@ಸಿಶೇ ಕಜೆಮಾರ
- ತಿಂಗಳಾಡಿ ರಸ್ತೆ ಬದಿಯಲ್ಲಿ ಬಾಯ್ದೆರೆದು ನಿಂತಿವೆ ಹತ್ತಕ್ಕೂ ಅಧಿಕ ಗುಂಡಿಗಳು..!?
ಪುತ್ತೂರು: ರಸ್ತೆಯ ಒಂದು ಬದಿಯಲ್ಲಿ ಸುಮಾರು 4 ಅಡಿ ಆಳದ ಗುಂಡಿಗಳು. ಒಂದಲ್ಲ ಎರಡಲ್ಲ ಸುಮಾರು 10 ಕ್ಕೂ ಅಧಿಕ ಗುಂಡಿಗಳು. ಪುಟ್ಟ ಮಕ್ಕಳು ಈ ಗುಂಡಿಯಲ್ಲಿ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಸ್ವಲ್ಪ ಎಚ್ಚರ ತಪ್ಪಿದರೂ ಪಾದಚಾರಿಗಳಿಗೆ ಇಲ್ಲಿ ಅಪಾಯ ಕಾದಿದೆ. ಇದು ಎಲ್ಲಿ ಅಂತೀರಾ? ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಂಗಳಾಡಿ ಪೇಟೆಯ ರಸ್ತೆಯ ಬದಿಯಲ್ಲಿ ಬಾಯ್ದೆರೆದು ನಿಂತಿವೆ ಈ ಅಪಾಯಕಾರಿ ಗುಂಡಿಗಳು. ಜಿಯೋ ಸಂಚಾರ ನಿಗಮದವರು ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿ ಮೊಬೈಲ್ ಕೇಬಲ್ ಅಳವಡಿಸುವ ಕೆಲಸ ಮಾಡಿದ್ದು ಇದಕ್ಕಾಗಿ ತಿಂಗಳಾಡಿಯ ತ್ಯಾಗರಾಜನಗರ ಅಂಗನವಾಡಿ ಬಳಿಯಿಂದ ತಿಂಗಳಾಡಿ ಪೇಟೆ ತನಕ 20 ಮೀಟರ್ಗೆ ಒಂದರಂತೆ ಗುಂಡಿಗಳನ್ನು ತೆಗೆದು ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ.
4 ಅಡಿ ಆಳದ ಗುಂಡಿಗಳು: ಜಿಯೋ ಮೊಬೈಲ್ ಕಂಪೆನಿಯವರು ರಸ್ತೆ ಬದಿಯಲ್ಲಿ ತೆಗೆದಿಟ್ಟದ್ದ ಬರೋಬ್ಬರಿ 4 ಅಡಿ ಆಳದ ಗುಂಡಿಗಳಾಗಿವೆ. ಅದು ಕೂಡ ರಸ್ತೆಯ ಬದಿಯಲ್ಲಿ ಫುಟ್ಪಾತ್ ಮೇಲೆಯೇ ಈ ಗುಂಡಿಗಳನ್ನು ತೆಗೆಯಲಾಗಿದೆ. ಜಿಯೋ ಕೇಬಲ್ ಅಳವಡಿಸಲು ಕೆಲವು ತಿಂಗಳುಗಳ ಹಿಂದೆ ಗುಂಡಿಗಳನ್ನು ತೆಗೆಯಲಾಗಿದ್ದು ಆದರೆ ಕೇಬಲ್ ಎಳೆದು ಹೋಗಿದ್ದಾರೆಯೇ ವಿನಹ ಗುಂಡಿಗಳನ್ನು ಎಲ್ಲಿಯೂ ಮುಚ್ಚಿಲ್ಲ. ಸುಮಾರು 10 ಗುಂಡಿಗಳು 20 ಮೀಟರ್ಗೊಂದರಂತೆ ಇದ್ದು ಬಾಯ್ದೆರೆದು ನಿಂತಿವೆ.
