34ನೇ ನೆಕ್ಕಿಲಾಡಿ: ನಾಪತ್ತೆಯಾಗಿದ್ದ ಜನರೇಟರ್ ಪ್ರತ್ಯಕ್ಷ.!! ಪತ್ರಿಕಾ ವರದಿಗೆ ಎಚ್ಚೆತ್ತ ಪಂಚಾಯತ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •   ಎರಡು ವರ್ಷದ ಬಳಿಕ ಜನರೇಟರ್‌ಗೆ ಪುನರಾಗಮನ ಭಾಗ್ಯ


ಉಪ್ಪಿನಂಗಡಿ: ಸುಮಾರು ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ 34ನೇ ನೆಕ್ಕಿಲಾಡಿ ಗ್ರಾ.ಪಂ. ಕಚೇರಿಯಲ್ಲಿದ್ದ ಸಾವಿರಾರು ರೂಪಾಯಿ ಬೆಲೆ ಬಾಳುವ ಜನರೇಟರ್ ಮತ್ತೆ ಗ್ರಾ.ಪಂ. ಕಚೇರಿಗೆ ಪುನರಾಗಮನವಾಗಿದೆ. ಪತ್ರಿಕೆಗಳಲ್ಲಿ ಈ ಬಗ್ಗೆ ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತ ಅಧಿಕಾರಿಗಳು ದುರಸ್ತಿಗೆ ಹೋಗಿದ್ದ ಇದನ್ನು ತಂದು ಪಂಚಾಯತ್‌ನಲ್ಲಿಟ್ಟಿದ್ದಾರೆ.

34ನೇ ನೆಕ್ಕಿಲಾಡಿ ಗ್ರಾ.ಪಂ. ಹೋಂಡಾ ಕಂಪೆನಿಯ ಇಎಕ್ಸ್‌ಕೆ- 2000 ಎಸಿ ಕೆರೋಸಿನ್ ಮೋಡೆಲ್ ಜನರೇಟರ್ ಅನ್ನು ಖರೀದಿಸಿತ್ತು. ಇದಕ್ಕಾಗಿ ಮಂಗಳೂರಿನ ತ್ರಿಭುವನ್ ಪವರ್ ಪ್ರಾಡಕ್ಟ್‌ನವರಿಗೆ 74279 ನಂಬರ್‌ನ ಚೆಕ್‌ನಲ್ಲಿ 3.3.2009ರಂದು 47,250 ರೂಪಾಯಿ ಮೊತ್ತವನ್ನು ಪಾವತಿ ಮಾಡಿತ್ತು. ಕೆಲವು ವರ್ಷ ಗ್ರಾ.ಪಂ. ಕಚೇರಿಯಲ್ಲಿದ್ದ ಈ ಜನರೇಟರ್ ಸುಮಾರು ಎರಡು ವರ್ಷದಿಂದ ದಿಢೀರ್ ಆಗಿ ನಾಪತ್ತೆಯಾಗಿತ್ತು. ಈ ಬಗ್ಗೆ ಸುಮಾರು ಏಳು ತಿಂಗಳ ಹಿಂದೆ ನಡೆದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಸದಸ್ಯೆಯೋರ್ವರು ಈ ಜನರೇಟರ್ ವಿಷಯ ಪ್ರಸ್ತಾಪಿಸಿದ್ದರು. ಸುಮಾರು ಒಂದೂವರೆ ವರ್ಷದಿಂದ ಇಲ್ಲಿದ್ದ ಜನರೇಟರ್ ನಾಪತ್ತೆಯಾಗಿದೆ. ಪ್ರಶ್ನಿಸಿದಾಗಲೆಲ್ಲಾ ಒಂದಲ್ಲ ಒಂದು ನೆಪಗಳು ಕೇಳಿ ಬರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದರು. ಜನರೇಟರ್ ತಾಂತ್ರಿಕ ತೊಂದರೆಗೆ ಸಿಲುಕಿದ್ದರಿಂದ ಅದನ್ನು ರಿಪೇರಿಗೆ ಕಳುಹಿಸಲಾಗಿದೆ ಎಂದು ಸದಸ್ಯರೋರ್ವರು ಈ ಸಂದರ್ಭ ಸ್ಪಷ್ಟನೆ ನೀಡಿದ್ದರು. ಆಗ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿ ಜನರೇಟರ್ ಅನ್ನು ರಿಪೇರಿಗೆ ಇಷ್ಟೊಂದು ಕಾಲಾವಕಾಶ ಬೇಕಾ? ಸರಕಾರಿ ಸೊತ್ತನ್ನು ಎಲ್ಲೆಂದರಲ್ಲಿ ಇಡುವುದು ಸರಿಯಲ್ಲ. ಅದನ್ನು ಮುಂದಿನ ಸಾಮಾನ್ಯ ಸಭೆಯೊಳಗೆ ಪಂಚಾಯತ್ ಕಚೇರಿಗೆ ತರಲೇ ಬೇಕು. ಇಲ್ಲದಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಸರಕಾರಿ ಸೊತ್ತು ದುರ್ಬಳಕೆಯ ಮಾಡಿಕೊಂಡಿರುವ ಬಗ್ಗೆ ದೂರು ನೀಡುವ ಬಗ್ಗೆಯೂ ಚರ್ಚೆಯಾಗಿತ್ತು.

