- ಪ್ರಥಮ ಕಂತಿನ ರೂ. 3 ಕೋಟಿ ಬಿಡುಗಡೆ – ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪರಿಶೀಲನೆ
ಪುತ್ತೂರು: ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದ ವೇಳೆ ಪುತ್ತೂರು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಸಹಿತಿ ವಿವಿಧ ಅಭಿವೃದ್ಧಿಗಾಗಿ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಸಂಬಂಧಿಸಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಥಮ ಕಂತಿನ ರೂ. ೩ ಕೋಟಿ ಅನುದಾನ ಮಂಜೂರಾಗಿದ್ದು. ಈ ಕುರಿತು ಶಕುಂತಳಾ ಶೆಟ್ಟಿಯವರಿಗೆ ಇಲಾಖೆಯಿಂದ ಬಂದ ಮಾಹಿತಿಯಂತೆ ಜೂ. ೨೦ರಂದು ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
೫.೮೨ ಎಕ್ರೆ ವಿಸ್ತೀರ್ಣವಿರುವ ತಾಲೂಕು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಸಹಿತ ಒಟ್ಟು ಅಭಿವೃದ್ಧಿ ಕಾರ್ಯಗಳಿಗಾಗಿ ಶಕುಂಳಾ ಶೆಟ್ಟಿಯವರು ಶಾಸಕರಾಗಿದ್ದ ಸಮಯ ಒಟ್ಟು ರೂ. ೧೪.೫ ಕೋಟಿಯ ಯೋಜನೆಯನ್ನು ಕ್ರೀಡಾ ತಜ್ಞರ ಮೂಲಕ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಯ ಪ್ರಥಮ ಹಂತವಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ರೂ. ೩ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್, ಟೆನ್ನಿಸ್, ಟೇಬಲ್ ಟೆನ್ನಿಸ್ ಮತ್ತು ಶಟಲ್ ಬ್ಯಾಡ್ಮಿಂಟನ್ ಆಟಗಳನ್ನು ಆಡಲು ಅವಕಾಶವಿದೆ. ಅಲ್ಲದೇ ಒಳಾಂಗಣ ಕ್ರೀಡಾಂಗಣ ಕಟ್ಟಡದಲ್ಲಿ ಅಧಿಕಾರಿಗಳ ವಸತಿ ಕೊಠಡಿಗಳನ್ನು ಕೂಡಾ ನಿರ್ಮಿಸುವ ರೀತಿಯಲ್ಲಿ ಅಂದಾಜು ಪಟ್ಟಿ ಮತ್ತು ನಕಾಶೆಯನ್ನು ತಯಾರಿಸುವಂತೆ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಿರ್ಮಾಣಗೊಳಿಸಲಾಗಿರುವ ಒಳಾಂಗಣ ಕ್ರೀಡಾಂಗಣವನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ತಾಂತ್ರಿಕ, ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಅನುದಾನದ ಮೊತ್ತ ಠೇವಣಿಯಾದ ಕೂಡಲೇ ಲೋಕೋಪಯೋಗಿ ಇಲಾಖೆಯು ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಬೇಕು ಮತ್ತು ತ್ವರಿತವಾಗಿ ಕಾಮಗಾರಿಗಳನ್ನು ನಡೆಸಬೇಕು ಎಂದು ಶಕುಂತಳಾ ಟಿ. ಶೆಟ್ಟಿ ಸೂಚನೆ ನೀಡಿದರು. ಲೋಕೋಪಯೋಗಿ ಇಲಾಖೆಯ ಪುತ್ತೂರಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಡಿ. ರಾಜಾರಾಮ್, ಕಿರಿಯ ಇಂಜಿನಿಯರ್ ಬಾಲಕೃಷ್ಣ ಭಟ್ ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಎಂ. ಮಾಮಚ್ಚನ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ್ ರೈ, ಎಂ.ಬಿ. ವಿಶ್ವನಾಥ್ ರೈ, ಇಸಾಕ್ ಸಾಲ್ಮರ, ಕಾಂಗ್ರೆಸ್ ಸೇವಾದಳದ ಜೋಕಿಂ ಡಿ ಸೋಜ, ಸಂತೋಷ್ ಭಂಡಾರಿ, ಗಂಗಾಧರ್ ಶೆಟ್ಟಿ ಎಲಿಕ, ಸನಮ್, ಬಾಬು ಮರಿಕೆ ಮತ್ತಿತರರು ಉಪಸ್ಥಿತರಿದ್ದರು.