ಬಹುತೇಕ ಶಾಲೆ, ಮದರಸಗಳಲ್ಲಿ ಇನ್ನೂ ಅಳವಡಿಸದ ಸಲಹಾ ಪೆಟ್ಟಿಗೆ, ಚೈಲ್ಡ್ ಲೈನ್ ನಂಬರ್

  • ತಾಲೂಕು ಮಟ್ಟದ ವಿವಿಧ ಸಮನ್ವಯ ಸಮಿತಿ ಸಭೆಯಲ್ಲಿ ಮಕ್ಕಳ ರಕ್ಷಣಾ ಸಮಿತಿಯ ವಝೀರ್
  • ಗುತ್ತಿಗೆದಾರ ಸಿಬಂದಿಗಳ ಪೊಲೀಸ್ ವೆರಿಫಿಕೇಶನ್
  • ನಿರ್ವಾಹಕರಿಂದ ಮಕ್ಕಳಿಗೆ ಮಾನಸಿಕ ಹಿಂಸೆ
  • ಆಸ್ಪತ್ರೆ ಮಾಹಿತಿಯಿಂದ ಬಾಲ್ಯವಿವಾಹ ಪತ್ತೆ
  • 10 ವರ್ಷದಿಂದಲೂ ಭಾಗ್ಯಲಕ್ಷ್ಮೀ ಯೋಜನೆ ವಂಚಿತರು
  • ಕೌಟುಂಬಿಕ ಸಮಸ್ಯೆ ಹೆಚ್ಚಿದ ಪ್ರಕರಣ

ಪುತ್ತೂರು: ತಾಲೂಕಿನ ಬಹುತೇಕ ಸರಕಾರಿ ಮತ್ತು ಖಾಸಗಿ ಶಾಲೆ ಮತ್ತು ಮದರಸಗಳಲ್ಲಿ ಸಲಹಾ ಪೆಟ್ಟಿಗೆ ಮತ್ತು ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಅಳವಡಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿ ಮುಂದಿನ ದಿನಗಳಲ್ಲಿ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ಜಾಗೃತಿ ಮೂಡಿಸಲಿದ್ದಾರೆ ಎಂದು ಮಕ್ಕಳ ರಕ್ಷಣಾ ಸಮಿತಿ ಜಿಲ್ಲಾ ಸದಸ್ಯ ವಝೀರ್ ಅವರು ಹೇಳಿದರು.

ತಾ.ಪಂ ಸಭಾಂಗಣದಲ್ಲಿ ಜೂ.20ರಂದು ರಂದು ನಡೆದ, ವರದಕ್ಷಿಣೆ ನಿಷೇಧ, ಕೌಟುಂಬಿಕ ದೌರ್ಜನ್ಯ ತಡೆ, ಮಹಿಳಾ ದೌರ್ಜನ್ಯ ತಡೆ, ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರುದ್ಧ ಪ್ರಚಾರಾಂದೋಲನ ಸಮಿತಿ, ಮಾದಕ ದ್ರವ್ಯ ವಸ್ತು ಸೇವನೆ ನಿಷೇಧ, ಭಾಗ್ಯಲಕ್ಷ್ಮೀ ಯೋಜನೆ ಹಾಗೂ ಅಂಗವಿಕಲರ ತಾಲೂಕು ಮಟ್ಟದ ವಿವಿಧ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಉಪತಹಶೀಲ್ದಾರ್ ಶ್ರೀಧರ್ ಕೆ. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಬಗ್ಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸಬೇಕಾಗಿದ್ದು, ಆಯೋಗ ಮತ್ತು ಇಲಾಖೆಗಳ ಕರ್ತವ್ಯವಾಗಿದೆ. ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ.

ಈ ನಿಟ್ಟಿನಲ್ಲಿ ಪ್ರತಿ ಸರಕಾರಿ, ಖಾಸಗಿ ಶಾಲೆಗಳು, ವಸತಿ ನಿಲಯ ಮತ್ತು ಮದರಸಗಳಲ್ಲಿ ಸಲಹಾ ಪಟ್ಟಿಗೆ ಮತ್ತು ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳ ಬಗ್ಗೆ, ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಬಗ್ಗೆ ಮಾಹಿತಿ ನೀಡುವ ಸಹಾಯವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಆದರೆ ಪುತ್ತೂರಿನಲ್ಲಿ ಬಹುತೇಕ ಶಾಲೆಗಳು ಮತ್ತು ಮದರಸಗಳಲ್ಲಿ ಇನ್ನೂ ಅಳವಡಿಕೆಯಾಗಿಲ್ಲ. ಕೆಲವೊಂದು ಶಾಲೆಯಲ್ಲಿ ಒಂದೊಂದು ಸಲಹಾ ಪೆಟ್ಟಿಗೆ ಅಳವಡಿಸಿದ್ದಾರೆ. ಆದರೆ ಒಂದಕ್ಕಿಂತ ಹೆಚ್ಚು ಅಂದರೆ ಒಂದು ಸಾರ್ವಜನಿಕವಾಗಿ ಮತ್ತೊಂದು ಗೌಪ್ಯತೆ ಸ್ಥಳದಲ್ಲಿ ಇಡಬೇಕು. ಜೊತೆಗೆ ಶಾಲೆಯ ತರಗತಿ ಕೊಠಡಿಯ ಮಕ್ಕಳ ಸಹಾಯವಾಣಿಯನ್ನು ಗೋಡೆಬರಹದಲ್ಲಿ ಬರೆಸಬೇಕೆಂದು ಎಂದು ಹೇಳಿದ ಅವರು ಮುಂದೆ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ಶಿಕ್ಷಣ ಇಲಾಖೆಗೆ ನೋಟೀಸು ಕಳುಹಿಸಿಲಾಗುವುದು ಮತ್ತು ಅಧಿಕಾರಿಗಳಿಂದ ಶಾಲೆಗಳಿಗೆ ತೆರಳಿ ಪರಿಶೀಲನೆ ಮಾಡಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