ಮಳೆಗಾಲದಲ್ಲಿ ಅಪಾಯ ಕಾದಿದೆ?: ಸುಮರು 4 ಅಡಿ ಆಳದ ಗುಂಡಿಗಳಾಗಿರುವುದರಿಂದ ಪಾದಚಾರಿಗಳಿಗೆ ಅಪಾಯ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಗುಂಡಿಯಲ್ಲಿ ನೀರು ತುಂಬಿಕೊಂಡಿರುವುದರಿಂದ ಗುಂಡಿಯೋ ಅಥವಾ ನೀರು ನಿಂತಿದೆಯೋ ಎಂಬುದು ಗೊತ್ತಾಗುವುದಿಲ್ಲ. ರಸ್ತೆಯ ಈ ಬದಿಯಲ್ಲಿ ಹೆಚ್ಚಾಗಿ ತಿಂಗಳಾಡಿ ಶಾಲಾ ಮಕ್ಕಳು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ನಡೆದುಕೊಂಡು ಹೋಗುತ್ತಾರೆ. ಚಿಕ್ಕ ಮಕ್ಕಳಾಗಿರುವುದರಿಂದ ಆಟವಾಡಿಕೊಂಡು ನೀರು ಎಂದು ಎಲ್ಲಾದರೂ ಕಾಲು ಹಾಕಿದರೆ ಅಥವಾ ಜಿಗಿದರೆ ಮಕ್ಕಳು ಗುಂಡಿಯೊಳಗೆ ಬೀಳುವ ಅಪಾಯವಿದೆ. ನೀರು ತುಂಬಿಕೊಳ್ಳುವುದರಿಂದ ಗುಂಡಿ ಇದೆ ಎಂಬುದೇ ಗೊತ್ತಾಗುವುದಿಲ್ಲ.
ಜಿಯೋದವರೇ ದಯವಿಟ್ಟು ಗಮನಿಸಿ: ರಸ್ತೆ ಬದಿಗಳಲ್ಲಿ ಈ ರೀತಿಯಾಗಿ ಆಳವಾದ ಗುಂಡಿಗಳನ್ನು ತೆಗೆದಿಟ್ಟು ಹೋಗುವುದು ಎಷ್ಟು ಸರಿ? ಈ ರಸ್ತೆ ಬದಿಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಾರೆ. ಎಲ್ಲಿಯಾದರೂ ಅಪ್ಪಿತಪ್ಪಿ ಮಕ್ಕಳ ಜೀವಕ್ಕೆ ಅಪಾಯ ಅಥವಾ ದಾರಿಹೋಕರ ಜೀವನಕ್ಕೆ ಅಪಾಯ ಸಂಭವಿಸಿದರೆ ಯಾರು ಹೊಣೆ? ಕೇಬಲ್ ಅಳವಡಿಕೆ ಕೆಲಸ ಮುಗಿದ ಕೂಡಲೇ ಗುಂಡಿಗಳನ್ನು ಮುಚ್ಚಬೇಕಲ್ಲವೇ? ದಯವಿಟ್ಟು ಇನ್ನಾದರೂ ಈ ಗುಂಡಿಗಳನ್ನು ಮುಚ್ಚಿಕೊಡಿ ಅಥವಾ ಗುಂಡಿಗೆ ಏನಾದರೂ ಸ್ಲಾಬ್ ಅಳವಡಿಸಿ ಕೊಡವುದು ಸೂಕ್ತ. ಪಂಚಾಯತ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಜಿಯೋ ಮೊಬೈಲ್ ಕಂಪೆನಿಯವರು ಕೇಬಲ್ ಅಳವಡಿಸುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಗುಂಡಿಗಳನ್ನು ತೆಗೆದಿದ್ದಾರೆ. ಸುಮಾರು 4 ಫೀಟ್ ಆಳದ 10 ಕ್ಕೂ ಅಧಿಕ ಗುಂಡಿಗಳಿವೆ. ಇದು ರಸ್ತೆಯ ಬದಿಯಲ್ಲಿರುವುದರಿಂದ ಪಾದಚಾರಿಗಳಿಗೆ,ಶಾಲಾ ವಿದ್ಯಾರ್ಥಿಗಳಿಗೆ ಅಪಾಯಕಾರಿಯಾಗಿದೆ. ಈ ಬಗ್ಗೆ ಜಿಯೋ ಕಂಪೆನಿಯವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ – ಸೂರ್ಯಪ್ರಸನ್ನ ರೈ ಎಂಡೆಸಾಗು, ಛಾಯಾಗ್ರಾಹಕರು ತಿಂಗಳಾಡಿ
ಜಿಯೋ ಕಂಪೆನಿಯವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಅವರ ಕೆಲಸ ಇನ್ನೂ ಕೂಡ ಬಾಕಿ ಇದೆ ಎಂದು ತಿಳಿಸಿದ್ದಾರೆ. ಮಳೆಗಾಲದಲ್ಲಿ ಅಪಾಯ ಇರುವುದರಿಂದ ಮಳೆಗಾಲಕ್ಕೆ ಮುಂಚೆ ಗುಂಡಿಗಳನ್ನು ಮುಚ್ಚಿಕೊಡಬೇಕು ಅಥವಾ ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದೇನೆ – ಪ್ರವೀಣ್ ಶೆಟ್ಟಿ ತಿಂಗಳಾಡಿ, ಅಧ್ಯಕ್ಷರು ಕೆದಂಬಾಡಿ ಗ್ರಾ.ಪಂ.