ಒಂದು ದಿನದ ಚರ್ಚೆಗೆ ಮಾತ್ರ ಸೀಮಿತ!: ಇದು ಒಂದು ದಿನದ ಚರ್ಚೆಗೆ ಮಾತ್ರ ಸೀಮಿತವಾಯಿತೇ ಹೊರತು, ಆ ಬಳಿಕ ಯಾವುದೇ ಪ್ರಕ್ರಿಯೆಗಳು ನಡೆಯಲಿಲ್ಲ. ಇದರಿಂದ ಜನರೇಟರ್ ಎಲ್ಲಿದೆ? ಏನಾಗಿದೆ ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ. ಗ್ರಾ.ಪಂ. ಸದಸ್ಯರು ಕೂಡಾ ಈ ಬಗ್ಗೆ ಮತ್ತೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿರಲಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ನಾವು ಅಧಿಕಾರ ವಹಿಸಿದ ಸಂದರ್ಭ ಪಂಚಾಯತ್ ಸೊತ್ತನ್ನು ನಮಗೆ ಹ್ಯಾಂಡೋವರ್ ಮಾಡಿದಾಗ ಅದರಲ್ಲಿ ಜನರೇಟರ್ ಅನ್ನು ನಮೂದಿಸಿರಲಿಲ್ಲ. ಹಾಗಾಗಿ ಈ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಅದನ್ನು ನೋಡಿಯೂ ಇಲ್ಲ. ಇಲ್ಲೊಂದು ಜನರೇಟರ್ ಇತ್ತು. ಅದು ಈಗ ನಾಪತ್ತೆಯಾಗಿದೆ ಎಂದು ಸದಸ್ಯರು ಹೇಳಿಯೇ ನಮಗೆ ಗೊತ್ತು ಎಂಬ ಉತ್ತರ ಬರುತ್ತಿತ್ತು.