12 ಸದಸ್ಯರಲ್ಲಿ ಭಾಗವಹಿಸಿದ್ದು 6 ಮಂದಿ
ತಾಲೂಕು ವಿವಿಧ ಸಮನ್ವಯ ಸಮಿತಿಯಲ್ಲಿ ವಿವಿಧ ಇಲಾಖೆ, ಸಂಘಗಳನ್ನು ಸೇರಿಸಿದಂತೆ 12 ಮಂದಿ ಸದಸ್ಯರಿದ್ದಾರೆ. ಆದರೆ ಸಭೆಯಲ್ಲಿ ಭಾಗವಹಿಸಿದ್ದು 6 ಮಂದಿ ಮಾತ್ರ. ಸಭೆ ಕಾಟಾಚಾರಕ್ಕೆ ಆಗಬಾರದು ಎಂದು ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸಭೆಯ ಆರಂಭದಲ್ಲೇ ಪ್ರಸ್ತಾಪಿಸಿದರು. ಉತ್ತರಿಸಿದ ಪ್ರಭಾರ ಸಿಡಿಪಿಒ ಭಾರತಿ ಅವರು ಎಲ್ಲಾ ಸದಸ್ಯರಿಗೆ ಮಾಹಿತಿ ಪತ್ರ ಮತ್ತು ಮೇಲ್ ಮಾಡಲಾಗಿದೆ. ಜೊತೆಗೆ ವೈಯಕ್ತಿಕವಾಗಿ ಅವರಿಗೆ ಫೋನ್ ಮಾಡಿ ತಿಳಿಸಲಾಗಿದೆ. ಸಭೆಗೆ ಅಗತ್ಯವಿರುವ ಮಹಿಳಾ ಪೊಲೀಸ್ ಇಲಾಖೆ, ಅಬಕಾರಿ, ಶಿಕ್ಷಣ ಇಲಾಖೆಯವರು ಉಪಸ್ಥಿತರಿದ್ದಾರೆ ಎಂದರು. ಆಕ್ಷೇಪಿಸಿದ ತಾ.ಪಂ ಅಧ್ಯಕ್ಷರು ಸಭೆಗೆ ಬಾರದವರಿಗೆ ನೋಟೀಸು ಕಲಿಸುವ ವ್ಯವಸ್ಥೆ ಮಾಡಿ ಎಂದರು.

ಗುತ್ತಿಗೆದಾರ ಸಿಬಂದಿಗಳ ಪೊಲೀಸ್ ವೆರಿಪಿಕೇಶನ್:
ಶಾಲೆಯಲ್ಲಿ ಗುತ್ತಿಗೆದಾರರ ಅಡಿಯಲ್ಲಿ ಸಿಬಂದಿಗಳು ನೇಮಕಗೊಂಡಿದ್ದರೆ ಮಕ್ಕಳ ಸಂಕರಕ್ಷಣೆಯ ದೃಷ್ಟಿಯಿಂದ ಸಿಬಂದಿಗಳ ಪೊಲೀಸ್ ವೆರಿಫಿಕೇಶನ್ ಅಗತ್ಯವಾಗಿ ಮಾಡಿಸಿಕೊಳ್ಳತ್ತಕ್ಕದು ಎಂದು ವಝೀರ್ ಅವರು ಹೇಳಿದರು.

