ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಹಂತದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಜೂ. 19ರಂದು ಗ್ರಾ.ಪಂ. ಸಮುದಾಯ ಭವನದಲ್ಲಿ ನಡೆಯಿತು. ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಾಚ್ಚನರವರು ಅಧ್ಯಕ್ಷತೆ ವಹಿಸಿದರು.
ರಸ್ತೆ ಅತಿಕ್ರಮಣ-ಆರೋಪ:
ಗಂಡಿಬಾಗಿಲು-ಕೆಮ್ಮಾರ ಸಂಪರ್ಕ ರಸ್ತೆಯ ಕುಕ್ಕುದಕಟ್ಟೆ ಎಂಬಲ್ಲಿ ಖಾಸಗಿ ವ್ಯಕ್ತಿಯೊರ್ವರು ರಸ್ತೆಯನ್ನು ಅತಿಕ್ರಮಿಸಿದ್ದು ಇದರಿಂದ ಮಳೆಯ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಈ ಬಗ್ಗೆ ಗ್ರಾ.ಪಂ ಕೂಡಲೇ ಸ್ಪಂದಿಸಿ ಅತಿಕ್ರಮಿಸಿದ ಬೇಲಿಯನ್ನು ತೆರವು ಗೊಳಿಸಬೇಕೆಂದು ಗ್ರಾಮಸ್ಥ ತಿರುಮಲೇಶ್ವರ ಭಟ್ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ.ಅಧ್ಯಕ್ಷ ಶೌಕತ್ ಆಲಿಯವರು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಭೆಗೆ ಗ್ರಾಮಸ್ಥರ ಕೊರತೆ:
ಉದ್ಯೋಗ ಖಾತರಿ ಗ್ರಾಮಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಆದ್ದರಿಂದ ಸಭೆಗೆ ಗ್ರಾಮಸ್ಥರು, ಫಲಾನುಭವಿಗಳು ಆಗಮಿಸಿಲ್ಲ ಎಂದು ಗ್ರಾಮಸ್ಥ ಚೆನ್ನಕೇಶವ ಕನ್ಯಾನ ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶೌಕತ್ ಆಲಿಯವರು, ಗ್ರಾ.ಪಂ.ಸಿಬ್ಬಂದಿಗಳು ಪ್ರತಿ ಮನೆ ಮನೆಗೆ ತೆರಳಿ ಮಾಹಿತಿ ನೀಡಿದ್ದಾರೆ ಎಂದರು.
ರಸ್ತೆ ಚರಂಡಿ ದುರಸ್ತಿಗೊಳಿಸಿ:
ಗ್ರಾ.ಪಂ. ವ್ಯಾಪ್ತಿಯ ಕೆಲವೊಂದು ಕಡೆ ರಸ್ತೆಯ ಬದಿಯಲ್ಲಿ ಚರಂಡಿ ಇಲ್ಲದೆ ನೀರೆಲ್ಲಾ ರಸ್ತೆಯಲ್ಲೇ ಹರಿಯುತ್ತಿದೆ. ಈ ಬಗ್ಗೆ ಗಮನಹರಿಸಿ ಚರಂಡಿ ದುರಸ್ತಿ ಪಡಿಸಬೇಕೆಂದು ಚೆನ್ನಕೇಶವ ಕನ್ಯಾನ ಆಗ್ರಹಿಸಿದರು.
ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರವರು, ಉದ್ಯೋಗ ಖಾತ್ರಿ ಯೋಜನೆಯನ್ನು ಹಿರೇಬಂಡಾಡಿ ಗ್ರಾ.ಪಂ. ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದರು. ಪಿಡಿಒ ದಿನೇಶ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಸೋಮೇಶ್, ನೀತಿನ್, ಮುದ್ದ ಚಂದ್ರಾವತಿ, ಅಂಗನವಾಡಿ ಕಾರ್ಯಕರ್ತೆಯರು, ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ದಯಾಮಣಿ, ಸುಪ್ರಿಯಾ, ಶ್ವೇತಾಕ್ಷಿ, ದೀಕ್ಷಾ ಸಹಕರಿಸಿದರು.
83.80 ಲಕ್ಷ ರೂ.ಖರ್ಚು
1-10-2018ರಿಂದ 31-3-2019ರ ತನಕದ ಅವಧಿಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ 220 ಕಾಮಗಾರಿ ನಡೆದಿದ್ದು ಇದಕ್ಕೆ 13,931 ಮಾನವ ದಿನ ಸೃಜನೆಯಾಗಿದೆ. 34,68,819 ರೂ. ಕೂಲಿ ಮೊತ್ತ ಹಾಗೂ 19,11,377ರೂ. ಸಾಮಾಗ್ರಿ ಮೊತ್ತ ಪಾವತಿಯಾಗಿದ್ದು ಆರು ತಿಂಗಳ ಅವಧಿಯಲ್ಲಿ ಒಟ್ಟು 53,80,196ರೂ. ಖರ್ಚು ಆಗಿದೆ. ಒಟ್ಟು 428 ಮಂದಿ ಕೆಲಸ ನಿರ್ವಹಿಸಿದ್ದಾರೆ ಎಂದು ಸಭೆಗೆ ತಿಳಿಸಲಾಯಿತು.