ಸಂಶಯಕ್ಕೆ ಕಾರಣವಾದ ನಡೆ: ಜನರೇಟರ್ ರಿಪೇರಿಗೆ ಹೋಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಗ್ರಾ.ಪಂ.ಗೆ ಆ ಜನರೇಟರ್ ಅನ್ನು ತರುವುದು ಕಾಣಿಸುತ್ತಿರಲಿಲ್ಲ. ಸಾವಿರಾರು ರೂ. ಮೌಲ್ಯದ ಸರಕಾರಿ ಸೊತ್ತು ಕಾಣೆಯಾದುದರ ಬಗ್ಗೆ ಸದಸ್ಯರುಗಳು ಹಾಗೂ ಅಧಿಕಾರಿಗಳ ಮೌನ ಸಾರ್ವಜನಿಕರಲ್ಲಿ ಹಲವು ಸಂಶಯಗಳನ್ನು ಮೂಡಿಸಿತ್ತು. ಜನರೇಟರ್ ದುರಸ್ತಿಗೆ ಇಷ್ಟೊಂದು ದೀರ್ಘ ಅವಧಿಗಳು ಬೇಕೇ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಜನರೇಟರ್ ನಾಪತ್ತೆ, ಅಧಿಕಾರಿಗಳು ಹಾಗೂ ಸದಸ್ಯರ ಮೌನ, ಸಾರ್ವಜನಿಕರ ಸಂಶಯವನ್ನೇ ಮುಂದಿಟ್ಟುಕೊಂಡು ಈ ಬಗ್ಗೆ ಪತ್ರಿಕಾ ವರದಿ ಮಾಡಲಾಯಿತು. ಮುಂದಿನ ೧೫ ದಿನಗಳಲ್ಲಿ ಜನರೇಟರ್ ಗ್ರಾ.ಪಂ.ಗೆ ತಾರದಿದ್ದಲ್ಲಿ ಮುಂದೆ ಕಾನೂನು ಹೋರಾಟ ಮಾಡಲಾಗುವುದು ಎಂದು ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್ ಎಚ್ಚರಿಸಿದ್ದರು. ಬಳಿಕ ನಡೆದ ಸಾಮಾನ್ಯ ಸಭೆಯಲ್ಲಿ ಈ ವರದಿಯೇ ಮಾರ್ದನಿಸಿತ್ತಲ್ಲದೆ, ಆಗ ಉಪಾಧ್ಯಕ್ಷ ಅಸ್ಕರ್ ಅಲಿ ಮಾತನಾಡಿ ಅದನ್ನು ದುರಸ್ತಿಗೆ ಕಳುಹಿಸಲಾಗಿದೆ. ಅದು ಎಲ್ಲಿದೆಯೆಂದು ಅಧಿಕಾರಿಗಳಿಗೆ ಗೊತ್ತು. ಅದರ ದುರಸ್ತಿ ಆಗಿದೆ. ಅಧಿಕಾರಿಗಳು ದುರಸ್ತಿಯ ಬಿಲ್ ಪಾವತಿಸಿ, ಜನರೇಟರ್ ತನ್ನಿ ಎಂದಿದ್ದರು. ಆಗ ಪಿಡಿಒ ಜಯಪ್ರಕಾಶ್ ಮಾತನಾಡಿ, ಅದನ್ನು ದುರಸ್ತಿಗೆ ಕೊಟ್ಟಿರುವುದು ನಮಗೆ ಗೊತ್ತಿಲ್ಲ. ಈಗ ಅವರು 40ರಿಂದ 50,000 ದುರಸ್ತಿಯ ಬಿಲ್ ಹೇಳಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದರು. ಜನರೇಟರ್ ಪಂಚಾಯತ್‌ನಲ್ಲಿ ಇಲ್ಲದಿರುವುದರಿಂದ ಈ ಬಗ್ಗೆ ಸಾರ್ವಜನಿಕರು ನಾನಾ ಸಂಶಯ ವ್ಯಕ್ತಪಡಿಸಿ ನಮ್ಮಲ್ಲಿ ಪ್ರಶ್ನೆ ಹಾಕುತ್ತಿದ್ದಾರೆ. ಆದ್ದರಿಂದ ಶೀಘ್ರವಾಗಿ ಜನರೇಟರ್ ತರುವ ಕೆಲಸವಾಗಬೇಕು ಹಾಗೂ ಅಧಿಕಾರ ಹಸ್ತಾಂತರ ಮಾಡುವಾಗ ಜನರೇಟರ್ ಅನ್ನು ಹಸ್ತಾಂತರ ಮಾಡದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಬರೆಯುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.

ಹೀಗೆ ಸುಮಾರು ಎರಡು ವರ್ಷಗಳಿಂದ ನಾಪತ್ತೆಯಿಂದಾಗಿ ಹಲವು ಸಂಶಯಗಳಿಗೆ ಕಾರಣವಾಗಿ ಜನರೇಟರ್ ಪತ್ರಿಕೆಯಲ್ಲಿ ಬಂದ ವರದಿ ಬಳಿಕ ಪಂಚಾಯತ್‌ಗೆ ಆಗಮಿಸಿದ್ದು, ಈ ಮೂಲಕ ನಾಪತ್ತೆ ಪ್ರಕರಣದ ಹಿಂದೆ ಇದ್ದ ನಾನಾ ಸಂಶಯಗಳಿಗೆ ತೆರೆ ಬಿದ್ದಂತಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.