ನಿರ್ವಾಹಕರಿಂದ ಮಕ್ಕಳಿಗೆ ಮಾನಸಿಕ ಹಿಂಸೆ:
ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರಿಂದ ಮಕ್ಕಳಿಗೆ ಮಾನಸಿಕ ಹಿಂಸೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಕಬಕದಲ್ಲಿ ಇಳಿಯಬೇಕಾಗಿದ್ದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯನ್ನು ಪೋಳ್ಯದಲ್ಲಿ ಇಳಿಸಿ ಹೋಗಿದ್ದಾರೆ. ಹಳೆ ಪಾಸ್ ಜೂನ್ ಅಂತ್ಯದ ತನಕ ಇದ್ದರೂ ಮಕ್ಕಳಿಂದ ನಿರ್ವಾಹಕರು ಟಿಕೇಟ್ ಪಡೆಯುತ್ತಿದ್ದಾರೆ. ಈ ಕುರಿತು ಶಾಲೆಯಿಂದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾಹಿತಿ ಇದೆ ಎಂದು ತಾ.ಪಂ ಸ್ಥಾಯಿ ಸಮಿತಿ ಆಧ್ಯಕ್ಷ ಹರೀಶ್ ಬಿಜತ್ರೆ ಪ್ರಸ್ತಾಪಿಸಿದರು. ಉತ್ತರಿಸಿದ ಮಕ್ಕಳ ರಕ್ಷಣ ಸಮಿತಿ ಸದಸ್ಯ ವಝೀರ್ ಅವರು ಈ ಕುರಿತು ದೂರು ಬಂದಿಲ್ಲ. ಆದರೆ ಘಟನೆಯ ಕುರಿತು ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಆಸ್ಪತ್ರೆ ಮಾಹಿತಿಯಿಂದ ಬಾಲ್ಯವಿವಾಹ ಪತ್ತೆ:
ಬಾಲ್ಯ ವಿವಾಹ ನಿಷೇಧ ತಡೆ ಕಾಯ್ದೆಗೆ ಸಂಬಂಧಿಸಿ ಇನ್ನೂ ಕೂಡಾ ಜಿಲ್ಲೆಯಲ್ಲಿ ಶೇ.3ರಷ್ಟು ಬಾಲ್ಯ ವಿವಾಹ ನಡೆಯುತ್ತಿದೆ. ಕದ್ದು ಮುಚ್ಚಿ ಬಾಲ್ಯವಿವಾಹ ಆಗುತ್ತಿದ್ದರೂ ಮತ್ತು ಈ ಕುರಿತು ಸಂಬಂಧಿಕರಿಗೆ ಮಾಹಿತಿ ಇದ್ದರೂ ದೂರು ಕೊಡಲು ಮುಂದಾಗುವುದಿಲ್ಲ. ಆದರೆ ಮುಂದೆ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಇದು ಪತ್ತೆಯಾಗುತ್ತದೆ ಎಂದು ಹೇಳಿದ ವಝೀರ್ ಅಹಮ್ಮದ್ ಅವರು ಗ್ರಾ.ಪಂನ ಪಿಡಿಒ ಗಳು ಬಾಲ್ಯ ವಿವಾಹ ನಿಷೇಧ ಅಧಿಕಾರಿಯಾಗಿದ್ದಾರೆ ಎಂದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಎಲ್ಲಾ ಗ್ರಾ.ಪಂ ಪಿಡಿಒಗಳಿಗೆ ತಹಶೀಲ್ದಾರ್ ಮೂಲಕ ಇನ್ನೊಮ್ಮೆ ಪಿಡಿಒಗಳ ಜವಾಬ್ದಾರಿಯ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.

10 ವರ್ಷದಿಂದಲೂ ಭಾಗ್ಯಲಕ್ಷ್ಮೀ ಯೋಜನೆ ವಂಚಿತರು:
2018-19ನೇ ಸಾಲಿನ ಸುಮಾರು 49 ಭಾಗ್ಯಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಕಳೆದ 10 ವರ್ಷದಿಂದ ಸೌಲಭ್ಯ ವಂಚಿತರಾಗಿದ್ದಾರೆ ಎಂದು ಹರೀಶ್ ಬಿಜತ್ರೆ ಪ್ರಸ್ತಾಪಿಸಿದರು. ಉತ್ತರಿಸಿದ ಪ್ರಭಾರ ಸಿಡಿಪಿಒ ಈ ಕುರಿತು ಸರಕಾರಕ್ಕೆ ಬರೆದು ಕೊಡಲಾಗಿದೆ. ಸೌಲಭ್ಯ ವಂಚಿತರಿಗೂ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರದ ಹಂತದಲ್ಲಿ ಪ್ರೋಸೆಸ್‌ನಲ್ಲಿದೆ ಎಂದರು. ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ರ್ಬೋಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಸಿಡಿಪಿಒ ಭಾರತಿ, ಮಾಜಿ ಅಧ್ಯಕ್ಷರೂ ಸಮನ್ವಯ ಸಮಿತಿ ಸದಸ್ಯರು ಆಗಿರುವ ಭವಾನಿ ಚಿದಾನಂದ್ ಉಪಸ್ಥಿತರಿದ್ದರು. ಅಸಹಾಯಕರ ಸೇವಾಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಗೌಡ, ಸಮಾಜಕಲ್ಯಾಣ ಇಲಾಖೆ, ನಗರಸಭೆ, ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.