯಕ್ಷೆ ಶುಭದಾ ಎಸ್ ರೈ, ತಾಲೂಕು ಪಂಚಾಯತಿ ಸದಸ್ಯರಾದ ಗಣೇಶ್ ಕೈಕುರೆ, ಕೆ.ಟಿ.ವಲ್ಸಮ್ಮ, ಕಡಬ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಮುಗೇರ, ಉಪತಹಶಿಲ್ದಾರ್ ನವ್ಯ, ಕಂದಾಯ ನಿರೀಕ್ಷಕ ಹವಿನ್ ರಂಗತ್ತಮಲೆ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ಸಜಿಕುಮಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.