ಪುತ್ತೂರು: ದೇಹದಲ್ಲಾಗುತ್ತಿರುವ ಎಷ್ಟೋ ಚಟುವಟಿಕೆಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ನಮ್ಮ ಉಸಿರಾಟ ಯಾಂತ್ರಿಕವಾಗಿರುತ್ತದೆ. ಉಸಿರಾಟಕ್ಕೆ ತೊಂದರೆಯಾದಾಗ ಅದನ್ನು ಗಮನಿಸುತ್ತೇವೆ. ಸಮಸ್ಯೆ ಬಂದಾಗ ಮಾತ್ರ ಯೋಚಿಸದೆ ದಿನವೂ ಒಳಗಿನತ್ತ ಅರಿವಿನ ಬೆಳಕನ್ನು ಹರಿಸುವುದು ಆರೋಗ್ಯಕರ ಬೆಳವಣಿಗೆ. ಯೋಗವು ಈ ಕೆಲಸವನ್ನು ಮಾಡಲು ಎಚ್ಚರಿಸುತ್ತದೆ.
ನಮ್ಮ ಉಸಿರಾಟಕ್ಕೂ ಆಯುಷ್ಯಕ್ಕೂ ಸಂಬಂಧವಿದೆ. ನಮ್ಮ ಉಸಿರಾಟವನ್ನೂ ಪ್ರಾಣಾಯಾಮದ ಮೂಲಕ ಇನ್ನೂ ತಗ್ಗಿಸಿದರೆ ನಮ್ಮ ಆಯುಷ್ಯವೂ ಹೆಚ್ಚುತ್ತದೆ. ಮನಸ್ಸಿನ ನಿಯಂತ್ರಣಕ್ಕೆ ಲಯಬದ್ಧವಾದ ಉಸಿರಾಟ ಅಗತ್ಯ .ದೇಹ ಮತ್ತು ಮನಸ್ಸುಗಳ, ಆತ್ಮ ಮತ್ತು ಪರಮಾತ್ಮರ ಸೇರುವಿಕೆಯೆ ಯೋಗ. ಯೋಗವು ದೈಹಿಕ-ಮಾನಸಿಕ-ಆಧ್ಯಾತ್ಮಿಕ ಅಬ್ಯಾಸ.ಯೋಗಕ್ಕೆ ಯಾವುದೇ ಧರ್ಮ-ಜಾತಿ-ವರ್ಣ-ಇತ್ಯಾದಿಗಳ ಬೇಧವಿಲ್ಲ.ಆಸಕ್ತಿ ಇರುವ ಯಾರೂ ಅಭ್ಯಸಿಸಬಹುದು.
ಇದರಿಂದ ಚಿತ್ತ ಚಾಂಚಲ್ಯ ಸಹಜವಾಗಿ ನಿಯಂತ್ರಣಕ್ಕೆ ಬರುತ್ತದೆ. ಯೋಗಾಭ್ಯಾಸದ ಪ್ರಥಮ ಲಕ್ಷಣಗಳೆಂದರೆ ದೇಹದಲ್ಲಿ ತೂಕ ಕಡಿಮೆಯಾಗುವುದು,ಅರೋಗ್ಯ,ವಿಷಯ ವಸ್ತುಗಳಲ್ಲಿ ಬಯಕೆ ಕಡಿಮೆಯಾಗುವುದು,ಶರೀರದ ಕಾಂತಿಯ ಹೆಚ್ಚಳ, ಸ್ವರ ಮಾಧುರ್ಯ ಇತ್ಯಾದಿ. ಈ ಹಿನ್ನೆಲೆಯಲ್ಲಿ ಯೋಗ ಎಂದರೆ ದೇಹ ,ಮನಸ್ಸು ಹಾಗೂ ಪ್ರಾಣಗಳ ಸಂಗಮ ಎನ್ನಬಹುದು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂನ್ 21 ರಿಂದ 28 ರವರೆಗೆ, ಸಂಜೆ 5.00 ರಿಂದ 6.00 ಗಂಟೆ ವರೆಗೆ, ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಯೋಗ ತರಬೇತಿಯನ್ನು ಹಮ್ಮಿಕ್ಕೊಳ್ಳಲಾಗಿದೆ. ವಯೋಮಿತಿಯ ನಿರ್ಬಂಧವಿಲ್ಲದೆ ಉಚಿತವಾಗಿ ನುರಿತ ಯೋಗ ಶಿಕ್ಷಕರಿಂದ ನಡೆಸಲ್ಪಡುವ ಈ ಶಿಬಿರದ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.